ಸಮಾನ ಪಿಂಚಣಿ ಯೋಜನೆ ಅನುಷ್ಠಾನ ಸ್ವಾಗತಾರ್ಹ ನಿವೃತ್ತ ಯೋಧರ ಹಟಬಿಡದ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ನಾಲ್ಕು ದಶಕಗಳಿಂದಲೂ ಒತ್ತಾಯಿಸಿಕೊಂಡು ಬರಲಾಗಿದ್ದ ‘ಒಂದು ಶ್ರೇಣಿ- ಒಂದು ಪಿಂಚಣಿ’ ಯೋಜನೆ ಜಾರಿಗೊಳಿಸುವುದಾಗಿ ಕಡೆಗೂ ಪ್ರಕಟಿಸಿರುವುದು ಸ್ವಾಗತಾರ್ಹ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಎರಡು ತಿಂಗಳ ಕಾಲ ಧರಣಿ ನಡೆಸಿದ ಯೋಧರು, ಕೊನೆಗೆ ಒತ್ತಡ ತಂತ್ರವಾಗಿ ಆಗಸ್ಟ್‌ 24ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದ್ದು ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಕುಟುಂಬದಿಂದ ದೂರವಾಗಿ, ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯ್ದ ವೀರಯೋಧರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಇಷ್ಟೊಂದು ತಡ ಮಾಡಬೇಕಾದ ಅಗತ್ಯವಿರಲಿಲ್ಲ. ತಡವಾಗಿಯಾದರೂ ಬೇಡಿಕೆಗಳನ್ನು ಈಡೇರಿಸಿರುವುದು ಸ್ವಾಗತಾರ್ಹ. ಹಾಗೆ ನೋಡಿದರೆ ಈ ಬೇಡಿಕೆಗಳನ್ನು ಕಳೆದ ಶತಮಾನದ 70ರ ದಶಕದಿಂದಲೇ ನಿವೃತ್ತ ಯೋಧರು ಮುಂದಿಡುತ್ತಾ ಬಂದಿದ್ದರು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಬೇಡಿಕೆಗಳಿಗೆ ಮೂರ್ತರೂಪ ನೀಡಿ, ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದ್ದರು. ಆರಂಭದಲ್ಲಿ ಯುಪಿಎ ಸರ್ಕಾರ ಈ ಬೇಡಿಕೆಗಳಿಗೆ ಸೂಕ್ತ ಗಮನ ಕೊಡದಿದ್ದರೂ, ಬಳಿಕ ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರ ಮಧ್ಯಪ್ರವೇಶದಿಂದ ತಾತ್ವಿಕ ಒಪ್ಪಿಗೆ ನೀಡಿತ್ತು. ಚುನಾವಣೆಯ ಕದನದಲ್ಲಿ ನಿವೃತ್ತ ಯೋಧರ ಸಮಾನ ಪಿಂಚಣಿಯ ಬೇಡಿಕೆ ಉಭಯ ಪಕ್ಷಗಳ ರಾಜಕೀಯ ದಾಳವಾಗಿಯೂ ಮಾರ್ಪಟ್ಟಿತ್ತು. ಯುಪಿಎ ಸೋತು, ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಸಣ್ಣಪುಟ್ಟ ಅಡೆತಡೆಗಳನ್ನು ನಿವಾರಿಸಿ ಶೀಘ್ರವೇ ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ’ ಪದೇ ಪದೇ ಭರವಸೆ ನೀಡಿದ್ದರು. ಆದರೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತ ಯೋಧರ ಸಮಾನ ಪಿಂಚಣಿಯ ಕನಸು ನನಸಾಗುವುದೆಂಬ ನಿರೀಕ್ಷೆ ಹುಸಿಯಾದಾಗ, ಧರಣಿನಿರತರಲ್ಲಿ ಆಕ್ರೋಶ ಹೆಚ್ಚಾದದ್ದು ಸಹಜವೇ ಆಗಿತ್ತು. ಸುಮಾರು 24 ಲಕ್ಷ ನಿವೃತ್ತ ಯೋಧರು ಮತ್ತು ಇನ್ನೇನು ನಿವೃತ್ತರಾಗಲಿರುವ 50 ಸಾವಿರ ಯೋಧರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಈಡೇರಿಸಲು