ಸಹಜ ಪ್ರತಿಕ್ರಿಯೆಯಲ್ಲ ಕಾನೂನಿನ ಅಣಕ ರಾಜಧಾನಿ ದೆಹಲಿಯಲ್ಲಿ ಎಲ್ಲಾ 29 ರಾಜ್ಯಗಳು ತಮ್ಮದೇ ಭವನಗಳನ್ನು ಹೊಂದಿವೆ. ಕೇರಳ ಭವನ, ಕೇರಳ ರಾಜ್ಯವನ್ನು ಪ್ರತಿನಿಧಿಸುತ್ತದೆ. ರಾಜಧಾನಿಗೆ ಭೇಟಿ ನೀಡುವ ಕೇರಳದ ಸಚಿವರು ಹಾಗೂ ಕೇರಳ ಸರ್ಕಾರದ ಅಧಿಕಾರಿಗಳು ವಾಸ್ತವ್ಯ ಹೂಡುವುದು ಕೇರಳ ಭವನದಲ್ಲೇ. ಇಂತಹ ಸರ್ಕಾರಿ ಭವನದ ಮೇಲೆಯೇ ದೆಹಲಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದಾರೆ. ಕೇರಳ ಭವನದ ಅಡುಗೆಮನೆಯಲ್ಲಿ ಗೋಮಾಂಸ ಬೇಯುತ್ತಿದೆಯೇ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ನಡೆಸಿದ ದಾಳಿ ಇದು. ನಿಜಕ್ಕೂ ಇದು ಕಾನೂನಿನ ಅಣಕ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ಯಾಕೆಂದರೆ, ಯಾರೋ ವ್ಯಕ್ತಿ ನೀಡಿದ ಬಾಯಿಮಾತಿನ ದೂರಿನ ಮೇಲೆ ನಡೆಸಲಾದ ಈ ಪೊಲೀಸ್ ಕಾರ್ಯಾಚರಣೆಯ ಉದ್ದೇಶವೇ ಪ್ರಶ್ನಾರ್ಹ. ದೆಹಲಿಯಲ್ಲಿ ಎಷ್ಟೆಲ್ಲಾ ಅಪರಾಧ ಪ್ರಕರಣಗಳು ದಿನನಿತ್ಯ ಜರುಗುತ್ತಲೇ ಇರುತ್ತವೆ. ಅಂತಹ ಪ್ರಕರಣಗಳಿಗೆಲ್ಲಾ ಇಷ್ಟೇ ಚುರುಕಿನಿಂದ ದೆಹಲಿ ಪೊಲೀಸರು ಪ್ರತಿಕ್ರಿಯಿಸುತ್ತಾರೆಯೆ ಎಂಬುದು ಸಹಜವಾಗಿ ಮೂಡುವ ಸಂಶಯ. ಪೊಲೀಸ್ ನಿಷ್ಕ್ರಿಯತೆಯ ಕಥನಗಳೇ ಕೇಳಿಬರುತ್ತಿರುವ ವಾತಾವರಣದಲ್ಲಿ ಇದು ಪೊಲೀಸರ ಸಹಜವಾದ ಪ್ರತಿಕ್ರಿಯೆ ಖಂಡಿತಾ ಅಲ್ಲ ಎಂಬುದು ಸ್ಪಷ್ಟ. ಇದರ ಹಿಂದೆ ಇದ್ದಿರಬಹುದಾದ ಕೈವಾಡ ಅಥವಾ ಷಡ್ಯಂತ್ರ ಏನು? ಇಂತಹದೊಂದು ಕ್ರಮದ ಹಿಂದೆ ದೀರ್ಘಾವಧಿ ಯೋಜನೆಗಳಿವೆಯೇ, ಇದರ ಹಿಂದಿರುವ ರಾಜಕಾರಣ ಎಂತಹದ್ದು ಎಂಬಂತಹ ಸಂಶಯಗಳು ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಈಗಾಗಲೇ, ಸಮಾಜವನ್ನು ಧ್ರುವೀಕರಿಸುವಂತಹ ಅಥವಾ ದ್ವೇಷವನ್ನು ಬಿತ್ತುವಂತಹ ನೇತಾರರ ಯದ್ವಾತದ್ವಾ ಹೇಳಿಕೆಗಳ ಬಗ್ಗೆ ಉನ್ನತ ರಾಜಕೀಯ ನಾಯಕತ್ವ ಅಸಂತೋಷವನ್ನು ವ್ಯಕ್ತಪಡಿಸಿದೆ ಎಂಬುದನ್ನು ಇತ್ತೀಚೆಗೆ ರಾಷ್ಟ್ರಕ್ಕೆ ನಂಬಿಸಲಾಗಿದೆ. ಆದರೆ ಈ ಕುರಿತಾದ ಸಂದೇಶಗಳನ್ನು ಯಾರೂ ಗಣನೆಗೆ ತೆಗೆದುಕೊಂಡಂತಿಲ್ಲ ಎಂಬುದಕ್ಕೆ ಪದೇಪದೇ ಮರುಕಳಿಸುತ್ತಿರುವ ಇಂತಹ ಪ್ರಕರಣಗಳೇ ಸಾಕ್ಷಿ. ಕೇರಳ ಭವನದ ಪ್ರಕರಣ ಪ್ರಜಾಸತ್ತಾತ್ಮಕ ಆಶಯಗಳನ್ನು ಹೊಂದಿದ ಸಮಾಜಕ್ಕೆ ಕಪ್ಪುಚುಕ್ಕೆ. ರಾಜ್ಯಗಳ ಭವನಗಳು ಸ್ಥಳೀಯ ಆಡಳಿತದ ಹಸ್ತಕ್ಷೇಪದಿಂದ ಮುಕ್ತವಾಗಿವೆ. ಹೀಗಿದ್ದೂ ಕೇರಳ ಸರ್ಕಾರ ಅಥವಾ ಕೇರಳ ಭವನದ ರೆಸಿಡೆಂಟ್ ಕಮಿಷನರ್ ಗಮನಕ್ಕೆ ತರದೇ ನಡೆದಿರುವ ಈ ದಾಳಿ ಶಿಷ್ಟಾಚಾರದ ಉಲ್ಲಂಘನೆಯೂ ಆಗಿರುವುದು ಈ ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ. ಹೀಗಾಗಿ, ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುವ ದೆಹಲಿ ಪೊಲೀಸರು ಕಟಕಟೆಯಲ್ಲಿ ನಿಂತಿದ್ದಾರೆ. ‘ಎಂತಹದೋ ಅಕ್ರಮ ಎಸಗಲಾಗಿದೆ ಎಂಬಂತೆ ರಾಜ್ಯ ಸರ್ಕಾರದ ಮೇಲೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದಂತಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆರೋಪಿಸಿದ್ದಾರೆ. ಅಹಿತಕರ ಘಟನೆ ತಡೆಯಲು ಮಧ್ಯಪ್ರವೇಶಿಸಿದ್ದಾಗಿ ಹೇಳಿರುವ ದೆಹಲಿ ಪೊಲೀಸರ ಪ್ರತಿಪಾದನೆಗಳನ್ನು ಚಾಂಡಿಯವರು ಒಪ್ಪಿಕೊಂಡಿಲ್ಲ. ಇದರಿಂದಾಗಿ, ಒಕ್ಕೂಟ ವ್ಯವಸ್ಥೆಗೇ ಧಕ್ಕೆಯಾಗಿದೆ ಎಂದು ಕೇರಳ ಸರ್ಕಾರ ಕೆಂಡಾಮಂಡಲಗೊಂಡಿರುವುದು ಸರಿಯಾದದ್ದೇ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಕೇರಳ ಸರ್ಕಾರಕ್ಕೆ ಈ ವಿಷಯದಲ್ಲಿ ಬೆಂಬಲ ನೀಡಿದ್ದಾರೆ. ದಾದ್ರಿ ಘಟನೆಗೆ ಸಂಬಂಧಿಸಿದಂತೆ ಮೌನ ಮುರಿಯಲು ಪ್ರಧಾನಿ ನರೇಂದ್ರ ಮೋದಿಯವರು ಅನೇಕ ದಿನಗಳನ್ನು ತೆಗೆದುಕೊಂಡಿದ್ದರು. ಆದರೆ ಈಗ ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ಈಗಾಗಲೇ ದೆಹಲಿ ಪೊಲೀಸರಿಂದ ವಿವರಣೆ ಕೇಳಿದೆ ಎಂದರೆ ಈ ಪ್ರಕರಣದ ಗಂಭೀರತೆ ಅರಿವಾಗುತ್ತದೆ. ರಾಷ್ಟ್ರದಲ್ಲಿ ಗೋವಧೆಗೆ ಅವಕಾಶವಿರುವ ಕೆಲವೇ ರಾಜ್ಯಗಳಲ್ಲಿ ಕೇರಳವೂ ಒಂದಾಗಿದೆ. ಗೋವು ಇರಲಿ, ಕೋಣದ ಮಾಂಸವಿರಲಿ, ಖಾದ್ಯಗಳನ್ನು ಒಟ್ಟಾಗಿ ಬೀಫ್ ಫ್ರೈ, ಬೀಫ್ ರೋಸ್ಟ್ ಅಥವಾ ಬೀಫ್ ಕರಿ ಎಂದು ಇಂಗ್ಲಿಷ್‌ನಲ್ಲಿ ಹೇಳುವುದು ಮಾಮೂಲು. ಯಾವ ಪ್ರಾಣಿಗೆ ಸೇರಿದ ಮಾಂಸ ಎಂಬ ವ್ಯತ್ಯಾಸ ಇಲ್ಲಿರುವುದಿಲ್ಲ. ದಶಕಗಳ ಕಾಲದಿಂದಲೂ ಗೋಮಾಂಸ ನಿಷೇಧ ಇರುವ ದೆಹಲಿಯ ಕಾನೂನಿಗೆ ಅನುಸಾರವಾಗಿಯೇ ಕೋಣನ ಮಾಂಸವನ್ನು ಕೇರಳ ಭವನ ಉಣಬಡಿಸುತ್ತಲೇ ಬಂದಿದೆ. ಇದನ್ನು ಅರಿಯದೆ, ಗೋಮಾಂಸ ವಿರೋಧಿಗಳು ಈ ಬಾರಿ ಕೈಗೊಂಡ ಹೋರಾಟ ಹಾಸ್ಯಾಸ್ಪದ. ಜೊತೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದನ್ನೀಗ ಆಹಾರ ವಿಧಾನ ಹಾಗೂ ವ್ಯಕ್ತಿ ಸ್ವಾತಂತ್ರ್ಯಗಳಿಗೆ ಬೆದರಿಕೆಯುಂಟಾಗಿದೆ ಎಂದು ಪ್ರತಿಪಾದಿಸುವ ಅವಕಾಶವಾಗಿ ಬಳಸಿಕೊಂಡಿರುವ ಕೇರಳದ ಎಡ ಪಕ್ಷಗಳ ಎಂಪಿಗಳ ತೀವ್ರದಾಳಿಗೂ ಕೇಂದ್ರ ಗುರಿಯಾಗಬೇಕಾಗಿದೆ. ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ರಾಷ್ಟ್ರದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವಂತಹದ್ದು. ಈ ಬೆಳವಣಿಗೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿಗೆ ಇನ್ನಾದರೂ ಆದ್ಯತೆ ನೀಡಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.