ವಿಶ್ವಸಂಸ್ಥೆ ಸ್ವರೂಪ ಬದಲಾವಣೆಗೆ ಸಕಾಲ ವಿಶ್ವಸಂಸ್ಥೆಯ 70ನೇ ವರ್ಷಾಚರಣೆ ಪ್ರಯುಕ್ತ 60 ರಾಷ್ಟ್ರಗಳ 200ಕ್ಕೂ ಹೆಚ್ಚು ಮುಖ್ಯ ಕಟ್ಟಡಗಳಿಗೆ ಕಳೆದ ವಾರ (ಅ.24) ನೀಲಿಬಣ್ಣದ ದೀಪಾಲಂಕಾರ ಮಾಡಲಾಗಿತ್ತು. ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ಈ ಏಳು ದಶಕಗಳನ್ನು ಅವಲೋಕಿಸಿದಲ್ಲಿ ವಿಶ್ವದ ವ್ಯವಸ್ಥೆಯಲ್ಲಿ ಆಗಿರುವ ಪಲ್ಲಟಗಳು ಎದ್ದು ಕಾಣಿಸುತ್ತವೆ. ಹಲವು ಬಿಕ್ಕಟ್ಟುಗಳನ್ನು ಜಗತ್ತು ಇಂದು ಎದುರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಹಲವೆಡೆ ಸಶಸ್ತ್ರ ಸಂಘರ್ಷಗಳು ನಡೆಯುತ್ತಿವೆ. ಜಗತ್ತಿನ ವಿವಿಧೆಡೆ ಧಾರ್ಮಿಕ ಭಯೋತ್ಪಾದನೆ ತಲೆ ಎತ್ತಿದೆ. ಹವಾಮಾನ ಬದಲಾವಣೆಯಿಂದಾಗುತ್ತಿರುವ ಪ್ರಾಕೃತಿಕ ವಿಕೋಪಗಳು, ಶ್ರೀಮಂತರು ಹಾಗೂ ಬಡವರೆನ್ನದೆ ಎಲ್ಲರ ಮೇಲೂ ಸಮಾನ ರೀತಿಯಲ್ಲಿ ಪರಿಣಾಮ ಉಂಟುಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗೆಯೇ ಜಾಗತೀಕರಣ ಹಾಗೂ ಅಂತರ್ಜಾಲದ ಸೌಲಭ್ಯಗಳಿಂದಾಗಿ ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಪರ್ಕ ಇಂದು ನಿಕಟವಾಗುತ್ತಿದೆ. ಜೊತೆಜೊತೆಗೇ ಜಾಗತಿಕ ನೆಲೆಯಲ್ಲಿ ಅಕ್ರಮ ವಹಿವಾಟುಗಳು, ಬೇಹುಗಾರಿಕೆ ಚಟುವಟಿಕೆಗಳೂ ತಲೆ ಎತ್ತುತ್ತಿವೆ. ಇಂತಹದೊಂದು ಸಂಕೀರ್ಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸಬೇಕಾದಲ್ಲಿ ಜಾಗತಿಕ ಆಡಳಿತದ ದೃಷ್ಟಿಕೋನ ಅತ್ಯಂತ ಅಗತ್ಯ. ಜಗತ್ತಿನಲ್ಲಿ ಸುಸ್ಥಿರ ಶಾಂತಿ ಹಾಗೂ ಮಾನವಹಕ್ಕುಗಳನ್ನು ರಕ್ಷಿಸಲು ಇದು ಮುಖ್ಯವಾದದ್ದು. ವಾಸ್ತವವಾಗಿ, ವಿಶ್ವದಲ್ಲಿ ಶಾಂತಿಯನ್ನು ಪಸರಿಸುವ ಮುಖ್ಯ ಕಾರ್ಯಸೂಚಿ ವಿಶ್ವಸಂಸ್ಥೆಯದಾಗಿದೆ. ಆದರೆ ಈ ನಿಟ್ಟಿನಲ್ಲಿ ಸದ್ಯದ ಸಂದರ್ಭದಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂಬುದು ವಾಸ್ತವ. ವಿಶ್ವಸಂಸ್ಥೆಯಲ್ಲಿ ಇಂದು 193 ಸದಸ್ಯ ರಾಷ್ಟ್ರಗಳಿವೆ. ಆದರೆ, 1945ರಲ್ಲಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದಾಗ ವಿಶ್ವಸಂಸ್ಥೆಯಲ್ಲಿ ಇದ್ದದ್ದು 51 ಸದಸ್ಯ ರಾಷ್ಟ್ರಗಳು ಮಾತ್ರ. ಹೀಗಾಗಿ 21ನೇ ಶತಮಾನದ ಅಗತ್ಯಗಳಿಗೆ ಸ್ಪಂದಿಸಲು ವಿಶ್ವಸಂಸ್ಥೆಯ ಸ್ವರೂಪದಲ್ಲಿ ಸುಧಾರಣಾ ಕ್ರಮಗಳು ಸದ್ಯದ ಅಗತ್ಯ. ಎಲ್ಲಾ ಪ್ರಮುಖ ನಿರ್ಧಾರಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ(ಯುಎನ್‌ಎಸ್‌ಸಿ) ಐದು ಕಾಯಂ ಸದಸ್ಯ ರಾಷ್ಟ್ರಗಳೇ ಕೈಗೊಳ್ಳುವಂತಹ ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ, ‘ಪಿ 5’ ಎಂದು ಕರೆಯಲಾಗುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳು ಗಣನೀಯವಾದ ಅಧಿಕಾರವನ್ನು ಹೊಂದಿರುವುದು ಅಸಂಗತ. ಇಂತಹದೊಂದು ವ್ಯವಸ್ಥೆ ಪ್ರಜಾಸತ್ತಾತ್ಮಕ ಆಶಯಗಳಿಗೆ ವಿರುದ್ಧವಾದದ್ದು. ಹೀಗಾಗಿ ಈ ಐದು ಕಾಯಂ ಸದಸ್ಯ ರಾಷ್ಟ್ರಗಳ ವಿಟೊ ಅಧಿಕಾರವನ್ನು 100ಕ್ಕೂ ಹೆಚ್ಚು ರಾಷ್ಟ್ರಗಳು ಈಗಾಗಲೇ ಪ್ರಶ್ನಿಸಿವೆ. ಅದರಲ್ಲೂ ವಿಶ್ವ ಜನಸಂಖ್ಯೆಯಲ್ಲಿ ಆರನೇ ಒಂದರಷ್ಟು ಮಂದಿ ಇರುವ ಭಾರತಕ್ಕೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಇಲ್ಲ. ಹಾಗೆಯೇ 54 ರಾಷ್ಟ್ರಗಳನ್ನು ಹೊಂದಿರುವ ಆಫ್ರಿಕಾ ಖಂಡದ ಯಾವುದೇ ರಾಷ್ಟ್ರಕ್ಕೂ ಕಾಯಂ ಸದಸ್ಯತ್ವ ಇಲ್ಲ ಎಂಬುದು ವಿಪರ್ಯಾಸ. ವಿಶ್ವಸಂಸ್ಥೆಯ ಸಂಸ್ಥಾಪನೆಯ ಹಿಂದಿದ್ದ ಮೌಲ್ಯಗಳನ್ನೇ ಇಂತಹ ವ್ಯವಸ್ಥೆ ಗಾಳಿಗೆ ತೂರುತ್ತದೆ. ಹೀಗಾಗಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಲು ಅದನ್ನು ವಿಸ್ತರಿಸಬೇಕಾದುದು ಹಾಗೂ ಸುಧಾರಣೆಗೆ ಒಳಪಡಿಸಬೇಕಾದುದು ಸದ್ಯದ ಅಗತ್ಯ. ಹೀಗಿದ್ದೂ, ಹಲವು ಮಿತಿಗಳ ನಡುವೆಯೂ ವಿಶ್ವದಲ್ಲಿ ಅನೇಕ ಬದಲಾವಣೆಗಳಿಗೆ ವಿಶ್ವಸಂಸ್ಥೆ ಕಾರಣವಾಗಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ವಿಶ್ವ ಪಾರಂಪರಿಕ ತಾಣಗಳನ್ನು ರಕ್ಷಿಸಲು ಯುನೆಸ್ಕೊ ನೆರವಾಗುತ್ತಿದೆ. ಹಾಗೆಯೇ ಲಕ್ಷಾಂತರ ಮಕ್ಕಳ ರಕ್ಷಣೆಗೆ ಯುನಿಸೆಫ್ ಬದ್ಧವಾಗಿದೆ. ಶಸ್ತ್ರಾಸ್ತ್ರ ಪೈಪೋಟಿ ತಡೆಗೆ ವಿಶ್ವಸಂಸ್ಥೆ ಮಾಡಿರುವ ಪ್ರಯತ್ನಗಳು ಮುಖ್ಯವಾದದ್ದು. ಅಣ್ವಸ್ತ್ರಗಳ ಅಭಿವೃದ್ಧಿ ಹಾಗೂ ಪ್ರಸರಣ ತಡೆಗೂ ಪ್ರಯತ್ನಗಳಾಗಿವೆ. ಈ ಎಲ್ಲಾ ಅಂಶಗಳ ನಡುವೆಯೂ ಸದ್ಯದ ಜಾಗತಿಕ ವ್ಯವಸ್ಥೆಯಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಅಂತರರಾಷ್ಟ್ರೀಯ ರಾಜಕಾರಣ ಹಾಗೂ ಅರ್ಥವ್ಯವಸ್ಥೆಯಲ್ಲಿ ಇಂದು ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ವಿಶ್ವಸಂಸ್ಥೆ ಮರೆಯಲಾಗದು. ಈ ಬೆಳವಣಿಗೆಗಳು ವಿಶ್ವಸಂಸ್ಥೆಯಲ್ಲಿ ಪ್ರತಿಬಿಂಬಿತವಾಗುತ್ತಿಲ್ಲ ಎಂಬುದನ್ನು ಅದು ಮನಗಾಣಬೇಕು. ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕಿವೆ ಎಂಬಂತಹ ಚರ್ಚೆಯ ಚೌಕಟ್ಟಿನಲ್ಲಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದ ಭಾರತದ ಬೇಡಿಕೆ ಪ್ರಾಮುಖ್ಯ ಗಳಿಸಿಕೊಳ್ಳುತ್ತದೆ. ಇದಕ್ಕೆ 134 ರಾಷ್ಟ್ರಗಳ ಬೆಂಬಲವೂ ಇದೆ. ಪ್ರಜಾಸತ್ತಾತ್ಮಕ ಹಾಗೂ ಹೆಚ್ಚು ಪ್ರಾತಿನಿಧಿಕವಾದ ವಿಶ್ವಸಂಸ್ಥೆ ಮಾತ್ರವೇ ಹೊಸ ಭರವಸೆ ಮೂಡಿಸಬಲ್ಲುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.