ಕುಸಿದ ರಾಜಕೀಯ ವಾಗ್ವಾದ ಗುಣಮಟ್ಟ ದೇಶದಾದ್ಯಂತ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ, ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮುಗಿದಿದೆ. ಆದರೆ, ಐದು ಹಂತಗಳ ಮತದಾನದುದ್ದಕ್ಕೂ ಕೀಳುಮಟ್ಟದ ರಾಜಕಾರಣ ಅನಾವರಣಗೊಂಡಿತು. ಗುರುವಾರ ಜರುಗಿದ ಸೀಮಾಂಚಲ ಹಾಗೂ ಮಿಥಿಲಾದ 57 ಕ್ಷೇತ್ರಗಳ ಕೊನೆಯ ಹಂತದ ಮತದಾನದಲ್ಲಿ ಕೆಲವು ಪಕ್ಷಗಳು ಗೋರಕ್ಷಣೆ ವಿಷಯವನ್ನು ಭಾವನಾತ್ಮಕಗೊಳಿಸಲು ಪ್ರಯತ್ನಿಸಿದವು. ಗೋಮಾಂಸ ಭಕ್ಷಣೆಯನ್ನು ವಿರೋಧಿಸುವ ನೆಪದಲ್ಲಿ ಕೋಮು ಸೂಕ್ಷ್ಮ ಪ್ರದೇಶವಾದ ಸೀಮಾಂಚಲದಲ್ಲಿ ಮತದಾರರನ್ನು ಧ್ರುವೀಕರಿಸಲು ಕೆಲವು ಪಕ್ಷಗಳು ಶಕ್ತಿಮೀರಿ ಯತ್ನಿಸಿವೆ. ಸೀಮಾಂಚಲದಲ್ಲಿ ಶೇ 70ರಷ್ಟು ಮುಸ್ಲಿಮರಿದ್ದಾರೆ. ಧರ್ಮದ ಹೆಸರಲ್ಲಿ ಮತದಾರರನ್ನು ಧ್ರುವೀಕರಿಸಲಾಗುತ್ತಿದೆ ಎಂದು ಜೆಡಿಯು, ಕಾಂಗ್ರೆಸ್‌ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು ಸಂವಿಧಾನದ 324ನೇ ಕಲಮಿನಡಿ ತನಗಿರುವ ಅಧಿಕಾರ ಬಳಸಿ, ಪತ್ರಿಕೆಗಳಲ್ಲಿ ಪ್ರಕಟಿಸುವ ಜಾಹೀರಾತುಗಳ ಮೇಲೆ ಹಿಂದೆಂದೂ ಕಂಡರಿಯದ ನಿರ್ಬಂಧ ಹೇರಿತು. ತನ್ನ ಅನುಮೋದನೆ ಪಡೆಯದ ಯಾವುದೇ ಜಾಹೀರಾತನ್ನು ಪ್ರಕಟಿಸದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ಚುನಾವಣಾ ಆಯೋಗದ ಕ್ರಮ ಸ್ವಾಗತಾರ್ಹ. ಹಿಂದೆಯೇ ಈ ಕೆಲಸ ಆಗಬೇಕಿತ್ತು. ತಡವಾಗಿಯಾದರೂ ನಿರ್ಬಂಧ ಹೇರಿದ್ದು ಸಮಾಧಾನದ ಸಂಗತಿ. ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಸಾಮರಸ್ಯ ಕದಡುವಂಥ ರಾಜಕೀಯ ಪಕ್ಷಗಳ ಪ್ರಯತ್ನಗಳಿಗೆ ಅಂಕುಶ ಹಾಕುವುದು ಅನಿವಾರ್ಯ. ಎನ್‌ಡಿಎ ಹಾಗೂ ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ಬಿಹಾರ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆ ವಿಷಯವಾಗಿ ಮಾಡಿಕೊಂಡಿವೆ. ಈ ಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದರೆ, 2019ರ ಲೋಕಸಭೆ ಚುನಾವಣೆಗೆ ಹೊಸದೊಂದು ತಿರುವು ಸಿಗುವ ಸಾಧ್ಯತೆಯಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದೆಂದು ರಾಜಕೀಯ ವಲಯದಲ್ಲಿ ನಿರೀಕ್ಷಿಸಲಾಗಿದೆ. ಈ ಕಾರಣಕ್ಕೆ ಎನ್‌ಡಿಎ, ವಿಧಾನಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ನಿತೀಶ್‌ ಅವರನ್ನು ಸೋಲಿಸಲು ಹರಸಾಹಸ ಮಾಡಿದೆ. ಪರಿಣಾಮವಾಗಿ ಬಿಹಾರ ಚುನಾವಣೆ ಬರೀ ವಿವಾದಗಳ ಸುತ್ತಲೇ ಗಿರಕಿ ಹೊಡೆದಿದೆ. ನಿಜಕ್ಕೂ ಇದು ವಿಪರ್ಯಾಸ. ವಿಷಯಾಧಾರಿತವಾಗಬೇಕಿದ್ದ ಚುನಾವಣೆ ಅಡ್ಡದಾರಿ ಹಿಡಿದದ್ದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆ ಆರೋಗ್ಯವಾಗಿರಬೇಕೆ ವಿನಾ ವೈಯಕ್ತಿಕ ಟೀಕೆ– ನಿಂದನೆಗಳ ಮಟ್ಟಕ್ಕೆ ಇಳಿಯಬಾರದು. ಚುನಾವಣೆ ಪ್ರಕ್ರಿಯೆ ಆರಂಭಕ್ಕೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು, ‘ನಿತೀಶ್‌ ಕುಮಾರ್‌ ಅವರ ಡಿಎನ್‌ಎಯಲ್ಲಿ ದೋಷ ಇದೆ’ ಎಂದು ಟೀಕಿಸುವ ಮೂಲಕ ವಿವಾದಕ್ಕೆ ಮುನ್ನುಡಿ ಬರೆದರು. ಇದರ ಹಿಂದೆಯೇ ‘ಮೀಸಲು ನೀತಿ ಪುನರ್‌ ಪರಿಶೀಲನೆ ಅಗತ್ಯ’ ಎಂಬ ಹೇಳಿಕೆಯನ್ನು ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ನೀಡಿದರು. ಆನಂತರ ಪ್ರಧಾನಿ ಬಹಿರಂಗ ಸಭೆಯೊಂದರಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ವಿಚಾರಕ್ಕೆ ಸಂಬಂಧಿಸಿದಂತೆ ಸೈತಾನ್‌ ಎಂಬ ಪದ ಪ್ರಯೋಗಿಸಿದರು. ಲಾಲು ಅವರೂ ಅಷ್ಟೇ ಕಟುವಾದ ಭಾಷೆ ಬಳಕೆ ಮಾಡಿದರು. ‘ಹಿಂದೂಗಳು ಗೋಮಾಂಸ ತಿನ್ನುವುದಿಲ್ಲವೇ’ ಎಂದು ಲಾಲು ಕೇಳಿದ್ದನ್ನೇ ವಿವಾದವಾಗಿಸಲಾಯಿತು. ರಾಜಕೀಯ ನೇತಾರರು ತಮ್ಮ ಸ್ಥಾನದ ಘನತೆ– ಗೌರವ ಮರೆತು ಲಘುವಾಗಿ ಮಾತನಾಡಿದರು. ವೈಯಕ್ತಿಕವಾದ ಟೀಕೆಗಳನ್ನು ಮಾಡುವ ಮೂಲಕ ರಾಜಕೀಯ ಪರಿಭಾಷೆ ಮತ್ತು ವಾತಾವರಣವನ್ನು ವಿಷಮಯಗೊಳಿಸಿದರು. ಚುನಾವಣೆಯಲ್ಲಿ ಸೋಲು– ಗೆಲುವು ಸಹಜ. ಅದನ್ನು ಸಮಾನವಾಗಿ ಸ್ವೀಕರಿಸುವ ಗುಣಧರ್ಮವನ್ನು ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಬೆಳೆಸಿಕೊಳ್ಳಬೇಕು. ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ. ಎರಡೂ ಮೈತ್ರಿ ಕೂಟಗಳಲ್ಲಿ ಯಾರು ಗೆದ್ದರೂ ಬಿಹಾರದ ಅಭಿವೃದ್ಧಿ ಕಡೆ ಗಮನಹರಿಸಬೇಕು. ಹೊಟ್ಟೆಪಾಡಿಗೆ ಉದ್ಯೋಗ ಹುಡುಕುತ್ತಾ ಬೇರೆ ಬೇರೆ ರಾಜ್ಯಗಳಿಗೆ ಬಿಹಾರದ ಜನ ವಲಸೆ ಹೋಗುವ ಸ್ಥಿತಿ ತಪ್ಪಬೇಕು. ಉದ್ಯೋಗ ಅವಕಾಶಗಳ ಸೃಷ್ಟಿ ಆದ್ಯತೆಯಾಗಬೇಕು. ಹಿಂದುಳಿದ ರಾಜ್ಯ ಎಂಬ ಹಣೆಪಟ್ಟಿ ಕಳಚುವ ಕೆಲಸವನ್ನು ಮುಂದೆ ಚುಕ್ಕಾಣಿ ಹಿಡಿಯಲಿರುವ ಸರ್ಕಾರ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.