ಭೂಗತ ಲೋಕ ಸದೆಬಡಿಯಲು ಈ ಬಂಧನ ನೆರವಾಗಲಿ ಮುಂಬೈ ಭೂಗತಲೋಕದ ಕುಖ್ಯಾತ ಛೋಟಾ ರಾಜನ್‌ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಪೊಲೀಸರು ಬೀಗುವಂತಹದ್ದೇನಿಲ್ಲ. ಆಸ್ಟ್ರೇಲಿಯಾ ಪೊಲೀಸರು ನೀಡಿದ ಸುಳಿವಿನಿಂದ ಇಂಡೊನೇಷ್ಯಾದ ಪೊಲೀಸರು ರಾಜನ್‌ನನ್ನು ಬಂಧಿಸಿದ್ದಾರೆ. ಎಂಬತ್ತರ ದಶಕದಲ್ಲಿ ಮುಂಬೈ ಭೂಗತ ಲೋಕದ ಮೇಲೆ ದಾವೂದ್‌ ಇಬ್ರಾಹಿಂ ಮತ್ತು ಛೋಟಾ ರಾಜನ್‌ ಬಿಗಿಹಿಡಿತ ಇತ್ತು. ಒಂದು ಕಾಲದಲ್ಲಿ ದಾವೂದ್‌ ಅಣತಿಯಂತೆ ಕೆಲಸ ಮಾಡುತ್ತಿದ್ದ ರಾಜನ್‌ 1993ರ ಮುಂಬೈ ದಾಳಿ ಘಟನೆಯ ನಂತರ ದಾವೂದ್‌ ವಿರುದ್ಧ ನಿಂತ. ಮುಂಬೈ ದಾಳಿಯ ಬಗ್ಗೆ ರಾಜನ್‌ ಕೋಪಗೊಂಡಿದ್ದ ಎಂಬ ಮಾತೂ ಇದೆ. ಹೀಗಾಗಿ ಈತನನ್ನು ಭೂಗತ ಲೋಕದ ‘ಹಿಂದೂ’ ಎನ್ನುವವರೂ ಇದ್ದಾರೆ. ಆದರೆ ಆತ ಕಳ್ಳಸಾಗಾಣಿಕೆ, ಕೊಲೆ, ಮಾದಕ ದ್ರವ್ಯ ಮಾರಾಟ, ಹಫ್ತಾ ವಸೂಲಿ ಸೇರಿದಂತೆ ಹತ್ತು ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದಾನೆ ಎಂಬುದನ್ನು ಮರೆಯುವಂತಿಲ್ಲ. ದಾವೂದ್‌– ರಾಜನ್‌ನಂತಹವರಿಗೆ ಯಾವುದೇ ‘ತತ್ವ’ ಇರುವುದಿಲ್ಲ. ತಮ್ಮ ಉಳಿವಿಗಾಗಿ ಇಂತಹವರು ಧರ್ಮದ ಹೆಸರನ್ನೂ ಬಳಸಲು ಹೇಸುವುದಿಲ್ಲ. ಆದರೆ ಅಪರಾಧಿಗಳನ್ನು ಧಾರ್ಮಿಕ ನೆಲೆಯಲ್ಲಿ ಬೆಟ್ಟು ಮಾಡಿ ತೋರಿಸುವುದು ಸಲ್ಲದು. ಮುಂಬೈನಲ್ಲಿ ರಿಯಲ್‌ ಎಸ್ಟೇಟ್‌ ದಂಧೆಯೂ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತಮ್ಮದೇ ಮಾತು ನಡೆಯಬೇಕೆಂಬ ಹಟಕ್ಕೆ ಬಿದ್ದ ದಾವೂದ್‌ ಮತ್ತು ರಾಜನ್‌ ನಡುವೆ ವೈಮನಸ್ಸು ಸಹಜ. ಹೀಗಾಗಿಯೇ ದಾವೂದ್‌ ಬಗ್ಗೆ ಮಹತ್ವದ ಮಾಹಿತಿಗಳನ್ನು ಭಾರತದ ಪೊಲೀಸರಿಗೆ ನೀಡಿದ್ದಾನೆ ಎಂಬುದು ನಿಜವಿರಬಹುದು. ದಾವೂದ್‌ನ ಬಲಗೈಯಂತಿದ್ದ ಶರದ್‌ ಶೆಟ್ಟಿಯ ಕೊಲೆ ಮಾಡಿಸಿದ ಆರೋಪವೂ ರಾಜನ್‌ ಮೇಲಿದೆ. ದಾವೂದ್‌ ಕೂಡಾ ರಾಜನ್‌ನನ್ನು ಮುಗಿಸಲು ಸಂಚು ನಡೆಸುತ್ತಲೇ ಬಂದಿದ್ದಾನೆ. ಮುಂಬೈ ಭೂಗತ ಲೋಕದ ಚಟುವಟಿಕೆಗೆ ಕೋಮು ಬಣ್ಣ ಬಳಿದು ಅದರ ಲಾಭ ಪಡೆದುಕೊಂಡವನು ದಾವೂದ್‌. ಈ ಸೋಗು ಹಾಕಿಯೇ ಆತ ಪಾಕಿಸ್ತಾನದ ತಂಪು ನೆರಳಲ್ಲೇ ಇದ್ದಾನೆ ಎಂಬ ಮಾತೂ ಇದೆ. ಅಲ್ಲದೆ, ಆತ ಭಾರತದ ವಿರುದ್ಧ ಇರುವ ಭಯೋತ್ಪಾದಕರ ಜತೆಗೆ ನಂಟು ಹೊಂದಿರುವುದೂ ಗುಟ್ಟೇನಲ್ಲ. ಆತ ಇರುವುದು ಪಾಕಿಸ್ತಾನದಲ್ಲಿಯೇ ಎಂಬ ಸಂಗತಿ ಭಾರತ ಸರ್ಕಾರಕ್ಕೂ ಗೊತ್ತಿದೆ. ಹೀಗಾಗಿ ಆತನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಾಯಿಸುತ್ತಲೇ ಇದೆ. ಆದರೆ ದಾವೂದ್‌ ಎಲ್ಲಿದ್ದಾನೆಂದು ಗೊತ್ತೇ ಇಲ್ಲ ಎಂದು ಪಾಕ್‌ ಸರ್ಕಾರ ಹೇಳುತ್ತಿದೆ. ಇತ್ತ ದಾವೂದ್‌ ಬಗ್ಗೆ ಮಾಹಿತಿ ನೀಡುತ್ತೇನೆಂದು ಹೇಳುತ್ತಲೇ ಕಳೆದ ಎರಡು ದಶಕಗಳಿಂದ ರಾಜನ್‌ ಭಾರತದ ಪೊಲೀಸರ ಜತೆಗೆ ಕಣ್ಣಾಮುಚ್ಚಾಲೆ ಆಟ ಆಡಿದ್ದಾನೆಂಬ ಅನುಮಾನವೂ ಇದೆ. ‘ಈಗ ರಾಜನ್‌ಗೆ ವಯಸ್ಸಾಗಿದೆ. ಆತನ ತಂಡದಲ್ಲಿದ್ದವರ ಸಂಖ್ಯೆಯೂ ಕ್ಷೀಣಿಸಿದೆ. ಅನಾರೋಗ್ಯ ಕಾಡುತ್ತಿದೆ. ಆತ ದುರ್ಬಲಗೊಂಡಿದ್ದಾನೆ’ ಎಂಬಂತಹ ವಿವರಗಳನ್ನು ನಾಲ್ಕು ವರ್ಷಗಳ ಹಿಂದೆ ಪ್ರಕಟಿಸಿದ್ದ ಮುಂಬೈಯ ಜೆ.ಡೇ ಎಂಬ ಪತ್ರಕರ್ತನ ಕೊಲೆಯಾಗುತ್ತದೆ. ಅದರ ಹಿಂದೆ ರಾಜನ್‌ ಕೈವಾಡ ಇದೆ ಎಂಬ ಆರೋಪ ಇದೆ. ಆ ಪತ್ರಕರ್ತ ಬರೆದಿರುವಂತೆ ‘ದುರ್ಬಲ ರಾಜನ್‌’ ಈಗ ದಾವೂದ್‌ನಿಂದ ತಪ್ಪಿಸಿಕೊಳ್ಳಲು ತಾನಾಗಿಯೇ ಭಾರತದ ಪೊಲೀಸ್‌ ‘ಕೋಟೆ’ಯೊಳಗೆ ಹೋಗಲು ಬಯಸಿದ್ದನೇ ಎಂಬ ವದಂತಿ ಗರಿಗೆದರಿದೆ. ಅದೇನೆ ಇದ್ದರೂ, ಈ ದೇಶದ ಕಾನೂನಿನ ಅನ್ವಯ ರಾಜನ್‌ ವಿಚಾರಣೆ ನಡೆದು ಶಿಕ್ಷೆಯಾಗಲೇಬೇಕು. ರಾಜನ್‌ ಮತ್ತು ದಾವೂದ್‌ ಒಂದೇ ನಾಣ್ಯದ ಎರಡು ಮುಖಗಳು. ಮುಂದಿನ ದಿನಗಳಲ್ಲಿ ಬಂಧಿತ ರಾಜನ್‌ನಿಂದ ಭೂಗತ ಲೋಕದ ಕುರಿತು ಮಾಹಿತಿಗಳನ್ನು ಬಗೆದು ತೆಗೆದು, ರಾಜನ್‌ ಹಾದಿಯಲ್ಲಿರುವವರನ್ನೆಲ್ಲಾ ಜೈಲಿಗೆ ತಳ್ಳಬೇಕಾದ ಜವಾಬ್ದಾರಿ ಈಗ ಮುಂಬೈ ಪೊಲೀಸರ ಮೇಲಿದೆ. ಮುಂಬೈ ಭೂಗತ ಲೋಕವನ್ನು ಸದೆಬಡಿಯುವ ಮೂಲಕ ಅಲ್ಲಿನ ರಿಯಲ್‌ ಎಸ್ಟೇಟ್‌ ಮತ್ತು ಚಲನಚಿತ್ರೋದ್ಯಮವನ್ನು ದಾವೂದ್‌ ಹಿಡಿತದಿಂದ ಮುಕ್ತಗೊಳಿಸಬೇಕಿದೆ. ರಾಜತಾಂತ್ರಿಕ ಪ್ರಯತ್ನಗಳ ಮೂಲಕವೇ ಆಗಲಿ, ದಂಡ ಪ್ರಯೋಗಿಸಿಯೇ ಆಗಲಿ ದಾವೂದ್‌ನ ಧ್ವನಿ ಅಡಗಿಸಬೇಕಾದ ಕರ್ತವ್ಯ ಭಾರತ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ಪೊಲೀಸ್‌ ವ್ಯವಸ್ಥೆ ಶ್ರಮಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.