ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಪರಿಹಾರ: ಸ್ಪಷ್ಟ ನೀತಿ ಇರಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದ ಮೇಲಿದ್ದಾಗ ಸಾವಿಗೀಡಾದರೆ, ಅವರ ಅವಲಂಬಿತರಿಗೆ ನೀಡಬೇಕಾದ ಪರಿಹಾರ, ಸೌಲಭ್ಯಗಳ ಬಗ್ಗೆ ಸ್ಪಷ್ಟ ನೀತಿ ರೂಪಿಸಬೇಕು. ದೊಡ್ಡಬಳ್ಳಾಪುರ ಸಬ್ ಇನ್‌ಸ್ಪೆಕ್ಟರ್ ಜಗದೀಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳು ಕೊನೆಗೂ ಸೆರೆಸಿಕ್ಕಿದ್ದಾರೆ. ಅಲ್ಲಿಗೆ ಹಂತಕರ ಬಂಧನ ಕಾರ್ಯಾಚರಣೆ ಮುಗಿದಂತಾಗಿದೆ. ಇನ್ನೇನಿದ್ದರೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದು ಮತ್ತು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಹೊಣೆ. ಇದು ಒಂದು ಕಡೆ ಆಯಿತು. ಇನ್ನೊಂದು ಕಡೆ ಮೃತ ಎಸ್ಐ ಕುಟುಂಬಕ್ಕೆ ನೆರವಾಗುವುದು, ಪರಿಹಾರ ವಿತರಣೆಯಂಥ ಮುಖ್ಯ ಕೆಲಸಗಳು ವಿಳಂಬವಿಲ್ಲದೆ ನಡೆಯಬೇಕಿವೆ. ಜಗದೀಶ್ ಅವರು ಕರ್ತವ್ಯದ ಮೇಲಿದ್ದಾಗ ಸಾವಿಗೀಡಾಗಿರುವ ಕಾರಣ ನಿಯಮಾವಳಿ ಪ್ರಕಾರ ಪರಿಹಾರ ನೀಡಬೇಕು. ಆದರೆ ಅಂಥ ನಿಯಮಗಳ ಬಗ್ಗೆಯೇ ಗೊಂದಲ ಇದ್ದಂತಿದೆ. ಇದನ್ನೆಲ್ಲ ನೆನಪಿಸುವ ಮುಖ್ಯ ಕಾರಣ ಇಂಥ ದುರಂತ ನಡೆದಾಗ, ಪ್ರಚಾರಕ್ಕಾಗಿಯೋ ಅಥವಾ ಸಾರ್ವಜನಿಕರ ಸಹಾನುಭೂತಿ ಗಿಟ್ಟಿಸುವ ಉದ್ದೇಶದಿಂದಲೋ ಸ್ಥಳದಲ್ಲಿ ಏನೇನೋ ಘೋಷಣೆ ಮಾಡುವುದು, ನಂತರ ಅದನ್ನು ಮರೆಯುವ ಅಧಿಕಾರಸ್ಥರ ಪ್ರವೃತ್ತಿ ಎಂದೇ ಹೇಳಬೇಕಾಗುತ್ತದೆ. ಜಗದೀಶ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ₹ 30 ಲಕ್ಷ ಮತ್ತು ಪೊಲೀಸ್ ಇಲಾಖೆಯ ಗುಂಪು ವಿಮೆಯಿಂದ ₹ 20 ಲಕ್ಷ ಸೇರಿಸಿ ಒಟ್ಟು ₹ 50 ಲಕ್ಷ ಚೆಕ್ ವಿತರಿಸುವ ಭರವಸೆ ನೀಡಲಾಗಿದೆ. ಗೃಹ ಸಚಿವ ಕೆ.ಜೆ. ಜಾರ್ಜ್ ಮೊನ್ನೆ ಮೃತರ ಮನೆಗೆ ತೆರಳಿ ಕುಟುಂಬಕ್ಕೆ ನಿವೇಶನ, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ಕೊಟ್ಟು ಬಂದಿದ್ದಾರೆ. ಆದರೆ ಎಷ್ಟರಮಟ್ಟಿಗೆ ಅದು ಪಾಲನೆಯಾಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಅವರೇ ಸ್ವತಃ ಒಂದು ವರ್ಷ ಒಂಬತ್ತು ತಿಂಗಳ ಹಿಂದೆ ಕಲಬುರ್ಗಿ ಜಿಲ್ಲೆಗೂ ಹೋಗಿದ್ದರು. ಅಲ್ಲಿ ರೌಡಿಯ ಗುಂಡೇಟಿನಿಂದ ಅಸುನೀಗಿದ ಸ್ಟೇಷನ್ ಬಜಾರ್ ಸಬ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ತಕ್ಷಣವೇ ₹ 10 ಲಕ್ಷ ಪರಿಹಾರ, ಬಂಡೆ ಅವರ ಇನ್ನುಳಿದ 22 ವರ್ಷ ಸೇವಾವಧಿಯ ಪೂರ್ಣ ವೇತನ, ಪಿಂಚಣಿ, ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವು, ಶೌರ್ಯ ಪ್ರಶಸ್ತಿಗೆ ಹೆಸರು ಶಿಫಾರಸು, ಬಂಡೆ ಪತ್ನಿ ರಾಜ್ಯದ ಯಾವುದೇ ಭಾಗದಲ್ಲಿ ಕೇಳಿದರೂ ನಿವೇಶನ ಮತ್ತಿತರ ಘೋಷಣೆ ಮಾಡಿ ಬಂದಿದ್ದರು. ಆದರೆ ಬಂಡೆ ಅವರ ಪತ್ನಿ ಮಲ್ಲಮ್ಮ ಈಗ ಹೇಳುವ ಪ್ರಕಾರ, ₹ 50 ಲಕ್ಷ ಕೊಟ್ಟಿದ್ದು ಬಿಟ್ಟರೆ ಇತರ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಿಲ್ಲ. ಆಶ್ವಾಸನೆಗೆ ವ್ಯತಿರಿಕ್ತವಾಗಿ, ಐದು ವರ್ಷ ಮಾತ್ರ ಪೂರ್ಣ ವೇತನ, ನಂತರ ತಿಂಗಳಿಗೆ ಬರೀ ₹ 7 ಸಾವಿರ ಕೊಡುವ ಪರಿಷ್ಕೃತ ಪರಿಹಾರಕ್ಕೆ ಮಲ್ಲಮ್ಮ ಒಪ್ಪಿಕೊಂಡಿಲ್ಲ. ವಾಗ್ದಾನ ಈಡೇರಿಸಿ ಎಂದು ಮುಖ್ಯಮಂತ್ರಿಗಳಿಂದ ಹಿಡಿದು ಸಂಬಂಧಪಟ್ಟವರಿಗೆಲ್ಲ ಅರ್ಜಿ ಕೊಟ್ಟು ಸುಸ್ತಾಗಿದ್ದಾರೆ. ಇಂಥ ಅನಾಹುತಗಳು ಆದಾಗ ಆ ಕ್ಷಣದಲ್ಲಿ ಜನರ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದೋ ಉದ್ದೇಶ ಇಟ್ಟುಕೊಂಡು ಬೇಕಾಬಿಟ್ಟಿ ಘೋಷಣೆಗಳನ್ನು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಾಗಿರುವುದು ಅಗತ್ಯ. ಭಯೋತ್ಪಾದನೆ ನಿಗ್ರಹ ಅಥವಾ ಅಪರಾಧಿಗಳನ್ನು ಹಿಡಿಯುವ ಕಾರ್ಯಾಚರಣೆ ಹಾಗೂ ಕರ್ತವ್ಯದ ಮೇಲಿದ್ದಾಗ ಅಪಘಾತಗಳಲ್ಲಿ ಪ್ರತಿವರ್ಷವೂ ಪೊಲೀಸ್ ಸಿಬ್ಬಂದಿ ರಾಷ್ಟ್ರದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾವನ್ನಪ್ಪಿದವರ ಅವಲಂಬಿತರಿಗೆ ನೀಡುವ ಪರಿಹಾರದ ಬಗ್ಗೆ ಸರ್ಕಾರ ಇನ್ನಾದರೂ ಸ್ಪಷ್ಟವಾದ ನೀತಿಯನ್ನು ರೂಪಿಸಬೇಕು. ಇದಕ್ಕಾಗಿ ನಿಯಮಗಳ ರಚನೆಯಾಗಬೇಕು. ಅದು ಅವರ ಪ್ರಾಣಾರ್ಪಣೆಯನ್ನು ಗೌರವಿಸುವಂತೆಯೂ ಇರಬೇಕು, ಕುಟುಂಬದ ಕಷ್ಟಕ್ಕೂ ಸ್ಪಂದಿಸುವಂತೆ ಇರಬೇಕು. ಪರಿಹಾರ ಎಷ್ಟಿರಬೇಕು, ಆ ಕುಟುಂಬ ಯಾವ ಯಾವ ರೀತಿಯ ಸೌಕರ್ಯಕ್ಕೆ ಅರ್ಹ ಎಂಬುದನ್ನು ನಿರ್ದಿಷ್ಟಪಡಿಸಬೇಕು. ಅವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಾರದು. ಪರಿಹಾರ, ಸೌಲಭ್ಯ ನೀಡಿಕೆಯಲ್ಲಿ ಏಕರೂಪತೆ ಇರಬೇಕು. ಅದು ಘನತೆಯುಕ್ತವಾಗಿರಬೇಕು. ಇಂತಹ ಕ್ರಮಗಳು ಪೊಲೀಸರಲ್ಲಿ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಬೇಕು. ಪೊಲೀಸರ ನೈತಿಕಸ್ಥೈರ್ಯ ಹೆಚ್ಚುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.