ರಷ್ಯಾ ವಿಮಾನ ದುರಂತ ನೈಜ ಕಾರಣ ಪತ್ತೆಯಾಗಲಿ ವಿಮಾನ ದುರಂತದ ಕಹಿ ನೆನಪು ಮತ್ತೆ ಮರುಕಳಿಸಿದೆ. ಈಜಿಪ್ಟ್‌ನ ವಿಹಾರಧಾಮ ಶರ್ಮ್ ಅಲ್ ಶೇಖ್‌ನಿಂದ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ಗೆ ಹೊರಟಿದ್ದ ರಷ್ಯದ ಪ್ರಯಾಣಿಕ ವಿಮಾನವೊಂದು ಈಜಿಪ್ಟ್‌ನ ಸಿನಾಯ್ ಬಳಿ ಉರಿಯುತ್ತ ಹೋಳಾಗಿ ಬಿದ್ದು ಎಲ್ಲ 224 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈ ದುರಂತಕ್ಕೆ ಕಾರಣ ಏನು ಎಂಬುದು ಈಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ವಿಮಾನವನ್ನು ತಾನೇ ಹೊಡೆದು ಉರುಳಿಸಿರುವುದಾಗಿ ಈಜಿಪ್ಟ್‌ನಲ್ಲಿಯೂ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ಬೆಂಬಲಿತ ಬಣವೊಂದು ದುರಂತದ ಬೆನ್ನಲ್ಲೇ ಹೇಳಿಕೊಂಡಿದೆ. ಆದರೆ, ರಷ್ಯಾ ಮತ್ತು ಈಜಿಪ್ಟ್ ಅಧಿಕಾರಿಗಳು ಇದನ್ನು ಪೂರ್ಣ ಒಪ್ಪಲು ತಯಾರಿಲ್ಲ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿರಬಹುದು ಎಂದು ಪ್ರಾಥಮಿಕ ತನಿಖೆ ಬಳಿಕ ಹೇಳಲಾಗಿತ್ತು. ಏಕೆಂದರೆ ನಿಲ್ದಾಣದಿಂದ ಹೊರಟ ಕೆಲವೇ ಸಮಯದಲ್ಲಿ ವಾಯುಯಾನ ಸಂಚಾರ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಿದ್ದ ಪೈಲಟ್, ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಬೇಕಾಗಿದೆ ಎಂದು ತಿಳಿಸಿದ್ದರೆನ್ನಲಾಗಿದೆ. ಇದೂ ಸ್ಪಷ್ಟವಿಲ್ಲ. ಇದರ ನಂತರ ಮತ್ತೆ ವಿಮಾನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ. ಆದರೆ ವಿಮಾನವೊಂದು ಉರಿಯುತ್ತ ಪತನಗೊಳ್ಳುತ್ತಿರುವ ವಿಡಿಯೊ ತುಣುಕನ್ನು ಐಎಸ್ ಉಗ್ರರು ನಂತರ ಬಿಡುಗಡೆ ಮಾಡಿದ್ದಾರೆ. 29 ಸೆಕೆಂಡುಗಳ ಈ ವಿಡಿಯೊದಲ್ಲಿ ಇಸ್ಲಾಮಿಕ್ ಹಿನ್ನೆಲೆ ಸಂಗೀತವೂ ದಾಖಲಾಗಿದೆ. ಇದು ಅಧಿಕಾರಿಗಳ ನಿದ್ದೆಗೆಡಿಸಿದೆ. ಆದರೆ ವಿಡಿಯೊದ ನೈಜತೆ ಬಗ್ಗೆ ಇನ್ನೂ ಅನುಮಾನವಿದೆ. ವಿಮಾನದ ಹಾರಾಟಕ್ಕೆ ಸಂಬಂಧಪಟ್ಟ ತಾಂತ್ರಿಕ ಮಾಹಿತಿ ನೀಡುವ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಚಾಲಕ ಸಿಬ್ಬಂದಿಯ ಕೊನೆಯ 30 ನಿಮಿಷಗಳ ಸಂಭಾಷಣೆ ದಾಖಲಿಸುವ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಳನ್ನು ಒಳಗೊಂಡ ಕಪ್ಪು ಪೆಟ್ಟಿಗೆ ಪತ್ತೆಯಾಗಿದೆ. ವಿಮಾನಕ್ಕೆ ಕೊನೆಯದಾಗಿ ತುಂಬಿಸಿದ್ದ ಇಂಧನದ ಮಾದರಿಯನ್ನೂ ತಜ್ಞರು