ಪ್ರಶ್ನೆಪತ್ರಿಕೆ ನೀಡುವಲ್ಲಿ ಎಡವಟ್ಟು ಹೊಣೆಗೇಡಿತನ ಬಿಡದ ಕೆಪಿಎಸ್‌ಸಿ ಕರ್ನಾಟಕ ಲೋಕಸೇವಾ ಆಯೋಗವು 464 ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ನಡೆಸುತ್ತಿರುವ ಮುಖ್ಯ ಪರೀಕ್ಷೆ ಸಂದರ್ಭದಲ್ಲಿ ‘ಪ್ರಬಂಧ’ ಪರೀಕ್ಷೆ ಪ್ರಶ್ನೆ ಪತ್ರಿಕೆ ಬದಲಿಗೆ ಬೇರೆ ಪ್ರಶ್ನೆ ಪತ್ರಿಕೆಯನ್ನು ನೀಡಿ ಎಡವಟ್ಟು ಮಾಡಿದೆ. ಆ ಮೂಲಕ ಹೊಣೆಗೇಡಿತನವನ್ನು ಮತ್ತೆ ಪ್ರದರ್ಶಿಸಿದೆ. ಇದು ಆಯೋಗದ ಅತ್ಯಂತ ಬೇಜವಾಬ್ದಾರಿ ನಡವಳಿಕೆ. 2011ರ ಬ್ಯಾಚಿನ 362 ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದ ನಂತರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಮೊದಲ ಪರೀಕ್ಷೆ ಇದು. ಈ ಪರೀಕ್ಷೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕಾದ ಜವಾಬ್ದಾರಿ ಆಯೋಗದ ಮೇಲಿತ್ತು. 2011ರಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ವಿಪರೀತವಾಗಿತ್ತು ಎಂದು ಆರೋಪ ಬಂದಿದ್ದರಿಂದ ಈ ಬಗ್ಗೆ ಸಿಐಡಿ ತನಿಖೆ ನಡೆಸಲಾಯಿತು. ಭ್ರಷ್ಟಾಚಾರ ನಡೆದಿರುವುದು ನಿಜ ಎಂದು ತನಿಖೆಯಿಂದ ಬಹಿರಂಗವಾಗಿದ್ದರಿಂದ ಆಯ್ಕೆ ಪಟ್ಟಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೆ 2011ರ ನೇಮಕಾತಿ ಸಂದರ್ಭದಲ್ಲಿ ಇದ್ದ ಎಲ್ಲ ಸದಸ್ಯರನ್ನೂ ಅಮಾನತು ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವ ಯತ್ನವಾಗಿಯೇ ಪಿ.ಸಿ.ಹೋಟಾ ಸಮಿತಿ ನೇಮಕ ಮಾಡಲಾಗಿತ್ತು. ಸಮಿತಿಯ ಬಹುತೇಕ ಶಿಫಾರಸುಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಆಯೋಗದಲ್ಲಿ ಒಂದಿಷ್ಟು ಸುಧಾರಣೆ ತರುವ ಕೆಲಸವನ್ನೂ ನಡೆಸಿತ್ತು. ಆ ಮೂಲಕ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಆಶಾಕಿರಣವನ್ನೂ ಮೂಡಿಸಿತ್ತು. ಆದರೆ ಈಗ ಮತ್ತೆ ಆಯೋಗ ಎಡವಟ್ಟು ಮಾಡುವುದರ ಮೂಲಕ ಈ ಎಲ್ಲ ಆಸೆಗೆ ತಣ್ಣೀರು ಸುರಿದಿದೆ. ಕೆಪಿಎಸ್‌ಸಿ ಯಾವ ಕಾಲಕ್ಕೂ ಸುಧಾರಣೆ ಆಗುವುದಿಲ್ಲವೇನೊ ಎಂಬ ಅನುಮಾನ ಬರುವಂತೆ ಮಾಡಿದೆ. ಈಗ ನಡೆಯುತ್ತಿರುವ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಹೇಗೆ ನಡೆಯಬಹುದು ಹಾಗೂ ಮುಂದೆ ಬರುವ ಸಂದರ್ಶನ ನಿಷ್ಪಕ್ಷಪಾತವಾಗಿ ನಡೆಯುವುದೋ ಇಲ್ಲವೋ ಎನ್ನುವ ಅನುಮಾನದ ಬೀಜವನ್ನೂ ಅಭ್ಯರ್ಥಿಗಳ ಎದೆಯಲ್ಲಿ ಬಿತ್ತಿದೆ. ಈಗ ನಡೆದ ತಪ್ಪಿಗೆ ತಿಪ್ಪೆ ಸಾರಿಸುವುದನ್ನು ಬಿಟ್ಟು ತಪ್ಪಿತಸ್ಥರನ್ನು ತಕ್ಷಣವೇ ಪತ್ತೆ ಮಾಡಿ ಸೂಕ್ತ ಶಿಕ್ಷೆ ನೀಡಬೇಕು. ಹೀಗೆ ಮಾಡುವ ಮೂಲಕ ತಾನು ಬದಲಾಗಿದ್ದೇನೆ ಎಂಬ ಸಂದೇಶ ಜರೂರಾಗಿ ಹೊರ ಹೋಗುವಂತೆ ಆಯೋಗ ಮಾಡಬೇಕು. ಪರೀಕ್ಷೆಯನ್ನು ಮುಂದೂಡಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿಕೆ ನೀಡಿ ಮತ್ತೊಂದು ಗೊಂದಲಕ್ಕೆ ಕಾರಣರಾಗಿದ್ದರು. ಇಂತಹ ಬಾಲಿಶ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಯೋಗ್ಯವಲ್ಲ. ರಾಜ್ಯ ಸರ್ಕಾರ ಕೂಡ ಈ ವಿಷಯದಲ್ಲಿ ಸುಮ್ಮನೆ ಕೂರಬಾರದು. ಇದು ಕೇವಲ ಆಯೋಗದ ಕೆಲಸ ಎನ್ನುವ ತೀರ್ಮಾನಕ್ಕೆ ಬರಬಾರದು. ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳದಿದ್ದರೆ ಇಲ್ಲಿಯವರೆಗೆ ಮಾಡಿದ ಯತ್ನಗಳೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತದೆ. ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಪರೀಕ್ಷೆ ಅತ್ಯಂತ ಪ್ರಮುಖವಾದದ್ದು. ಹೀಗೆ ಆಯ್ಕೆಯಾಗಿ ಬರುವ ಅಧಿಕಾರಿಗಳು ಮುಂದಿನ 30–35 ವರ್ಷ ರಾಜ್ಯ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕೆಲಸ ಮಾಡುತ್ತಾರೆ. ಈ ಪರೀಕ್ಷೆಗಳನ್ನು ಸೂಕ್ತವಾಗಿ ನಡೆಸದಿದ್ದರೆ ಅದು ರಾಜ್ಯದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಈಗಲೂ ಅಧ್ಯಕ್ಷರಿಲ್ಲ. ಕೇವಲ ನಾಲ್ವರು ಸದಸ್ಯರಿದ್ದಾರೆ. ಉಳಿದ ಎಲ್ಲ ಸದಸ್ಯರನ್ನು ಅಮಾನತು ಮಾಡಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಸೂಕ್ತ ಮಾನದಂಡಗಳನ್ನು ಸಿದ್ಧಪಡಿಸುವಂತೆ ಹೈಕೋರ್ಟ್ ಸಲಹೆ ನೀಡಿದೆ. ಸರಿಯಾದ ಮಾನದಂಡಗಳನ್ನು ರೂಪಿಸಿ ತಕ್ಷಣವೇ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು. ಯೋಗ್ಯ, ದಕ್ಷ ಮತ್ತು ಪ್ರಾಮಾಣಿಕ ಸದಸ್ಯರನ್ನು ನೇಮಕ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಮುಖ್ಯಮಂತ್ರಿ ಈ ವಿಷಯದಲ್ಲಿ ರಾಜಕೀಯ ಅಂಶಗಳನ್ನು ಪರಿಗಣಿಸಬಾರದು ಅಷ್ಟೆ. ಮುಖ್ಯಮಂತ್ರಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಲೋಕಸೇವಾ ಆಯೋಗವನ್ನು ಶುದ್ಧೀಕರಣಗೊಳಿಸಬೇಕು. ಕೇವಲ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರನ್ನು ಬದಲಾಯಿಸಿದರೆ ಆಯೋಗ ಶುದ್ಧವಾಗುವುದಿಲ್ಲ. ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸಿಬ್ಬಂದಿಗೂ ಚುರುಕು ಮುಟ್ಟಿಸುವ ಕೆಲಸವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.