ಆಧಾರ್ ಗೊಂದಲ ಅನಿಶ್ಚಯ ತಪ್ಪಿಸಿ ದೇಶದ ಪ್ರತಿಯೊಬ್ಬ ನಿವಾಸಿಗೂ ಹೈಟೆಕ್ ಗುರುತಿನ ಚೀಟಿ ಒದಗಿಸಬೇಕು ಎಂಬ ಉದ್ದೇಶದಿಂದ ಹಿಂದೆ ಅಧಿಕಾರದಲ್ಲಿ ಇದ್ದ ಯುಪಿಎ ಸರ್ಕಾರ ಜಾರಿಗೆ ತಂದ ಆಧಾರ್ ಕಾರ್ಡ್ ಯೋಜನೆಗೆ ಹಿಡಿದ ಶಾಪ ಇನ್ನೂ ವಿಮೋಚನೆಯಾಗಿಲ್ಲ. ಇದಕ್ಕೆ ಅಂಟಿಕೊಂಡ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣವೂ ಕಾಣುತ್ತಿಲ್ಲ. ಜೊತೆಗೆ ಆಧಾರ್ ಕಾರ್ಡ್ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುತ್ತದೆಯೇ ಮತ್ತು ಖಾಸಗಿತನ ಎಂಬುದು ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ ‘ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ’ದ ವ್ಯಾಪ್ತಿಯ ಒಳಗೆ ಬರುತ್ತದೆಯೇ ಎಂಬ ಪ್ರಶ್ನೆ ವಿವಾದವನ್ನು ತೀವ್ರವಾಗಿಸಿದೆ. ಇದರ ನಡುವೆಯೇ, ಪಡಿತರ ವಿತರಣೆ ಮತ್ತು ಎಲ್‌ಪಿಜಿ ಸಹಾಯಧನ ವಿತರಣೆ ಬಿಟ್ಟು ಉಳಿದ ಯಾವುದೇ ಸರ್ಕಾರಿ ಸವಲತ್ತುಗಳಿಗೂ ಆಧಾರ್ ಕಡ್ಡಾಯ ಮಾಡಬಾರದು ಎಂಬ ಆಗಸ್ಟ್ 11ರ ಮಧ್ಯಂತರ ಆಜ್ಞೆ ಮಾರ್ಪಡಿಸಲು ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಈಗ ನಿರಾಕರಿಸಿದೆ. ಇದು ಒಂದು ಅರ್ಥದಲ್ಲಿ ಸರ್ಕಾರಕ್ಕೆ ಆದ ಹಿನ್ನಡೆ. ಏಕೆಂದರೆ ಆಧಾರ್‌ನಿಂದ ಸಬ್ಸಿಡಿಗಳ ಸೋರಿಕೆ ತಡೆಯಬಹುದು, ಸಿಮ್ ಕಾರ್ಡ್‌ಗೆ ಆಧಾರ್ ಕಡ್ಡಾಯ ಮಾಡಿದರೆ ಮೊಬೈಲ್ ಬಳಸುವ ಉಗ್ರಗಾಮಿಗಳ ದುಷ್ಕೃತ್ಯಕ್ಕೆ ಕಡಿವಾಣ ಹಾಕಬಹುದು, ಷೇರುಪೇಟೆಗೆ ಕಾಳಧನ ಹರಿದು ಬರುವುದನ್ನು ನಿಲ್ಲಿಸಬಹುದು ಎಂಬುದು ಸರ್ಕಾರ ಮತ್ತು ಅದರ ಅಧೀನದ ಸಂಸ್ಥೆಗಳ ವಾದವಾಗಿತ್ತು. ವಿವಿಧ ಸವಲತ್ತುಗಳಿಗೂ ಆಧಾರ್ ಕಡ್ಡಾಯಕ್ಕೆ ಅವಕಾಶ ನೀಡುವಂತೆ ಕೇಂದ್ರ ಮತ್ತು ಅನೇಕ ರಾಜ್ಯ ಸರ್ಕಾರಗಳು, ಟ್ರಾಯ್, ಸೆಬಿ, ರಿಸರ್ವ್ ಬ್ಯಾಂಕ್, ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರ ಮತ್ತಿತರ ಸಂಸ್ಥೆಗಳು ಕೋರ್ಟ್ ಮೊರೆ ಹೋಗಿದ್ದವು. ಈಗ ಖಾಸಗಿತನದ ಹಕ್ಕು ಕುರಿತ ವಿಚಾರದ ವಿಚಾರಣೆಗೆ ಮತ್ತೊಂದು ವಿಸ್ತೃತ ಸಂವಿಧಾನ ಪೀಠ ರಚನೆಯಾಗಬೇಕಿದೆ. ಹೀಗಾಗಿ ಈ ವಿಚಾರ ಇತ್ಯರ್ಥವಾಗುವುದು ವಿಳಂಬವಾಗುತ್ತಲೇ ಹೋಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಏಕೆಂದರೆ ಸಾರ್ವಜನಿಕರ ತೆರಿಗೆ ಹಣದ ವಿನಿಯೋಗ, ಉಳಿತಾಯ, ಖಾಸಗಿತನದ ಹಕ್ಕಿನ ಪ್ರಶ್ನೆ ಇದರಲ್ಲಿ ಅಡಗಿದೆ. ಆಧಾರ್ ಕಾರ್ಡ್ ಜಾರಿಗೆ ತರುವಾಗ ಸರ್ಕಾರಕ್ಕೆ ಇದ್ದ ಸದುದ್ದೇಶದ ಬಗ್ಗೆ ಯಾರದೂ ತಕರಾರಿಲ್ಲ. ಈಗ ನಾಗರಿಕರು ಗುರುತಿನ ಚೀಟಿಯಾಗಿ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಹತ್ತಾರು ಬಗೆಯ ಕಾರ್ಡ್‌ಗಳನ್ನು ಇಟ್ಟುಕೊಳ್ಳುವ ಸ್ಥಿತಿ ಇದೆ. ಪಡಿತರಕ್ಕೊಂದು, ರೈಲಿಗೊಂದು, ಬಸ್ಸಿಗೊಂದು, ತೆರಿಗೆಗೊಂದು, ವ್ಯಾಪಾರ ವಹಿವಾಟಿನ ನೋಂದಣಿಗೊಂದು, ಹಿರಿಯ ನಾಗರಿಕ ಎಂದು ಸಾಬೀತಿಗೊಂದು, ಪಿಂಚಣಿಗೊಂದು... ಹೀಗೆ ಅನೇಕ ಕಾರ್ಡುಗಳಿಂದ ಜನರಿಗೂ ಅನನುಕೂಲ, ಸರ್ಕಾರಕ್ಕೂ ಸಲ್ಲದ ಖರ್ಚು. ಇದನ್ನೆಲ್ಲ ತಪ್ಪಿಸಲು ಮತ್ತು ನಕಲಿ ಕಾರ್ಡುಗಳ ಸೃಷ್ಟಿ ತಡೆಯುವುದಕ್ಕಾಗಿಯೇ ಸಚಿವರ ತಂಡದ ಅನುಮೋದನೆಯಂತೆ ಸರ್ಕಾರಿ ಆದೇಶವೊಂದರ ಮೂಲಕ ಯೋಜನಾ ಆಯೋಗ 2009 ಜನವರಿ 28ರಂದು ವಿಶಿಷ್ಟ ಗುರುತಿನ ಚೀಟಿ ಯೋಜನೆ ಜಾರಿಗೆ ತಂದಿತ್ತು. ಅದರ ಅಡಿ ಆಧಾರ್ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತ್ತು. ಆಧಾರ್‌ಗಾಗಿಯೇ 2009-17ರ ಅವಧಿಗಾಗಿ ₹ 13,633 ಕೋಟಿ ಇಡಲಾಗಿದೆ. ಈಗಾಗಲೇ ಸುಮಾರು 92 ಕೋಟಿ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ. ಪಡಿತರ ಮತ್ತು ಎಲ್‌ಪಿಜಿ ಸಹಾಯಧನಕ್ಕೆ ಆಧಾರ್ ಕಾರ್ಡುಗಳನ್ನು ಜೋಡಿಸಿ ನೇರ ನಗದು ವರ್ಗಾವಣೆ ಮಾಡುತ್ತಿರುವುದರಿಂದ ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗ ನಿಂತಿದೆ. ಅನರ್ಹರ ಜೇಬು ಸೇರುತ್ತಿದ್ದ ಹಣಕ್ಕೆ ಕಡಿವಾಣ ಬಿದ್ದಿದೆ. ಇಂಥ ಉಪಯುಕ್ತ ಯೋಜನೆ ವಿವಾದಕ್ಕೆ ಆಹಾರವಾಗಲು ಸರ್ಕಾರವೇ ಕಾರಣ ಎಂದರೆ ಉತ್ಪ್ರೇಕ್ಷೆಯಲ್ಲ. ಆಧಾರ್ ಆರಂಭವಾಗಿದ್ದು ಸರ್ಕಾರದ ಸಾಮಾನ್ಯ ಆದೇಶದಿಂದ. ಇಂಥ ಮಹತ್ವದ ಯೋಜನೆಗೆ ಇದುವರೆಗೂ ಸಂಸತ್ತಿನ ಅನುಮೋದನೆಯನ್ನೇ ಪಡೆದಿಲ್ಲ. ಆಧಾರ್‌ಗೆ ಕಾಯ್ದೆಬದ್ಧ ಸ್ಥಾನಮಾನ ಕೊಡಲು ಯುಪಿಎ ಸರ್ಕಾರ 2010 ಡಿಸೆಂಬರ್‌ 3ರಂದು ಮಂಡಿಸಿದ ಮಸೂದೆ ಇನ್ನೂ ರಾಜ್ಯಸಭೆಯಲ್ಲಿಯೇ ಇದೆ. ಆಧಾರ್‌ಗಾಗಿ ಕಣ್ಣಿನ ಪಾಪೆ ಮತ್ತು ಕೈಬೆರಳ ಗುರುತುಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇದು ಖಾಸಗಿತನದ ಉಲ್ಲಂಘನೆ ಎಂಬ ವಾದವಂತೂ ಜೋರಾಗಿಯೇ ಕೇಳಿ ಬರುತ್ತಿದೆ. ಇಂಥ ಮಹತ್ವದ ಮಾಹಿತಿಗಳ ಸುರಕ್ಷತೆ ಬಗ್ಗೆ ಬಹಳಷ್ಟು ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾನೂನಿನ ಮಾನ್ಯತೆ ಇಲ್ಲದ ಕಾರಣ ಈ ಮಾಹಿತಿಗಳನ್ನು ಖಾಸಗಿಯವರಿಗೆ ಕೊಟ್ಟರೂ ಅಪರಾಧ ಎನಿಸಿಕೊಳ್ಳುವುದಿಲ್ಲ; ಇದು ಅಪಾಯಕಾರಿ ಎಂಬುದು ಅನೇಕರ ಆತಂಕ. ವಿದೇಶಿಯರು, ಭಾರತದ ಪ್ರಜೆಗಳಲ್ಲದವರೂ ಆಧಾರ್ ಕಾರ್ಡ್ ಪಡೆಯಬಹುದು. ಇದೂ ಸಹ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಆಧಾರ್ ಯೋಜನೆಯನ್ನೇ ವಿರೋಧಿಸುತ್ತಿದ್ದ ಬಿಜೆಪಿ ಕೂಡ ಈಗ ತನ್ನ ಸರ್ಕಾರ ಬಂದ ನಂತರ ನಿಲುವು ಬದಲಿಸಿ ಆಧಾರ್‌ಗೆ ಒತ್ತು ಕೊಡುತ್ತಿದೆ. ಆದರೆ ಶಾಸನಾತ್ಮಕ ಮಾನ್ಯತೆ ಕೊಡುವ ವಿಚಾರದಲ್ಲಿ ಮಾತ್ರ ಮೀನಮೇಷ ಎಣಿಸುತ್ತಿರುವುದು ಏಕೆ? ಇದರ ಹಿಂದಿರುವ ರಾಜಕೀಯ ಷಡ್ಯಂತ್ರ ಏನು? ಅನುಮಾನ ಪರಿಹರಿಸಬೇಕು, ಆಧಾರ್‌ಗೆ ಶಾಸನಾತ್ಮಕ ಬಲ ತುಂಬಲು ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್‌ಗಳ ಮೇಲೆ ಎಲ್ಲ ಭಾರ ಹಾಕಿ ಕುಳಿತುಕೊಳ್ಳುವ ಪ್ರವೃತ್ತಿ ಸರಿಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.