ರೈತ ಆತ್ಮಹತ್ಯೆ ತಡೆ: ವಾತಾವರಣ ಸೃಷ್ಟಿಗೆ ಯೋಜನೆ ರೂಪಿಸಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ತೀವ್ರ ತರಹದ ಬಿಕ್ಕಟ್ಟು ರೈತರ ಆತ್ಮಹತ್ಯೆಗಳಲ್ಲಿ ಪ್ರತಿಬಿಂಬಿಸುತ್ತಿದೆ. ಇದಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಬೇಕಾದ ಒತ್ತಡ ಎಲ್ಲಾ ಸರ್ಕಾರಗಳ ಮೇಲೂ ಇದೆ. ಈ ಒತ್ತಡಕ್ಕೆ ಆಡಳಿತಾತ್ಮಕ ಆಯಾಮವಿರುವಂತೆಯೇ ರಾಜಕೀಯ ಆಯಾಮವೂ ಇದೆ. ಆದ್ದರಿಂದ ತಕ್ಷಣದ ಪರಿಹಾರಗಳನ್ನು ಕಂಡುಕೊಳ್ಳುವಾಗಲೇ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಅಗತ್ಯವಿರುವ ದೂರಗಾಮಿ ಕ್ರಮಗಳನ್ನೂ ಕೈಗೊಳ್ಳುವುದು ಮುತ್ಸದ್ದಿಯ ಲಕ್ಷಣ. ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಕರ್ನಾಟಕವನ್ನು ಆಳಿದ ಯಾವುದೇ ಸರ್ಕಾರವೂ ರೈತರ ಆತ್ಮಹತ್ಯೆಗಳನ್ನು ಸಮಗ್ರ ದೃಷ್ಟಿಕೋನದಲ್ಲಿ ನೋಡಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೇವಲ ಬೆಂಕಿ ಬಿದ್ದಾಗ ಬಾವಿ ತೋಡುವಂತಹ ನಿರ್ಧಾರಗಳನ್ನಷ್ಟೇ ಕೈಗೊಳ್ಳಲಾಗಿದೆ. ಇದರ ಇತ್ತೀಚಿನ ಉದಾಹರಣೆಯೆಂದರೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾಗುವ ಪರಿಹಾರಧನವನ್ನು ಐದು ಲಕ್ಷ ರೂಪಾಯಿಗಳಿಗೆ ಏರಿಸುವುದರ ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಎರಡು ಸಾವಿರ ರೂಪಾಯಿಗಳ ಮಾಸಾಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವುದು. ಸಾಮಾನ್ಯ ಸಂದರ್ಭದಲ್ಲಾಗಿದ್ದರೆ ಈ ಘೋಷಣೆಗಳಿಗೆ ವಿಶೇಷಾರ್ಥಗಳನ್ನು ಆರೋಪಿಸುವ ಅಗತ್ಯವೇನೂ ಬರುತ್ತಿರಲಿಲ್ಲ. ರಾಹುಲ್ ಗಾಂಧಿ ಭೇಟಿಯ ಸಂದರ್ಭದಲ್ಲಿ ಇದನ್ನು ಘೋಷಿಸಲಾಗಿದೆ. ಈ ಸಂದರ್ಭವನ್ನು ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯ ಬೆಳಕಿನಲ್ಲಿಟ್ಟಾಗ ಈ ‘ಪರಿಹಾರ ರಾಜಕಾರಣ’ವೊಂದು ಅನಾವರಣಗೊಳ್ಳುತ್ತದೆ. ಈ ರಾಜಕೀಯ ಆಯಾಮಗಳೇನೇ ಇದ್ದರೂ ಈ ಘೋಷಣೆಯ ಹಿಂದೆ ಆಳವಾದ ಚಿಂತನೆಯಾಗಲೀ ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ದೂರದೃಷ್ಟಿಯಾಗಲೀ ಇಲ್ಲ ಎಂಬುದಂತೂ ಸ್ಪಷ್ಟ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಧನವನ್ನು ಘೋಷಿಸುವುದು ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬ ವಾದ ಈಗಾಗಲೇ ಇದೆ. ಇದೊಂದು ಬಗೆಯಲ್ಲಿ ಆತ್ಮಹತ್ಯೆಯನ್ನು ಪ್ರೇರೇಪಿಸುವ ಕ್ರಮವೂ ಹೌದು ಎಂದು ಅನೇಕ ತಜ್ಞರು