ಕಸದ ರಾಜಕೀಯ ಮಟ್ಟಹಾಕಿ ಸಂಸ್ಕರಣೆಯತ್ತ ಚಿತ್ತಹರಿಸಿ ನಾಗರಿಕ ಸಮಾಜವನ್ನು ಕಾಡುತ್ತಿರುವ ಸಮಸ್ಯೆಯೊಟ್ಟಿಗೆ ರಾಜಕೀಯವೂ ಬೆರೆತುಬಿಟ್ಟರೆ ಅದೆಂತಹ ಕಗ್ಗಂಟಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ಮತ್ತೆ ಎದುರಾಗಿರುವ ತ್ಯಾಜ್ಯ ವಿಲೇವಾರಿ ಸವಾಲು ಒಂದು ಜ್ವಲಂತ ಉದಾಹರಣೆ. ಸಮಸ್ಯೆಯನ್ನು ಬಗೆಹರಿಸಲು ಬಿಡದಿರುವ ಕೊಳಕು ಮನಸ್ಸಿನ ರಾಜಕಾರಣಕ್ಕೆ ಬೀದಿ ಬೀದಿಗಳಲ್ಲಿ ಕೊಳೆತು ನಾರುತ್ತಿರುವ ರಾಶಿ, ರಾಶಿ ಕಸವೇ ಸಾಕ್ಷ್ಯ ಹೇಳುತ್ತಿದೆ. ರಾಜ್ಯ ಸಂಪುಟದಲ್ಲಿ ಆಗಿರುವ ಬದಲಾವಣೆಗೂ ಮತ್ತೆ ಭುಗಿಲೆದ್ದ ಸಮಸ್ಯೆಗೂ ಸಂಬಂಧ ಇದೆ; ಕಸದ ಮಾಫಿಯಾ ಮೇಲೆ ಪ್ರಭಾವಿ ಶಾಸಕರ ಹಿಡಿತ ಜೋರಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದು ನಿಜವೇ ಆಗಿದ್ದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅಂಥವರು ಜನಪ್ರತಿನಿಧಿಗಳಾಗಲು ಅಯೋಗ್ಯರು ಎಂದೇ ಹೇಳಬೇಕಾಗುತ್ತದೆ. ರಾಜಧಾನಿಯ ಅಭಿವೃದ್ಧಿಗೆ ವೇಗ ನೀಡಬೇಕು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿ ಅವರೇನೋ ಪ್ರತ್ಯೇಕ ಖಾತೆಯನ್ನು ಸೃಜಿಸಿದ್ದಾರೆ. ಅದಕ್ಕೆ ಕೊಳಕು ರಾಜಕೀಯ ತೊಡರುಗಾಲು ಹಾಕುತ್ತಿರುವಂತೆ ತೋರುತ್ತಿದೆ. ಸ್ವಂತ ಬೇಳೆ ಬೇಯಿಸಿಕೊಳ್ಳಲು ಕಸದ ಸಮಸ್ಯೆಗೆ ಬೆಂಕಿ ಹಾಕುವವರನ್ನು ಕರೆದು ಕಿವಿಹಿಂಡುವಂತಹ ಕೆಲಸವನ್ನು ಮುಖ್ಯಮಂತ್ರಿಯವರು ಮಾಡಬೇಕಿದೆ. ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ತ್ಯಾಜ್ಯದ ಸಮಸ್ಯೆ ವಿರುದ್ಧ ಬೊಬ್ಬೆ ಹಾಕುತ್ತಿರುವವರು ಹಿಂದೆ ಆಡಳಿತ ನಡೆಸುತ್ತಿದ್ದಾಗ ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಅಧಿಕಾರಸ್ಥರಲ್ಲಿ ಸ್ವಹಿತಾಸಕ್ತಿ ಪ್ರಶ್ನೆ ಬಂದಾಗ ಪಕ್ಷ-ಸಿದ್ಧಾಂತಗಳ ಚೌಕಟ್ಟು ಅಳಿಸಿಹೋಗಿ, ಜನಪರ ಕಾಳಜಿಯೂ ಕಣ್ಮರೆಯಾಗಿ ಅವರೆಲ್ಲ ಒಂದಾಗುವುದನ್ನು ಗುರುತಿಸಲಾಗದಷ್ಟು ಜನರೇನೂ ದಡ್ಡರಲ್ಲ. ನಗರದ ಸಮಸ್ಯೆಗಳಿಗೆ ಸ್ಪಂದಿಸುವ ಹೊಣೆ ಹೊತ್ತಿರುವ ಬಿಬಿಎಂಪಿಯಲ್ಲಿ ಯಾವುದೇ ಕಪಾಟು ತೆರೆದರೂ ಕಸದ ಹಗರಣಗಳ ಅಸ್ಥಿಪಂಜರಗಳೇ ಹೊರಬೀಳುತ್ತವೆ ಎಂಬುದು ಬರಿ ವ್ಯಂಗ್ಯದ ಮಾತು ಆಗಿರಲಿಕ್ಕಿಲ್ಲ. ಕೌನ್ಸಿಲ್ ಸಭೆಗಳಲ್ಲಿ ಅಧಿಕಾರಿಗಳ ವರ್ಗಾವಣೆ, ಅನುದಾನ ಬಿಡುಗಡೆ ಕುರಿತು ಚರ್ಚೆ ಆಗುತ್ತದೆಯೇ ಹೊರತು ತ್ಯಾಜ್ಯ ಅಲ್ಲಿಯೂ ಬೇಡವಾದ ವಸ್ತುವಾಗಿದೆ. ಉದ್ಯಾನಗಳ ತಾಣವಾಗಿದ್ದ, ಪರಿಶುದ್ಧ ನೀರಿನ ಕೆರೆಗಳಿಂದ ತುಂಬಿ ತುಳುಕುತ್ತಿದ್ದ ‘ಸ್ವರ್ಗ’ವೀಗ ಕಸದ ಪಾತಾಳದೊಳಗೆ ಬಿದ್ದಿದೆ. ಬ್ರ್ಯಾಂಡ್ ಬೆಂಗಳೂರು ಖ್ಯಾತಿಗೆ ಮಸಿ ಬಳಿಯಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಗಾರ್ಬೇಜ್ ಸಿಟಿ’ ಎಂಬ ಕುಖ್ಯಾತಿ ಬಂದು ನಾಲ್ಕು ವರ್ಷಗಳಾದರೂ ಸಮಸ್ಯೆ ಬಗೆಹರಿಸಲು ಗಂಭೀರ ಯತ್ನಗಳು ನಡೆದಿಲ್ಲ. ‘ಹಣ ಮಾತ್ರ ಹೊರಟಿದೆ, ಕಸ ಹಾಗೇ ಉಳಿದಿದೆ’ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದರು. ಸತ್ಯ ಗೊತ್ತಾದ ಮೇಲಾದರೂ ಅವರೇನು ಮಾಡಿದರು? ಸೆರಗಿನ ಕೆಂಡ ಎಂಬುದು ಗೊತ್ತಿದ್ದರೂ ಲಾಗಾಯ್ತಿನಿಂದಲೂ ಭೂಭರ್ತಿ ಘಟಕಗಳ ಮೇಲೇ ಅವಲಂಬನೆ ಆಗುತ್ತಾ ಬಂದಿದ್ದರ ಫಲವನ್ನು ಈಗ ಉಣ್ಣಬೇಕಿದೆ. ರಾಜಧಾನಿಯ ಪಕ್ಕದಲ್ಲಿರುವ ತಪ್ಪಿಗೆ ಮಂಡೂರು, ಎಸ್.ಬಿಂಗೀಪುರ, ದೊಡ್ಡಮಂಕಲಾಳ ಮತ್ತಿತರ ಗ್ರಾಮಗಳೂ ಆ ಫಲದಲ್ಲಿ ಪಾಲು ಪಡೆದಿವೆ. ಅನುಮಾನವೇ ಇಲ್ಲ, ಕಸದ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವಂತಹ ಕೆಲಸವನ್ನು ಇದುವರೆಗಿನ ಯಾವ ಸರ್ಕಾರವೂ ಮಾಡಿಲ್ಲ. ಒಂದೆಡೆ ಭೂಭರ್ತಿ ಘಟಕಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಇನ್ನೊಂದೆಡೆ ಸುಮಾರು ₹ 600 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಲಾಗುತ್ತಿದೆ. ವಸ್ತುಸ್ಥಿತಿ ಹೀಗಿದ್ದಾಗ ಅಧಿಕಾರಿಗಳು ಕಸವನ್ನು ಎಲ್ಲಿ ಒಯ್ದು ಸುರಿಯಬೇಕು? ಮೂಲದಲ್ಲೇ ಕಸ ವಿಂಗಡಣೆ ಮಾಡದಿರುವುದು ತ್ಯಾಜ್ಯದ ಭಾರವನ್ನು ಹೆಚ್ಚಿಸಿದೆ. ಹಸಿ ಕಸದ ಪ್ರಮಾಣವೇ ಶೇ 50ರಷ್ಟಿದ್ದು, ಅದನ್ನು ಬೇರ್ಪಡಿಸಿ ವಿದ್ಯುತ್ ಇಲ್ಲವೆ ಗೊಬ್ಬರವಾಗಿ ರೂಪಾಂತರಿಸಲು ಕಳುಹಿಸಿದರೆ ಅರ್ಧಭಾರ ಕಳಚುತ್ತದೆ. ಒಣತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಪ್ರಮಾಣವೇ ಹೆಚ್ಚಾಗಿದೆ. ಅದರ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಸಮಸ್ಯೆಗೆ ಬಹುಪಾಲು ಪರಿಹಾರ ಸಿಗುತ್ತದೆ. ಪಕ್ಕದ ಪಣಜಿಯಲ್ಲಿ ಬಡಾವಣೆಗೊಂದು ತ್ಯಾಜ್ಯ ನಿರ್ವಹಣಾ ಘಟಕವಿದ್ದು ಶೂನ್ಯ ಕಸ ನಿರ್ವಹಣೆ ವ್ಯವಸ್ಥೆ ಇದೆ. ಪುಣೆಯಲ್ಲಿ ಕಸದಿಂದ ಉತ್ಪಾದನೆಯಾದ ವಿದ್ಯುತ್ ಬೀದಿದೀಪಗಳನ್ನು ಬೆಳಗಿಸುತ್ತಿದೆ. ದೂರದ ಸ್ವೀಡನ್‌, ವಿದ್ಯುತ್ ಉತ್ಪಾದನೆಗೆ ತನ್ನ ಕಸ ಸಾಕಾಗದೆ ಪಕ್ಕದ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಣ್ತೆರೆದು ನೋಡಿದರೆ ಸುತ್ತಲೂ ಬೇಕಾದಷ್ಟು ಉತ್ತಮ ಮಾದರಿಗಳಿವೆ. ಬೆಂಗಳೂರು ಮಾತ್ರವಲ್ಲದೆ ಉಳಿದ ನಗರಗಳ ತ್ಯಾಜ್ಯ ಸಂಸ್ಕರಣೆಗೆ ಸುಸ್ಥಿರವಾದ ಯೋಜನೆಯನ್ನು ಈಗಲಾದರೂ ಹಾಕಿಕೊಳ್ಳಬೇಕಿದೆ. ಜನರೂ ಅಷ್ಟೇ, ಒಂದೆಡೆ ಸರ್ಕಾರವನ್ನು ಬೈಯುತ್ತಾ, ಇನ್ನೊಂದೆಡೆ ಬೀದಿಯಲ್ಲಿ ಕಸ ಎಸೆಯುತ್ತಾ ಹೊಣೆಗೇಡಿತನ ಪ್ರದರ್ಶಿಸದೆ ಕಸ ವಿಂಗಡಣೆ ಮಾಡಿಕೊಡುವ ಮೂಲಕ ಪೌರಪ್ರಜ್ಞೆ ಮೆರೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.