ಆಳುವವರು ಇಷ್ಟೊಂದು ಮೀನ-ಮೇಷ ಎಣಿಸಿದ್ದು, ನಮ್ಮ ಸೈನಿಕರ ಕುರಿತು ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿ ವರ್ಗದಲ್ಲಿ ಇರುವ ಅಸಡ್ಡೆಯ ಮನೋಭಾವಕ್ಕೂ ಸಾಕ್ಷಿಯಾಯಿತು. ‘ಒಂದು ಶ್ರೇಣಿ- ಒಂದು ಪಿಂಚಣಿ’ ಯೋಜನೆಯ ಕಾಲಬದ್ಧ ಮತ್ತು ಯೋಜನಾಬದ್ಧ ಜಾರಿ ಬಗ್ಗೆ ನಿವೃತ್ತ ಯೋಧರಲ್ಲಿ ಇನ್ನೂ ಕೆಲವು ಅನುಮಾನಗಳು ಉಳಿದುಕೊಂಡಿವೆ. ಅದಕ್ಕೆಂದೇ ಯೋಜನೆ ಜಾರಿಯ ರೂಪುರೇಷೆ ಸಿದ್ಧತೆಗೆ ಐವರು ಸದಸ್ಯರ ಸಮಿತಿ ನೇಮಕಕ್ಕೆ ಒತ್ತಾಯಿಸಿದ್ದಾರೆ. ಮುಖ್ಯವಾಗಿ, ‘ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಪಿಂಚಣಿ ಪರಿಷ್ಕರಣೆ ಮಾಡಬೇಕು’ ಎಂಬ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಯೋಜನೆ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ₨ 8–10 ಸಾವಿರ ಕೋಟಿ ಹೊರೆ ಬೀಳಲಿದೆ. ಹಾಗೆಂದೇ ಐದು ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ. ನಿವೃತ್ತ ಯೋಧರ ಬೇಡಿಕೆಗಳನ್ನು ಕೇವಲ ಹಣದ ದೃಷ್ಟಿಯಿಂದಷ್ಟೇ ನೋಡುವ ಈ ಪರಿಪಾಠ ಅಷ್ಟೇನೂ ಸರಿ ಅನ್ನಿಸುವುದಿಲ್ಲ. ಸೇನೆಯಲ್ಲಿ ಯೋಧನೊಬ್ಬ ಸೇವೆ ಸಲ್ಲಿಸಬಹುದಾದ ಗರಿಷ್ಠ ಅವಧಿ 17 ವರ್ಷ ಮಾತ್ರ. 50ರಲ್ಲಿ ನಿವೃತ್ತಿಯಾದರೆ ಬಳಿಕ ಮರುಉದ್ಯೋಗದ ಅವಕಾಶವೂ ಇಲ್ಲ. ಹೆಚ್ಚೆಂದರೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಅಲ್ಪ ಆದಾಯದ ಕಾವಲುಗಾರನ ಕೆಲಸ ಸಿಗಬಹುದು. ಯೋಧರ ನಿವೃತ್ತಿ ಜೀವನವನ್ನು ಸಹನೀಯವಾಗಿಸುವ ನೈತಿಕ ಹೊಣೆಯನ್ನು ಸರ್ಕಾರ ಅಲ್ಲಗಳೆಯಬಾರದು. ಯೋಜನೆ ಜಾರಿಯ ಕುರಿತು ಇನ್ನಷ್ಟು ಅಪನಂಬಿಕೆಗಳಿಗೆ ದಾರಿ ಮಾಡಿಕೊಡದೆ, ನಿವೃತ್ತ ಯೋಧರ ಸಣ್ಣಪುಟ್ಟ ಬೇಡಿಕೆಗಳನ್ನು ಇನ್ನಷ್ಟು ಉದಾರವಾಗಿ ಪರಿಗಣಿಸಬೇಕು. ರಾಜಕೀಯ ಪಕ್ಷಗಳೂ ಈ ವಿಷಯದಲ್ಲಿ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗುವ ಮೂಲಕ ಸೈನಿಕರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ರಾಜಕಾರಣಿಗಳು ‘ಆರ್ಥಿಕ ಭಾರ’ದ ಲೆಕ್ಕಾಚಾರಗಳನ್ನು ಮುಂದಿಟ್ಟರೆ, ದೇಶ ಕಾಯುವ ಸೈನಿಕರಿಗೂ ತಪ್ಪು ಸಂಕೇತಗಳು ಹೋಗುವಂತಾಗುತ್ತದೆ. ಸೇನೆಯ ನೈತಿಕ ಸ್ಥೈರ್ಯವನ್ನು ಕುಂದಿಸುವ ಇಂತಹ ಸಂದಿಗ್ಧಕ್ಕೆ ಸರ್ಕಾರ ಅವಕಾಶ ಕೊಡದೆ, ವಿವಾದ ಇಲ್ಲಿಗೇ ಅಂತ್ಯವಾಗುವಂತೆ ತುರ್ತುಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.