ಬಿಸಿಸಿಐ ಶುದ್ಧೀಕರಣದತ್ತ ದಿಟ್ಟ ಕ್ರಮಗಳು ಹಿತಾಸಕ್ತಿ ಸಂಘರ್ಷ ತಡೆಯುವ ಕ್ರಮ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೂ ಅನ್ವಯ ಆದರೆ ಈ ನಾಡಿನ ಕ್ರಿಕೆಟ್‌ ಪ್ರಿಯರು ಶಶಾಂಕ್‌ ನೇತೃತ್ವದ ತಂಡವನ್ನು ಎಂದಿಗೂ ಮರೆಯಲಾರರು. ಭಾರತದಲ್ಲಿ ಕ್ರಿಕೆಟ್‌ ಆಡಳಿತಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮುಖ್ಯಸ್ಥ ಶಶಾಂಕ್‌ ಮನೋಹರ್‌ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ಐಪಿಎಲ್‌ನಲ್ಲಿ ಸ್ಪಾಟ್‌ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಗಳು ಬಯಲಾದಾಗ ಈ ದೇಶದಲ್ಲಿ ಜನ ಕ್ರಿಕೆಟ್‌ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ನಂತರ ಸುಪ್ರೀಂ ಕೋರ್ಟ್‌ ನೀಡಿದ ದಿಟ್ಟ ಆದೇಶಗಳಿಂದಾಗಿ ವಂಚಕರು ತತ್ತರಗೊಂಡರು. ಇಂತಹ ಸಂದಿಗ್ಧದಲ್ಲಿಯೇ ಬಿಸಿಸಿಐಯ ಚುಕ್ಕಾಣಿ ಹಿಡಿದ ಶಶಾಂಕ್‌, ಕ್ರಿಕೆಟ್‌ ಆಡಳಿತದ ಶುದ್ಧೀಕರಣ ಪ್ರಕ್ರಿಯೆಗೇ ಹೆಚ್ಚು ಒತ್ತು ನೀಡುವ ಅಗತ್ಯವಿತ್ತು. ಇದೀಗ ಅವರು ಈ ದಿಕ್ಕಿನಲ್ಲಿ ದಾಪುಗಾಲು ಇಟ್ಟಿದ್ದಾರೆ. ಎರಡು ವರ್ಷ ಅಮಾನತು ಶಿಕ್ಷೆ ಎದುರಿಸುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್‌ನ ಮಾಲೀಕತ್ವವನ್ನು ‘ತಾಂತ್ರಿಕ’ವಾಗಿ ಬಿಟ್ಟುಕೊಟ್ಟು ಅಧಿಕಾರ ಸ್ಥಾನದಲ್ಲಿಯೇ ಮುಂದುವರಿದಿದ್ದ, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮುಖ್ಯಸ್ಥರಾಗಿದ್ದ ಎನ್‌.ಶ್ರೀನಿವಾಸನ್‌ ಅವರ ರೆಕ್ಕೆಪುಕ್ಕಗಳನ್ನು ಈಗ ಕತ್ತರಿಸ ಲಾಗಿದೆ. ಹಿತಾಸಕ್ತಿ ಸಂಘರ್ಷದ ಆರೋಪದ ಸುಳಿಯೊಳಗೆ ಗಿರಗಿರ ಎನ್ನುತ್ತಿದ್ದರೂ ಭಂಡತನದ ಬಂಡೆಯಂತಿದ್ದ ಶ್ರೀನಿವಾಸನ್‌ ಅವರನ್ನು ಮೂಲೆಗೆ ತಳ್ಳಿರುವುದು ಈ ದೇಶ ದಲ್ಲಿ ಕ್ರಿಕೆಟ್‌ ಹೊಸ ಆಯಾಮ ಕಂಡುಕೊಳ್ಳುವುದರ ಸಂಕೇತದಂತಿದೆ. ಹಿತಾಸಕ್ತಿ ಸಂಘ ರ್ಷಕ್ಕೆ ಸಿಲುಕಿರುವ ಅನಿಲ್‌ ಕುಂಬ್ಳೆ, ರವಿ ಶಾಸ್ತ್ರಿ, ರೋಜರ್‌ ಬಿನ್ನಿ ಅವರನ್ನೂ ಬಿಸಿಸಿಐ ವ್ಯಾಪ್ತಿಯೊಳಗಿನ ಪ್ರಮುಖ ಹುದ್ದೆಗಳಿಂದ ಕೈ ಬಿಟ್ಟಿರುವುದೂ ಸ್ವಾಗತಾರ್ಹ ನಿರ್ಧಾರ. ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ಸಲಹೆಗಾರರಾಗಿರುವ ಅನಿಲ್‌ ಕುಂಬ್ಳೆ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದರು. ರೋಜರ್‌ ಬಿನ್ನಿ ಅವರು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿರುವಾಗಲೇ ಅವರ ಮಗ ಸ್ಟುವರ್ಟ್ ಬಿನ್ನಿ ಭಾರತ ತಂಡದಲ್ಲಿ ಆಡುತ್ತಿದ್ದರು. ಭಾರತ ತಂಡದ ನಿರ್ದೇಶಕರಾಗಿರುವ ರವಿ ಶಾಸ್ತ್ರಿಯವರು ಐಪಿಎಲ್‌ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಇವರೆಲ್ಲರೂ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿರುವುದು ಇಡೀ ದೇಶದ ಜನರಿಗೆ ಎದ್ದು ಕಾಣುತ್ತಿತ್ತು. ಆದರೆ ಇವರೆಲ್ಲರೂ ಭಂಡತನವೇ ಮೂರ್ತಿವೆತ್ತಂತಿದ್ದರು. ಇದೀಗ ಇವರೆಲ್ಲರ ಮೇಲೆ ಬಿಸಿಸಿಐ ಚಾಟಿ ಬೀಸಿದೆ. ಇದು ಇಲ್ಲಿಗೇ ನಿಲ್ಲಬಾರದು. ಮುಂದಿನ ದಿನಗಳಲ್ಲಿ ಇಂತಹ ಒಂದೂ ಪ್ರಕರಣ ತಲೆ ಎತ್ತದಂತೆ ಬಿಸಿಸಿಐ ಕಠಿಣ ನಿಲುವು ತಳೆದರೆ ಈ ದೇಶದ ಜನರ ಮನದಲ್ಲಿ ಕ್ರಿಕೆಟ್‌ ಬಗ್ಗೆ ಇನ್ನಷ್ಟು ಪ್ರೀತಿ ಮತ್ತು ವಿಶ್ವಾಸ ಮೂಡಲು ಸಾಧ್ಯವಿದೆ. ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ದೂರುಗಳ ಮೇಲೆ ಕಣ್ಣಿಡಲು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಹಾ ಅವರನ್ನು ಒಂಬುಡ್ಸ್‌ಮನ್‌ ಆಗಿ ನೇಮಕ ಮಾಡಿರುವುದು ಶ್ಲಾಘನಾರ್ಹ. ನೀತಿ ಪಾಲನೆಗೆ ಸಂಬಂಧಿಸಿದಂತೆ ಒತ್ತು ನೀಡುವಲ್ಲಿ ಇಂತಹದ್ದೊಂದು ಹದ್ದಿನ ಕಣ್ಣು ಇಡುವ ವ್ಯವಸ್ಥೆ ಬಹಳ ಹಿಂದೆಯೇ ಬರಬೇಕಿತ್ತು. ಸುಪ್ರೀಂ ಕೋರ್ಟ್‌ ನೇಮಿಸಿದ್ದ ಲೋಧಾ ಸಮಿತಿ ತನ್ನ ವರದಿಯಲ್ಲಿ ಕ್ರಿಕೆಟ್‌ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಇಂತಹದ್ದೊಂದು ವ್ಯವಸ್ಥೆ ಬೇಕೆಂದು ಶಿಫಾರಸು ಮಾಡಿತ್ತು. ಹಿತಾಸಕ್ತಿ ಸಂಘರ್ಷ ಬಿಸಿಸಿಐನಲ್ಲಿ ಆಗದಂತೆ ತಡೆಯುವ ಕ್ರಮ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೂ ಅನ್ವಯ ಆಗು ವಂತೆ ಮಾಡಿದರೆ ಈ ನಾಡಿನ ಕ್ರಿಕೆಟ್‌ ಪ್ರಿಯರು ಶಶಾಂಕ್‌ ನೇತೃತ್ವದ ತಂಡವನ್ನು ಎಂದಿಗೂ ಮರೆಯಲಾರರು. ಶಶಾಂಕ್‌ ಅವರು ಕಾನೂನು ತಜ್ಞರು. ಬಿಸಿಸಿಐ ಆಗುಹೋಗುಗಳಿಗೆ ಸಂಬಂಧಿಸಿದಂತೆ ಇವರ ಪ್ರತೀ ನಡೆಯ ಹಿಂದೆಯೂ ಕಾನೂನು ಅರಿವಿನ ಪಕ್ವತೆ ಕಂಡು ಬರುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ‘ನಾನೊಬ್ಬ ವಕೀಲ. ಆದರೆ ಕ್ರಿಕೆಟ್‌ ಮಂಡಳಿಯ ಪರವಾಗಿ ವಕಾಲತ್ತು ವಹಿಸಿ ಹಣ ಮಾಡುವುದಿಲ್ಲ. ಹಾಗೆ ಮಾಡುವುದು ಹಿತಾಸಕ್ತಿ ಸಂಘರ್ಷಕ್ಕೆ ಎಡೆಕೊಡುತ್ತದೆ. ಈ ಧೋರಣೆಯನ್ನು ನಾನು ಬಿಸಿಸಿಐನ ಎಲ್ಲರಿಂದಲೂ ನಿರೀಕ್ಷಿಸುತ್ತೇನೆ’ ಎಂದು ಶಶಾಂಕ್‌ ನುಡಿದಿರುವುದು ಅರ್ಥಪೂರ್ಣ. ಇದೀಗ ಅವರು ಸೌರವ್‌ ಗಂಗೂಲಿ, ನಿರಂಜನ್‌ ಷಾ, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಕೆಲವರನ್ನು ಬಿಸಿಸಿಐ ಆಡಳಿತ ‘ತಂಡ’ಕ್ಕೆ ಸೇರಿಸಿಕೊಂಡಿದ್ದಾರೆ. ಶಶಾಂಕ್‌ ಅವರು ಐಸಿಸಿ ಮುಖ್ಯಸ್ಥರಾಗಿ ಅತ್ತ ಗಮನ ನೀಡುವಂತಹ ಅನಿವಾರ್ಯದ ನಡುವೆಯೂ ಬಿಸಿಸಿಐನ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯಲು ಉತ್ತಮ ವೇದಿಕೆ ಸಿದ್ಧವಾಗಿದೆ. ಹಿಂದೆ ಬಿಸಿಸಿಐನಲ್ಲಿ ಶ್ರೀನಿವಾಸನ್‌ ಸೇರಿದಂತೆ ಕೆಲವರು ‘ಕೂಟ’ ಕಟ್ಟಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಅದನ್ನು ಯಾರೂ ಪ್ರಶ್ನಿಸದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳು ತ್ತಿದ್ದರು. ಭಾರತದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಲಜ್ಜೆಗೇಡಿಗಳೇ ಮೇಲುಗೈ ಪಡೆದಿದ್ದಂತಹ ದಿನಗಳು ಅವು. ಈಗ ಹೊಸ ಗಾಳಿ ಬೀಸಿದೆ. ಈ ನಾಡಿನಲ್ಲಿ ಕ್ರಿಕೆಟ್‌ ಆಡಳಿತ ಸಭ್ಯರ ಕೈಗೆ ಸೇರಿದೆ ಎಂಬುದು ತೃಪ್ತಿಕರ ಸಂಗತಿಯಾಗಿದೆ. ಇನ್ನೆಂದೂ ಬಿಸಿಸಿಐನಲ್ಲಿ ‘ಶ್ರೀನಿವಾಸನ್‌ ದಿನ’ಗಳು ಬಾರದಿರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.