ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಹೆಚ್ಚಿಸಿ ಬೆಂಗಳೂರಿನಲ್ಲಿ ಇಪ್ಪತ್ತೆರಡು ವರ್ಷ ವಯಸ್ಸಿನ ಬಿಪಿಒ ಉದ್ಯೋಗಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ನಗರಗಳಲ್ಲಿ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಾಷ್ಟ್ರದ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿ ಬೆಂಗಳೂರು ಬೆಳೆದಿದೆ. ಹೀಗಾಗಿ ರಾತ್ರಿ ವೇಳೆ ಕೆಲಸ ಮಾಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ. ಆದರೆ ನಗರದಲ್ಲಿ ಎಷ್ಟರ ಮಟ್ಟಿಗಿನ ಸುರಕ್ಷಿತ ವಾತಾವರಣವಿದೆ ಎಂಬ ಪ್ರಶ್ನೆಯನ್ನು ಈ ಪ್ರಕರಣ ಎತ್ತಿದೆ. ಸಾರ್ವಜನಿಕ ಸ್ಥಳಗಳ ಸುರಕ್ಷತೆಯ ವಿಚಾರವನ್ನು ಗಂಭೀರವಾದ ಪರಿಶೀಲನೆಗೊಳಪಡಿಸುವುದು ಸದ್ಯದ ಅಗತ್ಯ. ಇಲ್ಲದಿದ್ದಲ್ಲಿ ಜಾಗತಿಕ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿನ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎಂಬುದನ್ನು ಸರ್ಕಾರ ನಿರ್ಲಕ್ಷಿಸಲಾಗದು. 2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಮನೆಗೆ ಹೋಗಲು ಖಾಸಗಿ ಬಸ್ ಹತ್ತಿದ್ದ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನೇ ಬೆಂಗಳೂರಿನ ಈ ಪ್ರಕರಣವೂ ಹೋಲುತ್ತಿರುವುದು ವಿಪರ್ಯಾಸ. ರಾತ್ರಿ 9.30ರ ನಂತರ ಮನೆಗೆ ಹೋಗಲು ಖಾಸಗಿ ವಾಹನವನ್ನು ಯುವತಿ ಹತ್ತಿರುವುದು ಹಾಗೂ ನಂತರ ಚಲಿಸುವ ವಾಹನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವುದು ದೆಹಲಿಯ ಘಟನೆಯನ್ನೇ ಹೋಲುತ್ತಿದೆ. ದೆಹಲಿಯ ಘಟನೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ವರ್ಚಸ್ಸಿಗೆ ಕಳಂಕ ತಂದಿತ್ತು ಎಂಬುದು ರಾಜ್ಯದ ಆಡಳಿತಗಾರರ ನೆನಪಿನಲ್ಲಿರಬೇಕು. ರಾಜ್ಯದ ರಾಜಧಾನಿಯಲ್ಲಿ ರಾತ್ರಿ ಹೊತ್ತು ಸಾರ್ವಜನಿಕ ಸಾರಿಗೆಯ ಕೊರತೆ ಇರುವುದನ್ನೂ ಈ ಪ್ರಕರಣ ಎತ್ತಿ ಹೇಳಿದೆ. ಹೀಗಾಗಿ ಅನಧಿಕೃತ ಸಾರಿಗೆ ವ್ಯವಸ್ಥೆ ಎಗ್ಗಿಲ್ಲದೆ ಬಳಕೆಯಾಗುತ್ತಿದೆ ಎಂಬುದೂ ಸ್ಪಷ್ಟ. 2005ರಲ್ಲಿ ರಾತ್ರಿಪಾಳಿ ಕರ್ತವ್ಯಕ್ಕೆ ಕ್ಯಾಬ್‌ನಲ್ಲಿ ತೆರಳುತ್ತಿದ್ದ ಐಟಿ ಉದ್ಯೋಗಿ ಪ್ರತಿಭಾ ಮೇಲೆ ಕ್ಯಾಬ್ ಚಾಲಕನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣ ಬೆಂಗಳೂರನ್ನು ನಡುಗಿಸಿತ್ತು. ಈ ಪ್ರಕರಣದ ನಂತರ, ತಡರಾತ್ರಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಉದ್ಯೋಗದಾತರು ಕಲ್ಪಿಸಬೇಕು ಎಂಬ ನಿಯಮದ ವಿಚಾರ ಭಾರಿ ಚರ್ಚೆಗೆ ಒಳಗಾಗಿತ್ತು. ಆದರೆ ಇಂತಹ ನಿಯಮ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ? ಇಂತಹ ನಿಯಮ ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ಧ ರಾಜ್ಯ ಕಾರ್ಮಿಕ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆಯೆ ಎಂಬಂತಹ ಪ್ರಶ್ನೆಗಳನ್ನೂ ಈ ಪ್ರಕರಣ ಎತ್ತಿದೆ. ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಚಾಲಕರು ಭಾಗಿಗಳಾಗುತ್ತಿರುವುದು ದುರದೃಷ್ಟಕರ. ಹೀಗಾಗಿ, ಚಾಲಕರನ್ನು ನೇಮಕ ಮಾಡಿಕೊಳ್ಳುವಾಗಲೇ ಅವರ ಹಿನ್ನೆಲೆಯನ್ನು ಪರಿಶೀಲಿಸಿ ನಡವಳಿಕೆಗಳ ತರಬೇತಿಗಳನ್ನು ಕೊಡುವುದನ್ನು ಸಾರಿಗೆ ಸೇವಾ ಸಂಸ್ಥೆಗಳಿಗೆ ಕಡ್ಡಾಯ ಮಾಡುವುದೂ ಅವಶ್ಯ. ಪ್ರತಿಸಲ ಇಂತಹ ಘಟನೆ ನಡೆದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ವಿಚಾರ ಚರ್ಚೆಯಾಗುತ್ತದೆ. ಮತ್ತೆ ಮರೆಗೆ ಸರಿಯುತ್ತದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಸುರಕ್ಷತೆ ಸಾಧ್ಯವಾಗಿಸುವುದು ಹೇಗೆ? ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಸಮಾಲೋಚಿಸಿ ತೀವ್ರ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಅತ್ಯಾಚಾರದಂತಕ ಅಪರಾಧಕ್ಕೆ ಕಠಿಣ ಶಿಕ್ಷೆ ಖಾತ್ರಿ ಎಂಬಂತಹ ಕಾನೂನಿನ ಭಯ ಮೊದಲು ಮೂಡಬೇಕಿದೆ. ಈ ಪ್ರಕರಣದಲ್ಲಿ, ಈ ಹೀನ ಕೃತ್ಯವೆಸಗಿದ ಆರೋಪಕ್ಕೊಳಗಾಗಿರುವ ಟೆಂಪೊ ಟ್ರಾವೆಲರ್ ಚಾಲಕರನ್ನು ಕಡಿಮೆ ಅವಧಿಯಲ್ಲೇ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂಬುದು ಸಮಾಧಾನದ ಸಂಗತಿ. ಆದರೆ ನಂತರದ ವಿಧಿವಿಧಾನಗಳ ಪ್ರಕ್ರಿಯೆಯನ್ನು ದಕ್ಷವಾಗಿ ನಿರ್ವಹಿಸಿ ತ್ವರಿತವಾಗಿ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಾದ ಹೊಣೆಗಾರಿಕೆಯೂ ಅವರಿಗಿದೆ ಎಂಬುದನ್ನು ಮರೆಯುವಂತಿಲ್ಲ. ದೆಹಲಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ನಂತರ, ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಅತ್ಯಾಚಾರ ವಿರುದ್ಧದ ಕಾನೂನನ್ನು ಬಿಗಿಗೊಳಿಸಲಾಗಿದೆ. ಲೈಂಗಿಕ ಹಿಂಸಾಚಾರದ ವ್ಯಾಖ್ಯೆಯನ್ನೂ ವಿಸ್ತರಿಸಲಾಗಿದೆ. ಹೀಗಿದ್ದೂ ಅತ್ಯಾಚಾರ ಪ್ರಕರಣದ ತನಿಖೆ ಹೇಗೆ ಸಾಗುತ್ತದೆ ಎಂಬ ವಿಚಾರಕ್ಕೆ ಬಂದಲ್ಲಿ ಅಲ್ಲಿ ಹೆಚ್ಚೇನೂ ಬದಲಾವಣೆಗಳಾಗಿಲ್ಲ ಎಂಬುದು ಕಟು ವಾಸ್ತವ. ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಗಳ ಸಂಗ್ರಹ ಬಹಳ ಮುಖ್ಯವಾದದ್ದು. ನಂತರ ವ್ಯವಸ್ಥಿತವಾದ ತೀವ್ರತರದ ತನಿಖೆಯೂ ಅಗತ್ಯ. ಇದಕ್ಕೆ ಅಗತ್ಯವಾದ ಸೂಕ್ಷ್ಮತೆ ಹಾಗೂ ಸಂವೇದನಾಶೀಲತೆ ತನಿಖಾ ತಂಡದಲ್ಲಿ ಇರಬೇಕು. ಈ ಕೊರತೆ, ಸದ್ಯದ ವ್ಯವಸ್ಥೆಯಲ್ಲಿ ಎದ್ದು ಕಾಣಿಸುತ್ತಿದೆ. ಕಾನೂನು ಬಿಗಿಯಾದರೂ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇರುವುದು ಏಕೆ ಎಂಬುದಕ್ಕೆ ಇದೂ ಒಂದು ಕಾರಣ. ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತನಿಖೆ ಚುರುಕಾಗಿರಬೇಕು. ಯಾವುದೇ ನಿರ್ಲಕ್ಷ್ಯ ಸಲ್ಲದು. ಕಾನೂನಿನಲ್ಲಿ ಈ ವಿಚಾರ ಅಡಕವಾಗಿದೆ. ಆದರೆ ಅನುಷ್ಠಾನ ಹಂತದಲ್ಲಿ ಈ ಸಂವೇದನೆ ಇನ್ನೂ ಮೂಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.