ಭಾರತ– ಆಫ್ರಿಕ ಮೈತ್ರಿ ಮತ್ತಷ್ಟು ಬಲಗೊಳ್ಳುವುದು ಅತ್ಯವಶ್ಯ ಈಚೆಗೆ ದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಆಫ್ರಿಕದ ದೇಶಗಳ ಮೂರನೇ ಶೃಂಗ ಸಭೆಯಲ್ಲಿ, ಆರ್ಥಿಕ ಸಹಕಾರ ಬಲಗೊಳಿಸುವುದರ ಜತೆಗೆ ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆ, ಹವಾಮಾನ ವೈಪರೀತ್ಯದಂಥ ಸಮಸ್ಯೆಗಳ ಚರ್ಚೆಗೂ ಒತ್ತು ನೀಡಿರುವುದು ಸ್ವಾಗತಾರ್ಹ. ವಿಶ್ವಸಂಸ್ಥೆಯ ಸುಧಾರಣೆ, ಬದಲಾದ ಸ್ಥಿತಿಯಲ್ಲಿ ಭದ್ರತಾ ಮಂಡಳಿಗೆ ಹೊಸ ಕಾಯಂ ಸದಸ್ಯರ ಸೇರ್ಪಡೆಯ ಅಗತ್ಯವನ್ನು ಶೃಂಗಸಭೆ ಪ್ರತಿಪಾದಿಸಿದೆ. ಇದರಿಂದಾಗಿ ಭಾರತದ ದೀರ್ಘಕಾಲೀನ ಆಗ್ರಹಕ್ಕೆ ವಿಶ್ವದ ಸುಮಾರು ನಾಲ್ಕನೇ ಒಂದು ಭಾಗದಷ್ಟು ದೇಶಗಳ ಸಮರ್ಥನೆ ಸಿಕ್ಕಂತಾಗಿದೆ. 2001ರಲ್ಲಿ ಇಥಿಯೋಪಿಯದ ರಾಜಧಾನಿ ಅಡಿಸ್ ಅಬಾಬಾದಲ್ಲಿ ನಡೆದ ಶೃಂಗಸಭೆಗೆ ಹೋಲಿಸಿದರೆ ಈ ಸಲ ಪಾಲ್ಗೊಳ್ಳುವಿಕೆ ಹೆಚ್ಚಿತ್ತು. ಆಫ್ರಿಕ ಖಂಡದ 54 ಆಹ್ವಾನಿತ ದೇಶಗಳ ಪೈಕಿ 41 ದೇಶಗಳ ಸರ್ಕಾರಿ ಮುಖ್ಯಸ್ಥರು ಭಾಗವಹಿಸಿದ್ದರು ಎನ್ನುವುದೇ ಇದರ ಮಹತ್ವಕ್ಕೆ ನಿದರ್ಶನ. ಆಫ್ರಿಕದ ದೇಶಗಳು ಮತ್ತು ಭಾರತದ ಜನಸಂಖ್ಯೆ ಹೆಚ್ಚೂಕಡಿಮೆ ಸಮ ಸಮವಾಗಿವೆ. ಇವೆರಡೂ ಸೇರಿದರೆ ವಿಶ್ವದ ಮೂರನೇ ಒಂದರಷ್ಟು ಜನರನ್ನು ಪ್ರತಿನಿಧಿಸುತ್ತವೆ. ಇಂಥ ಅಗಾಧ ಜನಕೋಟಿಯ ಆಶಯಗಳು, ಆಶೋತ್ತರಗಳನ್ನು ಈಡೇರಿಸಿಕೊಳ್ಳಲು, ಸಮಾನ ಹಿತಾಸಕ್ತಿಯ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಈ ಶೃಂಗಸಭೆ ಒಂದು ಉಪಯುಕ್ತ ವೇದಿಕೆಯಾಗಿ ಬೆಳೆದಿದೆ. ಭಾರತ ಮತ್ತು ಆಫ್ರಿಕ ಖಂಡದ ದೇಶಗಳ ನಡುವಿನ ಬಾಂಧವ್ಯಕ್ಕೆ ದೊಡ್ಡ ಇತಿಹಾಸವೇ ಇದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಆರಂಭದ ದಿನಗಳನ್ನು ಕಳೆದದ್ದು, ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಪಡೆದದ್ದು ದಕ್ಷಿಣ ಆಫ್ರಿಕದ ನೆಲದಲ್ಲಿ. ವ್ಯಾಪಾರ, ವಹಿವಾಟಿನ ದೃಷ್ಟಿಯಿಂದಲೂ ಆಫ್ರಿಕ ನಮಗೆ ಆಯಕಟ್ಟಿನ ಸ್ಥಾನದಲ್ಲಿದೆ. ಬಹಳ ಹಿಂದೆಯೇ ವಲಸೆ ಹೋಗಿರುವ ದೊಡ್ಡ ಪ್ರಮಾಣದ ಭಾರತೀಯರಿಗೆ ಆಫ್ರಿಕದ ದೇಶಗಳು ನೆಲೆ ಕಲ್ಪಿಸಿವೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಮುಂಚೂಣಿಯಲ್ಲಿ ಇರುವ ಮತ್ತು ವಿಶ್ವದ ಸಿರಿವಂತ ದೇಶಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ಭಾರತ, ವಿಶ್ವದಲ್ಲಿಯೇ ಅತ್ಯಂತ ಬಡದೇಶಗಳ ಸಮೂಹವಾದ ಆಫ್ರಿಕವನ್ನು ಪ್ರಗತಿಯಲ್ಲಿ ಪಾಲುದಾರ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇದರಿಂದ ಉಭಯತ್ರರಿಗೂ ಅನುಕೂಲವಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿಅವರು ಆಫ್ರಿಕದ ದೇಶಗಳಿಗೆ ಭಾರತ ಮುಂದಿನ ಐದು ವರ್ಷಗಳಲ್ಲಿ ₹ 3,900 ಕೋಟಿ ಅನುದಾನ ಮತ್ತು ರಿಯಾಯ್ತಿ ಬಡ್ಡಿ ದರದಲ್ಲಿ ₹ 65 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಪ್ರಕಟಣೆ ಮಾಡಿದ್ದಾರೆ. ನಮಗಿಂತ ಮೊದಲೇ ಚೀನಾ ಅಲ್ಲಿ ತನ್ನ ವ್ಯಾಪಾರ ವ್ಯವಹಾರ ಮತ್ತು ಪ್ರಭಾವವನ್ನು ವಿಸ್ತರಿಸಿಕೊಂಡಿರುವಾಗ ನಾವು ಅದಕ್ಕಿಂತಲೂ ಹಿಂದೆ ಬೀಳುವುದು ಸರಿಯಲ್ಲ. ನಮ್ಮದೇನೂ ಧನದಾಹಿ ಅಥವಾ ಯುದ್ಧದಾಹಿ ದೇಶವಲ್ಲ. ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಎಂಬ ಧ್ಯೇಯವನ್ನು ಅನುಸರಿಸಿಕೊಂಡು ಬಂದ ದೇಶ. ಅದನ್ನು ಆಫ್ರಿಕದ ದೇಶಗಳಿಗೆ ಮನದಟ್ಟು ಮಾಡಿಕೊಡಲು ಸಿಕ್ಕ ಅವಕಾಶ ಮತ್ತು ಶೃಂಗಸಭೆಯ ಯಶಸ್ಸನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ವ್ಯಾಪಾರ ವಹಿವಾಟಿನಲ್ಲಿ ಅಸಮತೋಲನದ ಬಗ್ಗೆ ಅಲ್ಲಿನ ಅನೇಕ ದೇಶಗಳಿಗೆ ಅಸಮಾಧಾನವಿದೆ. ಉಗಾಂಡ ಭಾರತದಿಂದ ಪ್ರತಿ ವರ್ಷ ₹ 10,400 ಕೋಟಿ ಮೌಲ್ಯದ ಉತ್ಪನ್ನ ಆಮದು ಮಾಡಿಕೊಳ್ಳುತ್ತಿದೆ. ಆದರೆ ಆ ದೇಶದಿಂದ ಭಾರತಕ್ಕೆ ಬರುವ ಸರಕುಗಳ ಮೌಲ್ಯ ಬರೀ ₹ 104 ಕೋಟಿ. ತಮ್ಮ ದೇಶದ ಸರಕುಗಳಿಗೆ ಭಾರತ ನಿರ್ಬಂಧ ಹೇರಿದೆ ಎಂದು ಉಗಾಂಡದ ಅಧ್ಯಕ್ಷರು ಶೃಂಗಸಭೆಯಲ್ಲಿ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಸಣ್ಣಪುಟ್ಟ ಅಡಚಣೆಗಳನ್ನು ಸರಿಪಡಿಸುವ ಪ್ರಯತ್ನ ನಮ್ಮಿಂದ ನಡೆಯಬೇಕು. ನಮ್ಮ ಔಷಧ ಕ್ಷೇತ್ರಕ್ಕೆ ಆಫ್ರಿಕ ಅತಿದೊಡ್ಡ ಮಾರುಕಟ್ಟೆ. ಉಳಿದ ದೇಶಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ನಾವು ಆಫ್ರಿಕದ ಜನರಿಗೆ ಔಷಧಗಳನ್ನು ಪೂರೈಸುತ್ತಿದ್ದೇವೆ. ಆಫ್ರಿಕದ ಅನೇಕ ದೇಶಗಳಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ವಿಶ್ವಸಂಸ್ಥೆ ಪ್ರಾಯೋಜಕತ್ವದ ಶಾಂತಿಪಾಲನಾ ಪಡೆಗಳಲ್ಲಿ ಭಾರತದ ಸೇನಾ ಮತ್ತು ಪೊಲೀಸ್‌ ಸಿಬ್ಬಂದಿಯೂ ಇದ್ದಾರೆ. ಈಗ ಪ್ರಧಾನಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಫ್ರಿಕದ ದೇಶಗಳ ಶಾಂತಿಪಾಲನಾ ಸಿಬ್ಬಂದಿಗೆ ಭಾರತ ಮತ್ತು ಆಯಾ ದೇಶಗಳಲ್ಲಿ ತರಬೇತಿ ನೀಡಲು ಸಿದ್ಧ ಎಂಬ ವಾಗ್ದಾನ ಮಾಡಿದ್ದಾರೆ. ಇವೆಲ್ಲ ಕ್ರಮಗಳು ಬಾಂಧವ್ಯ ಗಟ್ಟಿಗೊಳಿಸುವ ಹಾದಿಯಲ್ಲಿ ಒಳ್ಳೆಯ ಫಲಿತಾಂಶ ನೀಡಲಿವೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.