ಮಾನವಾಭಿವೃದ್ಧಿಯಲ್ಲಿ ಹಿಂದೆ ನಮಗೊಂದು ಎಚ್ಚರಿಕೆ ಗಂಟೆ ರಾಜ್ಯದ ಉತ್ತರ ಭಾಗದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿವೆ ಎಂಬುದನ್ನು ದೃಢಪಡಿಸುವಂಥ ಅಧ್ಯಯನ ವರದಿಯೊಂದು ಇದೀಗ ಹೊರಬಿದ್ದಿದೆ. ವಿದ್ಯುತ್, ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಒಳಗೊಂಡ ಜೀವನಮಟ್ಟ, ಆರೋಗ್ಯ, ಶಿಶು ಮತ್ತು ಬಾಣಂತಿ ಸಾವು, ಶಿಕ್ಷಣ ಸೇರಿದಂತೆ 11 ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಅಧ್ಯಯನ ನಡೆಸಲಾಗಿತ್ತು. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿ ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿರುವ ‘2015ರ ಗ್ರಾಮ ಪಂಚಾಯಿತಿವಾರು ಮಾನವ ಅಭಿವೃದ್ಧಿ ಸೂಚ್ಯಂಕ’ ಎಂಬ ಈ ವರದಿಯಲ್ಲಿ ಕೆಲವು ಆಘಾತಕಾರಿ ಅಂಶಗಳೂ ಇವೆ. ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ವಿವಿಧ ಪಕ್ಷಗಳ ನೇತೃತ್ವದ ಸರ್ಕಾರಗಳು ತಮ್ಮನ್ನು ಕಡೆಗಣಿಸುತ್ತಲೇ ಬಂದಿವೆ, ಅಭಿವೃದ್ಧಿಯ ಲಾಭದಲ್ಲಿ ತಮಗೆ ಸರಿಯಾದ ಪಾಲು ಸಿಕ್ಕಿಲ್ಲ ಎಂಬ ನೋವು ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿದೆ. ಅದು ಉತ್ಪ್ರೇಕ್ಷೆಯಲ್ಲ, ಅಲ್ಲಿನ ಜನರ ಅಸಮಾಧಾನಕ್ಕೆ ಸಕಾರಣವಿದೆ ಎಂಬುದನ್ನು ವರದಿಯಲ್ಲಿನ ಅಂಕಿಅಂಶಗಳು ಸಾಬೀತುಪಡಿಸುತ್ತಿವೆ. ಇದರ ಪ್ರಕಾರ, ರಾಜ್ಯದ ಸರಾಸರಿ ಸೂಚ್ಯಂಕ 0.4392. ಇದಕ್ಕಿಂತ ಮೇಲಿದ್ದರೆ ಪ್ರಗತಿಯಾಗಿದೆ, ಕೆಳಗಿದ್ದರೆ ಹಿಂದೆ ಬಿದ್ದಿದೆ ಎಂದು ಅರ್ಥ. ಈ ಮಾನದಂಡದಂತೆ ರಾಜ್ಯದ 5,898 ಗ್ರಾಮ ಪಂಚಾಯಿತಿಗಳ ಪೈಕಿ 2,940 ಪಂಚಾಯಿತಿಗಳು ಮಾನವ ಅಭಿವೃದ್ಧಿಯಲ್ಲಿ ತೀರಾ ಹಿಂದೆ ಉಳಿದಿವೆ. ಯಾದಗಿರಿ ಜಿಲ್ಲೆಯ ಎಲ್ಲ 118 ಗ್ರಾಮ ಪಂಚಾಯಿತಿಗಳು ಸರಾಸರಿಗಿಂತ ಕೆಳಗೆ ಇವೆ. ಬೆಂಗಳೂರು ನಗರ, ಉಡುಪಿ ಮತ್ತು ದಕ್ಷಿಣ ಕನ್ನಡದ ಎಲ್ಲ ಪಂಚಾಯಿತಿಗಳು ಮೇಲಿವೆ. ಈ ಅಸಮಾನತೆ ಇಲ್ಲಿಗೇ ನಿಂತಿಲ್ಲ. ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲೂ ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿನ ತಾಲ್ಲೂಕುಗಳೇ ಇವೆ. ಇದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಡಾ.ಡಿ.ಎಂ.