ಎಚ್ಚರಿಕೆಯ ಮಾತಿಗೆ ಕಿವಿಗೊಡುವುದು ವಿಹಿತ ರಾಷ್ಟ್ರದಲ್ಲಿರುವ ಸದ್ಯದ ವಾತಾವರಣ ಹಣಹೂಡಿಕೆಗೆ ಪೂರಕವಾಗಿಲ್ಲ ಎಂಬಂತಹ ಮಾತನ್ನು ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಮೂಡೀಸ್ ಹೇಳಿದೆ. ಈ ಮಾತುಗಳು, ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬಲವಾದ ಎಚ್ಚರಿಕೆಯಾಗಬೇಕು. ಸಾಮಾಜಿಕವಾಗಿ ಸೃಷ್ಟಿಸಲಾಗುತ್ತಿರುವ ಕಂದರ ಹಾಗೂ ರಾಜಕೀಯ ವಿದ್ವೇಷದ ವಾತಾವರಣ, ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ಪ್ರತಿಷ್ಠೆಗೆ ಕುಂದುಂಟು ಮಾಡುವಂತಹದ್ದು ಎಂದು ಮೂಡೀಸ್ ಸಂಸ್ಥೆಯ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ. ಆರ್ಥಿಕ ಬೆಳವಣಿಗೆಗೆ ಮಾರಕವಾಗುವಂತಹ ವಾತಾವರಣವನ್ನು ರಾಷ್ಟ್ರದಲ್ಲಿ ಸೃಷ್ಟಿಸುತ್ತಿರುವ ಶಕ್ತಿಗಳ ನಿಯಂತ್ರಣದಲ್ಲಿ ಸರ್ಕಾರದ ಅಸಾಮರ್ಥ್ಯವನ್ನೂ ಈ ವರದಿ ಎತ್ತಿ ಹೇಳಿದೆ. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ವೃತ್ತಿಪರ ಸಂಸ್ಥೆಯೊಂದು ಇಂತಹದೊಂದು ಅಭಿಪ್ರಾಯವನ್ನು ನೀಡಿದೆ ಎಂಬುದು ಮುಖ್ಯ. ಇತ್ತೀಚಿನ ದಿನಗಳಲ್ಲಿ, ವಿಭಿನ್ನ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳು ಇಂತಹದೇ ವಿಚಾರಗಳನ್ನು ಹೇಳುತ್ತಲೇ ಬಂದಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಂತೂ ಬಹುತ್ವ ಹಾಗೂ ಸಹಿಷ್ಣುತೆಯನ್ನು ಎತ್ತಿ ಹಿಡಿಯಬೇಕಾದ ಅಗತ್ಯವನ್ನು ಕುರಿತು ಹಲವು ಬಾರಿ ಮಾತನಾಡಿದ್ದಾರೆ. ಹಾಗೆಯೇ ಅಭಿವೃದ್ಧಿ ಸಾಧಿಸಲು ಸಹಿಷ್ಣುತೆ ಹಾಗೂ ಶಾಂತಿ ಮೂಲ ಅಗತ್ಯ ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಒತ್ತಿ ಹೇಳಿದ್ದಾರೆ. ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಉಂಟಾಗಬಾರದು ಎಂಬುದನ್ನು ನಾರಾಯಣ ಮೂರ್ತಿ ಅವರ ಮಾತು ಧ್ವನಿಸುತ್ತದೆ. ‘ನಾನಿಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಪ್ರತಿ ಭಾರತೀಯನ ಮನಸ್ಸಿನಲ್ಲಿ ವಿಶ್ವಾಸ ಮೂಡಿಸುವುದು ಸರ್ಕಾರದ ಕೆಲಸ’ ಎಂದು ಅವರು ಸರ್ಕಾರಕ್ಕೆ ನೆನಪಿಸಿದ್ದಾರೆ. ವಾಗ್ವಾದ ಹಾಗೂ ಪರ್ಯಾಯ ದೃಷ್ಟಿಕೋನಗಳಿಗೆ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ಗರಿಷ್ಠ ಅವಕಾಶ ಇರಬೇಕು ಎಂಬಂಥ ರಾಜನ್ ಅವರ ಮಾತುಗಳನ್ನು ಲಘುವಾಗಿ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಸರ್ಕಾರದ ಮೌನ ಹಾಗೂ ನಿಷ್ಕ್ರಿಯತೆ ವಿರುದ್ಧ ಲೇಖಕರು, ಕಲಾವಿದರು ಹಾಗೂ ವಿಜ್ಞಾನಿಗಳನ್ನು ಒಳಗೊಂಡಂತೆ ಬೌದ್ಧಿಕ ವರ್ಗದ ಪ್ರತಿಭಟನೆಯೂ ಮುಂದುವರಿದಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಮಾಜದಲ್ಲಿ ವ್ಯಕ್ತವಾಗುತ್ತಿರುವ ತಳಮಳ, ಭೀತಿ, ಅಭದ್ರತೆ ಹಾಗೂ ಸಂಘರ್ಷಮಯ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಹಣಹೂಡಿಕೆದಾರರ ವಿಶ್ವಾಸ ಕುದುರುವುದು ಸಾಧ್ಯವಿಲ್ಲ. ಹಣಹೂಡಿಕೆ ಹರಿದು ಬರಲು ಈ ವಾತಾವರಣ ಅಡ್ಡಿಯಾಗಲಿದೆ. ವಿದೇಶಿ ಹೂಡಿಕೆದಾರರು ಮಾತ್ರವಲ್ಲ, ದೇಶಿ ಹೂಡಿಕೆದಾರರಲ್ಲೂ ಹಿಂಜರಿಕೆಗೆ ಕಾರಣವಾಗಲಿದೆ ಎಂಬಂತಹ ಮೂಡೀಸ್ ಸಂಸ್ಥೆಯ ಮಾತುಗಳನ್ನು ಸರಿಯಾದ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಅಗತ್ಯ. ತೀವ್ರವಾಗುತ್ತಿರುವ ರಾಜಕೀಯ ವಿದ್ವೇಷದ ವಾತಾವರಣದ ನಕಾರಾತ್ಮಕ ಪರಿಣಾಮಗಳನ್ನು ಗ್ರಹಿಸಬೇಕು. ಏಕೆಂದರೆ, ಇದರಿಂದ ಆರ್ಥಿಕ ಸುಧಾರಣೆ ನೀತಿಗಳ ಅನುಷ್ಠಾನಕ್ಕೆ ಅಗತ್ಯವಾದ ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಕಷ್ಟವಾಗಲಿದೆ. ಭೂಸ್ವಾಧೀನ ಕಾನೂನು ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗಳ ವಿಚಾರದಲ್ಲಿ ಈಗಾಗಲೇ ಸರ್ಕಾರಕ್ಕೆ ಬಿಸಿ ತಾಗಿದೆ. ರಾಷ್ಟ್ರದಲ್ಲಿ ಆರ್ಥಿಕ ಸ್ಥಿತಿಗತಿ ಅತ್ಯುತ್ತಮ ರೀತಿಯಲ್ಲೇನೂ ಇಲ್ಲ. ರಾಷ್ಟ್ರದ ಅನೇಕ ಭಾಗಗಳಲ್ಲಿ ಕೃಷಿ ಕ್ಷೇತ್ರ ಸಂಕಷ್ಟ ಎದುರಿಸುತ್ತಿದೆ. ದಿನನಿತ್ಯದ ಅಗತ್ಯ ಆಹಾರ ಧಾನ್ಯಗಳ ಬೆಲೆ ಏರುಗತಿಯಲ್ಲೇ ಇದೆ. ಈ ಮಧ್ಯೆ, ಆರ್ಥಿಕ ವೃದ್ಧಿ ದರದ ಅಂದಾಜನ್ನೂ ತಗ್ಗಿಸಲಾಗಿದೆ. ಈ ಸಂದೇಶವನ್ನು ಸರ್ಕಾರವಾಗಲಿ, ಬಿಜೆಪಿ ನಾಯಕರಾಗಲಿ ಗ್ರಹಿಸದಿರುವುದು ದುರದೃಷ್ಟಕರ. ಪ್ರತಿರೋಧಗಳ ಹಿಂದೆ ಯಾರದೋ ಕೈವಾಡ, ಬೇರೇನೊ ಉದ್ದೇಶ ಇದೆ ಎಂದು ಹೇಳಿ ಜಾರಿಕೊಳ್ಳಲಾಗದು. ಪ್ರತಿರೋಧಿಸುವವರನ್ನು ರಾಷ್ಟ್ರಭಕ್ತಿ ಇಲ್ಲದವರೆಂದು ಸಮೀಕರಿಸುವುದೂ ಅಸಂಗತ. ವಾಸ್ತವವಾಗಿ, ಅಭಿವೃದ್ಧಿ ಕಾರ್ಯಸೂಚಿಯ ಭರವಸೆಯೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿತು. ಆದರೆ ಅಭಿವೃದ್ಧಿಯ ಕುರಿತಾದ ವಾಗ್ವಾದಗಳಿಗಿಂತ ಸಮಾಜವನ್ನು ಧ್ರುವೀಕರಿಸುವಂತಹ ವಾಗ್ವಾದಗಳು ಮೇಲುಗೈ ಪಡೆಯು ತ್ತಿರುವುದು ದುರದೃಷ್ಟಕರ. ಈ ಸ್ಥಿತ್ಯಂತರವನ್ನು ಸರ್ಕಾರ ನಿರ್ಲಕ್ಷಿಸುವುದು ಸಲ್ಲದು. ವಿವಿಧೆಡೆಯಿಂದ ಹೊಮ್ಮುತ್ತಿರುವ ಎಚ್ಚರಿಕೆಯ ಮಾತುಗಳನ್ನು ಕಡೆಗಣಿಸುತ್ತಲೇ ಹೋಗುವುದು ಸರಿಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.