ಭೂಸ್ವಾಧೀನ ಕಾಯ್ದೆ ಅಂತ್ಯಗೊಂಡ ಅನಿಶ್ಚಯ ಕೋಟ್ಯಂತರ ಜನರ ಬದುಕು ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಭೂಸ್ವಾಧೀನಕ್ಕೆ ಸಂಬಂಧಿಸಿದ ಕಾಯ್ದೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಯ ಪ್ರಧಾನ ವಿಷಯವಾಗಿ ಮುನ್ನೆಲೆಯಲ್ಲಿದೆ. ವಸಾಹತುಶಾಹಿ ಕಾಲದ, ಈಗಿನ ಕಾಲಮಾನಕ್ಕೆ ಹೊಂದಿಕೊಳ್ಳದ ಕಾಯ್ದೆಯೇ 2013ರ ವರೆಗೂ ನಮ್ಮಲ್ಲಿ ಜಾರಿಯಲ್ಲಿ ಇತ್ತು. ಅದನ್ನು ಬದಲಿಸಬೇಕೆಂದು ಒತ್ತಾಯಿಸಿ ಹೋರಾಟಗಳು ನಡೆದಿದ್ದವಾದರೂ, ಆ ಕೂಗಿಗೆ ಆಳುವ ಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸುವ ಇಚ್ಛಾಶಕ್ತಿ ತೋರಿರಲಿಲ್ಲ. ಕೊನೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ, 1894ರ ಭೂಸ್ವಾಧೀನ ಕಾಯ್ದೆಗೆ ಬದಲಾಗಿ ಹೊಸದೊಂದು ಕಾಯ್ದೆ ರೂಪುಗೊಂಡು ಸಂಸತ್ತಿನ ಅನುಮೋದನೆ ಪಡೆಯಿತು. ವಿಪರ್ಯಾಸದ ಸಂಗತಿಯೆಂದರೆ ಅದು ಸರಿಯಾಗಿ ಅನುಷ್ಠಾನವಾಗುವ ಮೊದಲೇ ತಿದ್ದುಪಡಿಗೆ ಒಳಗಾಯಿತು. ಆಳುವ ಕೂಟ ಬದಲಾದ ಕಾರಣ ಸರ್ಕಾರದ ಧೋರಣೆಗಳೂ ಬದಲಾದವು. ಮಹತ್ವದ ಈ ಕಾಯ್ದೆ ನಿಕಷಕ್ಕೆ ಒಳಪಡುವ ಮೊದಲೇ ಸುಗ್ರೀವಾಜ್ಞೆ ಮೂಲಕ ಪರಿಷ್ಕರಣೆಗೊಂಡಿತು. ಭೂಸ್ವಾಧೀನ ಕಾಯ್ದೆಯಂಥ ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಯುಕ್ತ ಮಾರ್ಗ ಅಲ್ಲವೇ ಅಲ್ಲ. ಅಲ್ಲದೆ ಈ ಕ್ರಮ ತಾತ್ಕಾಲಿಕವಾದುದು. ಆರು ತಿಂಗಳೊಳಗೆ ತಿದ್ದುಪಡಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಬಹುಸಂಖ್ಯೆಯಲ್ಲಿರುವ ಕಾರಣ ಈ ತಿದ್ದುಪಡಿಗೆ ಅನುಮತಿ ದೊರಕಿಸಿಕೊಡಲು ಎನ್‌ಡಿಎ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅದರ ಅವಧಿ ಮುಗಿಯಿತು. ಅಲ್ಲದೆ ಈ ತಿದ್ದುಪಡಿಯು ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳಿಗೆ ಒಂದು ಪ್ರಬಲ ಅಸ್ತ್ರವನ್ನೂ ಒದಗಿಸಿತ್ತು. ಇದರಿಂದ ರೋಸಿದ ಎನ್‌ಡಿಎ ಸರ್ಕಾರ, ಭೂಸ್ವಾಧೀನಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವ ಜವಾಬ್ದಾರಿಯನ್ನು ರಾಜ್ಯಗಳ ವಿವೇಚನೆಗೆ ಒಪ್ಪಿಸಿತು. ಒಂದು ರೀತಿಯಲ್ಲಿ ಇದು ಸರಿಯಾದ ನಡೆಯೂ ಹೌದು. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಈ ಅವಕಾಶವನ್ನು ಈಗ ಸದ್ಬಳಕೆ ಮಾಡಿಕೊಂಡಿದೆ. ಕೇಂದ್ರದಲ್ಲಿ ತಮ್ಮ ಪಕ್ಷದ ನೇತೃತ್ವದ ಸರ್ಕಾರವೇ ಜಾರಿಗೊಳಿಸಿದ್ದ 2013ರ ಕಾಯ್ದೆಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಕಾಯ್ದೆ ಕೃಷಿಕರನ್ನು ಅಸಹಾಯಕ ಸ್ಥಿತಿಯಿಂದ ಪಾರು ಮಾಡಿದೆ. ಅವರ ಧ್ವನಿಗೂ ಕಿಮ್ಮತ್ತು ತಂದಿದೆ. ಇದರ ಅನ್ವಯ ಯಾವುದೇ ಭೂಸ್ವಾಧೀನಕ್ಕೆ ಮುನ್ನ ಕನಿಷ್ಠ ಶೇಕಡ 70ರಷ್ಟು ಭೂಮಿಯ ಮಾಲೀಕರ ಒಪ್ಪಿಗೆ ಪಡೆಯುವುದು, ಸಾಮಾಜಿಕ ಪರಿಣಾಮದ ಮೌಲ್ಯಮಾಪನ, ಪರಿಸರ ಮತ್ತು ಆಹಾರ ಭದ್ರತೆಯ ಮೇಲಾಗುವ ಪರಿಣಾಮಗಳ ಪರಾಮರ್ಶೆ ನಡೆಸುವುದು ಕಡ್ಡಾಯ. ಭೂಮಿ ಕಳೆದುಕೊಂಡವರಿಗೆ ಹೆಚ್ಚಿನ ಮೊತ್ತದ ಪರಿಹಾರ, ಮಾನವೀಯ ನೆಲೆಯಲ್ಲಿ ಪುನರ್ವಸತಿ ಕಲ್ಪಿಸಬೇಕೆಂಬ ನಿಬಂಧನೆಗಳನ್ನೂ ಇದು ಒಳಗೊಂಡಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಭೂಮಿ ಕಳೆದುಕೊಳ್ಳುವ ರೈತರು ಕಣ್ಣೀರಲ್ಲಿ ಕೈತೊಳೆಯಬೇಕಾದ ಸ್ಥಿತಿ ಉಂಟಾಗುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಯೋಜನೆಗಳು ಸ್ಥಗಿತಗೊಂಡಿದ್ದರೆ ಅಂಥ ಯೋಜನೆಗಳಿಗೆ ಮರುಜೀವ ನೀಡಲು ಹಾಗೂ ಕುಂಟುತ್ತ ಸಾಗಿರುವ ಕಾಮಗಾರಿಗಳಿಗೆ ವೇಗ ತುಂಬಲು ಈಗ ಇದರಿಂದ ಸಹಕಾರಿ ಆಗಬಹುದು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಅದಕ್ಕೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲೇಬೇಕು. ಅಂತೆಯೇ ರೈತರ ಹಿತಾಸಕ್ತಿಗೂ ಧಕ್ಕೆ ಒದಗಬಾರದು. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈಗಿನ ಅಗತ್ಯ. ಇದರ ಜತೆಗೆ, ಮೂಲಸೌಕರ್ಯ ಅಭಿವೃದ್ಧಿ ಅಥವಾ ಉದ್ಯಮ ಸ್ಥಾಪನೆ ಹೆಸರಲ್ಲಿ ಸರ್ಕಾರಿ ಸಂಸ್ಥೆಗಳ ಮೂಲಕ ಭೂಸ್ವಾಧೀನ ಮಾಡಿಸಿಕೊಂಡು ನಂತರ ಅನ್ಯ ಉದ್ದೇಶಕ್ಕೆ ಬಳಸುವ ಖಾಸಗಿ ಭೂದಾಹಿಗಳಿಗೂ ಕಡಿವಾಣ ಹಾಕುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಒಂದೂವರೆ ವರ್ಷದಿಂದ ಟೀಕೆ–ಸಮರ್ಥನೆಗಳಲ್ಲೇ ಸಮಯ ವ್ಯರ್ಥವಾಗಿದೆ. ಈ ಗೊಂದಲ ನಮ್ಮ ರಾಜ್ಯದ ಮಟ್ಟಿಗೆ ಬಗೆಹರಿದಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಷ್ಟೇ ಬಾಕಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.