ಸಂಗ್ರಹಿಸಿದ್ದಾರೆ. ಇವುಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ನಂತರವೇ ದುರಂತದ ನೈಜ ಕಾರಣ ತಿಳಿಯಲಿದೆ. ತಾಂತ್ರಿಕ ದೋಷವಾಗಿದ್ದರೆ ವಿಮಾನ ತಯಾರಿಕಾ ಕಂಪೆನಿಗಳ ಹೊಣೆಗೇಡಿತನ ಬಯಲಾಗುತ್ತದೆ. ಆದರೆ ಐಎಸ್ ಉಗ್ರರೇ ಉರುಳಿಸಿದ್ದರೆ? ಇಡೀ ವಿಶ್ವ ಆತಂಕ ಪಡಬೇಕಾದ ಸಂಗತಿಯಾಗುತ್ತದೆ. ಕಳೆದ ವರ್ಷ ಚೆಚನ್ಯ ಉಗ್ರರು ಮಲೇಷ್ಯದ ಪ್ರಯಾಣಿಕ ವಿಮಾನವನ್ನು ಕ್ಷಿಪಣಿ ಮೂಲಕ ಹೊಡೆದು ಉರುಳಿಸಿದ್ದರು. ರಷ್ಯಾದ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ಅವರ ಬಳಿಯಿದ್ದ ಕಾರಣ ಅದೇನೂ ಅವರಿಗೆ ಕಷ್ಟದ ಕೆಲಸವಾಗಿರಲಿಲ್ಲ. ಏಕೆಂದರೆ 30 ಸಾವಿರ ಅಡಿ ಎತ್ತರದಲ್ಲಿ ಗಂಟೆಗೆ ಕನಿಷ್ಠ 800-1000 ಕಿ.ಮೀ. ವೇಗದಲ್ಲಿ ಹೋಗುವ ವಿಮಾನಕ್ಕೆ ಸರಿಯಾಗಿ ಗುರಿ ಇಟ್ಟು ಕ್ಷಿಪಣಿ ಹಾರಿಸಲು ಸುಧಾರಿತ ತಾಂತ್ರಿಕತೆಯ ನೆರವು ಬೇಕಾಗುತ್ತದೆ. ಐಎಸ್ ಉಗ್ರರ ಹೇಳಿಕೆ ನಿಜವೇ ಆಗಿದ್ದರೆ ಅವರ ಬಳಿಯೂ ಅಂಥ ಪರಿಣತಿ ಇದೆ ಎಂದೇ ಅರ್ಥ. ಅಷ್ಟರಮಟ್ಟಿಗೆ, ವಿಶ್ವದ ವಾಯು ಪ್ರದೇಶ ಅಸುರಕ್ಷತೆ, ಅಭದ್ರತೆ ಎದುರಿಸಬೇಕಾಗುತ್ತದೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ಅವರನ್ನು ಬೆಂಬಲಿಸುತ್ತಿರುವ ರಷ್ಯಾ, ಎರಡು ತಿಂಗಳಿಂದ ಸಿರಿಯಾದಲ್ಲಿ ಐಎಸ್ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಅದರ ಪೂರ್ವ ಸಿದ್ಧತೆ ಮತ್ತು ಕರಾರುವಾಕ್ ಗುರಿಗಳು, ಅಮೆರಿಕ ಸೇರಿದಂತೆ ಇಡೀ ವಿಶ್ವವನ್ನೇ ಬೆರಗುಗೊಳಿಸಿವೆ. ಹೀಗಾಗಿ ದಾಳಿಯಿಂದ ಸಾಕಷ್ಟು ಹಾನಿ ಅನುಭವಿಸಿರುವ ಐಎಸ್ ಉಗ್ರರಿಗೆ ರಷ್ಯಾ ಸಹ ಈಗ ದೊಡ್ಡ ಶತ್ರು. ಅದಕ್ಕಾಗಿ ಅವರು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವುದು ರಹಸ್ಯವೇನಲ್ಲ. ವಿಮಾನ ದುರಂತದಲ್ಲಿ ಅವರ ಕೈವಾಡ ಸಾಬೀತಾದರೆ ರಷ್ಯಾ ಅಧ್ಯಕ್ಷ ಪುಟಿನ್ ಸ್ವದೇಶದಲ್ಲಿ ಸಾರ್ವಜನಿಕ ಆಕ್ರೋಶ ಎದುರಿಸಬೇಕಾಗಬಹುದು. ಇದು ಐಎಸ್ ಉಗ್ರರನ್ನು ಸದೆಬಡಿಯುವ ಪ್ರಯತ್ನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗೇನಾದರೂ ಆದರೆ ಅದು ವಿಶ್ವಶಾಂತಿಗೊಂದು ದೊಡ್ಡ ಹಿನ್ನಡೆ. ವಿಮಾನ ದುರಂತದಲ್ಲಿ ಸತ್ತವರಲ್ಲಿ 10 ತಿಂಗಳ ಹಸುಗೂಸಿನಿಂದ ಹಿಡಿದು 70 ವರ್ಷದ ವೃದ್ಧರೂ ಇದ್ದಾರೆ. ಇವರೆಲ್ಲ ಅಮಾಯಕರು. ಈ ದುರಂತದ ನೈಜ ಕಾರಣ ಪತ್ತೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.