ನಂಜುಂಡಪ್ಪ ವರದಿ ಕೂಡ ರಾಜ್ಯದ ಉತ್ತರ ಭಾಗದ ಜಿಲ್ಲೆಗಳು, ಗ್ರಾಮಗಳು ತೀರಾ ಹಿಂದುಳಿದಿವೆ; ಅವನ್ನು ಮುಂದೆ ತರಲು ವಿಶೇಷ ಪ್ರಯತ್ನ ನಡೆಸಬೇಕು ಎಂದು ಸೂಚಿಸಿತ್ತು. ಅದರ ನಂತರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿಗಳಿಗೆ ಸಾಕಷ್ಟು ಹಣ ಹರಿದುಹೋಗಿದೆ. ಆದರೂ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ ಎಂದರೆ ಎಲ್ಲೋ ಏನೋ ತಪ್ಪಾಗಿದೆ ಎಂದರ್ಥ. ಬೆಂಗಳೂರಿನಲ್ಲಿ ಇರುವ ಸರ್ಕಾರ ತಮಗೆ ಕೈಗೆಟುಕದಷ್ಟು ದೂರದಲ್ಲಿದೆ, ತಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆ ಭಾಗದ ಜನರ ನೋವನ್ನು ಶಮನಗೊಳಿಸಲು ಇದುವರೆಗೆ ನಡೆದ ಪ್ರಯತ್ನಗಳು ಸಾಲವು, ಇನ್ನೂ ಶ್ರಮ ಹಾಕಬೇಕು, ಲಕ್ಷ್ಯ ವಹಿಸಬೇಕು ಎಂದು ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಕೈಗಾರಿಕೆಗಳನ್ನು ಹೆಚ್ಚಾಗಿ ತೆರೆಯುವಂತೆ ಉದ್ಯಮಿಗಳ ಮನವೊಲಿಸಬೇಕು, ಉತ್ತೇಜನ ಕೊಡಬೇಕು. ಬೀದರ್‌ನಲ್ಲಿ ಬಹಳ ಹಿಂದೆಯೇ ಕೈಗಾರಿಕಾ ವಸಾಹತು ಸ್ಥಾಪನೆಯಾಗಿದ್ದರೂ ಅಲ್ಲಿನ ಬಹುತೇಕ ಉದ್ಯಮಗಳು ಸರಿಯಾದ ಪ್ರೋತ್ಸಾಹ ಇಲ್ಲದೆ ಕುಂಟುತ್ತಿವೆ. ಇತ್ತ ಬೆಳಗಾವಿಗೆ ಬಂದರೆ ಕೆಲವೇ ಕಿಲೋಮೀಟರ್ ದೂರ ಗಡಿಯಾಚೆ ಇರುವ ಮಹಾರಾಷ್ಟ್ರದ ಭಾಗದಲ್ಲಿ ಉದ್ಯಮಗಳಿಗೆ ಸಿಗುತ್ತಿರುವ ಸವಲತ್ತುಗಳು ಗಡಿಯ ಈ ಕಡೆ ಇಲ್ಲ. ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಜನರಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನದ 371 (ಜೆ) ತಿದ್ದುಪಡಿ ಜಾರಿಗೊಳ್ಳಲು ಅಲ್ಲಿನ ಜನ ಆರೂವರೆ ದಶಕ ಕಾಯಬೇಕಾಯಿತು. ಆದರೆ ಇದೇ ರೀತಿಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಯಿದ್ದ ನೆರೆಯ ತೆಲಂಗಾಣ, ಮರಾಠವಾಡಗಳಲ್ಲಿ ಇಂಥ ಸೌಕರ್ಯ ಬಹಳ ಹಿಂದೆಯೇ ಜಾರಿಗೆ ಬಂದಿತ್ತು. ಇವೆಲ್ಲ, ನಾವು ರಾಜ್ಯದ ಒಂದು ಭಾಗಕ್ಕೆ ಸಾಕಷ್ಟು ಆದ್ಯತೆ ಕೊಟ್ಟಿಲ್ಲ ಎಂಬುದನ್ನು ನಮಗೆ ನೆನಪು ಮಾಡಿಕೊಡುತ್ತವೆ. ಮಾನವಾಭಿವೃದ್ಧಿ ಸೂಚ್ಯಂಕದ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ನಮ್ಮ ಯೋಜನೆ, ಅಭಿವೃದ್ಧಿಯ ಕಾರ್ಯತಂತ್ರಗಳನ್ನು ಬದಲಿಸಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಇದುವರೆಗೆ ಆಗಿರುವ ವೆಚ್ಚದ ಮೌಲ್ಯಮಾಪನ ನಡೆಯಬೇಕು. ಹಿಂದುಳಿದ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗಳ ಸಮಗ್ರ ಪ್ರಗತಿಗೆ ಇನ್ನಷ್ಟು ಪರಿಶ್ರಮ ಹಾಕಬೇಕು. ಕಾಲಮಿತಿ ಹಾಕಿಕೊಂಡು ಅವನ್ನು ಮೇಲಕ್ಕೆತ್ತಬೇಕು. ಬಾಯುಪಚಾರದ ಮಾತುಗಳು, ರಾಜಕೀಯ ಲಾಭದ ಮೇಲೆ ಕಣ್ಣಿಟ್ಟು ಕೊಡುವ ಹೇಳಿಕೆಗಳು ಇನ್ನು ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.