ಸುಗ್ರೀವಾಜ್ಞೆ ರದ್ದು ಸೂಕ್ತವಾದ ಕ್ರಮ ವಿವಾದಾತ್ಮಕ ಭೂ ಸ್ವಾಧೀನ ಸುಗ್ರೀವಾಜ್ಞೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಹಿಂತೆಗೆದುಕೊಂಡಿದೆ. ಈ ಸುಗ್ರೀವಾಜ್ಞೆಯನ್ನು ಮೂರು ಬಾರಿ ಜಾರಿಗೊಳಿಸಲಾಗಿತ್ತು. ಯುಪಿಎ ಸರ್ಕಾರ ಜಾರಿಗೆ ತಂದಿದ್ದ 2013ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರುವಂತಹ ಮಸೂದೆಯನ್ನು ಜಾರಿಗೊಳಿಸಲು ಎನ್‌ಡಿಎ ಸರ್ಕಾರ ಇನ್ನಿಲ್ಲದಂತೆ ಅನೇಕ ಪ್ರಯತ್ನಗಳನ್ನು ನಡೆಸಿತು. ಸುಗ್ರೀವಾಜ್ಞೆ ಜಾರಿಯನ್ನು ಉದ್ದಕ್ಕೂ ಸಮರ್ಥಿಸಿಕೊಂಡೇ ಬಂದಿತ್ತು. ಪ್ರಕ್ರಿಯೆಯಲ್ಲಿ ಈ ತಿದ್ದುಪಡಿ ಮಸೂದೆ ರೈತ ವಿರೋಧಿ ಎಂಬಂತಹ ಟೀಕೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈ ತಿದ್ದುಪಡಿ ಮಸೂದೆ ಕುರಿತು ರೈತರಲ್ಲಿ ಸೃಷ್ಟಿಯಾಗಿರುವ ಭೀತಿ ಸರಿಯಾದುದೊ ಅಲ್ಲವೊ ಎಂಬುದು ಬೇರೆ ಪ್ರಶ್ನೆ. ಆದರೆ ರೈತರಲ್ಲಿ ಭೀತಿ ಸೃಷ್ಟಿಯಾಗಿತ್ತು ಎಂಬುದು ವಾಸ್ತವ ಸಂಗತಿ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ತಿದ್ದುಪಡಿ ಮಸೂದೆಯಲ್ಲಿ ಅಳವಡಿಸಲಾದ ಕೆಲವು ಹೊಸ ಅಂಶಗಳು ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂಬುದು ರೈತರ ವಾದವಾಗಿತ್ತು. ಖಾಸಗಿ ವಲಯದ ಯೋಜನೆಗಳಿಗೆ ಬೃಹತ್ ಪ್ರಮಾಣದ ಭೂ ಸ್ವಾಧೀನಕ್ಕೆ ಶೇ 70ರಷ್ಟು ಸಂಬಂಧಿಸಿದ ರೈತರ ಅನುಮತಿ ಅಗತ್ಯ ಹಾಗೂ ಭೂ ಸ್ವಾಧೀನದಿಂದಾಗಬಹುದಾದ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನವಾಗಬೇಕೆಂಬ ಅಂಶಗಳು ಯುಪಿಎ ಜಾರಿಗೊಳಿಸಿದ್ದ 2013ರ ಭೂಸ್ವಾಧೀನ ಕಾಯಿದೆಯಲ್ಲಿ ಇತ್ತು. ಆದರೆ ಈ ಅಂಶಗಳು ಎನ್‌ಡಿಎ ಸರ್ಕಾರ ತರಲು ಹೊರಟಿದ್ದ ಹೊಸ ತಿದ್ದುಪಡಿ ಮಸೂದೆಯಲ್ಲಿ ಸೇರ್ಪಡೆಯಾಗಿರದಿದ್ದುದು ವಿವಾದದ ಕೇಂದ್ರಬಿಂದುವಾಗಿತ್ತು. ಮೊದಲೇ ಮಳೆ ಕೊರತೆ, ಬೆಳೆನಷ್ಟ, ಕೃಷಿ ಆದಾಯ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯಕ್ಕೆ ಈ ನಡೆ ರೈತ ವಿರೋಧಿ ಎನಿಸಿದ್ದರಲ್ಲಿ ಅಚ್ಚರಿ ಇಲ್ಲ. ಆದರೆ ‘ರೈತವಿರೋಧಿ’ ಎಂಬ ಹಣೆಪಟ್ಟಿ ಕಳಚಿಕೊಳ್ಳುವುದು ಬಿಜೆಪಿಗೆ ಈಗ ಅನಿವಾರ್ಯ. ಏಕೆಂದರೆ, ಸದ್ಯದಲ್ಲೇ ಕೃಷಿ ಪ್ರಧಾನ ರಾಜ್ಯವಾದ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ರೈತರ ಪರ, ಬಡವರ ಪರ ಸರ್ಕಾರ ಎಂಬುದನ್ನು ತೋರಿಸಿಕೊಳ್ಳಬೇಕಾದ ಅನಿವಾರ್ಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕಿದೆ. ಸುಗ್ರೀವಾಜ್ಞೆ ರದ್ದುಗೊಳಿಸುವ ನಿರ್ಧಾರದ ಹಿಂದೆ ಇದೂ ಕೆಲಸ ಮಾಡಿದೆ. ಭೂ ಸ್ವಾಧೀನ ಮಸೂದೆ ವಿಚಾರದ ನಿರ್ವಹಣೆ ಆರಂಭದಿಂದಲೂ ದೋಷಪೂರ್ಣವಾಗಿದೆ. 2013ರ ಭೂ ಸ್ವಾಧೀನ ಕಾನೂನಿನ ತಿದ್ದುಪಡಿ ಬಗ್ಗೆ ಪ್ರತಿಪಕ್ಷಗಳು ಹಾಗೂ ಸಂಬಂಧಿಸಿದ ಭಾಗೀದಾರರ ಜೊತೆ ಎನ್‌ಡಿಎ ಸರ್ಕಾರ ಸೂಕ್ತ ರೀತಿಯ ಸಮಾಲೋಚನೆಗಳನ್ನೇ ನಡೆಸಿಲ್ಲ. ಜೊತೆಗೆ ಇದನ್ನು ಮುಂದುವರಿಸಿಕೊಂಡು ಹೋಗಲು ತನಗೆ ಅಗತ್ಯ ಸಂಸದೀಯ ಬೆಂಬಲವೂ ಇಲ್ಲ ಎಂಬುದನ್ನೂ ಬಿಜೆಪಿ ಗಣನೆಗೆ ತೆಗೆದುಕೊಳ್ಳಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸಂಖ್ಯೆಯ ಕೊರತೆ ಇರುವುದು ತಿಳಿದಿರುವಂತಹದ್ದೇ. ಅದರಲ್ಲೂ ಪ್ರಮುಖ ನೀತಿನಿರೂಪಣೆ ವಿಚಾರದಲ್ಲಿ ಎಲ್ಲರನ್ನೂ ಸಮಾಲೋಚನೆ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಮುಖ್ಯವಾದುದು ಎಂಬುದು ಸರ್ಕಾರಕ್ಕೆ ಅರಿವಿರಬೇಕು. ಈ ವಿಚಾರದಲ್ಲಿ ಅನೇಕ ಮಿತ್ರ ಪಕ್ಷಗಳೂ ಅಸಮಾಧಾನ ತೋರಿವೆ. ಹೀಗಾಗಿ ಸುಗ್ರೀವಾಜ್ಞೆಯ ಮಾರ್ಗ ಸರಿಯಾದುದಲ್ಲ. ಅದೂ ಪದೇ ಪದೇ ಸುಗ್ರೀವಾಜ್ಞೆ ಹೊರಡಿಸುವುದಂತೂ ಇನ್ನೂ ಸರಿಯಲ್ಲ. ಈ ಸುಗ್ರೀವಾಜ್ಞೆ ರೈತರ ಹಿತ ರಕ್ಷಿಸುತ್ತದೆ ಎಂದೇ ಈವರೆಗೆ ಹೇಳಿಕೊಂಡು ಬಂದ ಕೇಂದ್ರ ಸರ್ಕಾರ ಈಗ ಸುಗ್ರೀವಾಜ್ಞೆ ಕೈಬಿಡುವುದು ರೈತ ಪರ ಕ್ರಮ ಎಂದು ಪ್ರತಿಪಾದಿಸುತ್ತಿರುವುದು ವಿಪರ್ಯಾಸ. ಈ ವೈರುಧ್ಯ ಹಾಗೂ ಗೊಂದಲಗಳು ಪ್ರಧಾನಿ ಹೇಳಿಕೆಯಲ್ಲೂ ವ್ಯಕ್ತವಾಗಿವೆ. ಸುಗ್ರೀವಾಜ್ಞೆ ಈಗ ರದ್ದಾಗಿದೆ. ಆದರೆ ಭೂ ಸ್ವಾಧೀನ ವಿಚಾರವನ್ನು ಭವಿಷ್ಯದಲ್ಲಿ ರಚನಾತ್ಮಕವಾಗಿ ನಿರ್ವಹಿಸಬೇಕಾಗಿದೆ. ಭೂ ಸ್ವಾಧೀನ ಕಾಯಿದೆಯ ತಿದ್ದುಪಡಿಯನ್ನು ಸ್ಥಳೀಯ ಅಗತ್ಯಗಳಿಗೆ ಅನುಸಾರವಾಗಿ ಮಾಡಿಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಭಾರತದಲ್ಲಿ ಕೃಷಿ ಭೂಮಿ ಖಾಸಗಿ ಆಸ್ತಿ. ಹೀಗಾಗಿ ರೈತರ ಒಪ್ಪಿಗೆಯನ್ನು ಕಡೆಗಣಿಸಲಾಗದು ಎಂಬ ಅರಿವಿರಬೇಕು. ಈ ವಿಚಾರದಲ್ಲಿ ಇತರ ಪರಿಹಾರಗಳ ಬಗೆಗೂ ಗಮನ ಹರಿಸಬೇಕಾಗಿದೆ. ಈ ಅನುಭವದಿಂದ ಕಲಿತ ಪಾಠ ಮುಂದಿನ ಪ್ರಯತ್ನಗಳಿಗೆ ದಿಕ್ಸೂಚಿಯಾಗಬೇಕು. ಹಾಗೆಯೇ ಇನ್ನಿತರ ಸುಧಾರಣಾ ಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇದಕ್ಕಾಗಿ ರಾಜಕೀಯ ಲಾಭಕ್ಕಾಗಿ ಜನಪ್ರಿಯ ಯೋಜನೆಗಳಿಗೆ ಕಟ್ಟುಬೀಳದೆ, ಸುಧಾರಣಾ ಕ್ರಮಗಳು ಚಾಲನೆಗೊಳ್ಳಲು ನೀತಿ ನಿರೂಪಣಾ ಕ್ರಮಗಳನ್ನು ಕೈಗೊಳ್ಳುವ ಬದ್ಧತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು. ನನೆಗುದಿಗೆ ಸಿಲುಕಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿಗೆ ಆದ್ಯತೆ ದೊರೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.