ನೇತಾಜಿ ದಾಖಲೆ ಬಿಡುಗಡೆಗೆ ಕೇಂದ್ರವೂ ಮುಂದಾಗಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 64 ರಹಸ್ಯ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿದೆ. ಗೂಢಚರ್ಯೆ ಹಾಗೂ ಪೊಲೀಸ್ ದಾಖಲೆಗಳಲ್ಲಿ ‘ರಹಸ್ಯ’ ಎಂದು ದಾಖಲಿಸಿ ಇಡಲಾಗಿದ್ದ ಕಡತಗಳನ್ನು ಈಗ ಸಾರ್ವಜನಿಕಗೊಳಿಸಲಾಗಿದೆ. ಇದರಿಂದ ನೇತಾಜಿ ಸಾವಿನ ನಿಗೂಢತೆಗೆ ಸಂಬಂಧಿಸಿದ ಏಳು ದಶಕಗಳ ಹಿಂದಿನ ವಿವಾದ ಮತ್ತೊಮ್ಮೆ ಪುನರುಜ್ಜೀವನಗೊಂಡಿದೆ. ನೇತಾಜಿ ಹಾಗೂ ಅವರ ಕುಟುಂಬದವರ ಮೇಲೆ ಬ್ರಿಟಿಷರು ಹಾಗೂ ಕಾಂಗ್ರೆಸ್ ಪಕ್ಷ ನಡೆಸಿದ ಬೇಹುಗಾರಿಕೆಯ ವಿಚಾರಗಳು ಈ ದಾಖಲೆಗಳಲ್ಲಿವೆ. 1941ರಲ್ಲಿ ಕಲ್ಕತ್ತಾದ ತಮ್ಮ ಮನೆಯಲ್ಲಿ ಗೃಹಬಂಧನದಲ್ಲಿದ್ದು ಹೊರದೇಶಕ್ಕೆ ಪಲಾಯನಗೈದ ಬೋಸ್ ಅವರಂತಹ ಮುಂಚೂಣಿಯಲ್ಲಿದ್ದ ರಾಷ್ಟ್ರೀಯವಾದಿ ಆಂದೋಲನದ ನಾಯಕರ ಚಲನವಲನಗಳ ಮೇಲೆ ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು ಕಣ್ಣಿಟ್ಟಿರುತ್ತಿದ್ದ ವಿಚಾರದಲ್ಲಿ ಅಂತಹ ಹೊಸದೇನೂ ಇಲ್ಲ. ಆದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಆಡಳಿತ ಕಾಲದಲ್ಲೂ ಬೋಸ್ ಕುಟುಂಬದ ಮೇಲೆ ಗೂಢಚರ್ಯೆ ನಡೆಸಲಾಗುತ್ತಿತ್ತು ಎಂಬ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳಲಿದೆ ಎಂಬುದು ನಿಜ. ಈ ಬೇಹುಗಾರಿಕೆ ಹಿಂದಿದ್ದ ಉದ್ದೇಶವೇನು ಎಂಬುದು ಪಶ್ಚಿಮ ಬಂಗಾಳದ ಜನರಿಗೆ ಭಾವನಾತ್ಮಕ ವಿಚಾರವಾಗಬಹುದು. ಒಂದು ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ನಂತರ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದಂತಹ ವರ್ಣರಂಜಿತ ವ್ಯಕ್ತಿ ಸುಭಾಷ್ ಚಂದ್ರ ಬೋಸ್ ಅವರ ಕುರಿತಾಗಿ ನೆಹರೂ ಅವರಿಗಿದ್ದ ಆಂತರಿಕ ಹೆದರಿಕೆ ಇದಕ್ಕೆ ಕಾರಣವೆ? ಎಂಬೆಲ್ಲಾ ವ್ಯಾಖ್ಯಾನಗಳಿಗೆ ಚಾಲನೆ ದೊರೆಯಬಹುದು. ಆದರೆ ರಾಜಕೀಯ ನಾಯಕರ ಮೇಲೆ ಕಣ್ಣಿರಿಸುವುದು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಅಂದಿನಿಂದ ಇಂದಿನವರೆಗೆ ಉಳಿದುಕೊಂಡು ಬಂದಿದೆ ಎಂಬುದು ಕಹಿ ವಾಸ್ತವ. ಹೀಗಿದ್ದೂ, 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚೆ ಈ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿರುವುದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯ ಲಾಭದ ಲೆಕ್ಕಾಚಾರವಂತೂ ಇದ್ದೇ ಇದೆ. ನೇತಾಜಿ ಕುರಿತಂತಹ ರಹಸ್ಯ ದಾಖಲೆಗಳ ಬಿಡುಗಡೆಗೆ ಕೇಂದ್ರದಲ್ಲಿ ಬಿಜೆಪಿ ಪ್ರತಿಪಕ್ಷವಾಗಿದ್ದ ಸಂದರ್ಭದಲ್ಲಿ ಒತ್ತಾಯಿಸಿತ್ತು. ಈಗ ಅದೇ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತ ಸೂತ್ರ ಹಿಡಿದಿದೆ. ಆದರೆ ಈ ಹಿಂದಿನ ಸರ್ಕಾರಗಳಂತೆಯೇ ನೇತಾಜಿ ರಹಸ್ಯ ದಾಖಲೆಗಳ ಬಿಡುಗಡೆಗೆ ಎನ್‌ಡಿಎ ಸರ್ಕಾರವೂ ಹಿಂಜರಿಯುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಬಹುದಾದ ಪರಿಣಾಮಗಳ ನೆಪ ಹೇಳುತ್ತಿದೆ. ಆದರೆ ಈ ವಾದ ಸಮರ್ಥನೀಯವಲ್ಲ. ಮಿತ್ರ ರಾಷ್ಟ್ರಗಳ ಜೊತೆಗಿನ ಭಾರತದ ಸಂಬಂಧ ಹಾಳಾಗುತ್ತದೆ ಎಂಬಂತಹ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಕೆಲವು ವರ್ಷಗಳ ಹಿಂದೆ ಅಮೆರಿಕದ ನಿಕ್ಸನ್ ರಹಸ್ಯ ದಾಖಲೆಗಳು ಬಿಡುಗಡೆಯಾದವು. ಇಂದಿರಾ ಗಾಂಧಿ ಬಗ್ಗೆ ನಿಕ್ಸನ್ ಅವರು ಆಡಿದ್ದಂತಹ ನಿಂದನೆಯ ಮಾತುಗಳನ್ನು ಈ ದಾಖಲೆಗಳು ಬಯಲುಮಾಡಿದ್ದವು. ಹಾಗೆಂದು ಭಾರತ– ಅಮೆರಿಕ ಬಾಂಧವ್ಯಕ್ಕೆ ಧಕ್ಕೆಯೇನೂ ಆಗಲಿಲ್ಲ. ಹಾಗೆಯೇ ಜೂಲಿಯನ್ ಅಸ್ಸಾಂಜೆ ಬಯಲು ಮಾಡಿದ ಅಮೆರಿಕದ ರಹಸ್ಯ ದಾಖಲೆಗಳಿಂದ ರಾಜತಾಂತ್ರಿಕ ವಿಪ್ಲವವೇನೂ ಆಗಲಿಲ್ಲ. ಗತ ಇತಿಹಾಸವನ್ನು ಇತಿಹಾಸವಾಗಿ ನೋಡಬೇಕಷ್ಟೆ. ಹೀಗಾಗಿ ಹೆಚ್ಚು ವಿಳಂಬ ಮಾಡದೆ ನೇತಾಜಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವೂ ಮುಂದಾಗಬೇಕು. ನೇತಾಜಿ ನಿಗೂಢ ಕಣ್ಮರೆ ಬಗೆಗಿನ ಸಂಶಯಗಳನ್ನು ನಿವಾರಿಸಲು ಇದು ಉತ್ತಮ ಮಾರ್ಗ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.