ಓಲೈಕೆ ರಾಜಕಾರಣದ ಮತ್ತೊಂದು ಮಜಲು ಜೈನ ಧರ್ಮೀಯರು ಆಚರಿಸುವ ಪರ್ಯೂಷಣ ಪರ್ವದ ನೆಪವೊಡ್ಡಿ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನಾಲ್ಕು ದಿನಗಳ ಕಾಲ ಮಾಂಸದ ಮಾರಾಟವನ್ನು ನಿಷೇಧಿಸಿದೆ. ಅಲ್ಪಸಂಖ್ಯಾತ ಸಮುದಾಯವೊಂದರ ಭಾವನೆಗಳನ್ನು ಗೌರವಿಸುವ ನೆಪದಲ್ಲಿ ಹೇರಲಾಗಿರುವ ಈ ನಿಷೇಧ ವಾಸ್ತವದಲ್ಲಿ ಬಹುಸಂಸ್ಕೃತಿಯ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಿದೆ. ಭಾರತದಲ್ಲಿ ಹಲವು ಧರ್ಮಗಳು ಸಾವಿರಾರು ವರ್ಷಗಳಿಂದ ಸಹಬಾಳ್ವೆ ನಡೆಸಿದ್ದರೆ ಅದಕ್ಕೆ ಮುಖ್ಯ ಕಾರಣ ಪ್ರತಿಯೊಂದು ಧರ್ಮವೂ ತನ್ನ ನಂಬಿಕೆಗಳನ್ನು ತನ್ನ ವ್ಯಾಪ್ತಿಯೊಳಗಷ್ಟೇ ಉಳಿಸಿಕೊಂಡದ್ದು. ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನ ರೂಪುಗೊಂಡದ್ದೂ ಇದೇ ನೆಲೆಯಲ್ಲಿ. ಆದರೆ ಎಲ್ಲಾ ರಾಜಕೀಯ ಪಕ್ಷಗಳೂ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಕೇವಲ ಭಾಷಣ ಮತ್ತು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿಟ್ಟುಕೊಂಡು ವಿಭಜನೆಯ ರಾಜಕಾರಣವನ್ನು ನಡೆಸುತ್ತಲೇ ಬಂದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಗೋಮಾಂಸ ನಿಷೇಧವೂ ಇದೇ ತಂತ್ರದ ಭಾಗ. ಇದರ ಮುಂದುವರಿದ ಭಾಗವಾಗಿ ಪರ್ಯೂಷಣ ಅವಧಿಯಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟ ನಿಷೇಧ ಕಾರ್ಯರೂಪಕ್ಕೆ ಬಂದಿದೆ. ಈ ನಿಷೇಧದ ಹಿಂದಿನ ರಾಜಕಾರಣವನ್ನು ಬಿಜೆಪಿಯ ಮಿತ್ರಪಕ್ಷವೇ ಆಗಿರುವ ಶಿವಸೇನೆಯೇ ಬಯಲಿಗೆಳೆದಿದೆ. ನಾಲ್ಕು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಿರುವುದು ಮರಾಠಿ ಆಹಾರ ಪದ್ಧತಿಯನ್ನು ಅವಮಾನಿಸಿದಂತೆ ಎಂದು ಅದು ಬಹಿರಂಗವಾಗಿಯೇ ಹೇಳಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕೂಡಾ ಇದೇ ನಿಲುವನ್ನು ವ್ಯಕ್ತಪಡಿಸಿದೆ. ಕುತೂಹಲಕರ ವಿಚಾರವೆಂದರೆ ಈ ಹಿಂದೆ ಗೋಮಾಂಸ ಭಕ್ಷಣೆ ಮತ್ತು ಮಾರಾಟಕ್ಕೆ ನಿಷೇಧವನ್ನು ಹೇರಿದಾಗ ಈ ಪಕ್ಷಗಳು ಮೌನ ವಹಿಸಿದ್ದವು. ಈ ನಿಷೇಧಕ್ಕೆ ಮತ್ತೊಂದು ಮುಖವೂ ಇದೆ. ಪರ್ಯೂಷಣ ಪರ್ವದ ಅವಧಿಯಲ್ಲಿ ಎರಡು ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರುವ ಪರಿಪಾಠವೊಂದು ಕಳೆದ ನಾಲ್ಕು ದಶಕಗಳಿಂದ ಇದೆ. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗಲೂ ಇದು ಚಾಲನೆಯಲ್ಲಿತ್ತು. ಆದರೆ ಈಗ ಇದನ್ನು ಇದ್ದಕ್ಕಿದ್ದಂತೆಯೇ ನಾಲ್ಕು ದಿನಗಳಿಗೆ ವಿಸ್ತರಿಸಲಾಗಿದೆ. ಮೀರಾ-ಭಯಂದರ್ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಂತೂ ನಿಷೇಧ ಎಂಟು ದಿನಗಳಷ್ಟು ದೀರ್ಘವಾಗಿದೆ. ಇಷ್ಟಕ್ಕೂ ಈ ನಿಷೇಧ ಅಹಿಂಸೆಯ ಸಂದೇಶವನ್ನಂತೂ ನೀಡುತ್ತಿಲ್ಲ. ನಾಲ್ಕರಿಂದ ಎಂಟು ದಿನಗಳ ಅವಧಿಯ ಈ ನಿಷೇಧದ ಅವಧಿಯಲ್ಲಿ ಮಾಂಸಕ್ಕಾಗಿ ತರುವ ಪ್ರಾಣಿಗಳನ್ನು ಅಹಿಂಸಾತ್ಮಕವಾಗಿ ನೋಡಿಕೊಳ್ಳುವ ಯಾವ ಸೌಲಭ್ಯವೂ ಭಾರತೀಯ ಕಸಾಯಿಖಾನೆಗಳಲ್ಲಿ ಇಲ್ಲ. ಈ ನಾಲ್ಕು ದಿನಗಳ ಅವಧಿಯ ನಿಷೇಧ ಯಾರನ್ನೂ ಮಾಂಸಾಹಾರದಿಂದ ವಿಮುಖರನ್ನಾಗಿಯಂತೂ ಮಾಡುವುದಿಲ್ಲ. ಆದರೆ ಈಗ ಸೃಷ್ಟಿಯಾಗಿರುವ ವಿವಾದ ಭಿನ್ನ ಸಮುದಾಯಗಳ ನಡುವಣ ಒಡಕನ್ನು ಇನ್ನಷ್ಟು ಆಳವಾಗಿಸುತ್ತದೆ. ಭಿನ್ನ ನಂಬಿಕೆಗಳನ್ನಿಟ್ಟುಕೊಂಡೂ ಒಟ್ಟಾಗಿ ಬಾಳಬಹುದು ಎಂಬುದನ್ನು ಸಾಬೀತು ಮಾಡಿದ್ದ ಸಮುದಾಯಗಳೇ ತಮ್ಮ ನಂಬಿಕೆಗಳೇ ಶ್ರೇಷ್ಠ ಎಂದು ಭಾವಿಸಿ ಜಗಳಕ್ಕೆ ತೊಡಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಕಳೆದ ನಲವತ್ತೊಂದು ವರ್ಷಗಳಿಂದ ವರ್ಷದಲ್ಲಿ ಎರಡು ದಿನ ನಿಷೇಧವಿದ್ದಾಗ ಅದನ್ನು ಯಾರೂ ಪ್ರಶ್ನಿಸಿರಲಿಲ್ಲ. ಅದನ್ನು ನಾಲ್ಕು ದಿನಗಳಿಗೆ ವಿಸ್ತರಿಸುವ ಮೂಲಕ ಬಿಎಂಸಿ ಹೊಸ ಒಡಕೊಂದನ್ನು ಸೃಷ್ಟಿಸಿತಷ್ಟೇ. ಈಗಾಗಲೇ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಿರುವುದೇ ಈ ವಿವಾದ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದಾದ ತಿರುವನ್ನೂ ಸೂಚಿಸುತ್ತಿದೆ. ಬಿಜೆಪಿಗೂ ಇದನ್ನು ಧಾರ್ಮಿಕ ನಂಬಿಕೆಗಳ ನಡುವಣ ಸಂಘರ್ಷವನ್ನಾಗಿಸುವಲ್ಲಿಯೇ ಹೆಚ್ಚು ಆಸಕ್ತಿ ಇರುವಂತಿದೆ. ರಾಜ್ಯವನ್ನು ಕಾಡುತ್ತಿರುವ ತೀವ್ರ ಬರವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಜನರ ಗಮನ ಬೇರೆಡೆ ಸೆಳೆಯಲು ಇಂಥದ್ದೊಂದು ವಿವಾದ ಬೇಕಾಗಿರಬಹುದು. ಆದರೆ ಆಹಾರವನ್ನು ವೈಯಕ್ತಿಕ ವಿಷಯವನ್ನಾಗಿಯಷ್ಟೇ ಕಾಣುವ ಜನರಿಗೆ ಈ ವಿವಾದ ಬೇಕಾಗಿಲ್ಲ ಎಂಬುದನ್ನು ಆಡಳಿತಾರೂಢರು ಅರಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.