ಕಾಲ್ತುಳಿತ ದುರಂತ: ಸುರಕ್ಷತೆಗೆ ಆದ್ಯತೆ ದೊರೆಯಲಿ ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾದ ಮಿನಾ ಬಳಿ ವಾರ್ಷಿಕ ಹಜ್ ಯಾತ್ರೆ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 700ಕ್ಕೂ ಹೆಚ್ಚು ಜನರು ಸತ್ತಿರುವುದು ದುರದೃಷ್ಟಕರ. ಈ ಪೈಕಿ 14 ಭಾರತೀಯರು ಇದ್ದಾರೆ. ಈ ಘಟನೆಯಲ್ಲಿ 863ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಘೋರವಾದ ದುರಂತವಿದು. ಎರಡು ರಸ್ತೆ ಕೂಡುವ ಜಾಗದಲ್ಲಿ ಬೇರೆ ಬೇರೆ ದಿಕ್ಕುಗಳಿಂದ ಯಾತ್ರಿಕರು ಒಟ್ಟಾಗಿ ಒಮ್ಮೆಲೇ ಬಂದಿದ್ದು ಈ ಕಾಲ್ತುಳಿತ ಪ್ರಕರಣಕ್ಕೆ ಕಾರಣವಾಯಿತು ಎನ್ನಲಾಗಿದೆ. ಯಾತ್ರಿಕರು ಅನುಸರಿಸಬೇಕಾಗಿದ್ದ ಪ್ರಕ್ರಿಯೆಗಳು ಹಾಗೂ ಶಿಷ್ಟಾಚಾರ ಸಂಹಿತೆ ಸರಿಯಾಗಿ ಪಾಲನೆಯಾಗದ್ದು ಈ ದುರಂತಕ್ಕೆ ಕಾರಣ ಎಂದು ದೂರಲಾಗಿದೆ. ಆದರೆ ಇದೇನಿದ್ದರೂ ತನಿಖೆಯಲ್ಲಿ ದೃಢಪಡಬೇಕು. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಹಜ್ ಸಮಿತಿಯ ಅಧ್ಯಕ್ಷರೂ ಆಗಿರುವ ಸೌದಿ ಅರೇಬಿಯಾ ರಾಜಕುಮಾರ ಆದೇಶ ನೀಡಿದ್ದಾರೆ. ಈ ದುರ್ಘಟನೆಗೆ ಜನರ ಗುಂಪಿನ ಅಶಿಸ್ತಿನ ನಡವಳಿಕೆ ಹಾಗೂ ಯಾತ್ರಿಕರು ಸರಿಯಾಗಿ ಸೂಚನೆ ಪಾಲಿಸದಿದ್ದುದು ಕಾರಣ ಎಂದು ಸೌದಿ ಅರೇಬಿಯಾ ಆರೋಗ್ಯ ಸಚಿವರು ಹೊರಿಸಿರುವ ಆರೋಪದ ಕುರಿತೂ ತನಿಖೆ ಆಗಬೇಕು. 1990ರ ಜುಲೈ ನಂತರ ಸಂಭವಿಸುತ್ತಿರುವ ಮತ್ತೊಂದು ಭೀಕರ ದುರಂತ ಇದು. 1990ರ ದುರಂತದಲ್ಲಿ 1,426 ಯಾತ್ರಿಗಳು ಸತ್ತಿದ್ದರು. ಆ ನಂತರವೂ ಕಾಲ್ತುಳಿತದ ಪ್ರಕರಣಗಳು ನಡೆದಿದ್ದರೂ ಈ ಪ್ರಮಾಣದಲ್ಲಿ ಸಾವುನೋವುಗಳಾಗಿರಲಿಲ್ಲ. ಕಳೆದ ದಶಕದಿಂದೀಚೆಗೆ ಕಾಲ್ತುಳಿತದ ಪ್ರಕರಣಗಳು ಕಡಿಮೆಯಾಗಿದ್ದವು ಎಂಬುದೂ ನಿಜ. ಇದಕ್ಕೆ ಕಾರಣ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನೂಕುನುಗ್ಗಲು ನಿಯಂತ್ರಣದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ. ಹೀಗಿದ್ದೂ ಈಗ ಸಂಭವಿಸಿರುವಂತಹ ಈ ದುರಂತ ಹಜ್ ಯಾತ್ರೆಯ ಸಂದರ್ಭದ ಸುರಕ್ಷತೆ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಹಜ್ ಯಾತ್ರೆಯ ಸಂದರ್ಭದ ಸುರಕ್ಷತೆ ವಿಚಾರ ರಾಜಕೀಯವಾಗಿಯೂ ಸೂಕ್ಷ್ಮವಾದುದು