ಅಸಹಿಷ್ಣುತೆ ರಾಜಕಾರಣಕ್ಕೆ ಸೋಲು ಆತ್ಮಾವಲೋಕನಕ್ಕೆ ಸಕಾಲ ಗೆಲ್ಲಲು ಬೇಕಾದ ಎಲ್ಲಾ ಕಾರ್ಯತಂತ್ರ ಹಾಗೂ ಸಂಪನ್ಮೂಲಗಳನ್ನೆಲ್ಲಾ ಬಳಸಿದರೂ ದಕ್ಕಿದ ಅವಮಾನಕರ ಸೋಲಿಗೆ ಕಾರಣವೇನು ಎಂಬ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್ ನೇತೃತ್ವದ ‘ಮಹಾಘಟಬಂಧನ್’ (ಮೈತ್ರಿ ಒಕ್ಕೂಟ), ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವುದು ಅನೇಕ ಸಂದೇಶಗಳನ್ನು ಹೊರಡಿಸುತ್ತದೆ. ಬಹುತ್ವದ ಸಂಸ್ಕೃತಿಯೇ ಮೂಲಧಾತುವಾದ ನಾಡಿನ ಸಂಕೀರ್ಣತೆಗಳ ಕಥನವನ್ನು ಈ ಫಲಿತಾಂಶ ಎತ್ತಿಹಿಡಿಯುತ್ತದೆ. 2014ರ ಮೇ ತಿಂಗಳಲ್ಲಿ ಇದ್ದಂತಹ ಮೋದಿಯವರ ಮಹಾ ಅಲೆಯ ಮಾಂತ್ರಿಕತೆ ಮಾಯವಾಗಿರುವುದು ಈ ಚುನಾವಣೆಯಲ್ಲಿ ಮತ್ತೊಮ್ಮೆ ನಿಚ್ಚಳವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೇರಿದ ಈ 18 ತಿಂಗಳಲ್ಲಿ ಅವರ ಪಕ್ಷ ಬಿಜೆಪಿ ಅನುಭವಿಸುತ್ತಿರುವ ಎರಡನೇ ಮಹಾ ಸೋಲು ಇದು. ಈ ಹಿಂದೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿಯೂ ಇನ್ನಿಲ್ಲದಂತಹ ಸೋಲಿನ ಹೊಡೆತವನ್ನು ಬಿಜೆಪಿ ಅನುಭವಿಸಿತ್ತು. ಹೀಗಾಗಿಯೇ ರಾಷ್ಟ್ರ ರಾಜಕಾರಣದಲ್ಲಿ ಮುಖ್ಯ ಪಾತ್ರ ಹೊಂದಿರುವಂತಹ ಬಿಹಾರದ ಚುನಾವಣೆಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿಷ್ಠೆಯದಾಗಿಸಿಕೊಂಡಿತ್ತು. ಸ್ವತಃ ಪ್ರಧಾನಿ ಮೋದಿಯವರೇ ಬಿಹಾರದಲ್ಲಿ 30 ಚುನಾವಣಾ ರ್‍್ಯಾಲಿಗಳಲ್ಲಿ ಮಾತನಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು 85 ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಾರೆ ಎಂದರೆ ಊಹಿಸಿಕೊಳ್ಳಬಹುದು. ಆದರೆ ರಾಜ್ಯದ ನೇತಾರರನ್ನು ಗಣನೆಗೇ ತೆಗೆದುಕೊಳ್ಳದಿರುವ ಈ ಕಾರ್ಯತಂತ್ರ ಕಡೆಗೂ ಫಲಿಸಿಲ್ಲ. ತಮ್ಮ ಕಾರ್ಯನಿರ್ವಹಣೆ ಪರ ನೀಡಲಾಗುವ ಮತ ಎಂದು ರಾಜ್ಯವೊಂದರ ಚುನಾವಣೆಯ ಬಗ್ಗೆ ಪ್ರಧಾನಿಯವರು ಭಾವಿಸಿಕೊಳ್ಳುವುದು ಅನಗತ್ಯವಾಗಿತ್ತು. ಆದರೆ ಬಿಹಾರ ಚುನಾವಣೆಯ ಸುತ್ತ ಇಂತಹದೊಂದು ಅನಗತ್ಯವಾದ ಭಾವನೆಯನ್ನು ಸೃಷ್ಟಿಸಿ ರಣತಂತ್ರಗಳನ್ನೇ ಹೆಣೆದಿದ್ದು ಫಲ ನೀಡಲಿಲ್ಲ ಎಂಬುದು ವಿಪರ್ಯಾಸ. ‘ಮಹಾಘಟಬಂಧ’ವನ್ನು ‘ಮಹಾಸ್ವಾರ್ಥಬಂಧ’ ಎಂದು ಕರೆದ ಮೋದಿಯವರು ಆರ್‌ಜೆಡಿ ಪಕ್ಷಕ್ಕೆ ‘ರೋಜ್ ನಾ ಜಂಗಲ್ ರಾಜ್ ಕಾ ಡರ್ ನಾ’ ಎಂದು ಹೆಸರಿಟ್ಟು ಜನರನ್ನು ಸೆಳೆಯಲು ಮಾಡಿದ ಪ್ರಯತ್ನಗಳು ತಿರುಗುಬಾಣವಾಗಿವೆ. ಸ್ವಾಮೀಜಿಯೊಬ್ಬರಿಂದ ನಿತೀಶ್ ಅವರು ಆಶೀರ್ವಾದ ಪಡೆಯುತ್ತಿರುವ ವಿಡಿಯೊ ಬಹಿರಂಗಗೊಂಡ ನಂತರ ನಿತೀಶ್‌ರನ್ನು ‘ಲೋಕತಾಂತ್ರಿಕ್’ ಎಂದು ಕರೆದ ಮೋದಿಯವರು ‘ಮಹಾಘಟಬಂಧನ’ದಲ್ಲಿ ತಾಂತ್ರಿಕರೊಬ್ಬರು ಪ್ರಮುಖ ಸದಸ್ಯರಾಗಿದ್ದಾರೆ ಎಂಬಂತಹ ಮಾತುಗಳನ್ನೂ ಹೇಳಿದ್ದರು. ಆದರೆ ಈ ಬಗೆಯ ನಕಾರಾತ್ಮಕವಾದ ರಾಜಕೀಯ ಕಥನಗಳಿಗೆ ಬಿಹಾರದ ಮತದಾರರು ಏನೇನೂ ಬೆಲೆ ನೀಡಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ಬಯಲುಮಾಡಿದೆ. ಅದರಲ್ಲೂ ‘ಮಹಾಘಟಬಂಧನ’ದ ಪಕ್ಷಗಳ ಪೈಕಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವ ಪಕ್ಷವಾಗಿ ಹೊರಹೊಮ್ಮಿದೆ ಎಂಬುದು ವಿಶೇಷ. ಹೀಗಾಗಿ ಮಂತ್ರತಂತ್ರಗಳಿಗಿಂತ ಹೆಚ್ಚಾಗಿ ಲೋಕತಂತ್ರದ ವಿಚಾರಕ್ಕಷ್ಟೇ ಇಲ್ಲಿ ಆದ್ಯತೆ ಎಂಬುದನ್ನು ಬಿಹಾರದ ಮತದಾರರು ಪ್ರತಿಪಾದಿಸಿದಂತಾಗಿದೆ. ಐದು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಹಂತದ ನಂತರವಷ್ಟೇ ಅಭಿವೃದ್ಧಿ ವಿಚಾರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸತೊಡಗಿದ್ದರು. ಆದರೆ ನಿತೀಶ್ ಕುಮಾರ್ ಅವರು ಈಗಾಗಲೇ ಪ್ರಕಟಿಸಿದ್ದ ಅಭಿವೃದ್ಧಿ ಕಾರ್ಯಸೂಚಿಗಳಿಗಿಂತ ಅವು ಭಿನ್ನವೇನಾಗಿರಲಿಲ್ಲ. ಆದರೆ, ಬಿಹಾರ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸುವ ಒಂದು ತಿಂಗಳ ಮುಂಚೆಯೇ ಬಿಹಾರಕ್ಕೆ ₹ 1 ಲಕ್ಷ 65 ಸಾವಿರ ಕೋಟಿ ಮೊತ್ತದ ಭಾರಿ ಪ್ಯಾಕೇಜ್ ಅನ್ನು ಕೇಂದ್ರದ ಎನ್‌ಡಿಎ ಸರ್ಕಾರ ಪ್ರಕಟಿಸಿತ್ತು. ನಂತರ, ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಬಿಹಾರ ಚುನಾವಣೆಯಲ್ಲಿ ದುಡಿದಿದ್ದಾರೆ. ಹಿಂದುತ್ವ ರಾಷ್ಟ್ರೀಯವಾದದ ಗೋಮಾಂಸ ರಾಜಕೀಯವನ್ನು ವ್ಯವಸ್ಥಿತವಾಗಿ ಪುನಶ್ಚೇತನಗೊಳಿಸುವ ಪ್ರಯತ್ನಗಳನ್ನು ತೀವ್ರ ರೀತಿಯಲ್ಲೇ ಕೈಗೊಳ್ಳಲಾಯಿತು. ಹೀಗೆ ನೆಲೆ ಪಡೆಯಲಾರಂಭಿಸಿದ ಗೋಮಾಂಸ ರಾಜಕಾರಣ, ದ್ವೇಷದ ವಾತಾವರಣ ಅಥವಾ ಹಿಂಸಾಚಾರಗಳ ಕುರಿತಂತೆ ಪ್ರಧಾನಿ ಮೋದಿಯವರು ತಾಳಿದ ದಿವ್ಯ ಮೌನವೂ ಈ ಚುನಾವಣೆಯಲ್ಲಿ ಅವರಿಗೆ ಮುಳುವಾಗಿರುವುದು ಸ್ಪಷ್ಟ. ಮೀಸಲಾತಿ ನೀತಿಯನ್ನು ಪುನರ್ವಿಮರ್ಶಿಸಬೇಕೆಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತುಗಳು ಹಾಗೂ ವಿಭಜಿಸುವ ಧಾರ್ಮಿಕ ರಾಜಕಾರಣದ ಮಾತುಗಳು ಬೀರಿರುವ ಪರಿಣಾಮಗಳೂ ಹೆಚ್ಚಿನವು. ಚುನಾವಣೆಯಲ್ಲಿ ಗೆಲುವು ಮಾತ್ರವಷ್ಟೇ ಮುಖ್ಯವಲ್ಲ, ಅನೇಕ ಪಾಠಗಳನ್ನೂ ಅದು ಕಲಿಸುತ್ತದೆ. ಗೆಲ್ಲಲು ಬೇಕಾದ ಎಲ್ಲಾ ಕಾರ್ಯತಂತ್ರ ಹಾಗೂ ಸಂಪನ್ಮೂಲಗಳನ್ನೆಲ್ಲಾ ಬಳಸಿದರೂ ದಕ್ಕಿದ ಅವಮಾನಕರ ಸೋಲಿಗೆ ಕಾರಣವೇನು ಎಂಬ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಹಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಈಗ ಹಲವು ಪಟ್ಟು ಬಲ ಹೆಚ್ಚಿಸಿಕೊಂಡಿದೆ ಎಂಬುದೂ ಮುಖ್ಯ. ನಿತೀಶ್ ಕುಮಾರ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಐತಿಹಾಸಿಕ. ವಿಭಿನ್ನ ರಾಜಕೀಯ ಕಥನಕ್ಕೆ ಈ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆಯೆ? ಎಂಬುದು ಪ್ರಶ್ನೆ. ವಿವಿಧ ರಾಜಕೀಯ ಪಕ್ಷಗಳ ಒಗ್ಗೂಡುವಿಕೆ ಅಥವಾ ಮೈತ್ರಿ ರಾಜಕಾರಣ ಭವಿಷ್ಯದ ರಾಜಕೀಯ ಸೂತ್ರವಾಗಲಿದೆಯೆ? ಬಿಜೆಪಿಯ ಸೋಲು, ರಾಷ್ಟ್ರೀಯ ನೆಲೆಯಲ್ಲಿ ಹೇಗೆ ಪರಿಣಾಮ ಬೀರಲಿದೆ? 2019ರ ಲೋಕಸಭಾ ಚುನಾವಣೆ ವೇಳೆಗೆ ರಾಜಕೀಯ ಸಮೀಕರಣಗಳು ಬದಲಾಗಲಿವೆಯೇ ಎಂಬೆಲ್ಲಾ ಪ್ರಶ್ನೆಗಳಿವೆ. ಆದರೆ ಈ ಸೋಲನ್ನು ಸುಧಾರಣೆಗಳ ಮೂಲಕ ಅವಕಾಶವಾಗಿ ಬದಲಾಯಿಸಲು ಬಿಜೆಪಿಗೆ ಅವಕಾಶವಂತೂ ಇದೆ. ಪ್ರತಿಪಕ್ಷಗಳ ಸಹಕಾರ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಮುಂದಾಗುವ ಬಗ್ಗೆ ಇನ್ನಾದರೂ ಬಿಜೆಪಿ ಯೋಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.