ಕತ್ತಲೆಯತ್ತ ಸಾಗುತ್ತಿದೆ ರಾಜ್ಯ ಎಚ್ಚರ ವಹಿಸದಿದ್ದರೆ ಕಷ್ಟ ರಾಜ್ಯದಲ್ಲಿ ವಿದ್ಯುತ್ತಿನ ತೀವ್ರ ಅಭಾವ ಉಂಟಾಗಿದೆ. ಸಾಮಾನ್ಯವಾಗಿ ಕಡು ಬೇಸಿಗೆಯ ಒಂದೆರಡು ತಿಂಗಳು ಲೋಡ್‌ ಶೆಡ್ಡಿಂಗ್‌ ಇರುತ್ತಿತ್ತು. ಲಭ್ಯ ವಿದ್ಯುತ್ತನ್ನು ಮಿತವ್ಯಯದಿಂದ ಬಳಸಬೇಕಾಗುತ್ತಿತ್ತು. ಆದರೆ ಈ ಸಲ ಮಳೆಗಾಲದಲ್ಲಿಯೇ ವಿದ್ಯುತ್‌ ಕ್ಷಾಮ ಕಂಡುಬಂದಿದೆ. ಮುಂಗಾರು ಕೈಕೊಟ್ಟಿರುವುದರಿಂದ ಜಲವಿದ್ಯುತ್‌ ಯೋಜನೆಗಳ ಅಣೆಕಟ್ಟೆಗಳಲ್ಲಿಯೇ ಸಾಕಷ್ಟು ನೀರಿಲ್ಲ. ಲಿಂಗನಮಕ್ಕಿ, ಸೂಪಾ, ಮಾಣಿ, ಕದ್ರಾ, ಕೊಡಸಳ್ಳಿಗಳಲ್ಲಿ ನೀರಿನ ಸಂಗ್ರಹ ಕಳವಳಕಾರಿಯಾಗಿಯೇ ಇದೆ. ಅದು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರಾಯಚೂರು, ಬಳ್ಳಾರಿ, ಉಡುಪಿ ಶಾಖೋತ್ಪನ್ನ ಘಟಕಗಳಲ್ಲಿಯೂ ನಾನಾ ಸಮಸ್ಯೆಗಳಿಂದ ಉತ್ಪಾದನೆ ಇಳಿಮುಖವಾಗಿದೆ. ರಾಷ್ಟ್ರೀಯ ಶಾಖೋತ್ಪನ್ನ, ಪರಮಾಣು ನಿಗಮಗಳ ಸ್ಥಾವರಗಳಲ್ಲಿ ದುರಸ್ತಿ, ನಿರ್ವಹಣೆ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆಗುತ್ತಿಲ್ಲ. ಇದರಿಂದಾಗಿ ಕೇಂದ್ರದಿಂದ ಬರಬೇಕಾದ ಪಾಲೂ ಸರಿಯಾಗಿ ಸಿಗುತ್ತಿಲ್ಲ. ಸೌರ, ಗಾಳಿ ವಿದ್ಯುತ್‌ ಘಟಕಗಳ ಉತ್ಪಾದನೆಯಂತೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿವೆ. ಮಳೆಯಿಲ್ಲದೆ ನೀರಾವರಿ ಪಂಪ್‌ಸೆಟ್‌, ಗೃಹ ವಿದ್ಯುತ್‌ ಬೇಡಿಕೆ ಹೆಚ್ಚಿದೆ. ಬೇಡಿಕೆ– ಪೂರೈಕೆ ನಡುವೆ ಅಂತರ ಹಿಗ್ಗಿ ಸಮಸ್ಯೆ ಉದ್ಭವಿಸಿದೆ. ಇದು ಇಂಧನ ಇಲಾಖೆಯ ವಿವರಣೆ. ರಾಜ್ಯದ ನಿತ್ಯದ ವಿದ್ಯುತ್‌ ಬೇಡಿಕೆ 8,700 ಮೆಗಾವಾಟ್‌. ಈಗ ದೊರೆಯುತ್ತಿರುವುದು 5,300 ಮೆಗಾವಾಟ್‌ ಮಾತ್ರ. ಕೇಂದ್ರ ಗ್ರಿಡ್‌ನಲ್ಲಿ ನಮಗೆ 2,300 ಮೆಗಾವಾಟ್‌ ಹಂಚಿಕೆಯಾಗಿದ್ದರೂ ಪೂರೈಕೆ 1,580 ಮೆಗಾವಾಟ್‌ಗೆ ಇಳಿದಿದೆ. ಈ ಕೊರತೆ ಸರಿದೂಗಿಸುವುದಕ್ಕಾಗಿ ಬೆಂಗಳೂರು ಮಹಾನಗರದಲ್ಲಿಯೇ ದಿನಕ್ಕೆ ನಾಲ್ಕು ತಾಸು ನಿಗದಿತ ಲೋಡ್‌ಶೆಡ್ಡಿಂಗ್‌ ಜಾರಿಗೆ ಬಂದಿದೆ. ಇದನ್ನು ಹೊರತುಪಡಿಸಿ ಅನಿಯಮಿತ ಲೋಡ್‌ಶೆಡ್ಡಿಂಗ್‌ ಬೇರೆ. ನಿರಂತರ ವಿದ್ಯುತ್‌ ಪೂರೈಕೆ ಅಗತ್ಯವಿರುವ ಉದ್ಯಮಗಳು, ಸೇವಾ ವಲಯಗಳನ್ನು ಈ ಕಡಿತ ಹೈರಾಣ ಮಾಡಿದೆ. ಮಾಹಿತಿ ತಂತ್ರಜ್ಞಾನಕ್ಕೆ ವಿಶ್ವಮಟ್ಟದಲ್ಲಿ ಹೆಸರಾದ ಮತ್ತು ವಿದ್ಯುತ್‌ ನಿಗಮಗಳಿಗೆ ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ಬೆಂಗಳೂರಲ್ಲೇ ಈ ಸ್ಥಿತಿ ಇರುವಾಗ ಪಟ್ಟಣಗಳು, ಗ್ರಾಮೀಣ ಪ್ರದೇಶಗಳ ಪಾಡು ಇನ್ನೂ ಚಿಂತಾಜನಕ. ಅಲ್ಲಿ ಪ್ರದೇಶವನ್ನು ಆಧರಿಸಿ 4ರಿಂದ 7 ತಾಸು ಕಡ್ಡಾಯವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಆದರೆ ಮುನ್ಸೂಚನೆ ಕೊಡದೆ ಮಾಡುವ ಕಡಿತಕ್ಕೆ ಲೆಕ್ಕವೇ ಇಲ್ಲ. ವಿದ್ಯುತ್‌ ಪೂರೈಕೆಯಲ್ಲೂ ಈ ರೀತಿಯ ತಾರತಮ್ಯ ಸರಿಯಲ್ಲ. ಈಗೇನೋ ಇಂಧನ ಸಚಿವರು ‘ಮಿತವ್ಯಯ’ ಮಂತ್ರ ಜಪಿಸಲು ಶುರು ಮಾಡಿದ್ದಾರೆ. ರಾಜ್ಯದಾದ್ಯಂತ ಬೀದಿ ದೀಪಗಳನ್ನು ಬೆಳಗಿಸುವ– ಆರಿಸುವ ಅವಧಿ ಕಡಿಮೆ ಮಾಡಲು ಅದೇಶಿಸಿದ್ದಾರೆ. ನಮ್ಮ ಒಟ್ಟೂ ಬಳಕೆಯಲ್ಲಿ ಬೀದಿ ದೀಪಗಳ ಪಾಲು ಶೇ 2ರಷ್ಟಿದೆ. ಹೀಗಾಗಿ ಇಲ್ಲೊಂದಿಷ್ಟು ಉಳಿಸಲು ಸಾಧ್ಯ. ಮುಂದಿನ ವಾರ ಗಣೇಶ ಚತುರ್ಥಿ. ಆಗ ಬೀದಿ ಬೀದಿಯಲ್ಲೂ ಗಣೇಶನ ಪ್ರತಿಷ್ಠಾಪನೆ, ಅದಕ್ಕೆ ಅಧಿಕೃತ– ಅನಧಿಕೃತ... ಹೀಗೆ ವಿದ್ಯುತ್‌ ಬಳಕೆಯಾಗಲಿದೆ. ಅದನ್ನು ಮಿತಿಗೊಳಿಸಲು, ಜನರೇಟರ್‌ ಮೂಲಕ ಸರಬರಾಜು ಕಲ್ಪಿಸಿಕೊಳ್ಳಲು ಮನವಿ ಮಾಡಿದ್ದಾರೆ. ಇನ್ನೊಂದು ಕಡೆ, ಹಣ ಕೊಟ್ಟು ವಿದ್ಯುತ್‌ ಖರೀದಿಸಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸೇರಿ ಸಚಿವರು ಹೇಳುತ್ತಲೇ ಇದ್ದಾರೆ. ಇಷ್ಟಾದ ಬಳಿಕವೂ ವಿದ್ಯುತ್‌ ಸಮಸ್ಯೆ ನೀಗಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಮುಂದಿನ ಮಳೆಗಾಲದವರೆಗೂ ನೀಗುವ ಲಕ್ಷಣಗಳೂ ಇಲ್ಲ. ಏಕೆಂದರೆ ಜಲ ವಿದ್ಯುತ್‌ ಅಣೆಕಟ್ಟೆಗಳಿರುವ ಮಲೆನಾಡು ಭಾಗದಲ್ಲಿ ಶೇ 90ರಷ್ಟು ಮುಂಗಾರು ಮುಗಿದಿದೆ. ಹಿಂಗಾರು ಮಳೆಯಿಂದ ಅಂಥ ಪ್ರಯೋಜನ ಇಲ್ಲ. ಅಲ್ಲಿಗೆ, ಕಡಿಮೆ ಖರ್ಚಿನಲ್ಲಿ (ಯೂನಿಟ್‌ಗೆ ಸರಾಸರಿ 60 ಪೈಸೆ) ಬೇಡಿಕೆಯ ಶೇ 50ರಷ್ಟನ್ನು ಪೂರೈಸುವ ಜಲವಿದ್ಯುತ್‌ ಘಟಕಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಹೊರ ರಾಜ್ಯಗಳಿಂದ, ಅನ್ಯ ಮೂಲಗಳಿಂದ ಖರೀದಿಸುವ ವಿದ್ಯುತ್‌ಗೆ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಇದು ಬೊಕ್ಕಸದ ಮೇಲೆ ಹೊರೆ ಹೇರುತ್ತದೆ. ಸನ್ನಿವೇಶ ಇಷ್ಟೆಲ್ಲ ಬಿಗಡಾಯಿಸಲು ಮುಖ್ಯ ಕಾರಣ ದೂರದೃಷ್ಟಿಯ ಕೊರತೆ. ಏಕೆಂದರೆ ಈ ಸರ್ಕಾರ ಹೊಸ ಯೋಜನೆಗಳನ್ನು ಆರಂಭಿಸಲೇ ಇಲ್ಲ. ವಿದ್ಯುತ್‌ ಬೇಡಿಕೆ ದಿನೇದಿನೇ ಹೆಚ್ಚುತ್ತಿದ್ದರೂ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಅದರ ಕಹಿಫಲವನ್ನು ಇಡೀ ರಾಜ್ಯ ಉಣ್ಣಬೇಕಿದೆ. ವಿದ್ಯುತ್‌ ಎನ್ನುವುದು ಸಮೃದ್ಧಿಯ ಸಂಕೇತ; ಅಭಿವೃದ್ಧಿಯ ಅಳತೆಗೋಲು. ಅದಕ್ಕೆ ಆದ್ಯತೆ ಕೊಡಬೇಕು. ಜತೆಗೆ ದುಂದು, ಪೋಲು, ಕಳವು ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದು ನಿರಂತರವಾಗಿ ನಡೆಯಬೇಕು. ಬೆಂಕಿ ಬಿದ್ದಾಗ ಬಾವಿ ತೋಡುವುದು ವ್ಯರ್ಥ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.