ನೇಪಾಳದ ಬಿಕ್ಕಟ್ಟು ಶಮನಕ್ಕೆ ಚರ್ಚೆಗಳು ನಡೆಯಲಿ ನಮ್ಮ ನೆರೆಯ ನೇಪಾಳ ಈಗ ಅಗ್ನಿಕುಂಡವಾಗಿದೆ. ಎರಡು ತಿಂಗಳ ಹಿಂದೆ ಹೊಸ ಸಂವಿಧಾನ ಅಳವಡಿಸಿಕೊಂಡ ನಂತರ ಭಾರತ ಮೂಲದ ನೇಪಾಳಿ ಪ್ರಜೆಗಳಾದ ಮಾಧೇಶಿಗಳು ಆರಂಭಿಸಿದ ಪ್ರತಿಭಟನೆ ದಿನೇದಿನೇ ಕೈಮೀರಿ ಹೋಗುತ್ತಿದೆ. ಇದುವರೆಗೆ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಹೊಸ ಸಂವಿಧಾನದಿಂದ ಶಾಂತಿ, ನೆಮ್ಮದಿ ನೆಲೆಸಲಿದೆ ಎಂಬ ಆಸೆ ಹುಸಿಯಾಗಿದೆ. ಹಿಂಸಾಚಾರ, ಪ್ರತಿಭಟನೆ, ದಿಗ್ಬಂಧನ, ಪೊಲೀಸ್ ಗೋಲಿಬಾರ್‌ನಂಥ ಘಟನೆಗಳು ನಿತ್ಯದ ಮಾತಾಗಿವೆ. ದಿನ ಬಳಕೆ ವಸ್ತುಗಳ ಅಭಾವದಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಏಕೆಂದರೆ ಸುತ್ತಲೂ ದುರ್ಗಮ ಹಿಮಾಲಯದಿಂದ ಆವೃತವಾಗಿರುವ ಆ ಪುಟ್ಟ ದೇಶ ಆಹಾರ, ಬಟ್ಟೆ, ಇಂಧನದಿಂದ ಹಿಡಿದು ಎಲ್ಲ ಬಗೆಯ ಜೀವನಾವಶ್ಯಕ ವಸ್ತುಗಳಿಗೆ ಭಾರತವನ್ನೇ ಅವಲಂಬಿಸಿದೆ. ಆದರೆ ಸರಕು ಹೊತ್ತ ಭಾರತ ಮತ್ತು ನೇಪಾಳದ ಲಾರಿಗಳು ತಮ್ಮ ದೇಶದೊಳಗೆ ಪ್ರವೇಶಿಸದಂತೆ ಮಾಧೇಶಿಗಳು ತಡೆ ಒಡ್ಡಿದ್ದಾರೆ. ಇದರ ಮಧ್ಯೆ, ಭಾರತದ ಗಡಿಗೆ ಹೊಂದಿಕೊಂಡ ಬೀರ್‌ಗಂಜ್‌ನಲ್ಲಿ ಮೂರು ದಿನಗಳ ಹಿಂದೆ ಮಾಧೇಶಿ ಪ್ರತಿಭಟನಾಕಾರರ ಮೇಲೆ ನೇಪಾಳ ಪೊಲೀಸರು ಗೋಲಿಬಾರ್ ಮಾಡಿದಾಗ ಭಾರತೀಯ ಯುವಕನೊಬ್ಬ ಮೃತಪಟ್ಟಿದ್ದ. ಇದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈಗ ಅಲ್ಲಿ ರಾಜಕೀಯ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಭಾರತದ ಆತಂಕವನ್ನೇ ‘ತನ್ನ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ’ ಎಂದು ನೇಪಾಳ ಸರ್ಕಾರ ಭಾವಿಸುತ್ತಿದೆ. ಗಡಿಯಲ್ಲಿ ತನ್ನದೇ ಪ್ರಜೆಗಳು ಭಾರತದಿಂದ ಬರುವ ಅಗತ್ಯ ವಸ್ತು ಸಾಗಣೆ ಲಾರಿಗಳನ್ನು ತಡೆಯುತ್ತಿದ್ದರೆ ಅದಕ್ಕೂ ಭಾರತವನ್ನೇ ದೂರುತ್ತಿದೆ. ಸಾದಾ ಉಡುಪಿನಲ್ಲಿ ಸೈನಿಕರನ್ನು ಕಳಿಸಲು ಭಾರತ ಹುನ್ನಾರ ನಡೆಸಿದೆ ಎಂಬ ಹೊಸ ಆರೋಪ ಮಾಡಿದೆ. ನೇಪಾಳದ ಅಧಿಕಾರಾರೂಢ ರಾಜಕಾರಣಿಗಳು ತಮ್ಮ ಅಸಾಮರ್ಥ್ಯ ಮುಚ್ಚಿಕೊಳ್ಳಲು ಭಾರತದ ವಿರುದ್ಧ ತಮ್ಮ ಕೋಪತಾಪ ಪ್ರದರ್ಶಿಸುತ್ತಿದ್ದಾರೆ. ಇದು ನಿಜವಾಗಿಯೂ ದುರದೃಷ್ಟಕರ ವಿದ್ಯಮಾನ. ಸಂವಿಧಾನದ ಪೀಠಿಕೆಯಲ್ಲಿ ಸಾರ್ವಭೌಮ ಸ್ವತಂತ್ರ ಗಣರಾಜ್ಯ ಎಂದು ಹೇಳಿದ್ದರೂ ಜನಾಂಗೀಯ ಭಿನ್ನತೆಗಳನ್ನು ಆಧರಿಸಿ ಏಳು ವಲಯಗಳನ್ನು ಸೃಷ್ಟಿಸಲಾಗಿದೆ. ಇದು ತಮ್ಮ ಹಕ್ಕನ್ನು ಮೊಟಕು ಮಾಡುತ್ತದೆ ಎನ್ನುವುದು ಮಾಧೇಶಿಗಳ ಕೋಪಕ್ಕೆ ಮುಖ್ಯ ಕಾರಣ. ಅವರೊಡನೆ ಮಾತುಕತೆಗೆ ಮುಂದಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ನೇಪಾಳದ ಹೊಸ ಪ್ರಧಾನಿ ಪ್ರದರ್ಶಿಸಬೇಕು. ಅದನ್ನು ಬಿಟ್ಟು ಭಾರತವನ್ನು ನಿಂದಿಸುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಗಡಿ ಮಾತ್ರವಲ್ಲದೆ ಭಾವನಾತ್ಮಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ನಮಗೆ ನೇಪಾಳ ಹೆಚ್ಚು ಹತ್ತಿರದ ದೇಶ. ಲಕ್ಷಾಂತರ ನೇಪಾಳಿಗಳು ನಮ್ಮಲ್ಲಿ ಬದುಕು ಕಂಡುಕೊಂಡಿದ್ದಾರೆ. ನಮ್ಮ ಸೇನೆಯಲ್ಲೂ ನೇಪಾಳಿ ಯೋಧರು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಲೇ ಬಂದಿದ್ದಾರೆ. ಎರಡೂ ದೇಶಗಳ ಬಾಂಧವ್ಯ, ವಿಶ್ವಾಸ ಇಂದು ನಿನ್ನೆಯದಲ್ಲ; ಅದಕ್ಕೊಂದು ದೀರ್ಘ ಇತಿಹಾಸವೇ ಇದೆ. ಆದರೆ ಈಗ ದೇಶದೊಳಗಿನ ಅಭಾವಕ್ಕೆ ಭಾರತವನ್ನೇ ಹೊಣೆ ಮಾಡಲಾಗುತ್ತಿದೆ. ಚೀನದ ಜತೆ ದಶಕದ ಹಿಂದೆ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟಿಗೆ ಜೀವ ಕೊಡಲಾಗಿದೆ. ಸನ್ನಿವೇಶ ಇಷ್ಟೊಂದು ನಾಜೂಕಾಗಿರುವಾಗ ಭಾರತವೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅಧಿಕಾರಕ್ಕೆ ಬಂದ ದಿನದಿಂದಲೂ ನೆರೆ ದೇಶಗಳೊಂದಿಗೆ ಸಂಬಂಧ ಸುಧಾರಣೆಗೆ ಶ್ರಮಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈಗೇಕೋ ನೇಪಾಳದ ಬಗ್ಗೆ ಅಗತ್ಯದಷ್ಟು ಗಮನ, ಕಾಳಜಿ ವಹಿಸುತ್ತಿಲ್ಲವೇನೋ ಎಂಬ ಭಾವನೆ ಅನೇಕ ಭಾರತೀಯರಲ್ಲೂ ಮೂಡತೊಡಗಿದೆ. ನೇಪಾಳವನ್ನು ನಿರ್ಲಕ್ಷಿಸಿದರೆ ಅದರ ಮೇಲೆ ಪ್ರಭಾವ ವಿಸ್ತರಿಸಿಕೊಳ್ಳಲು ಚೀನಾಕ್ಕೆ ಸುಲಭವಾಗಿ ಅವಕಾಶ ಕೊಟ್ಟಂತಾಗುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಆದ್ದರಿಂದ ಅಲ್ಲಿನ ಬಿಕ್ಕಟ್ಟು ಶಮನಕ್ಕೆ ನಮ್ಮ ಕಾಣಿಕೆಯೂ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.