ರಾಜಧಾನಿ ಸೃಷ್ಟಿಯ ಬೃಹತ್ ಸವಾಲು ಆಧುನಿಕ ಭಾರತೀಯ ಇತಿಹಾಸದಲ್ಲಿ ನಗರಗಳ ನಿರ್ಮಾಣಕ್ಕೆ ಅಮರಾವತಿ ಪ್ರಯೋಗ ಹೊಸ ಭಾಷ್ಯ ಬರೆಯುವಂತಾಗಬೇಕು. ಯುವಜನರಿಗೆ ಉದ್ಯೋಗ ಒದಗಿಸಿಕೊಡುವುದಲ್ಲದೆ, ಇಡೀ ರಾಜ್ಯದ ಆರ್ಥಿಕತೆಗೆ ಈ ನಗರ ಶಕ್ತಿ ತುಂಬುವಂತಾಗಬೇಕು. ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ಅಮರಾವತಿ ನಗರದ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಈ ಹಿಂದೆ ಸ್ವತಂತ್ರ ಭಾರತದಲ್ಲಿ, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ರಾಜಧಾನಿಯಾದ ಚಂಡೀಗಡವನ್ನು ಯೋಜಿತ ನಗರವಾಗಿ ಸೃಷ್ಟಿಸಲಾಗಿತ್ತು. ವಿಶಿಷ್ಟ ವಾಸ್ತುಶಿಲ್ಪ ಹಾಗೂ ನಗರ ವಿನ್ಯಾಸಕ್ಕೆ ಹೆಸರಾದ ನಗರವಾಗಿ ಖ್ಯಾತಿ ಪಡೆದಿದೆ ಚಂಡೀಗಡ. ಈಗ ನಮ್ಮ ನೆರೆಯ ಆಂಧ್ರಪ್ರದೇಶದಲ್ಲೇ, ರಾಜಧಾನಿಗಾಗಿ ನಗರವನ್ನು ಹೊಸದಾಗಿ ಕಟ್ಟುವಂತಹ ಪ್ರಯೋಗ ನಡೆಯುತ್ತಿರುವುದು ರಾಷ್ಟ್ರದ ಆಧುನಿಕ ಇತಿಹಾಸದಲ್ಲಿ ವಿಶಿಷ್ಟವಾದುದು. ಆಂಧ್ರಪ್ರದೇಶ ಹೋಳಾಗಿ ಪುನರ್ ರಚನೆಯಾದ ಸಂದರ್ಭದಲ್ಲಿ ಹೈದರಾಬಾದ್ ನಗರವನ್ನು ತೆಲಂಗಾಣ ರಾಜ್ಯಕ್ಕೆ ಆಂಧ್ರಪ್ರದೇಶ ಬಿಟ್ಟುಕೊಡಬೇಕಾಯಿತು. ಆಂಧ್ರದ ಜನರಿಗೆ ಭಾವನಾತ್ಮಕವಾಗಿ ಇದೇನೂಸುಲಭದ ಸಂಗತಿಯಾಗಿರಲಿಲ್ಲ. ಆದರೆ, ಈಗ ಹೊಚ್ಚ ಹೊಸ ರಾಜಧಾನಿ ನಿರ್ಮಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಂದಾಗಿರುವುದು ಹೊಸ ಭರವಸೆ ಮೂಡಿಸಿದೆ. ಅಮರಾವತಿ ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರನ್ನೂ ವೈಯಕ್ತಿಕವಾಗಿ ಆಹ್ವಾನಿಸಿ ಅವರನ್ನು ನಡೆಸಿಕೊಂಡ ರೀತಿ ಚಂದ್ರಬಾಬು ಅವರ ಮುತ್ಸದ್ದಿತನಕ್ಕೆ ಸಾಕ್ಷಿ. ಈ ಹಿಂದೆಯೂ ಚಂದ್ರಬಾಬು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೈದರಾಬಾದ್‌ಗೆ ಐ.ಟಿ. ನಗರ ಹಾಗೂ ಹಣಹೂಡಿಕೆಯ ತಾಣ ಎಂಬಂತಹ ವರ್ಚಸ್ಸನ್ನು ತಂದುಕೊಡುವಲ್ಲಿ ಅವರು ಸಫಲರಾಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು. ಈಗ ವಿಶ್ವದರ್ಜೆಯ ಹೊಸ ನಗರವನ್ನು ಕಟ್ಟುವಂತಹ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಯೋಜಿತ ರೀತಿಯಲ್ಲಿ ನಿರ್ಮಿಸಿದ ನಗರಗಳು ರಾಷ್ಟ್ರದ ಅಭಿವೃದ್ಧಿಗೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲದಿರುವ ಸಂದರ್ಭದಲ್ಲಿ ಅಮರಾವತಿ ಯೋಜನೆ ಮುಖ್ಯವಾದದ್ದು. ನಗರಗಳಿಗೆ ವಲಸೆ ಬರುವ ಜನರ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ನಗರ ಬದುಕು ನೆಮ್ಮದಿ ಕಳೆದುಕೊಳ್ಳುತ್ತಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಅಮರಾವತಿಯನ್ನು ರೂಪಿಸಬೇಕು. ನಗರಾಭಿವೃದ್ಧಿಯನ್ನು ಸಮಸ್ಯೆಯಂತಲ್ಲದೆ ಅವಕಾಶವಾಗಿ ನೋಡಬೇಕು. ಅಮರಾವತಿಯನ್ನು ‘ಜನರ ರಾಜಧಾನಿ’ ಎಂದು ಚಂದ್ರಬಾಬು ನಾಯ್ಡು ಕರೆದಿದ್ದಾರೆ. ಈ ರಾಜಧಾನಿ ಕಟ್ಟುವುದಕ್ಕಾಗಿ, ಜನರಿಂದ ‘ಭೂಮಿಯನ್ನು ಒಟ್ಟುಗೂಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಇಲ್ಲಿ, ‘ಭೂಸ್ವಾಧೀನ’ ಎಂಬಂತಹ ಆಡಳಿತದ ರೂಢಿಗತ ಪರಿಭಾಷೆಯನ್ನು ಕೈಬಿಟ್ಟಿರುವುದು ಹೊಸದು. 30 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಅಮರಾವತಿ ನಗರ ನಿರ್ಮಾಣಕ್ಕಾಗಿ ರೈತರಿಂದ ಪಡೆಯಲಾಗಿದೆ. ಫಲವತ್ತಾದ ಜಮೀನುಗಳನ್ನೂ ನಗರ ನಿರ್ಮಾಣಕ್ಕೆ ನೀಡಿರುವ ರೈತರಿಂದ ಹೆಚ್ಚಿನ ಪ್ರತಿರೋಧ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ. ರಾಜಧಾನಿ ನಿರ್ಮಾಣವಾದ ನಂತರ ಭೂಮಿ ಇದ್ದ ಪ್ರದೇಶ ಹಾಗೂ ಫಲವತ್ತತೆಯನ್ನು ಆಧರಿಸಿ ಪ್ರತಿ ಎಕರೆಗೆ ಇಂತಿಷ್ಟು ಭೂಮಿಯನ್ನು ಪರಿಹಾರವಾಗಿ ವಿತರಿಸಲಾಗುವುದು ಎನ್ನಲಾಗಿದೆ. ಅಮರಾವತಿಯ ನಿರ್ಮಾಣದ ಹೊಣೆಯನ್ನು ಸಿಂಗಪುರ ಮೂಲದ ಸಂಸ್ಥೆಯೊಂದು ವಹಿಸಿಕೊಂಡಿದ್ದು, ಯೋಜನೆಯ ಮೊದಲ ಹಂತವನ್ನು 2018ರಲ್ಲಿ ಪೂರೈಸುವ ಭರವಸೆ ನೀಡಲಾಗಿದೆ. ಅಷ್ಟರೊಳಗೆ ವಿಧಾನಮಂಡಲ, ಸಚಿವಾಲಯ, ಹೈಕೋರ್ಟ್ ಮತ್ತಿತರ ಮುಖ್ಯ ಆಡಳಿತಾತ್ಮಕ ಕೇಂದ್ರಗಳು ಸಿದ್ಧವಾಗುವ ನಿರೀಕ್ಷೆ ಇದೆ. ಆಂಧ್ರಪ್ರದೇಶದ ಜನರಿಗೆ ಅಮರಾವತಿ ನಗರ ಏನನ್ನು ಕೊಡಲಿದೆ ಎಂಬುದರ ಮೇಲೆ ಈ ನಗರ ನಿರ್ಮಾಣದ ಯಶಸ್ಸನ್ನು ಮುಂದಿನ ದಿನಗಳಲ್ಲಿ ಅಳೆಯಬಹುದು. ಯುವಜನರಿಗೆ ಉದ್ಯೋಗ ಒದಗಿಸಿಕೊಡುವುದಲ್ಲದೆ, ಇಡೀ ರಾಜ್ಯದ ಆರ್ಥಿಕತೆಗೆ ಈ ನಗರ ಶಕ್ತಿ ತುಂಬುವಂತಾಗಬೇಕು. ಸ್ಥಳಾಂತರಗೊಂಡ ರೈತರು ಹಾಗೂ ಕಾರ್ಮಿಕರು ಹೊಸ ಜೀವನೋಪಾಯ ಕಂಡುಕೊಳ್ಳಲು ನೆರವು ಸಿಗುವಂತಾಗಬೇಕು. ಅಮರಾವತಿ ಪ್ರಯೋಗ, ಆಧುನಿಕ ಭಾರತೀಯ ಇತಿಹಾಸದಲ್ಲಿ ನಗರಗಳ ನಿರ್ಮಾಣಕ್ಕೆ ಹೊಸ ಭಾಷ್ಯ ಬರೆಯುವಂತಾಗಬೇಕು. ಯೋಜನೆ, ವಿನ್ಯಾಸ, ತಂತ್ರಜ್ಞಾನ, ವಿದ್ಯುತ್‌ನ ದಕ್ಷ ಬಳಕೆ ಹಾಗೂ ಉತ್ಪಾದಕತೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ಪರಿಕಲ್ಪನೆಗಳನ್ನು ಅಳವಡಿಸಲು ಹೊಸ ನಗರ ನಿರ್ಮಾಣದ ಸಂದರ್ಭದಲ್ಲಿ ಅವಕಾಶ ಇರುತ್ತದೆ. ಇದು ಸೃಷ್ಟಿಸುವ ಆರ್ಥಿಕ ಚಟುವಟಿಕೆ ಬೆಳವಣಿಗೆಗೆ ವೇಗ ತುಂಬಲಿದೆ. ನಗರಗಳನ್ನು ಹೇಗೆ ಯೋಜಿಸಲಾಗಿದೆ ಹಾಗೂ ನಿರ್ಮಿಸಲಾಗಿದೆ ಎಂಬುದೂ ಭಾರತದ ಆರ್ಥಿಕತೆಯ ಸ್ಪರ್ಧಾತ್ಮಕತೆ, ಉತ್ಪಾದಕತೆ ಹಾಗೂ ಸುಸ್ಥಿರತೆಯನ್ನು ನಿರ್ಧರಿಸುವ ಅಂಶಗಳಾಗುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಅಮರಾವತಿ ಮಾದರಿಯಾಗಿ ಹೊರಹೊಮ್ಮಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.