ಮಾಲಿನ್ಯ ತಡೆಗೆ ಬೇಕಿದೆ ದೀರ್ಘಕಾಲೀನ ನೀತಿ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ವಿವಿಧ ಕ್ರಮಗಳಿಂದಾಗಿ ರಾಜಧಾನಿ ದೆಹಲಿ ಈಗ ಸುದ್ದಿಯಲ್ಲಿದೆ. ದೇಶದ ರಾಜಧಾನಿ ದೆಹಲಿ ‘ವಿಷಾನಿಲದ ಕೋಣೆ’ಯಾಗಿ ಬದಲಾಗಿದೆ ಎಂಬ ಪರಿಸರವಾದಿಗಳ ಆತಂಕಕ್ಕೆ ಸುಪ್ರೀಂ ಕೋರ್ಟ್‌ ಮತ್ತು ಹಸಿರು ಪೀಠಗಳು ಆಗಾಗ ದನಿಗೂಡಿಸುತ್ತಲೇ ಬಂದಿದ್ದವು. ಈಗ, ಮುಂದಿನ ಮಾರ್ಚ್‌ 31ರ ವರೆಗೂ ದೆಹಲಿಯನ್ನು ಒಳಗೊಂಡ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್‌ಸಿಆರ್‌) 2 ಸಾವಿರ ಸಿ.ಸಿ.ಗಿಂತ ಅಧಿಕ ಸಾಮರ್ಥ್ಯದ ಡೀಸೆಲ್‌ ಕಾರುಗಳು ಮತ್ತು ಎಸ್‌ಯುವಿಗಳ ನೋಂದಣಿಯ ಮೇಲೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಜೊತೆಗೆ ಹೊರಗಿನಿಂದ ಬಂದು ದೆಹಲಿ ಮೂಲಕ ಮುಂದೆ ಸಾಗುತ್ತಿದ್ದ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹಾಗೆಯೇ 10 ವರ್ಷಗಳಿಗಿಂತ ಹಳೆಯ ವಾಣಿಜ್ಯ ವಾಹನಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಎಲ್ಲ ಬಗೆಯ ವಾಣಿಜ್ಯ ವಾಹನಗಳು ತೆರಬೇಕಾದ ಪರಿಸರ ಪರಿಹಾರ ಶುಲ್ಕ ದುಪ್ಪಟ್ಟಾಗಲಿದೆ. ಕಸ ಸುಡುವುದನ್ನು ನಿಲ್ಲಿಸಬೇಕು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಕಬೇಕು ಎಂದೂ ಕೋರ್ಟ್ ಆದೇಶಿಸಿದೆ. ವಿಶ್ವದ ಅತ್ಯಂತ ಮಲಿನ ನಗರಿ ಎಂಬ ಹಣೆಪಟ್ಟಿಯಿಂದ ದೆಹಲಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳು ಅಗತ್ಯ ಇರಬಹುದು. ಆದರೆ ಇವಿಷ್ಟರಿಂದಲೇ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಯಬೇಕಾಗಿಲ್ಲ. ಏಕೆಂದರೆ ಸುಪ್ರೀಂ ಕೋರ್ಟ್‌ನ ಬಹುತೇಕ ಆದೇಶಗಳು ವಾಹನಗಳಿಂದ ಆಗುವ ಮಾಲಿನ್ಯ ತಡೆಯುವ ಉದ್ದೇಶಕ್ಕೆ ಸೀಮಿತವಾದಂತಿವೆ. ವಾಹನ ತಯಾರಿಕಾ ಸಂಸ್ಥೆಗಳು ಹೇಳುವ ಪ್ರಕಾರ ವಾಯು ಮಾಲಿನ್ಯದಲ್ಲಿ ವಾಹನಗಳ ಹೊಗೆಯಿಂದ ಆಗುವ ಮಾಲಿನ್ಯ ಶೇ 8ರಷ್ಟು ಮಾತ್ರ. ಇದರ ಹೊರತಾಗಿ ವಾಸ್ತವವಾಗಿ ಮಾಲಿನ್ಯಕ್ಕೆ ಕಾರಣವಾಗುವ ಇನ್ನೂ ಅನೇಕ ಪ್ರಮುಖ ಅಂಶಗಳಿವೆ. ಕೈಗಾರಿಕೆಗಳು ಹೊರಹಾಕುವ ಹೊಗೆ ಮತ್ತು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುವ ಕಲುಷಿತ ನೀರು, ಗಿಡಮರಗಳನ್ನು