ಎಂಬುದನ್ನು ಗಮನಿಸಬೇಕು. ಈ ವಿಚಾರದಲ್ಲಿ ಸೌದಿ ಅರೇಬಿಯಾದ ಸನ್ನದ್ಧತೆಯನ್ನು ಇರಾನ್‌ನ ಪರಮೋಚ್ಚ ನಾಯಕ ಟೀಕಿಸಿದ್ದಾರೆ. ಈ ದುರಂತದಲ್ಲಿ ಇರಾನ್‌ನ ಕನಿಷ್ಠ 95 ಮಂದಿ ಸತ್ತಿದ್ದಾರೆ. ಕೇವಲ ಎರಡು ವಾರಗಳ ಹಿಂದಷ್ಟೇ ಮೆಕ್ಕಾದ ಮಸೀದಿಯಲ್ಲಿ ಕ್ರೇನ್ ಕುಸಿದು ನೂರಕ್ಕೂ ಹೆಚ್ಚು ಜನ ಸತ್ತಿದ್ದಂತಹ ಘಟನೆಯೂ ಜರುಗಿತ್ತು. ಈ ಘಟನೆಗಳು, ಸುರಕ್ಷತೆ ಕುರಿತಂತೆ ಸೌದಿ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನೆತ್ತುವುದು ಸಹಜ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕೆಂಬ ಆಶಯ ಜಗತ್ತಿನ ಪ್ರತಿ ಮುಸಲ್ಮಾನರಿಗಿರುತ್ತದೆ. 1921ರಲ್ಲಿ ಹಜ್ ಯಾತ್ರೆಗೆ ಹೋಗುತ್ತಿದ್ದವರ ಸಂಖ್ಯೆ 57,000 ದಷ್ಟಿತ್ತು. ಆದರೆ ಮೂರು ವರ್ಷಗಳ ಹಿಂದೆ ಈ ಸಂಖ್ಯೆ ಸುಮಾರು 30 ಲಕ್ಷಕ್ಕೆ ಏರಿಕೆಯಾಗಿತ್ತು ಎಂಬುದು ಸೌದಿ ಅಧಿಕಾರಿಗಳು ನೀಡುವ ಅಂಕಿ ಅಂಶ. ಈ ವರ್ಷ ಸುಮಾರು 20 ಲಕ್ಷ ಹಜ್ ಯಾತ್ರಿಕರು ಈ ಪವಿತ್ರ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಒಂದೂಕಾಲು ಲಕ್ಷಕ್ಕೂ ಹೆಚ್ಚು ಭಾರತೀಯರು ಇವರಲ್ಲಿ ಸೇರಿದ್ದಾರೆ. ಎಂದರೆ, ಇಷ್ಟೊಂದು ಭಾರಿ ಸಂಖ್ಯೆಯ ಜನರನ್ನೊಳಗೊಳ್ಳುವ ಹಜ್ ಯಾತ್ರೆಯ ಸುರಕ್ಷತಾ ಕ್ರಮಗಳ ಪುನರ್‌ವಿಮರ್ಶೆಗೆ ಇದು ಸಕಾಲ. ಈ ಬಗ್ಗೆ ಪರಿಶೀಲನೆಯಾಗಬೇಕೆಂದು ಈ ದುರಂತದ ನಂತರ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರು ಆದೇಶ ನೀಡಿದ್ದಾರೆ. ಯಾತ್ರಿಗಳ ಚಲನವಲನಗಳ ನಿರ್ವಹಣೆ ಹಾಗೂ ಸನ್ನದ್ಧತೆಯ ಮಟ್ಟದ ಸುಧಾರಣೆಯ ಅಗತ್ಯ ಮುಖ್ಯವಾದುದು. ವಿಶ್ವದ 200 ರಾಷ್ಟ್ರಗಳಿಂದ ಆಗಮಿಸುವ ನೂರಾರು ವಿವಿಧ ಭಾಷೆಗಳನ್ನು ಮಾತನಾಡುವ ಯಾತ್ರಿಗಳ ನಿರ್ವಹಣೆ ದೊಡ್ಡ ಸವಾಲೇ ಸರಿ. ನಿರ್ದೇಶನಗಳು ಹಾಗೂ ನಿಯಮಗಳ ಪಾಲನೆ ಬಗ್ಗೆ ಯಾತ್ರಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ವಿವಿಧ ರಾಷ್ಟ್ರಗಳಲ್ಲಿನ ಹಜ್ ಯಾತ್ರೆ ಸಂಘಟಕರೂ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದರ ಜೊತೆಗೆ ಗುಂಪನ್ನು ನಿರ್ವಹಿಸಲು ಆಧುನಿಕ ತಂತ್ರಜ್ಞಾನಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.