ಹೇಳಿದ್ದಾರೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಆತ್ಮಹತ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ವರದಿಯೂ ಇದನ್ನೇ ಧ್ವನಿಸಿತ್ತು. ರೈತರ ಆತ್ಮಹತ್ಯೆಯ ಸಮಸ್ಯೆಗೆ ಕನಿಷ್ಠ ಒಂದೂವರೆ ದಶಕಗಳ ಇತಿಹಾಸವಿದೆ. ಈ ಅವಧಿಯಲ್ಲಿ ಯಾವ ಸರ್ಕಾರವೂ ರೈತರು ಆತ್ಮಹತ್ಯೆ ಮಾಡಿಕೊಳ್ಳದಂಥ ವಾತಾವರಣವೊಂದನ್ನು ಸೃಷ್ಟಿಸಲಿಲ್ಲ ಎಂಬುದು ವಾಸ್ತವ. ಹಣಕಾಸು ಕ್ಷೇತ್ರದಲ್ಲಿ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಅರಿವುಳ್ಳ ಸಿದ್ದರಾಮಯ್ಯ ಕೂಡಾ ಹಿಂದಿನವರಿಗಿಂತ ಭಿನ್ನವಾದ ಏನನ್ನೂ ಮಾಡುತ್ತಿಲ್ಲ ಎಂಬುದನ್ನು ಅವರ ‘ಪರಿಹಾರ ಘೋಷಣೆ’ ಹೇಳುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರ ಪರಿಹಾರ ಧನ ನೀಡುವುದರಲ್ಲಿ ಪರಿಕಲ್ಪನಾತ್ಮಕವಾದ ಯಾವ ತಪ್ಪೂ ಇಲ್ಲ. ಆದರೆ ಹೀಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಎರಡು ಸಾವಿರ ರೂಪಾಯಿಗಳ ಮಾಸಾಶನವನ್ನು ಘೋಷಿಸಿರುವುದರ ಪರಿಣಾಮ ವಿಚಿತ್ರವಾಗಿರಬಹುದು. ವಿಧವೆಯರಿಗೆ ಈಗಾಗಲೇ ಪ್ರತಿತಿಂಗಳು 500 ರೂಪಾಯಿ ನೆರವು ನೀಡುವ ಯೋಜನೆಯೊಂದಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಇನ್ನೂ ಹೆಚ್ಚಿನ ನೆರವು ಘೋಷಿಸಿರುವುದು ಈಗಾಗಲೇ ಮಾಸಾಶನ ಪಡೆಯುತ್ತಿರುವವರ ಮನಸ್ಸಿನಲ್ಲಿ ಯಾವ ಭಾವವನ್ನು ಹುಟ್ಟಿಸಬಹುದು? ಆತ್ಮಹತ್ಯೆ, ಅಪಘಾತ ಹೀಗೆ ಯಾವುದೇ ಬಗೆಯಲ್ಲಿ ಸಾವನ್ನಪ್ಪಿದ್ದರೂ ರೈತನ ಕುಟುಂಬದ ಮೇಲಾಗುವ ಪರಿಣಾಮ ಒಂದೇ. ಕೃಷಿ ಕ್ಷೇತ್ರದ ಬಿಕ್ಕಟ್ಟಿನಂಥ ಸಂಕೀರ್ಣ ಸಮಸ್ಯೆಗೆ ರಾಜಕೀಯ ಲಾಭದ ದೃಷ್ಟಿಯಲ್ಲಷ್ಟೇ ಪರಿಹಾರಗಳನ್ನು ಕಂಡುಕೊಳ್ಳಲು ಹೊರಟರೆ ಇಂಥ ಅಸಂಗತಗಳು ಸೃಷ್ಟಿಯಾಗುತ್ತವೆ. ಸಾವಿನಲ್ಲೂ ಮೇಲು ಕೀಳೆಂಬ ವರ್ಗೀಕರಣ ಸಹಜವಾಗಿಬಿಡುತ್ತದೆ. ಕಷ್ಟದಲ್ಲಿರುವ ರೈತ ಕುಟುಂಬಗಳ ಕಣ್ಣೀರೊರೆಸುವ ಕ್ರಿಯೆಯನ್ನು ಪಕ್ಷದ ನಾಯಕರೊಬ್ಬರ ಭೇಟಿಯ ಸಂದರ್ಭಕ್ಕೆ ಹೊಂದಿಸಿಕೊಳ್ಳುವ ಕ್ರಿಯೆಯೇ ಅಸಂಗತ. ಇದು ದೂರದೃಷ್ಟಿಯ ಕೊರತೆಯುಳ್ಳ ಪರಿಹಾರ ಯೋಜನೆಯ ರೂಪದಲ್ಲಿ ಕಾಣಿಸಿಕೊಳ್ಳುವುದಂತೂ ಮತ್ತೂ ದೊಡ್ಡ ದುರಂತ. ರೈತರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಘೋಷಿಸುವ ಪರಿಹಾರಕ್ಕಿಂತ ಅವರು ಆತ್ಮಹತ್ಯೆ ಮಾಡಿಕೊಳ್ಳದಂತಹ ವಾತಾವರಣವೊಂದನ್ನು ಸೃಷ್ಟಿಸುವುದಕ್ಕೆ ಬೇಕಿರುವ ಯೋಜನೆಗಳು ಈಗಿನ ಮತ್ತು ಭವಿಷ್ಯದ ಅಗತ್ಯ ಎಂಬುದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.