ಕರೆಗಳ ಅಕಾಲಿಕ ಕಡಿತ ಸಮಸ್ಯೆ ನಿವಾರಿಸಿ ಮೊಬೈಲ್ ಫೋನ್‌ ಕರೆಗಳ ಅಕಾಲಿಕ ಕಡಿತದ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಮಹಾನಗರಗಳಿಂದ ಆರಂಭಿಸಿ ಮೊಬೈಲ್ ಸೌಲಭ್ಯವಿರುವ ಹಳ್ಳಿಗಾಡಿನ ತನಕ ವ್ಯಾಪಕವಾಗಿರುವ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯ ದೂರಸಂಪರ್ಕ ಸಚಿವಾಲಯದ ಮುಂದಿದೆ. ಟೆಲಿಕಾಂ ಸಚಿವಾಲಯ, ಮೊಬೈಲ್ ಸೇವಾದಾತ ಕಂಪೆನಿಗಳ ಮುಖ್ಯಸ್ಥರ ಸಭೆ ನಡೆಸಿ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸೂಚಿಸಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೇವಾದಾತರನ್ನು ಉತ್ತರದಾಯಿಗಳನ್ನಾಗಿಸಲು ಅಗತ್ಯವಿರುವ ಕ್ರಮಗಳ ಕುರಿತು ನಿರ್ದಿಷ್ಟ ಸಲಹೆಗಳನ್ನೂ ಮುಂದಿಟ್ಟಿದೆ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ‘ಡಿಜಿಟಲ್ ಇಂಡಿಯಾ’ ಯೋಜನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಷ್ಟು ತೀವ್ರವಾಗಿರುವ ಈ ಸಮಸ್ಯೆಯ ಹಿಂದಿನ ಕಾರಣಗಳನ್ನು ಮೊದಲು ಶೋಧಿಸಬೇಕಾದ ಅಗತ್ಯವಿದೆ. ಮೊಬೈಲ್ ಸೇವೆ ನೀಡುತ್ತಿರುವ ಕಂಪೆನಿಗಳು ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂಬಂತೆ ಮಾತನಾಡುತ್ತಿವೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಟ್ರಾಯ್ ನಿಯಮಗಳ ಪ್ರಕಾರ ಕರೆ ಕಡಿತದ ಪ್ರಮಾಣ ಶೇಕಡ ಎರಡಕ್ಕಿಂತ ಹೆಚ್ಚುವಂತಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ದೆಹಲಿ ಮತ್ತು ಮುಂಬೈಗಳಲ್ಲಿ ಟ್ರಾಯ್ ನಡೆಸಿದ ಸಮೀಕ್ಷೆಯ ಪ್ರಕಾರ ಯಾವುದೇ ಪ್ರಮುಖ ಮೊಬೈಲ್ ಸೇವಾ ಕಂಪೆನಿಯ ಸೇವೆಯೂ ಈ ಮಿತಿಯನ್ನು ಪಾಲಿಸುತ್ತಿಲ್ಲ. ಬಹುಮುಖ್ಯ ಸೇವಾದಾತ ಕಂಪೆನಿಗಳ ಕರೆ ಕಡಿತದ ಪ್ರಮಾಣ ಶೇಕಡ 8.04ರಿಂದ ಶೇಕಡ 3.19ರ ನಡುವೆ ಇದೆ. ಈ ಸ್ಥಿತಿಗೆ ಬಹುಮುಖ್ಯ ಕಾರಣ ಮೂಲ ಸೌಕರ್ಯದ ಕೊರತೆ. ಮೊಬೈಲ್ ಸಂಪರ್ಕಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ತಲಾ ಬಳಕೆಯ ಪ್ರಮಾಣವೂ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಮೂಲ ಸೌಕರ್ಯ ಹೆಚ್ಚಾಗುತ್ತಿಲ್ಲ. ಟ್ರಾಯ್ ಒದಗಿಸಿರುವ ಅಂಕಿಅಂಶಗಳೇ ಹೇಳುತ್ತಿರುವಂತೆ ಮೂಲ ಸೌಕರ್ಯಕ್ಕೆ ಮೊಬೈಲ್ ಸೇವಾದಾತರು ಹೂಡುತ್ತಿರುವ ಮೊತ್ತ ಅಗತ್ಯಕ್ಕಿಂತ ಬಹಳ ಕಡಿಮೆ ಇದೆ. 