ಚೀನಾ, ತೈವಾನ್ ಅಧ್ಯಕ್ಷರ ಭೇಟಿ ಬರೀ ಸಾಂಕೇತಿಕವಾಗಬಾರದು ಕಳೆದ 65 ವರ್ಷಗಳಿಂದ ಚೀನಾ ಹಾಗೂ ತೈವಾನ್ ದೇಶಗಳ ಅಧ್ಯಕ್ಷರ ಭೇಟಿ ಒಮ್ಮೆಯೂ ನಡೆದಿಲ್ಲ. ಹೀಗಾಗಿ ಉಭಯದೇಶಗಳ ಅಧ್ಯಕ್ಷರು ಸಿಂಗಪುರದಲ್ಲಿ ಪರಸ್ಪರ ಕೈಕುಲುಕಿದ್ದು ಸಹಜವಾಗಿ ದೊಡ್ಡ ಸುದ್ದಿಯೇ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ತೈವಾನ್‌ ಅಧ್ಯಕ್ಷ ಮಾ ಯಿಂಗ್‌ ಜಿಯೊ ನಡುವೆ ಇತ್ತೀಚೆಗೆ ಸಿಂಗಪುರದಲ್ಲಿ ನಡೆದ ಮಾತುಕತೆ ಐತಿಹಾಸಿಕವಾಗಿ ಮಹತ್ವದ್ದು. 1949ರಲ್ಲಿ ಚೀನಾದಲ್ಲಿನ ಅಂತರ್ಯುದ್ಧದಲ್ಲಿ ಕಮ್ಯುನಿಸ್ಟ್ ವಿಜಯದ ನಂತರ ಚೀನಾ, ತೈವಾನ್ ನಾಯಕರ ನಡುವೆ ನಡೆದಿರುವ ಮೊದಲ ಭೇಟಿ ಇದಾಗಿದೆ. ಕಳೆದ 65 ವರ್ಷಗಳಿಂದ ಮಾತನಾಡದ ಉಭಯ ದೇಶಗಳ ಅಧ್ಯಕ್ಷರು ಪರಸ್ಪರ ಕೈಕುಲುಕಿದ್ದು ಸಹಜವಾಗಿ ದೊಡ್ಡ ಸುದ್ದಿಯೇ. ಆದರೆ ಕೇವಲ ಕೈಕುಲುಕಿದ ಮಾತ್ರಕ್ಕೆ ಉಭಯ ದೇಶಗಳ ನಡುವಣ ಬಾಂಧವ್ಯದಲ್ಲಿ ಮಹತ್ವದ ಸಾಧನೆಯಾಗಬಹುದೆ? ಈಗ ನಡೆದಿರುವ ಉಭಯ ನಾಯಕರ ನಡುವಣ ಭೇಟಿಯಲ್ಲಿ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಜಂಟಿ ಹೇಳಿಕೆಯನ್ನೂ ನೀಡಿಲ್ಲ. ಹೀಗಾಗಿ ಈ ಭೇಟಿ ಕೇವಲ ‘ಫೋಟೊ ಅವಕಾಶ’ವಷ್ಟೇ ಎಂಬಂತಹ ಟೀಕೆಗಳಿವೆ. ಆದರೆ, ತೈವಾನ್‌ನಲ್ಲಿ ಮುಂಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎನ್ನುವ ಮಾತುಗಳೂ ಇವೆ. ಮಾ ಯಿಂಗ್‌ ಅವರ ಕೆಎಂಟಿ ಪಕ್ಷಕ್ಕೆ ತೈವಾನ್‌ನಲ್ಲಿ ಪ್ರಮುಖ ಪ್ರತಿಸ್ಪರ್ಧಿ ಆಗಿರುವ ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ (ಡಿಪಿಪಿ) ಬಹಿರಂಗವಾಗಿಯೇ ಚೀನಾ ವಿರೋಧಿ ನಿಲುವು ಇಟ್ಟುಕೊಂಡಿರುವ ಪಕ್ಷ. ಮಾ ಅವರ ಎರಡು ಅವಧಿಗಳ ಅಧಿಕಾರಾವಧಿಯಲ್ಲಿ ಚೀನಾ ಪರವಾಗಿದ್ದ ಅವರ ಅನೇಕ ನಿಲುವುಗಳಿಗೆ ತೈವಾನ್‌ ಪ್ರಜೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ವಿರೋಧವನ್ನು ಲೆಕ್ಕಿಸದೆ ಮಾ ಯಿಂಗ್‌ ಚೀನಾದ ಜತೆಗೆ ಹಲವು ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡದ್ದಿದೆ. ಹೀಗಾಗಿ ತೈವಾನ್‌ನಲ್ಲಿ ಚೀನಾದ ಕಂಪೆನಿಗಳ ಹೂಡಿಕೆಯೂ ಹೆಚ್ಚಾಗಿದೆ. ತೈವಾನ್‌ನ ಸ್ವಾತಂತ್ರ್ಯ ವಿಚಾರವನ್ನು ಕೈಬಿಡಲಾಗಿದೆ ಎಂಬುದು ಮಾ ವಿರೋಧಿಗಳ ಹೇಳಿಕೆ. ತನ್ನ ಚುನಾವಣಾ ಪ್ರಚಾರದಲ್ಲೂ ಡಿಪಿಪಿ ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಆದರೆ ತಮ್ಮ ಆಡಳಿತದ ಅವಧಿಯಲ್ಲಿ ಚೀನಾ ಜೊತೆ ಸಾಧಿಸಲಾದ ಸ್ಥಿರ ಬಾಂಧವ್ಯದ ಸಂಕೇತವಾಗಿ ಸಿಂಗಪುರದಲ್ಲಿನ ಈ ಭೇಟಿಯನ್ನು ಮುಂದಿಡಲು ಮಾ ಯಿಂಗ್‌ ಯತ್ನಿಸುತ್ತಿದ್ದಾರೆ. ತೈವಾನ್ ಭವಿಷ್ಯಕ್ಕೆ ಬೀಜಿಂಗ್ ಜೊತೆ ಸಹಕಾರ ಒಳ್ಳೆಯದು ಎಂಬುದನ್ನೂ ಸಿಂಗಪುರದ ಈ ಭೇಟಿ ತೈವಾನ್ ಜನತೆಗೆ ಮನದಟ್ಟು ಮಾಡಿಸುತ್ತದೆ ಎಂಬ ಭಾವನೆ ಚೀನಾದ್ದಾಗಿದೆ. ಆದರೆ ಚೀನಾ ಅಧ್ಯಕ್ಷರ ಸದುದ್ದೇಶಗಳ ಬಗ್ಗೆ ತೈವಾನ್‌ನ ಜನರಿಗೆ ಅನುಮಾನಗಳು ಇರುವುದು ಸಹಜವೇ. ಏಕೆಂದರೆ ನೆರೆದೇಶಗಳ ಗಡಿಗಳಲ್ಲಿ ಏಕಪಕ್ಷೀಯ, ವಿವಾದಾಸ್ಪದ ಕ್ರಮಗಳನ್ನು ಕೈಗೊಳ್ಳುವ ಚೀನಾದ ದುರಭ್ಯಾಸ ಜಗತ್ತಿನ ಎಲ್ಲರಿಗೂ ಗೊತ್ತಿರುವಂತಹದ್ದೇ. ಅದು ದ್ವೀಪ ರಾಷ್ಟ್ರ ತೈವಾನ್‌ ಮಾತ್ರವಲ್ಲ, ಚೀನಾ ಜತೆಗೆ ಭೂ ಗಡಿಗಳನ್ನು ಹೊಂದಿರುವ ಇತರ ದೇಶಗಳ ಅನುಭವವೂ ಹೌದು. ಸಿಂಗಪುರದ ಭೇಟಿಯ ಮೂಲಕ ಉಭಯ ದೇಶಗಳ ಮಧ್ಯೆ ಗೌರವಯುತ ಸೌಹಾರ್ದವನ್ನು ಸಾಧಿಸುವ ಸದಿಚ್ಛೆ ಚೀನಾದ ಅಧ್ಯಕ್ಷರಿಗೆ ಇರುವುದೇ ಆದಲ್ಲಿ, ಅವರು ಮೊದಲು ತೈವಾನ್‌ ಸುತ್ತ ಏಕಪಕ್ಷೀಯವಾಗಿ ಕೈಗೊಳ್ಳುವ ತಕರಾರು ಕ್ರಮಗಳನ್ನು ನಿಲ್ಲಿಸಬೇಕು. ಗಡಿಯಲ್ಲಿ ಮತ್ತು ಸಮುದ್ರವಲಯದಲ್ಲಿರುವ ವಿವಾದಿತ ಪ್ರದೇಶಗಳಲ್ಲಿ ನೆರೆದೇಶಗಳನ್ನು ಕೆಣಕಲು ಚೀನಾ ಪದೇ ಪದೇ ನಡೆಸುವ ವೈಮಾನಿಕ ಮತ್ತು ಭೂಸೇನಾ ತಾಲೀಮುಗಳು ಕೂಡಾ ನೆರೆದೇಶಗಳ ಪ್ರಜೆಗಳಲ್ಲಿ ಆತಂಕ ಹುಟ್ಟಿಸಿದ್ದಿದೆ. ಕೇವಲ ಕೈಕುಲುಕುವ ರಾಜಕೀಯದ ಮೂಲಕ ಉಭಯ ದೇಶಗಳ ಪ್ರಜೆಗಳ ಮನಸ್ಸಿನಲ್ಲಿ ಸದ್ಭಾವನೆಗಳನ್ನು ಹುಟ್ಟಿಸುವುದು ಕಷ್ಟ. ಇಷ್ಟಿದ್ದೂ ಸಿಂಗಪುರದ ಈ ಭೇಟಿಯನ್ನು ಶಾಂತಿಪ್ರಿಯ ಜನರು ಸ್ವಾಗತಿಸಲೇಬೇಕು. ಈ ಅವಕಾಶವನ್ನು ಬಳಸಿಕೊಂಡು ತೈವಾನ್‌ ಜತೆಗೆ ಇನ್ನಷ್ಟು ಉನ್ನತ ಮಟ್ಟದ ಅಧಿಕಾರಿಗಳ ಭೇಟಿಗಳನ್ನು ಏರ್ಪಡಿಸಲು ಕ್ಸಿ ಅವರು ಮುಂದಾಗಬೇಕು. ತೈವಾನಿನ ಜನರ ಭಾವನೆಗಳಿಗೆ ಸ್ಪಂದಿಸುವ ಸದ್ಭಾವನೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಆ ಮೂಲಕ ತೈವಾನ್‌ ಜನರ ಸಂಕಷ್ಟಗಳನ್ನು ದೂರ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.