ಸಕಾಲಿಕ ಕ್ರಮ ‘ಸುವರ್ಣ’ ಭರವಸೆ ಚಿನ್ನದ ನಗದೀಕರಣ ಮತ್ತು ಚಿನ್ನದ ಬಾಂಡ್‌ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತೀಯರ ಚಿನ್ನದ ವ್ಯಾಮೋಹ ಮತ್ತು ದೇಶದ ಒಟ್ಟು ಚಿನ್ನದ ಆಮದಿನ ಮೇಲೆ ಇದು ದೂರಗಾಮಿ ಪರಿಣಾಮ ಬೀರಲಿದೆ. ಚಾಲ್ತಿ ಖಾತೆ ಕೊರತೆಯೂ ಕಡಿಮೆಯಾಗಿ ಅರ್ಥ ವ್ಯವಸ್ಥೆಯ ಆರೋಗ್ಯ ಸುಧಾರಿಸಲಿದೆ. ಗ್ರಾಹಕರು, ಚಿನ್ನಾಭರಣ ತಯಾರಕರು, ಸರ್ಕಾರ ಮತ್ತು ಬ್ಯಾಂಕಿಂಗ್‌ ವಲಯದ ಪಾಲಿಗೆ ಇದೊಂದು ಸಕಾರಾತ್ಮಕ ಹೆಜ್ಜೆ. ಬಳಕೆಯಾಗದ ಚಿನ್ನವನ್ನು ಚಲಾವಣೆಗೆ ತರುವ ‘ಚಿನ್ನದ ನಗದೀಕರಣ’ ಮತ್ತು ಚಿನ್ನದ ಬಾಂಡ್‌ಗಳ ಮೂಲಕ ಚಿನ್ನವನ್ನೇ ಹೂಡಿಕೆ ರೂಪದಲ್ಲಿ ಖರೀದಿಸುವ ಯೋಜನೆಗಳು ಕಾರ್ಯಸಾಧ್ಯವಾದ ಸಕಾಲಿಕ ನಿರ್ಧಾರಗಳಾಗಿವೆ. ಚಿನ್ನದ ಉಳಿತಾಯವು ಆರ್ಥಿಕ ಹೂಡಿಕೆಯಾಗಿ ಪರಿವರ್ತನೆಯಾಗಲು ಇಲ್ಲಿ ವಿಪುಲ ಅವಕಾಶ ಇದೆ. ಇದು ಒಳ್ಳೆಯದು. ಏಕೆಂದರೆ, ಬಳಕೆಯಾಗದ ಅಂದಾಜು ₹ 49 ಲಕ್ಷ ಕೋಟಿಗಳಷ್ಟು ಮೊತ್ತದ 20 ಸಾವಿರ ಟನ್‌ಗಳಷ್ಟು ಚಿನ್ನ ಖಾಸಗಿ ಆಸ್ತಿಯಾಗಿ ಕೊಳೆಯುತ್ತಿದೆ. ಇದನ್ನು ಬ್ಯಾಂಕಿಂಗ್‌ ವಲಯದಲ್ಲಿ ಚಲಾವಣೆಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಎರಡೂ ಯೋಜನೆಗಳು ದ್ವಿಮುಖ ಲಾಭದ ಪ್ರಯೋಜನ ಹೊಂದಿರುವ ಸುವರ್ಣ ಭರವಸೆಗಳಾಗಿವೆ. ಆಭರಣ, ನಾಣ್ಯ, ಗಟ್ಟಿ ಸ್ವರೂಪದಲ್ಲಿ ಚಿನ್ನವನ್ನೇ ಇಟ್ಟುಕೊಂಡಿರಬೇಕೆಂಬ ಪ್ರವೃತ್ತಿಗೆ ಇದರಿಂದ ಸಾಕಷ್ಟು ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆ ಇದೆ. ಆದರೆ ಈ ಯೋಜನೆಯ ಯಶಸ್ಸು ಜನರ ಮನೋಭಾವವನ್ನು ಅವಲಂಬಿಸಿರುತ್ತದೆ. ಏಕೆಂದರೆ ಹಳೆ ಆಭರಣಗಳ ವ್ಯಾಮೋಹವನ್ನು ಬಿಟ್ಟುಕೊಡುವುದು ಭಾರತೀಯರಿಗೆ ಕಷ್ಟವಾಗಬಹುದು. ಹಾಗೆಯೇ ಚಿನ್ನದ ಮೂಲವನ್ನು ಬಹಿರಂಗಪಡಿಸಬೇಕಾಗಿರುವ ನಿಬಂಧನೆಯು ಚಿನ್ನದ ನಗದೀಕರಣ ಯೋಜನೆಯ ಯಶಸ್ಸಿಗೆ ಕೆಲ ಮಟ್ಟಿಗೆ ಅಡಚಣೆ ಒಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಇದು ಕಪ್ಪು ಹಣ ಬಿಳಿಯಾಗಿಸುವ ಯೋಜನೆಯಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ದೀಪಾವಳಿ ಹೊತ್ತಿಗೆ ಈ ಎರಡೂ ಯೋಜನೆಗಳು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಜನರ ಪ್ರತಿಕ್ರಿಯೆ ಆಧರಿಸಿ ಮುಂದಿನ ವರ್ಷ ಈ ಎರಡೂ ಯೋಜನೆಗಳನ್ನು ಪರಾಮರ್ಶಿಸಲಿರುವುದು ಸರಿಯಾದ ನಿಲುವಾಗಿದೆ. ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಸಾವಿರ ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಚಾಲ್ತಿ ಖಾತೆ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮ ಅಪಾರವಾದುದು. ಚಿನ್ನದ ನಗದೀಕರಣ ಯೋಜನೆಯಿಂದ ಚಿನ್ನದ ಆಮದಿಗೆ ತಡೆ ಬೀಳಬಹುದು ಎಂಬಂತಹ ನಿರೀಕ್ಷೆ ಇದೆ. ಜತೆಗೆ ಇದು ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಎತ್ತುವ ಸಾಲದ ವೆಚ್ಚವನ್ನೂ ತಗ್ಗಿಸಲಿದೆ. ಇಲ್ಲಿನ ಉಳಿತಾಯವನ್ನು, ಚಿನ್ನದ ಬೆಲೆ ಹೆಚ್ಚಳದ ನಷ್ಟವನ್ನು ಸರಿದೂಗಿಸಲು ಸ್ಥಾಪಿಸಲಾಗುವ ‘ಚಿನ್ನದ ಮೀಸಲು ನಿಧಿ’ಗೆ ವರ್ಗಾಯಿಸುವುದು ಸರ್ಕಾರದ ಆಲೋಚನೆಯಾಗಿದೆ. ಚಿನ್ನದ ನಗದೀಕರಣ ಯೋಜನೆಯಡಿ ಠೇವಣಿ ಇಡಲಿರುವ ಚಿನ್ನವನ್ನು ಕರಗಿಸಿ, ಚಿನ್ನಾಭರಣ ತಯಾರಕರಿಗೆ ಮಾರಾಟ ಮಾಡಲು ಉದ್ದೇಶಿಸಿರುವುದರಿಂದ ಸಹಜವಾಗಿಯೇ ಚಿನ್ನಾಭರಣ ವರ್ತಕರ ಆಮದು ಮೇಲಿನ ಅವಲಂಬನೆ ಗಮನಾರ್ಹವಾಗಿ ಕಡಿಮೆಯಾಗಲಿದೆ. ಈ ಯೋಜನೆ ದೇವಾಲಯಗಳು ಹಾಗೂ ಟ್ರಸ್ಟ್‌ಗಳಿಗೆ ಆಕರ್ಷಕವಾಗಬಹುದು. ಚಿನ್ನದ ಬಾಂಡ್‌ಗಳನ್ನು ತೆರಿಗೆ ಮುಕ್ತಗೊಳಿಸಿರುವುದರಿಂದ ಹೂಡಿಕೆದಾರರ ಪಾಲಿಗೆ ಹೆಚ್ಚು ಆಕರ್ಷಕವಾಗಿರಲಿದೆ. ಹೀಗಾಗಿ ಇದು ಹೆಚ್ಚು ಯಶಸ್ವಿಯಾಗಲಿದೆ. ಇದೇ ಮಾತನ್ನು ಚಿನ್ನದ ನಗದೀಕರಣ ಯೋಜನೆ ಬಗ್ಗೆ ಹೇಳಲಿಕ್ಕಾಗದು. ಕೆಲ ನಿಬಂಧನೆಗಳನ್ನು ಸಡಿಲಿಕೆ ಮಾಡಿ, ಹೆಚ್ಚಿನ ಬಡ್ಡಿ ದರದ ಆಮಿಷ ಒಡ್ಡಿ ಗ್ರಾಹಕರ ಪಾಲಿಗೆ ಈ ಯೋಜನೆಗಳನ್ನು ಇನ್ನೂ ಹೆಚ್ಚು ಆಕರ್ಷಕಗೊಳಿಸಬೇಕು. ಹಾಗಾದಾಗ ಮಾತ್ರ ತಿಜೋರಿಗಳಲ್ಲಿ ಭದ್ರವಾಗಿರುವ ಅಗಾಧ ಪ್ರಮಾಣದ ಚಿನ್ನವು ಬ್ಯಾಂಕಿಂಗ್‌ ವಹಿವಾಟಿಗೆ ಹರಿದು ಬರಲು ಅವಕಾಶವಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.