2012–13ರ ಸಾಲಿನಲ್ಲಿ ತರಂಗಗಳ ಖರೀದಿಯ ಹೊರತಾದ ಮೂಲ ಸೌಕರ್ಯ ಹೂಡಿಕೆಯ ಪ್ರಮಾಣ ₹ 2.02 ಲಕ್ಷ ಕೋಟಿಯಷ್ಟಿತ್ತು. ಇದು 2013–14ನೇ ಸಾಲಿನಲ್ಲಿ ಕೇವಲ ₹ 9,325 ಕೋಟಿಗೆ ಸೀಮಿತವಾಗಿದೆ. ಈ ಅವಧಿಯಲ್ಲಿ ಬಳಕೆಯ ಪ್ರಮಾಣ ಶೇಕಡ 6.8ರಷ್ಟು ಹೆಚ್ಚಾಗಿದೆ. ಮೂಲ ಸೌಕರ್ಯ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಏನು ಎಂಬ ಪ್ರಶ್ನೆಗೆ ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಸರಳ ಉತ್ತರವೊಂದನ್ನು ಹುಡುಕಿಕೊಂಡಿವೆ. ಮೊಬೈಲ್ ಟವರ್‌ಗಳು ಸೃಷ್ಟಿಸಿರುವ ವಿಕಿರಣ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೇರಿರುವ ನಿರ್ಬಂಧಗಳು ಮೂಲ ಸೌಕರ್ಯ ನಿರ್ಮಾಣಕ್ಕೆ ಅಡ್ಡಿಯಾಗಿವೆ ಎಂಬುದು ಅವುಗಳ ವಾದ. ಈ ವಾದ ಸ್ವಲ್ಪ ಮಟ್ಟಿಗೆ ಸರಿ ಎನಿಸಬಹುದಾದರೂ ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ತರಂಗಾಂತರ ಖರೀದಿಯನ್ನು ಹೊರತು ಪಡಿಸಿದರೆ ಮೊಬೈಲ್ ಸೇವಾ ಕಂಪೆನಿಗಳು ಮೂಲ ಸೌಕರ್ಯಕ್ಕಾಗಿ ಹೂಡಿಕೆ ಮಾಡುತ್ತಿರುವುದು ತಮ್ಮ ಆದಾಯದ ಶೇಕಡ 13ರಷ್ಟನ್ನು ಮಾತ್ರ ಎಂಬ ಅಂಶವನ್ನೂ ಇಲ್ಲಿ ಗಮನಿಸಬೇಕು. ಯುರೋಪ್ ಮತ್ತು ಅಮೆರಿಕದ ನಗರಗಳಲ್ಲಿ ವಿಕಿರಣಕ್ಕೆ ಸಂಬಂಧಿಸಿದಂತೆ ಭಾರತಕ್ಕಿಂತ ಹೆಚ್ಚು ಕಠಿಣವಾದ ಕಾನೂನುಗಳಿವೆ. ಕರೆ ಕಡಿತದ ಸಮಸ್ಯೆ ಇಲ್ಲದಂತೆ ಸೇವೆ ನೀಡಲು ಅಲ್ಲಿನ ಕಂಪೆನಿಗಳಿಗೆ ಸಾಧ್ಯವಾಗುತ್ತದೆ ಎನ್ನುವುದಾದರೆ ಅದು ಭಾರತದಲ್ಲಿಯೂ ಸಾಧ್ಯವಾಗಬೇಕು. ಕರೆಕಡಿತ ಸಮಸ್ಯೆಗೆ ಮೊಬೈಲ್ ಸೇವೆ ನೀಡುವ ಕಂಪೆನಿಗಳನ್ನು ಉತ್ತರದಾಯಿಗಳನ್ನಾಗಿಸುವ ನಿಟ್ಟಿನಲ್ಲಿ ಟ್ರಾಯ್ ಈಗಾಗಲೇ ಕೆಲವು ಹೆಜ್ಜೆಗಳನ್ನಿಟ್ಟಿದೆ. ಪ್ರತೀ ಸೆಕೆಂಡ್‌ಗೆ ದರ ವಿಧಿಸುವ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಆದರೆ ಎಲ್ಲಾ ಗ್ರಾಹಕರೂ ಇದೇ ದರಗಳ ಪ್ಯಾಕೇಜ್ ಬಳಸುತ್ತಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಮೂವತ್ತು ಸೆಕೆಂಡ್ ಮತ್ತು ಒಂದು ನಿಮಿಷದ ಕನಿಷ್ಠ ಘಟಕಗಳಿಗೆ ಬಿಲ್ ಪಾವತಿಸುವ ಪ್ಯಾಕೇಜ್‌ಗಳನ್ನು ಬಳಸುತ್ತಿರುವ ಗ್ರಾಹಕರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಈ ಗ್ರಾಹಕರು ತಮ್ಮದಲ್ಲದ ತಪ್ಪಿಗೆ ನಷ್ಟ ಅನುಭವಿಸಿದರೆ ಸೇವಾದಾತ ಕಂಪೆನಿಗಳು ತಪ್ಪು ಮಾಡಿಯೂ ಲಾಭ ಗಳಿಸುವ ವಿಪರ್ಯಾಸ ಇಲ್ಲಿದೆ. ಕಡಿತಗೊಂಡ ಕರೆಗಳಿಗೆ ಶುಲ್ಕ ವಿಧಿಸದೇ ಇರುವ ಟ್ರಾಯ್ ಪ್ರಸ್ತಾಪ ಜಾರಿಗೆ ಬಂದರೆ ಸೇವಾದಾತ ಕಂಪೆನಿಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ. ಸರ್ಕಾರ ಈ ವಿಷಯದಲ್ಲಿ ಕಠಿಣ ನಿಲುವು ತಳೆಯಬೇಕಾದ ಅಗತ್ಯವಿದೆ. ಮೊಬೈಲ್ ಸೇವೆ ನೀಡುವ ಕಂಪೆನಿಗಳು ಲೈಸೆನ್ಸ್ ಷರತ್ತುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರುವಂತೆ ಮಾಡುವ ಹೊಣೆ ಸರ್ಕಾರದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.