ಸಂದರ್ಶನ ಇಲ್ಲದೆ ನೇರ ನೇಮಕಾತಿ: ಸ್ವಾಗತಾರ್ಹ ಹೆಜ್ಜೆ ಹಣ, ರಾಜಕೀಯ ಪ್ರಭಾವ ಅಥವಾ ವಶೀಲಿಬಾಜಿ ಇಲ್ಲದೆ ಸರ್ಕಾರಿ ನೌಕರಿಗೆ ಸೇರುವುದು ಬಹಳ ಕಷ್ಟ ಎನ್ನುವುದು ಸಾರ್ವತ್ರಿಕ ಅನುಭವ. ಉನ್ನತ ಶ್ರೇಣಿ ಮಾತ್ರವಲ್ಲದೆ ಮಧ್ಯಮ ಮತ್ತು ಕೆಳ ಶ್ರೇಣಿಯ ಅಂದರೆ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲೂ ಇದು ವ್ಯಾಪಕವಾಗಿದೆ. ಈಗ ಈ ಪಿಡುಗನ್ನು ಪೂರ್ಣವಾಗಿ ನಿಲ್ಲಿಸಿ, ಕೇಂದ್ರ ಸರ್ಕಾರದ ನಾನ್‌ ಗೆಜೆಟೆಡ್‌ ಬಿ, ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳನ್ನು ಸಂದರ್ಶನವೇ ಇಲ್ಲದೆ ಭರ್ತಿ ಮಾಡುವ ಮಹತ್ವದ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಅವರ ಪ್ರಕಟಣೆಯಂತೆ ಬರುವ ಜನವರಿ 1 ರಿಂದ ಹೊಸ ಪದ್ಧತಿ ಜಾರಿಗೆ ಬರಲಿದೆ. ಈ ಮೂಲಕ, ಸ್ವಾತಂತ್ರ್ಯೋತ್ಸವ ದಿನದಂದು ಮಾಡಿದ ವಾಗ್ದಾನವನ್ನು ಅವರು ಈಡೇರಿಸುತ್ತಿದ್ದಾರೆ. ಇದೊಂದು ಸ್ವಾಗತಾರ್ಹ ಹೆಜ್ಜೆ. ಇಂಥ ದಿಟ್ಟ ಕ್ರಮದ ಅಗತ್ಯ ಇತ್ತು. ಕೆಳ ಸ್ತರದ ಹುದ್ದೆಗಳ ನೇಮಕದಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು. ಏಕೆಂದರೆ ಇಂಥ ಹುದ್ದೆಗಳಿಗೆ ಅರ್ಜಿ ಹಾಕುವವರಲ್ಲಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದವರು. ಹೇಗಾದರೂ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರೆ ಬದುಕಿಗೆ ನೆಲೆ ಸಿಗುತ್ತದೆ ಎಂದು ತಿಳಿದುಕೊಂಡವರು. ಅವರ ಈ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ನೌಕರಿ ಕೊಡಿಸುವ ಮಧ್ಯವರ್ತಿಗಳ ದೊಡ್ಡ ಜಾಲವೇ ಅಸ್ತಿತ್ವದಲ್ಲಿತ್ತು. ಅಲ್ಲದೆ ನೇಮಕಾತಿ ಎನ್ನುವುದು ಭಾರಿ ಭ್ರಷ್ಟಾಚಾರಕ್ಕೆ ಎಡೆ ಮಾಡಿತ್ತು. ಸಂದರ್ಶನ ಇಲ್ಲದ ನೇರ ನೇಮಕಾತಿ ಈ ಎಲ್ಲ ಬಗೆಯ ಪಿಡುಗನ್ನು ತಪ್ಪಿಸಲಿದೆ. ಸಂದರ್ಶನದ ಬದಲು ಸ್ಪರ್ಧಾತ್ಮಕ ಪರೀಕ್ಷೆಗಳು ಇರುತ್ತವೆಯೇ ಅಥವಾ ಅಭ್ಯರ್ಥಿಯ ಶೈಕ್ಷಣಿಕ ಅಂಕಗಳು ಮತ್ತು ಮೀಸಲಾತಿ ಆಧರಿಸಿ ನೇಮಕಾತಿ ನಡೆಯುತ್ತದೆಯೇ ಎಂಬುದು ಪ್ರಧಾನಿಯ ಮಾತಿನಲ್ಲಿ ಸ್ಪಷ್ಟವಾಗಿಲ್ಲ. ಏನೇ ಇದ್ದರೂ, ಕೌಶಲ ಮತ್ತು ವ್ಯಕ್ತಿತ್ವ ಮೌಲ್ಯಮಾಪನದ ಹೆಸರಿನಲ್ಲಿ ನಡೆಯುತ್ತಿದ್ದ ಸಂದರ್ಶನ ಎಂಬ ‘ಪ್ರಹಸನ’ದಿಂದ ಅಭ್ಯರ್ಥಿಗಳಿಗೆ ಮುಕ್ತಿ ಸಿಗಲಿದೆ. ಕೆಳ ದರ್ಜೆ ಗುಮಾಸ್ತರು, ಕೆಲವು ಶ್ರೇಣಿಯ ಎಂಜಿನಿಯರ್‌ಗಳು, ಸ್ಟೋರ್‌ ಕೀಪರ್‌ಗಳು, ಸಹಾಯಕ ಶಿಕ್ಷಕರು, ಟೆಲಿಫೋನ್‌ ಆಪರೇಟರ್‌ಗಳು, ಸಹಾಯಕರು, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ವಾಹನ ಚಾಲಕರು, ದಲಾಯತ್‌ಗಳು, ಜವಾನರು, ಇಲಾಖಾ ವಿಸ್ತರಣಾ ಅಧಿಕಾರಿಗಳು ಮುಂತಾದ ಸಾಮಾನ್ಯ ಸ್ವರೂಪದ ಹುದ್ದೆಗಳಿಗೂ ಸಂದರ್ಶನ ನಡೆಸುವುದರಿಂದ ಆಗುವ ಪ್ರಯೋಜನ ಏನೂ ಇಲ್ಲ. ನೌಕರಿ ಕೊಡಿಸುವ ದಲ್ಲಾಳಿಗಳಿಗೆ ಲಾಭ, ಭ್ರಷ್ಟಾಚಾರ ಹೆಚ್ಚಳಕ್ಕೆ ಈ ಸಂದರ್ಶನ ಪದ್ಧತಿ ಎಡೆ ಮಾಡಿಕೊಟ್ಟಿದೆ. ಇದರ ವಿರುದ್ಧ ಆಗಾಗ ಕೋಪ ತಾಪ ಸ್ಫೋಟಗೊಳ್ಳುತ್ತಲೇ ಇದೆ. ಆದ್ದರಿಂದ ರಾಜ್ಯಗಳು ಕೂಡ ಕೇಂದ್ರದ ಮಾದರಿಯನ್ನು ಅನುಸರಿಸುವುದು ಅನಿವಾರ್ಯವಾಗಲಿದೆ. ಈ ದಿಸೆಯಲ್ಲಿ ನಮ್ಮ ರಾಜ್ಯ ಈಗಾಗಲೆ ಸಕಾರಾತ್ಮಕ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ. ಕಳೆದ ವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಸಿ ಗುಂಪಿನ ಹುದ್ದೆಗಳಲ್ಲಿ ಸಂದರ್ಶನವನ್ನು ಪೂರ್ಣ ತೊಡೆದು ಹಾಕಲು ತೀರ್ಮಾನಿಸಿದೆ. ಈಗ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡುವ ಸಿ ಹುದ್ದೆಗಳಲ್ಲಿ ಸಂದರ್ಶನವನ್ನು ಪೂರ್ಣ ಕೈ ಬಿಡಲಾಗಿದೆ. ಸಂದರ್ಶನದ ಹೆಸರಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದ ಅಕ್ರಮಗಳು, ಅದಕ್ಕೆ ಕಾರಣರಾದವರ ವಜಾ, ಬಂಧನ, ನೇಮಕಾತಿ ಪಟ್ಟಿಯನ್ನೆ ರದ್ದು ಮಾಡಿದ ಪ್ರಸಂಗಗಳನ್ನು ನೋಡಿದಾಗ ಸಂದರ್ಶನ ಕೈ ಬಿಡುವುದೇ ಲೇಸು ಎನ್ನುವ ವಾದಕ್ಕೆ ಸಮರ್ಥನೆ ಸಿಗುತ್ತದೆ. ಹಾಗೆ ನೋಡಿದರೆ ಸಂದರ್ಶನ ಇಲ್ಲದೆ ಕೇವಲ ಅರ್ಹತಾ ಪರೀಕ್ಷೆಯಲ್ಲಿನ ಅಂಕ ಮತ್ತು ಮೀಸಲಾತಿ ಆಧರಿಸಿ ನೇಮಕ ಮಾಡುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ 90ರ ದಶಕದ ಉತ್ತರಾರ್ಧದಲ್ಲಿಯೇ ಜಾರಿಗೆ ಬಂದಿತ್ತು. ಆಗ ಶಿಕ್ಷಣ ಸಚಿವರಾಗಿದ್ದ ಎಚ್‌.ಜಿ. ಗೋವಿಂದೇಗೌಡರು ಪಟ್ಟು ಹಿಡಿದು ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ನೆನಪು ಮಾಡಿಕೊಳ್ಳಲೇ ಬೇಕು. ಯಾವುದೇ ಸಂದರ್ಶನ ಇಲ್ಲದೆ ಅಂಕ, ಮೀಸಲಾತಿ ಆಧರಿಸಿ ಪ್ರಾಥಮಿಕ ಶಾಲೆಗಳ ಲಕ್ಷಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಅವರ ಕಾಲದಲ್ಲಿ ನಡೆದಿತ್ತು ಆ ವ್ಯವಸ್ಥೆ ಈಗಲೂ ಮುಂದುವರಿದುಕೊಂಡು ಬಂದಿದೆ. ಅದು ಈಗ ಇನ್ನಷ್ಟು ಹುದ್ದೆಗಳಿಗೆ ವಿಸ್ತರಣೆಯಾಗುತ್ತಿದೆ. ಕೇಂದ್ರದ ತೀರ್ಮಾನ, ಕೆಳ ಹಂತದ ಹುದ್ದೆಗಳಲ್ಲಿ ತಮಗೆ ಬೇಕಾದವರನ್ನು ತುಂಬುವ ಹುನ್ನಾರ ಎಂಬ ಟೀಕೆಗಳೂ ಕೇಳಿಬಂದಿವೆ. ಈ ವಿಷಯವನ್ನು ರಾಜಕೀಯ ಕನ್ನಡಕದಿಂದ ನೋಡುವುದು ಸರಿಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.