ಶಾಲಾ ಶಿಕ್ಷಕರ ನೇಮಕಾತಿ ಸರ್ಕಾರಕ್ಕೆ ಬೇಕು ಇಚ್ಛಾಶಕ್ತಿ ಸರ್ಕಾರಗಳ ಅಭಿವೃದ್ಧಿಯ ಪರಿಭಾಷೆಯಲ್ಲಿ ಮಕ್ಕಳು ಹಾಗೂ ಶಿಕ್ಷಣಕ್ಕೆ ಕೊನೆಯ ಸ್ಥಾನ ಎನ್ನುವುದಕ್ಕೆ ರಾಜ್ಯದಲ್ಲಿನ ಪ್ರಾಥಮಿಕ ಶಿಕ್ಷಣದ ದುಃಸ್ಥಿತಿ ಕನ್ನಡಿ ಹಿಡಿಯುವಂತಿದೆ. ಈವರೆಗೆ ಮಕ್ಕಳ ಕೊರತೆಯಿಂದಾಗಿ ಶಾಲೆಗಳನ್ನು ಮುಚ್ಚುವ ವರದಿಗಳು ಪ್ರಕಟಗೊಳ್ಳುತ್ತಿದ್ದವು. ಈಗ ಶಿಕ್ಷಕರೇ ಇಲ್ಲದ ಶಾಲೆಗಳ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂಎಚ್‌ಆರ್‌ಡಿ) ಪ್ರಕಟಿಸಿರುವ ಸಮೀಕ್ಷೆಯ ವರದಿ ಗಮನಸೆಳೆದಿದೆ. ರಾಜ್ಯದಲ್ಲಿನ ಒಟ್ಟು 75 ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ, 1,734 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿರುವುದು ಗಾಬರಿ ಹುಟ್ಟಿಸುವಂತಹದ್ದು. ರಾಜಧಾನಿ ಕೇಂದ್ರಿತ ರಾಜಕಾರಣಕ್ಕೆ ದೂರವಾದ ಕಲಬುರ್ಗಿ, ರಾಯಚೂರುಗಳ ಪರಿಸ್ಥಿತಿ ಹಾಗಿರಲಿ; ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 190 ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ 60 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 21,982 ಶಾಲೆಗಳಲ್ಲಿ ಮೂರಕ್ಕಿಂತಲೂ ಕಡಿಮೆ ಶಿಕ್ಷಕರಿದ್ದಾರೆ. ಈ ಅಂಕಿಅಂಶಗಳು ನಮ್ಮ ಶಿಕ್ಷಣ ಕ್ಷೇತ್ರದ ಬಡತನದ ಅಭಿವ್ಯಕ್ತಿಯಂತಿವೆ. ಪರಿಸ್ಥಿತಿ ಕಳವಳಕಾರಿಯಾಗಿದ್ದರೂ ಎಂಎಚ್‌ಆರ್‌ಡಿ ವರದಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಕಿಂಚಿತ್‌ ಆಶ್ಚರ್ಯವನ್ನೂ ಉಂಟು ಮಾಡಿದಂತಿಲ್ಲ. ‘ಈ ವರದಿ ಬಗ್ಗೆ ನಮಗೆ ಮಾಹಿತಿ ಇಲ್ಲ. ಪರಿಸ್ಥಿತಿ ಹೀಗಿರಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿರುವುದು ಇಲಾಖೆಯ ಬೇಜವಾಬ್ದಾರಿತನ ಸೂಚಿಸುವಂತಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿರುವಂತೆ ರಾಜ್ಯದಲ್ಲಿ 30 ಸಾವಿರ ಶಿಕ್ಷಕರ ಕೊರತೆ ಇದ್ದು, 9,500 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ‘ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಇಲಾಖೆ ಹೇಳಿದೆ. ಅತಿಥಿ ಶಿಕ್ಷಕರು ಹಾಗೂ ತಾತ್ಕಾಲಿಕ ಶಿಕ್ಷಕರನ್ನು ನೆಚ್ಚಿಕೊಂಡು ಕಾಲ ದೂಡುವ ಈ ಪರ್ಯಾಯ ವ್ಯವಸ್ಥೆ ಸಮಸ್ಯೆಗೆ ತೇಪೆ ಹಾಕುವ ಪ್ರಯತ್ನವಷ್ಟೇ. ಈ ತಾತ್ಕಾಲಿಕ ಕ್ರಮಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಬದಲು, ಪೂರ್ಣಾವಧಿ ಬೋಧಕರನ್ನು ನೇಮಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ವ್ಯಕ್ತಪಡಿಸಬೇಕಾಗಿದೆ. ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಎರಡು– ಮೂರು ವಿಷಯಗಳನ್ನು ಬೋಧಿಸಬೇಕಾದ ಅನಿವಾರ್ಯ ಮತ್ತು ಒತ್ತಡ ನಿರ್ಮಾಣವಾಗಿದೆ. ಅನೇಕ ಶಾಲೆಗಳು ಶಿಥಿಲ ಕಟ್ಟಡಗಳಲ್ಲಿ ನಡೆಯುತ್ತಿವೆ. ಶೌಚಾಲಯಗಳೇ ಇಲ್ಲದ ಶಾಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಕ್ಕಳು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವ ಪವಾಡವನ್ನು ಸರ್ಕಾರ ನಿರೀಕ್ಷಿಸುತ್ತಿರುವಂತಿದೆ. ನಮ್ಮ ಶಾಲೆಗಳು ಶಿಕ್ಷಕರು ಹಾಗೂ ಮೂಲಸವಲತ್ತುಗಳ ಕೊರತೆಯನ್ನಷ್ಟೇ ಎದುರಿಸುತ್ತಿಲ್ಲ; ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿಯೂ ಅವು ವಿಫಲವಾಗುತ್ತಿವೆ. ಸರ್ಕಾರೇತರ ಸಂಸ್ಥೆ ‘ಪ್ರಥಮ್‌’ ಅಧ್ಯಯನ ವರದಿಯ ಪ್ರಕಾರ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿನ ಎಂಟನೇ ತರಗತಿಯ ಶೇ 82.7ರಷ್ಟು ವಿದ್ಯಾರ್ಥಿಗಳಿಗೆ ಒಂದನೇ ತರಗತಿಯ ಕನ್ನಡ ಪಠ್ಯವನ್ನು ಓದುವ ಸಾಮರ್ಥ್ಯವೂ ಇಲ್ಲ. ಇವರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಕೂಡಿ ಕಳೆಯುವ ಸರಳ ಲೆಕ್ಕಗಳನ್ನು ಮಾಡುವ ಕೌಶಲ ಸಿದ್ಧಿಸಿಲ್ಲ. ಒಂದನೇ ತರಗತಿಯ ಶೇ 24.4ರಷ್ಟು ವಿದ್ಯಾರ್ಥಿಗಳು ಕನ್ನಡದ ಅಕ್ಷರಗಳನ್ನು ಗುರುತಿಸುವಲ್ಲಿ ಅಸಮರ್ಥರಾಗಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ 2009ರಿಂದ ಸತತವಾಗಿ ಕುಸಿಯುತ್ತಿದ್ದು, ಖಾಸಗಿ ಶಾಲೆಗಳ ಮಕ್ಕಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆ ತೀರಾ ಕಳಪೆಯಾಗಿದೆ ಎಂದು ‘ಪ್ರಥಮ್‌’ ವರದಿ ತಿಳಿಸಿದೆ. ‘ಕಡ್ಡಾಯ ಶಿಕ್ಷಣ ಹಕ್ಕು’ ಕಾಯ್ದೆಯಿಂದ ಮಕ್ಕಳಿಗೆ ಯಾವ ಉಪಯೋಗವೂ ಆಗಿಲ್ಲ. ಬೀದಿಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 2.24 ಲಕ್ಷ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಮಕ್ಕಳಿಗೆ ಸಂಬಂಧಿಸಿದಂತೆ ಸರ್ಕಾರಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿರುವ ‘ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ ಸೆಂಟರ್‌’ ರಾಜ್ಯದಲ್ಲಿ ಮಕ್ಕಳ ಹಿತಾಸಕ್ತಿಗೆ ತೊಡಗಿಸಿರುವ ಮೊತ್ತ ಅತ್ಯಂತ ಕಡಿಮೆ ಎಂದು ಹೇಳಿದೆ. ಶಾಲಾ ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ಕೂಡ ಬಳಲುತ್ತಿದ್ದಾರೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಅದನ್ನು ನಿರಾಕರಿಸುವ, ಕಡೆಗಣಿಸುವ ಅಥವಾ ಅಪಮೌಲ್ಯಗೊಳಿಸುವ ಯಾವುದೇ ಪ್ರಯತ್ನ ಸಮಾಜಕ್ಕೆ ಮಾಡುವ ವಂಚನೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಶಾಲೆಗಳ ನಿರ್ವಹಣೆ, ಶಿಕ್ಷಕರ ನೇಮಕಾತಿಯಂಥ ಸಂಗತಿಗಳಲ್ಲಿ ವಿಳಂಬ ನೀತಿ ಅನುಸರಿಸುವುದು ಹಾಗೂ ಲಾಭ–ನಷ್ಟದ ಲೆಕ್ಕಾಚಾರದಲ್ಲಿ ತೊಡಗುವ ಹೊಣೆಗೇಡಿತನ ಸರಿಯಲ್ಲ. ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ– ಎರಡರ ಪೌಷ್ಟಿಕತೆಯನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.