ಬೆಳೆಸದೇ ಇರುವುದು, ದೂಳು, ಪ್ಲಾಸ್ಟಿಕ್‌ ಕಸ, ಉರುವಲಿಗಾಗಿ ಸೌದೆ ಬಳಕೆ, ನಿಷ್ಪ್ರಯೋಜಕ ಮೊಬೈಲ್‌ ಮತ್ತು ಕಂಪ್ಯೂಟರ್‌ ತ್ಯಾಜ್ಯಗಳು ಕೂಡ ಒಂದೊಂದು ರೀತಿಯಲ್ಲಿ ಮಾಲಿನ್ಯ ಸೃಷ್ಟಿಸುತ್ತಿವೆ. ಇವೆಲ್ಲ ಒಂದೋ ಜಲ ಮಾಲಿನ್ಯ ಅಥವಾ ವಾಯು ಮಾಲಿನ್ಯದ ಮೂಲಗಳು. ಜೀವ ಸಂಕುಲಕ್ಕೆ ಗಂಡಾಂತರ ತರಬಲ್ಲವು. ಆದ್ದರಿಂದ ಎಲ್ಲ ಬಗೆಯ ಮಾಲಿನ್ಯವನ್ನು ನಿಯಂತ್ರಿಸಿದರಷ್ಟೇ ಸ್ವಚ್ಛ ಮತ್ತು ಶುದ್ಧ ಗಾಳಿ, ನೀರು, ಪರಿಸರ ಲಭ್ಯವಾಗುತ್ತದೆ. ವಾಹನಗಳ ನೋಂದಣಿ, ಲಾರಿಗಳ ಪ್ರವೇಶ ನಿಯಂತ್ರಣದಂಥ ತೀರ್ಮಾನ ಸಾರ್ವಜನಿಕ ನೀತಿ ನಿರೂಪಣೆಗೆ ಸಂಬಂಧಿಸಿದ್ದು. ಅದನ್ನು ರೂಪಿಸಿ ಜಾರಿಗೆ ತರುವುದು ಮೂಲತಃ ಸರ್ಕಾರದ ಹೊಣೆ. ಆದರೆ ಈಗ ನ್ಯಾಯಾಂಗ ಮಧ್ಯಪ್ರವೇಶಿಸಿ ಈ ಬಗ್ಗೆ ನಿರ್ದೇಶನ ನೀಡುವಂತಾಗಿದೆ. ಇಂಥ ಪರಿಸ್ಥಿತಿ ಬರಬಾರದು. ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸಬೇಕು. ಅಲ್ಲದೆ ದೆಹಲಿಯಲ್ಲಿ ಮಾತ್ರವೇ ಮಾಲಿನ್ಯ ಮಿತಿ ಮೀರಿದೆ ಎಂಬ ಗ್ರಹಿಕೆಯೂ ಸರಿಯಲ್ಲ. ಇದು ದೇಶವ್ಯಾಪಿ ಸಮಸ್ಯೆ. ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಿಂದ ಹಿಡಿದು ಸಣ್ಣಸಣ್ಣ ಪಟ್ಟಣಗಳು, ಹಳ್ಳಿಗಳು ಕೂಡ ನಾನಾ ಬಗೆಯ ಮಾಲಿನ್ಯ ಮತ್ತು ಅದರ ದುಷ್ಪರಿಣಾಮ ಎದುರಿಸುತ್ತಿವೆ. ಆದ್ದರಿಂದ ಈ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ದೀರ್ಘಾವಧಿಯ ನೀತಿ ರೂಪಿಸಬೇಕು. ಸ್ಥಳಿಯ ಪರಿಸ್ಥಿತಿಗೆ ಅನುಗುಣವಾಗಿ ಅದರಲ್ಲಿ ಸಣ್ಣಪುಟ್ಟ ಮಾರ್ಪಾಟುಗಳನ್ನು ಅಳವಡಿಸಿಕೊಳ್ಳಲು ಅವಕಾಶ ಇರಬೇಕು. ವಾಹನಗಳ ಸಂಖ್ಯೆ ಹೆಚ್ಚಲು, ಜನ ವೈಯಕ್ತಿಕ ವಾಹನಗಳ ಬಳಕೆಗೆ ಮನಸೋಲಲು ಸಮೂಹ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಮುಖ್ಯ ಕಾರಣ. ಆದ್ದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚು ಅನುಕೂಲಕರ, ಆಕರ್ಷಕವಾಗುವಂತೆ ಮಾಡಬೇಕು. ಮಾಲಿನ್ಯ ನಿಯಂತ್ರಣಕ್ಕೆ ಹೊಸ ಹೊಸ ತಂತ್ರಜ್ಞಾನಗಳ ಹುಡುಕಾಟ ಮತ್ತು ಬಳಕೆಗೆ ಒತ್ತು ಕೊಡಬೇಕು. ಸಮಸ್ಯೆಯ ಮೂಲಕ್ಕೆ ಗಮನ ಕೊಡದೇ ಹೋದರೆ ಅಪಾಯ ತಪ್ಪಿದ್ದಲ್ಲ. ಬರೀ ತಾತ್ಕಾಲಿಕ ಕ್ರಮಗಳಿಂದ ಪ್ರಯೋಜನವೂ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.