ಎನ್‌ಕ್ರಿಪ್ಷನ್‌ ನೀತಿ ಗೊಂದಲ ತಿಳಿಗೇಡಿತನವೋ? ಅಸಡ್ಡೆಯೋ? ‘ಕಡಿಮೆ ಸರ್ಕಾರ; ಹೆಚ್ಚು ಆಡಳಿತ’ ಎಂಬುದು ಎಲ್ಲಾ ಆಧುನಿಕ ಸರ್ಕಾರಗಳ ಧ್ಯೇಯವಾಕ್ಯ. ಈ ಧ್ಯೇಯವಾಕ್ಯದ ಎರಡನೇ ಭಾಗದಲ್ಲಿರುವ ‘ಹೆಚ್ಚು ಆಡಳಿತ’ ಎಂಬುದು ಅಷ್ಟೇನೂ ಸರಳ ಸಂಗತಿಯಲ್ಲ. ಒಂದು ಕಾಲದಲ್ಲಿ ಉದ್ಯಮದಿಂದ ಆರಂಭಿಸಿ ಸಮಾಜ ಕಲ್ಯಾಣದ ತನಕ ಎಲ್ಲೆಡೆಯೂ ವ್ಯಾಪಿಸಿದ್ದ ಸರ್ಕಾರ, ನಿಧಾನವಾಗಿ ಈ ಜವಾಬ್ದಾರಿಗಳಿಂದ ದೂರವಾಗುತ್ತಿರುವುದು ಮೇಲ್ನೋಟಕ್ಕೆ ನಿಜವೆನಿಸುತ್ತದೆ. ಸೂಕ್ಷ್ಮವಾಗಿ ನೋಡಿದರೆ ಭಿನ್ನ ಚಿತ್ರಣ ಕಾಣಸಿಗುತ್ತದೆ. ‘ಹೆಚ್ಚು ಆಡಳಿತ’ ಎಂಬುದನ್ನು ‘ಹೆಚ್ಚಿದ ನಿಯಂತ್ರಣ’ ಎಂಬ ಅರ್ಥದಲ್ಲಿ ಪರಿಭಾವಿಸಿದರೆ ಇದು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ. ‘ಸರ್ಕಾರ ಮುಕ್ತ’ವಾಗಿರುವ ಪ್ರತಿಯೊಂದು ಕ್ಷೇತ್ರದಲ್ಲೂ ‘ನಿಯಂತ್ರಕ’ನಾಗಿ ಸರ್ಕಾರ ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಮುಖ್ಯಕಾರಣ ಸರ್ಕಾರವನ್ನು ನಡೆಸುತ್ತಿರುವ ವ್ಯವಸ್ಥೆಗೆ ಇರುವ ಅರಿವಿನ ಕೊರತೆ. ಇದು ಅಭದ್ರತೆಯಾಗಿ ಪರಿವರ್ತನೆಗೊಂಡು ಆತಂಕದ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಮಾಹಿತಿ ತಂತ್ರಜ್ಞಾನ ಸಾಧ್ಯಮಾಡಿರುವ ಸಂವಹನದ ಸಾಧ್ಯತೆಗಳೆಲ್ಲವೂ ಸರ್ಕಾರಗಳಿಗೆ ಆತಂಕ ಹುಟ್ಟಿಸುತ್ತಿವೆ. ಈ ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಆ ಕ್ಷೇತ್ರದಲ್ಲಿ ತನ್ನ ನಿಯಂತ್ರಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕರಡು ಎನ್‌ಕ್ರಿಪ್ಷನ್‌ ನೀತಿಯನ್ನೂ ಇದೇ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ವ್ಯಕ್ತಿಗಳ ನಡುವಣ ಸಂವಹನಕ್ಕೆ ಅವಕಾಶ ಕಲ್ಪಿಸಿರುವ ವಾಟ್ಸ್ ಆ್ಯಪ್ ಬಗೆಯ ಮೆಸೆಂಜರ್‌ಗಳು, ಇ–ಮೇಲ್‌ ಸೇವೆಗಳಲ್ಲಿ ನಡೆಸಿದ ಸಂವಹನವನ್ನು ತೊಂಬತ್ತು ದಿನಗಳ ಕಾಲ ಇಟ್ಟುಕೊಂಡಿರಬೇಕು ಎಂಬ ಪ್ರಸ್ತಾಪವೊಂದು ಕರಡು ನೀತಿಯಲ್ಲಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಇಂಥ ಮೂರ್ಖ ನಿರ್ಧಾರಗಳು ಈಗಿನ ಸರ್ಕಾರಕ್ಕೆ ಸೀಮಿತವಾಗಿರುವಂಥದ್ದೇನೂ ಅಲ್ಲ. ಹಿಂದಿನ ಸರ್ಕಾರವೂ ಇದೇ ಬಗೆಯ ನಿರ್ಧಾರಗಳನ್ನು ಕೈಗೊಂಡಿತ್ತು. ಈ ನಿರ್ಧಾರಗಳಿಗೆ ಅಂತಿಮವಾಗಿ ಜನಪ್ರತಿನಿಧಿಗಳೇ ಹೊಣೆ ಎಂಬುದು ನಿಜವಾದರೂ ಇದಕ್ಕೆ ಕೇವಲ ಅವರನ್ನಷ್ಟೇ ದೂರಲು ಸಾಧ್ಯವಿಲ್ಲ. ಈ ಬಗೆಯ ಕರಡುಗಳನ್ನು ರೂಪಿಸುವ ಕ್ರಿಯೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಜನಪ್ರತಿನಿಧಿಗಳೇನಿದ್ದರೂ ಇದಕ್ಕೆ ಸಂಬಂಧಿಸಿದಂತೆ ತಾತ್ವಿಕ ಅಭಿಪ್ರಾಯಗಳನ್ನಷ್ಟೇ ನೀಡಿರುತ್ತಾರೆ. ಈ ಕರಡನ್ನು ರೂಪಿಸಿರುವ ಅಧಿಕಾರಿಗಳ ವರ್ಗ ತನ್ನ ಅರಿವಿನ ಕೊರತೆಯಿಂದ ಅನುಭವಿಸುತ್ತಿರುವ ಆತಂಕ ನೀತಿಯಲ್ಲಿ ಪ್ರತಿಬಿಂಬಿಸಿದೆ. ರಾಷ್ಟ್ರೀಯ ಭದ್ರತೆಯ ವಿಷಯ ಬಹಳ ಮುಖ್ಯವಾದುದು ಎಂಬುದರಲ್ಲಿ ಸಂಶಯವಿಲ್ಲ. ವ್ಯಕ್ತಿಯ ಖಾಸಗಿತನವೂ ಅಷ್ಟೇ ಮುಖ್ಯವಾದುದು. ಅಪರೂಪದ ಸಂದರ್ಭಗಳಲ್ಲಿ ಒಂದಕ್ಕಿಂತ ಮತ್ತೊಂದು ಮುಖ್ಯವಾಗಬಹುದು. ಆದರೆ ಸಾಮಾನ್ಯ ಸಂದರ್ಭಗಳ ಮಟ್ಟಿಗೆ ವ್ಯಕ್ತಿಯ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಯತ್ನ ಸಂವಿಧಾನ ವಿರೋಧಿಯೂ ಆಗುತ್ತದೆ. ಎನ್‌ಕ್ರಿಪ್ಷನ್‌ ನೀತಿಯಲ್ಲಿರುವ ವಿವಾದಾತ್ಮಕ ಅಂಶವನ್ನೇನೋ ಸರ್ಕಾರ ಈಗ ಹಿಂದಕ್ಕೆ ಪಡೆದಿದೆ. ಆದರೆ ಗೊಂದಲ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಕಂಪೆನಿಗಳು ಸರ್ಕಾರ ನಿರ್ದಿಷ್ಟಪಡಿಸಿದ ಎನ್‌ಕ್ರಿಪ್ಷನ್‌ ತಂತ್ರಜ್ಞಾನವನ್ನು ಬಳಸಬೇಕೆಂಬ ಪ್ರಸ್ತಾಪವನ್ನೇನೂ ಹಿಂದಕ್ಕೆ ಪಡೆಯಲಾಗಿಲ್ಲ. ಇದು ಮತ್ತೊಂದು