ಸೇನಾ ಅಧಿಕಾರಿಗಳಿಗೆ ಶಿಕ್ಷೆ ಮೂಡಿದ ಹೊಸ ಭರವಸೆ ಸೇನಾ ಸಮವಸ್ತ್ರ ಧರಿಸಿದವರು ಕಾನೂನಿಗಿಂತ ದೊಡ್ಡವರಲ್ಲ ಎಂಬುದನ್ನು ಇದು ದೃಢಪಡಿಸುತ್ತದೆ. ಕಾಶ್ಮೀರದ ಹತೋಟಿ ರೇಖೆ ಬಳಿಯ ಮಾಚಿಲ್ ವಲಯದಲ್ಲಿ ನಡೆದಿದ್ದ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇಬ್ಬರು ಸೇನಾ ಅಧಿಕಾರಿಗಳು ಹಾಗೂ ನಾಲ್ವರು ಯೋಧರಿಗೆ ಜೀವಾವಧಿ ಶಿಕ್ಷೆಯನ್ನು ಸೇನೆ ದೃಢಪಡಿಸಿದೆ. 2010ರ ಏಪ್ರಿಲ್‌ನಲ್ಲಿ ನಡೆದ ಈ ನಕಲಿ ಎನ್‌ಕೌಂಟರ್‌ನಲ್ಲಿ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸೇನೆ ಹೇಳಿಕೊಂಡಿತ್ತು. ಆದರೆ ನಂತರ, ಹತ್ಯೆಯಾದವರು ಬಾರಾಮುಲ್ಲಾದ ಬಡಪಾಯಿ ನಿರುದ್ಯೋಗಿ ಯುವಕರೆಂಬುದಾಗಿ ತಿಳಿದುಬಂದಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಬ್ರಿಗೇಡಿಯರ್ ದೀಪಕ್ ಮೆಹ್ರಾ ನೇತೃತ್ವದಲ್ಲಿ ನಡೆದ ಕೋರ್ಟ್ ಮಾರ್ಷಲ್ ನಂತರ ಈ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆ ದೃಢಪಡಿಸಲು ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಅವರು ಒಂದು ವರ್ಷ ತೆಗೆದುಕೊಂಡಿದ್ದಾರೆ. ಅಂತೂ ಘಟನೆ ನಡೆದ ಐದು ವರ್ಷಗಳ ನಂತರವಾದರೂ ಈ ಪ್ರಕರಣ ತಾರ್ಕಿಕ ಅಂತ್ಯ ಕಂಡಿರುವುದು ಸ್ವಾಗತಾರ್ಹ. ನ್ಯಾಯದಾನ ವಿಳಂಬವಾಗಿದ್ದರೂ ಅಪರಾಧಕ್ಕೆ ಶಿಕ್ಷೆ ಇದೆ ಎಂಬಂತಹ ಸಂದೇಶವನ್ನು ಇದು ಹೊರಡಿಸಿರುವುದು ಮುಖ್ಯ. ಸೇನಾ ಸಮವಸ್ತ್ರ ಧರಿಸಿದವರು ಕಾನೂನಿಗಿಂತ ದೊಡ್ಡವರಲ್ಲ ಎಂಬುದನ್ನು ಇದು ದೃಢಪಡಿಸಿದೆ. ಇಂತಹ ಆರೋಪದ ಮೇಲೆ ಸೇನಾ ಸಿಬ್ಬಂದಿಗೆ ಶಿಕ್ಷೆ ಆಗಿರುವುದು ಇದೇ ಮೊದಲು. ಹೀಗಾಗಿ ಇದು ಹೊಸದೊಂದು ಮೈಲುಗಲ್ಲು. ವ್ಯವಸ್ಥೆಯ ಮೇಲೆ ಭರವಸೆ ಮೂಡಿಸುವಂತಹದ್ದು. ಪ್ರತಿ ಅಪರಾಧಕ್ಕೂ ಶಿಕ್ಷೆ ಆಗಲೇಬೇಕು ಎಂಬುದನ್ನು ಇದು ಸೂಚಿಸಿದಂತಾಗಿದೆ. ಸೇನಾ ಪಡೆ ವಿಶೇಷ ಅಧಿಕಾರ ಕಾಯಿದೆಯೂ (ಎಎಫ್ಎಫ್‌ಪಿಎ), ಶಿಕ್ಷೆಯಿಂದ ಅವರನ್ನು ಪಾರು ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ವಿಚಾರಗಳಿಗೆ ಈ ತೀರ್ಪು ಹೊಸ ತಿರುವು ನೀಡಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಮಿಷ ಒಡ್ಡಿ, ಅವರನ್ನು ಕರೆಸಿಕೊಂಡು ನಂತರ ಗುಂಡಿಕ್ಕಿ ಸಾಯಿಸಲಾದ ಈ ಪ್ರಕರಣ ವಿವಾದವಾಗಿತ್ತು. ಸತ್ತವರನ್ನು ಪಾಕಿಸ್ತಾನದ ಭಯೋತ್ಪಾದಕರು ಎಂದು ಬಿಂಬಿಸಿ ಗಳಿಸಿಕೊಳ್ಳಬಹುದಾದ ಬಹುಮಾನ ಹಾಗೂ ಬಡ್ತಿ ಈ ಕುಕೃತ್ಯಕ್ಕೆ ಕಾರಣ. ನಂತರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ 123 ಜನರು ಸತ್ತಿದ್ದರು. ಭಯೋತ್ಪಾದಕರನ್ನು ಕೊಲ್ಲುವ ಯೋಧರಿಗೆ ನೀಡಲಾಗುವ ಬಹುಮಾನಗಳನ್ನು ಕುರಿತಾದ ನೀತಿಯ ಪುನರ್ ಪರಿಶೀಲನೆಯ ಅಗತ್ಯವನ್ನು ಈ ಪ್ರಕರಣ ಎತ್ತುತ್ತದೆ. ಈ ಬಗೆಯ ಪ್ರತಿಪಾದನೆಗಳನ್ನು ಕೂಲಂಕಷವಾದ ಪರಿಶೀಲನೆಗೆ ಒಳಪಡಿಸಬೇಕು. ನಕಲಿ ಎನ್‌ಕೌಂಟರ್‌ಗಳು ಹಾಗೂ ಇದಕ್ಕೆ ಅನೇಕ ಬಾರಿ ಸೇನಾ ಪಡೆ ವಿಶೇಷ ಅಧಿಕಾರ ಕಾಯಿದೆಯಲ್ಲಿ ದೊರೆಯುವ ರಕ್ಷಣೆಯಿಂದ ರಾಷ್ಟ್ರದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಇಂತಹ ಪ್ರಕರಣಗಳ ವಿಚಾರಣೆ, ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗಷ್ಟೇ ಸೀಮಿತವಾಗಬಾರದು. ಅತ್ಯಾಚಾರ ಹಾಗೂ ಕಾಣೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಇತರ ಪ್ರಕರಣಗಳನ್ನೂ ಸರಿಯಾದ ತನಿಖೆಗೆ ಒಳಪಡಿಸಬೇಕು. ಸೇನಾ ಪಡೆ ವಿಶೇಷ ಅಧಿಕಾರ ಕಾಯಿದೆ ದುರುಪಯೋಗವಾಗದಂತೆ ಎಚ್ಚರ ವಹಿಸಲು ಈ ಪ್ರಕರಣ ಪಾಠವಾಗಬೇಕು. ಈ ಬಗ್ಗೆ ಸೂಕ್ತ ನೀತಿ ಬೇಕು. ಘನತೆಯಿಂದ ಬದುಕುವ ನಾಗರಿಕರ ಹಕ್ಕು ಗೌರವಿಸಬೇಕು. ಭಯೋತ್ಪಾದನೆ ವಿರುದ್ಧ ಕಾಶ್ಮೀರದಲ್ಲಿ ಪ್ರಾಮಾಣಿಕವಾಗಿ ಸೆಣಸುತ್ತಿರುವವರ ತ್ಯಾಗ, ಪರಿಶ್ರಮ ನೆನಪಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.