ಭಾರತ– ಅಮೆರಿಕ ಮಧ್ಯೆ ನಿಕಟ ಸಂಬಂಧಕ್ಕೆ ಮುನ್ನುಡಿ ಭಾರತ– ಅಮೆರಿಕ ಮಧ್ಯೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಪ್ರಯತ್ನಗಳು ಈಗ ಮತ್ತೊಂದು ಮಜಲು ತಲುಪಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಪೂರ್ವಭಾವಿಯಾಗಿ ಆ ದೇಶದಿಂದ ₹ 16 ಸಾವಿರ ಕೋಟಿ ಮೌಲ್ಯದ 22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳು ಮತ್ತು ಸುಮಾರು ನಾಲ್ಕೂವರೆ ಟನ್‌ಗಳಷ್ಟು ಭಾರ ಸಾಗಿಸುವ ಸಾಮರ್ಥ್ಯದ 15 ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿ ನಿರ್ಣಯ ಕೈಗೊಂಡಿದೆ. ಬೋಯಿಂಗ್‌ ಕಂಪೆನಿ ತಯಾರಿಸುತ್ತಿರುವ ಈ ಎರಡೂ ಮಾದರಿಯ ಹೆಲಿಕಾಪ್ಟರ್‌ಗಳ ಖರೀದಿ ವಿಷಯ ಎರಡು, ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದರಿಂದ ರಕ್ಷಣಾ ಸನ್ನದ್ಧತೆ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. ಈ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ ಯಾರಿಗೆ ಸೇರಬೇಕು ಎಂಬ ಬಗ್ಗೆ ಭಾರತೀಯ ವಾಯುಪಡೆ ಹಾಗೂ ಭೂಸೇನೆ ಮಧ್ಯೆ ವಿವಾದವಿತ್ತು. ಈಗ ಖರೀದಿಸಲಾಗುವ 22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ ಭಾಗವಾಗಲಿವೆ. ಇದು ಭಾರತೀಯ ವಾಯುಪಡೆಗೆ ಹೆಚ್ಚಿನ ಬಲ ತುಂಬಲಿದೆ. ಭಾರತೀಯ ವಾಯುಪಡೆಯಲ್ಲಿ ಈಗಿರುವ ರಷ್ಯನ್ ನಿರ್ಮಿತ ಎಂಐ 35 ಹೆಲಿಕಾಪ್ಟರ್‌ಗಳನ್ನು ಹಿಂತೆಗೆದುಕೊಂಡು ಇವನ್ನು ಸೇರ್ಪಡೆ ಮಾಡಲಾಗುತ್ತದೆ. ಬರಲಿರುವ ವರ್ಷಗಳಲ್ಲಿ ಈ ಖರೀದಿ ಒಪ್ಪಂದ ವಿಸ್ತರಣೆಯಾಗಲಿದ್ದು ಭೂಸೇನೆ ಸಹ 39 ಅಪಾಚೆಗಳ ಖರೀದಿ ಪ್ರಸ್ತಾವ ಮುಂದಿಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ದಲ್ಲಾಳಿಗಳ ಕಾಟ, ಲಂಚ– ರುಷುವತ್ತುಗಳ ಆರೋಪದಿಂದ ತಪ್ಪಿಸಿಕೊಳ್ಳಲು ಹಿಂದಿನ ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ. ಆಂಟನಿ ಅವರ ಸೂಚನೆಯಂತೆ ರಕ್ಷಣಾ ಸಾಮಗ್ರಿಗಳ ಖರೀದಿಯನ್ನು ಬಹುತೇಕ ಸ್ಥಗಿತಗೊಳಿಸಲಾಗಿತ್ತು. ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಖರೀದಿ ಪುನರಾರಂಭಿಸಿದೆ. ಮಧ್ಯವರ್ತಿಗಳನ್ನು ದೂರ ಇಡುವ ಪ್ರಯತ್ನವನ್ನೂ ಮಾಡುತ್ತಿದೆ. ಈ ಒಪ್ಪಂದಕ್ಕಾಗಿ ಅಮೆರಿಕ ಹಿಂದಿನಿಂದಲೂ ಉತ್ಸುಕತೆ ತೋರಿತ್ತು. ಭಾರತದ ದೊಡ್ಡದಾಗುತ್ತಿರುವ ರಕ್ಷಣಾ ಮಾರುಕಟ್ಟೆಯಲ್ಲಿ ಅಮೆರಿಕದ ಛಾಪನ್ನು ಇದು ಹೆಚ್ಚಿಸಲಿದೆ. ಜೊತೆಗೆ ರಕ್ಷಣಾ ಖರೀದಿ ಪ್ರಕ್ರಿಯೆ ನೀತಿಯ ಅನುಸಾರ, ಈ ವ್ಯವಹಾರಕ್ಕೆ ಪ್ರತಿಯಾಗಿ ಭಾರತದಲ್ಲಿ ಹಣಹೂಡಿಕೆ ಮಾಡುವ ಬದ್ಧತೆಯೂ ವಿದೇಶಿ ಕಂಪೆನಿಗಿರುತ್ತದೆ. ಇದರ ಜತೆ ಜತೆಗೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಾಷಿಂಗ್ಟನ್‌ನಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಮತ್ತು ವಾಣಿಜ್ಯ ಕಾರ್ಯದರ್ಶಿ ಪೆನಿ ಪ್ರಿಜ್ಕರ್‌ ಜತೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದಾರೆ. ಎರಡೂ ದೇಶಗಳ ನಡುವಿನ ವ್ಯಾಪಾರ– ವಾಣಿಜ್ಯ ವಹಿವಾಟನ್ನು ವಾರ್ಷಿಕ ₹ 33 ಲಕ್ಷ ಕೋಟಿಗೆ ಹೆಚ್ಚಿಸಲು ತೀರ್ಮಾನಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ಆರ್ಥಿಕ ಮತ್ತು ವ್ಯಾಪಾರೋದ್ಯಮ ಹಿತಾಸಕ್ತಿಗಳು, ದ್ವಿಪಕ್ಷೀಯ ಸಂಬಂಧ ಬಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಸಾಬೀತಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುವ ದಾರಿಯಲ್ಲಿ ಭಾರತ ಮತ್ತು ಅಮೆರಿಕ ಜತೆಗೂಡಿ ಹೆಜ್ಜೆ ಹಾಕುತ್ತಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ಕಳೆದೊಂದು ದಶಕದಲ್ಲಿ ಅಮೆರಿಕದಿಂದ ಭಾರತ ಸುಮಾರು ₹ 65 ಸಾವಿರ ಕೋಟಿ ಮೌಲ್ಯದ ರಕ್ಷಣಾ ಉದ್ದೇಶದ ವಿವಿಧ ವಿಮಾನಗಳನ್ನು ಖರೀದಿಸಿದೆ. ಭಾರತದೊಂದಿಗೆ ಹೆಚ್ಚಿನ ವ್ಯವಹಾರ ಕುದುರಿಸಲು ಅಮೆರಿಕವೂ ಉತ್ಸುಕವಾಗಿದೆ. ಅಲ್ಲದೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಒಂದು ವರ್ಷದಲ್ಲಿ ಎರಡನೇ ಸಲ ಭೇಟಿ ನೀಡುತ್ತಿದ್ದಾರೆ. ಕಳೆದ ಸಲ ಸಂಭ್ರಮಾಚರಣೆಯಲ್ಲಿಯೇ ಅವರ ಹೆಚ್ಚಿನ ಸಮಯ ವ್ಯಯವಾಗಿತ್ತು. ಆದರೆ ಈ ಸಲ ವ್ಯಾವಹಾರಿಕ ಬಾಂಧವ್ಯ ವೃದ್ಧಿ ಮತ್ತು ಬಂಡವಾಳ ಆಕರ್ಷಿಸುವ ಪ್ರಯತ್ನಗಳಿಗೆ ಅವರು ಹೆಚ್ಚು ಕಾಲ ವಿನಿಯೋಗಿಸುತ್ತಿದ್ದಾರೆ. ಫಾರ್ಚೂನ್‌ 500 ಕಂಪೆನಿಗಳ ಪೈಕಿ 50 ಕಂಪೆನಿಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ಬಂಡವಾಳ ಹೂಡಲು ಮನವೊಲಿಸಲಿದ್ದಾರೆ. ಕ್ಯಾಲಿಫೋರ್ನಿಯದ ಸಿಲಿಕಾನ್‌ ವ್ಯಾಲಿಗೆ ಭೇಟಿ ಕೊಟ್ಟು ಪ್ರಮುಖ ಡಿಜಿಟಲ್‌ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ. ಇದೇ ಸಮಯದಲ್ಲಿಯೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಅಮೆರಿಕದಲ್ಲಿ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಚೀನಾಗಳು ವಿದೇಶಿ ಬಂಡವಾಳ ಆಕರ್ಷಣೆಯನ್ನು ಗಂಭೀರವಾಗಿ ತೆಗೆದುಕೊಂಡಿವೆ ಎನ್ನಲು ಇದು ಸಾಕ್ಷಿ. ಭಾರತ– ಅಮೆರಿಕ ಬಾಂಧವ್ಯ ವೃದ್ಧಿಯ ಪ್ರಯತ್ನಗಳು ಇವನ್ನು ಮೀರಿ ಬೇರೆ ಆಯಾಮಗಳನ್ನೂ ಶೋಧಿಸುತ್ತಿವೆ. ಏಕೆಂದರೆ ತನಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕು ಎನ್ನುವ ಭಾರತದ ವಾದಕ್ಕೆ ಅಮೆರಿಕ ಬೆಂಬಲ ಸೂಚಿಸಿದೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿಯೇ ಭಾರತ, ಅಮೆರಿಕ ಮತ್ತು ಜಪಾನ್‌ನ ಸಚಿವರುಗಳ ಮಟ್ಟದ ಸಭೆ ಆಯೋಜನೆಯಾಗಿದೆ. ಹಿಂದೂಮಹಾಸಾಗರ ಮತ್ತು ಆಗ್ನೇಯ ಏಷ್ಯಾದಲ್ಲಿ ತನ್ನ ಪ್ರಭಾವ ವಿಸ್ತರಿಸಿಕೊಳ್ಳಲು ಚೀನಾ ನಿರಂತರ ಪ್ರಯತ್ನ ನಡೆಸುತ್ತಿರುವುದು ಬಹಿರಂಗ ಸತ್ಯ. ಅದಕ್ಕೆ ಲಗಾಮು ಹಾಕಬೇಕು ಎಂಬ ಆಸೆ ಅಮೆರಿಕದಂತೆ ಭಾರತಕ್ಕೂ ಇದೆ. ಆಯಕಟ್ಟಿನ ದ್ವೀಪವೊಂದರ ಒಡೆತನಕ್ಕೆ ಸಂಬಂಧಿಸಿದಂತೆ ವಿಪರೀತ ಕಿರಿಕಿರಿ ಮಾಡಿದ್ದ ಚೀನಾದ ಬಗ್ಗೆ ಜಪಾನ್‌ಗಂತೂ ತುಂಬ ಅಸಮಾಧಾನವಿದೆ. ಹೀಗಾಗಿ ಈ ಮೂರೂ ದೇಶಗಳ ಸಭೆ, ನಡೆ ಹೆಚ್ಚು ಆಸಕ್ತಿಯನ್ನೂ ಕೆರಳಿಸಿದೆ. ಒಂದಂತೂ ಸತ್ಯ. ಭಾರತವನ್ನು ಕಡೆಗಣಿಸುವ ಸ್ಥಿತಿಯಲ್ಲಿ ಈಗ ಅಮೆರಿಕವೂ ಇಲ್ಲ, ಚೀನಾವೂ ಇಲ್ಲ. ಭಾರತಕ್ಕೆ ಈ ಸಾಮರ್ಥ್ಯ ಬಂದದ್ದು ಭಾರತದ ವಾಣಿಜ್ಯ ವ್ಯವಹಾರಗಳು, ಅದರ ಅಗಾಧ ಮಾರುಕಟ್ಟೆ ಮತ್ತು ಸದೃಢ ಅರ್ಥವ್ಯವಸ್ಥೆಯಿಂದ. ಇದನ್ನು ಉಳಿಸಿಕೊಳ್ಳಬೇಕಾದರೆ ವ್ಯಾಪಾರ– ಹೂಡಿಕೆ ಕ್ಷೇತ್ರದಲ್ಲಿ ಇನ್ನಷ್ಟು ದೃಢವಾದ ಹೆಜ್ಜೆಗಳನ್ನು ಇಡಬೇಕಿದೆ. ಅಮೆರಿಕ ಜತೆ ಹೆಚ್ಚುತ್ತಿರುವ ಸಹಕಾರ ಈ ದಿಸೆಯಲ್ಲಿ ಮಹತ್ವದ ವಿದ್ಯಮಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.