ಬಗೆಯ ಲೈಸನ್ಸ್ ರಾಜ್‌ಗೆ ಕಾರಣವಾಗುತ್ತದೆ. ನಿರ್ದಿಷ್ಟ ಸಂಸ್ಥೆಗಳು ಪೇಟೆಂಟ್ ಮಾಡಿಕೊಂಡ ತಂತ್ರಜ್ಞಾನವನ್ನು ಮಾತ್ರ ಸರ್ಕಾರ ನಿಗದಿ ಪಡಿಸಿದರೆ ಅದೊಂದು ಬಗೆಯ ಏಕಸ್ವಾಮ್ಯಕ್ಕೂ ಕಾರಣವಾಗಿಬಿಡುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ನಿತ್ಯವೂ ಹೊಸ ಹೊಸ ಆವಿಷ್ಕಾರಗಳನ್ನು ಸುಧಾರಣೆಗಳನ್ನು ಕಾಣುತ್ತಿದೆ. ಪರಿಣಾಮವಾಗಿ ಸಂವಹನದ ಮಾದರಿಯೂ ಬದಲಾಗುತ್ತಿದೆ. ಇದನ್ನು ಅರಗಿಸಿಕೊಂಡು ಅಗತ್ಯವಿರುವ ಆಡಳಿತಾತ್ಮಕ ನಿಯಂತ್ರಣ ನೀತಿಗಳನ್ನು ರೂಪಿಸುವ ಸವಾಲೊಂದನ್ನು ವಿಶ್ವದಾದ್ಯಂತ ಎಲ್ಲಾ ಪ್ರಜಾಪ್ರಭುತ್ವಗಳೂ ಎದುರಿಸುತ್ತಿವೆ. ಆದರೆ ಅವರೆಲ್ಲಾ ಒಂದು ಲೈಸನ್ಸ್ ರಾಜ್ ರೂಪಿಸಲು ಹೊರಟಿಲ್ಲ. ತಂತ್ರಜ್ಞಾನದ ಸವಾಲುಗಳನ್ನು ಆಡಳಿತಾತ್ಮಕ ಸಾಧ್ಯತೆಗಳನ್ನಾಗಿ ಪರಿವರ್ತಿಸಿಕೊಂಡು ಮುಂದುವರಿಯುತ್ತಿವೆ. ಇದೇ ಮಾದರಿಯನ್ನು ಭಾರತವೂ ಅನುಸರಿಸುವುದು ಸೂಕ್ತ. ಇದಕ್ಕೆ ಬಹುಮುಖ್ಯವಾಗಿ ಬೇಕಿರುವುದು ತಂತ್ರಜ್ಞಾನಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಕ್ರಿಯೆಯಲ್ಲಿ ಜನಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜನಪ್ರತಿನಿಧಿಗಳಿಗೆ ತಂತ್ರಜ್ಞಾನದ ಸೂಕ್ಷ್ಮ ಜ್ಞಾನ ಇಲ್ಲದೇ ಇರಬಹುದು. ಆದರೆ ನಿರ್ದಿಷ್ಟ ಕಾನೂನೊಂದರ ಪರಿಣಾಮವನ್ನು ಅಧಿಕಾರಿಗಳಿಗಿಂತ ಚೆನ್ನಾಗಿ ಜನಪ್ರತಿನಿಧಿಗಳು ಮುಂಗಾಣಬಲ್ಲರು. ‘ಇದು ತಾಂತ್ರಿಕ ವಿಚಾರ, ಅಧಿಕಾರಿಗಳು ನೋಡಿಕೊಳ್ಳಲಿ’ ಎಂದು ಸುಮ್ಮನಿದ್ದರೆ ಮೂರ್ಖ ಅಧಿಕಾರಿಯೊಬ್ಬ ಮಾಡುವ ತಪ್ಪಿಗೆ ಪ್ರಧಾನ ಮಂತ್ರಿ ಉತ್ತರಿಸಬೇಕಾದ ವಾತಾವರಣ ಸೃಷ್ಟಿಯಾಗುತ್ತದೆ ಎಂಬುದನ್ನು ಎನ್‌ಕ್ರಿಪ್ಷನ್‌ ನೀತಿ ವಿವಾದ ಸೂಚಿಸುತ್ತಿದೆ. ಈ ಸಂದೇಶವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.