ನೇರ ಮಾತುಕತೆ ಸಲಹೆ ಸೂಕ್ತವಾದುದು ಅಮೆರಿಕದೊಂದಿಗಿನ ಆಯಕಟ್ಟಿನ ಬಾಂಧವ್ಯ ವಿಸ್ತರಿಸಿಕೊಳ್ಳುವ ಪಾಕಿಸ್ತಾನದ ಪ್ರಯತ್ನ ವಿಫಲವಾಗಿದೆ. ಅಮೆರಿಕಕ್ಕೆ ಪಾಕಿಸ್ತಾನ ಪ್ರಧಾನಿಯ ಮೂರು ದಿನಗಳ ಭೇಟಿಯಲ್ಲಿ ಹೆಚ್ಚಿನದೇನೂ ಸಾಧ್ಯವಾಗಿಲ್ಲ. 2013ರಲ್ಲಿ ಪಾಕಿಸ್ತಾನ ಪ್ರಧಾನಿಯಾಗಿ ನವಾಜ್ ಷರೀಫ್ ಅವರು ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ನೀಡುತ್ತಿರುವ ಎರಡನೇ ಅಧಿಕೃತ ಭೇಟಿ ಇದು. ಅಮೆರಿಕ– ಪಾಕಿಸ್ತಾನ ಬಾಂಧವ್ಯ ವರ್ಧನೆ ಈ ಭೇಟಿಯ ಮುಖ್ಯ ಉದ್ದೇಶ. ಹೀಗಿದ್ದೂ ಆಫ್ಘಾನಿಸ್ತಾನದ ವಿಚಾರ ಈ ಭೇಟಿ ಕಾಲದಲ್ಲಿ ದೊಡ್ಡ ರೀತಿಯಲ್ಲಿಯೇ ಪ್ರಸ್ತಾಪವಾಗಿದೆ. ಪಾಕ್ ನೆಲದಲ್ಲಿರುವ ತಾಲಿಬಾನ್ ನೆಲೆಗಳನ್ನು ನಾಶ ಮಾಡಬೇಕು. ಅಲ್ಲದೆ ಆಫ್ಘಾನಿಸ್ತಾನ ಸರ್ಕಾರದ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದಕ್ಕಾಗಿ ಸಂಧಾನ ಮೇಜಿಗೆ ಬರುವಂತೆ ತಾಲಿಬಾನ್ ಮನವೊಲಿಸಲು ಪಾಕಿಸ್ತಾನ ತನ್ನ ಪ್ರಭಾವವನ್ನು ಬಳಸಬೇಕು ಎಂಬಂಥ ಅಪೇಕ್ಷೆಯನ್ನು ವಾಷಿಂಗ್ಟನ್ ವ್ಯಕ್ತಪಡಿಸಿದೆ. ಏಕೆಂದರೆ, ಆಫ್ಘಾನಿಸ್ತಾನದಲ್ಲಿ ಯುದ್ಧವನ್ನು ಮಿಲಿಟರಿ ಮೂಲಕ ಮಾತ್ರವೇ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ತಿಳಿದಿದೆ. ಇದೇ ಸಂದರ್ಭದಲ್ಲಿ, ಪಾಕಿಸ್ತಾನ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮನವಿಯನ್ನು ಅಮೆರಿಕ ಪುರಸ್ಕರಿಸಿಲ್ಲ. ಹಾಗೆಯೇ ಬಲೂಚಿಸ್ತಾನದಲ್ಲಿನ ಹೋರಾಟಕ್ಕೆ ಭಾರತದ ಕುಮ್ಮಕ್ಕು ಇದೆ ಎಂಬಂತಹ ಪಾಕಿಸ್ತಾನದ ಆರೋಪಗಳಿಗೂ ಅಮೆರಿಕ ಬೆಲೆ ಕೊಟ್ಟಿಲ್ಲ. ಆದರೆ ಪಾಕಿಸ್ತಾನದ ವಾಯುಪಡೆಗೆ ಎಂಟು ಎಫ್-16 ವಿಮಾನಗಳನ್ನು ನೀಡುವ ವಿಚಾರಕ್ಕೆ ಅಮೆರಿಕ ಬದ್ಧವಾಗಿರುವುದು ಈ ಭೇಟಿಯ ಫಲಶ್ರುತಿ. ಎಫ್– 16 ಯುದ್ಧ ವಿಮಾನಗಳು, ದಕ್ಷಿಣ ಏಷ್ಯಾದಲ್ಲಿನ ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವಂತಹವು. ಆದರೆ ಪಾಕಿಸ್ತಾನಕ್ಕೆ ಭರವಸೆ ನೀಡಲಾಗಿರುವ ಯುದ್ಧ ವಿಮಾನಗಳೇನೂ ತಕ್ಷಣವೇ ಪಾಕಿಸ್ತಾನಕ್ಕೆ ಹಸ್ತಾಂತರವಾಗುವುದಿಲ್ಲ. ಈ ಪ್ರಸ್ತಾವ, ಅಮೆರಿಕ ಕಾಂಗ್ರೆಸ್‌ನ ಪರಿಶೀಲನೆಗೊಳಪಟ್ಟ ನಂತರವೇ ಅನುಮೋದನೆ ಪಡೆಯುತ್ತದೆ. ಷರೀಫ್ ಅವರ ಬಿಡುವಿಲ್ಲದ ಕಾರ್ಯಕ್ರಮಗಳು ಹಾಗೂ ಸಮಗ್ರ ಜಂಟಿ ಹೇಳಿಕೆಯ ನಂತರವೂ ಈ ಭೇಟಿಯಿಂದ ಅತಿ ಮುಖ್ಯವಾದದ್ದು ಹೊರಹೊಮ್ಮಿಲ್ಲ ಎಂಬುದನ್ನು ಗಮನಿಸಬೇಕು. ಅದು ನಿರೀಕ್ಷಿತವೇ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರೀತಿ ಸದ್ದು ಮಾಡುವ ವರ್ಚಸ್ಸು ಷರೀಫ್‌ಗೆ ಇಲ್ಲ. ಜೊತೆಗೆ, ವಿದೇಶಾಂಗ ವ್ಯವಹಾರದಂತಹ ವಿಚಾರದಲ್ಲೂ ಪಾಕಿಸ್ತಾನದ ಮಿಲಿಟರಿಯೇ ಚಾಲಕ ಶಕ್ತಿಯಾಗಿದೆ ಎಂಬುದೂ ಮುಖ್ಯ ಕಾರಣ. ಹಕಾನಿ ಜಾಲದ ಸದಸ್ಯರಿಗೆ ನೆಲೆ ಕಲ್ಪಿಸುವುದನ್ನು ಮುಂದುವರಿಸಿರುವ ಪಾಕಿಸ್ತಾನ ನಡೆ ಬಗ್ಗೆಯೂ ಅಮೆರಿಕಕ್ಕೆ ಸಮಾಧಾನವಿಲ್ಲ. ಮುಂಬೈ ಮೇಲೆ ನಡೆದ 2008ರ ದಾಳಿ ಸೇರಿದಂತೆ ಭಾರತದ ಮೇಲೆ ನಡೆದ ಅನೇಕ ಭಯೋತ್ಪಾದನಾ ದಾಳಿಗಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳು ಕಾರಣವಾಗಿವೆ ಎಂಬುದು ದೃಢಪಟ್ಟಿದೆ. ಆದರೆ, ಭಯೋತ್ಪಾದನೆಗೆ ಸಂಬಂಧಿಸಿದಂತೆ ತನ್ನನ್ನು ಹಾಗೂ ಭಾರತವನ್ನು ಒಂದೇ ನೆಲೆಯಲ್ಲಿರಿಸಲು ಪಾಕಿಸ್ತಾನ ಬಹಳ ಪ್ರಯತ್ನಪಡುತ್ತದೆ. ಇದಕ್ಕಾಗಿ ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳಿಗೆ ಭಾರತದ ಕುಮ್ಮಕ್ಕು ಇದೆ ಎಂಬಂತಹ ಕಥನವನ್ನು ಮಂಡಿಸುವ ಪಾಕಿಸ್ತಾನದ ಪ್ರಯತ್ನ ಈಗಲೂ ಮುಂದುವರಿದಿದೆ. ಆದರೆ ಬಾಕಿ ಉಳಿದಿರುವ ಎಲ್ಲಾ ವಿಚಾರಗಳ ಇತ್ಯರ್ಥಕ್ಕೆ ಭಾರತ– ಪಾಕಿಸ್ತಾನ ಮಾತುಕತೆ ನಿರಂತರವಾಗಿ ಮುಂದುವರಿಯಬೇಕು ಎಂಬಂಥ ಸಲಹೆಯನ್ನು ಅಮೆರಿಕ ನೀಡಿರುವುದು ಸರಿಯಾದುದು. ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದನಾ ಗುಂಪುಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಷರೀಫ್ ಅವರೇನೊ ಭರವಸೆ ನೀಡಿದ್ದಾರೆ. 2008ರಲ್ಲಿ ಮುಂಬೈ ಮೇಲಿನ ದಾಳಿ ಹೊಣೆ ಹೊತ್ತ ಹಾಗೂ ಪಾಕಿಸ್ತಾನಿ ಸೇನೆಯ ಬೆಂಬಲ ಪಡೆದುಕೊಂಡಿರುವ ಲಷ್ಕರ್ ಎ ತಯಬಾ (ಎಲ್ಇಟಿ) ಮೇಲೂ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಆದರೆ ಎಲ್‌ಇಟಿ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ರೂವಾರಿ ಝಕಿ ಉರ್ ರೆಹಮಾನ್ ಲಕ್ವಿಯನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಮರೆಯುವಂತಿಲ್ಲ. ಇನ್ನು, ಎಲ್‌ಇಟಿಯ ಪೋಷಕ ಸಂಘಟನೆಯಾದ ಜಮಾತ್ ಉದ್ ದಾವಾ ಮೇಲಿನ ನಿಷೇಧವನ್ನು ಕಳೆದ ವಾರವಷ್ಟೇ ಪಾಕಿಸ್ತಾನದ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಬಹುಶಃ ಪಾಕಿಸ್ತಾನದ ಪ್ರತಿಪಾದನೆಗಳು ಹಾಗೂ ವಾಸ್ತವದ ನಡುವಿನ ಅಂತರ ಅನೇಕ ಪ್ರಶ್ನೆಗಳನ್ನು ಎತ್ತುವಂತಹದ್ದು. ಇದೆಲ್ಲದರ ನಡುವೆ ನೆರೆರಾಷ್ಟ್ರಗಳು ನೇರವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಸರಿಯಾದ ಮಾರ್ಗ ಎಂಬಂಥ ಅಮೆರಿಕದ ಸಲಹೆ, ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆ ಪುನಶ್ಚೇತನಕ್ಕೆ ದಿಕ್ಸೂಚಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.