ಚುನಾವಣೆಯಲ್ಲಿ ಸೌದಿ ಮಹಿಳೆ ಸಾಂಕೇತಿಕ ವಿಜಯ ಕಳೆದ ವಾರ ಸೌದಿ ಅರೇಬಿಯಾದಲ್ಲಿ ಮುನಿಸಿಪಲ್ ಮಂಡಳಿಗಳಿಗೆ ನಡೆದ ಚುನಾವಣೆ, ಜಗತ್ತಿನ ಗಮನ ಸೆಳೆದಿತ್ತು. ಇದಕ್ಕೆ ಮುಖ್ಯ ಕಾರಣ ಈ ಚುನಾವಣೆಯಲ್ಲಿ ಸೌದಿ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕು ದೊರೆತಿತ್ತು. ಜೊತೆಗೆ ಚುನಾವಣೆಗೆ ಸ್ಪರ್ಧಿಸಲೂ ಅವಕಾಶ ಸಿಕ್ಕಿತ್ತು. ಈ ಐತಿಹಾಸಿಕ ಚುನಾವಣೆಯಲ್ಲಿ 20 ಮಹಿಳೆಯರು ಗೆಲುವನ್ನೂ ಸಾಧಿಸಿದರು ಎಂಬುದು ಮುಖ್ಯವಾದದ್ದು. ವಿಶ್ವದಾದ್ಯಂತ ಮತದಾನದಂತಹ ಮೂಲಭೂತ ಹಕ್ಕು ಪಡೆದುಕೊಳ್ಳಲು ಮಹಿಳೆಯರು ದೀರ್ಘಾವಧಿ ಹೋರಾಟಗಳನ್ನೇ ನಡೆಸಿದ್ದಾರೆ. ಆದರೆ ಈ ಆಧುನಿಕ ಕಾಲದಲ್ಲೂ ಸೌದಿ ಮಹಿಳೆಯರು ಸಂಪ್ರದಾಯಶೀಲ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವು ನಿರ್ಬಂಧಗಳಲ್ಲಿ ಸಿಲುಕಿದ್ದಾರೆ ಎಂಬುದು ಕಹಿ ವಾಸ್ತವ. ಕಾರು ಚಲಾಯಿಸುವಂತಹ ವೈಯಕ್ತಿಕ ಸ್ವಾತಂತ್ರ್ಯವೂ ಸೌದಿ ಮಹಿಳೆಯರಿಗೆ ಇಲ್ಲ. ಇಂತಹ ಸಂದರ್ಭದಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ ಎಂಬುದು ಬಹು ದೊಡ್ಡ ಸಂಗತಿ. ಹೊಸ ಭರವಸೆಯನ್ನು ಹುಟ್ಟಿಸುವಂತಹದ್ದು. ಒಟ್ಟು 2,106 ಸ್ಥಾನಗಳಲ್ಲಿ ಮಹಿಳೆಗೆ ಸಿಕ್ಕಿರುವುದು ಕೇವಲ 20 ಸ್ಥಾನಗಳು. ಈ ಪಾಲು ಬಹಳ ಕಡಿಮೆ ಎಂಬುದು ನಿಜ. ಆದರೆ ಈವರೆಗೆ ಇದ್ದಂತಹ ಒಂದು ಗಡಿರೇಖೆ ದಾಟಲಾಗಿದೆ ಎಂಬುದು ಮಹತ್ವದ ಅಂಶ. ಹೀಗಾಗಿ ಇದು ಹೊಸ ಮೈಲುಗಲ್ಲು. ಈ ಚುನಾವಣೆಯೇ ಸಾಂಕೇತಿಕ ವಿಜಯ. ಮುಂದಿನ ಪೀಳಿಗೆಗೆ ಭರವಸೆ ನೀಡುವಂತಹದ್ದು. ಈ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕೆ 13.50 ಲಕ್ಷ ಪುರುಷರ ಹೆಸರು ನೊಂದಾವಣೆಯಾಗಿತ್ತು. ಆದರೆ ಈ ಮತದಾರರ ಪಟ್ಟಿಯಲ್ಲಿದ್ದ ಮಹಿಳೆಯರ ಸಂಖ್ಯೆ ಕೇವಲ 1.31 ಲಕ್ಷ. ಚುನಾವಣೆಯಲ್ಲಿ ಸ್ಪರ್ಧಿಸುವುದೂ ಮಹಿಳೆಗೆ ಸುಲಭವೇನಾಗಿರಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಗೆ ಹೊಸ ನಿಯಮಗಳು ಅವಕಾಶ ನೀಡಿದ್ದವು ಎಂಬುದೇನೊ ನಿಜ. ಆದರೆ ಅಭ್ಯರ್ಥಿಗಳಾಗಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲು ಚುನಾವಣಾ ಅಧಿಕಾರಿಗಳು ನಿರಾಕರಿಸಿದ್ದೂ ಇದೆ. ಸರಿಯಾದ ಕಾರಣವನ್ನೇನೂ ನೀಡದೆ ಕೆಲವು ಸುಪ್ರಸಿದ್ಧ ಲೇಖಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಪಾಲ್ಗೊಳ್ಳದಿರುವಂತೆ ಅನರ್ಹಗೊಳಿಸಲಾಯಿತು. ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳೂ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. ಪುರುಷ ಮತದಾರರನ್ನು ಭೇಟಿ ಮಾಡಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಜೊತೆಗೆ ಪುರುಷರು ಇರುವಂತಹ ಸಭೆಗಳನ್ನು ಉದ್ದೇಶಿಸಿಯೂ ಅವರು ಮಾತನಾಡುವಂತಿರಲಿಲ್ಲ. ಪುರುಷ ಮತದಾರರ ಮುಂದೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳಲು ಅವರು ಪುರುಷರನ್ನು ಅವಲಂಬಿಸಬೇಕಾಯಿತು. ಇನ್ನು ಮತದಾನ ಮಾಡಬೇಕಾದ ಮಹಿಳೆಯರೂ ಪುರುಷ ಸಂಬಂಧಿಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಅಲ್ಲಿನದು. ಯಾಕೆಂದರೆ ಮಹಿಳೆಯರು ವಾಹನ ಚಾಲನೆ ಮಾಡುವಂತಿಲ್ಲವಲ್ಲ! ಹಾಗೆಯೇ ಪತಿ ಅಥವಾ ತಂದೆಯ ಒಪ್ಪಿಗೆ ಇಲ್ಲದಿದ್ದರೆ ಮತದಾನ ಮಾಡುವ ಹಾಗೇ ಇಲ್ಲ. ಹೀಗಾಗಿ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆಯರು ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳುವುದಕ್ಕೆ ಅಡೆತಡೆ ಇದ್ದೇ ಇದೆ. ಚುನಾವಣಾ ಕ್ಷೇತ್ರದಲ್ಲಿ ಸಮಾನತೆ ಸಾಧಿಸಲಾಗಿಲ್ಲ ಎಂಬುದಂತೂ ನಿಜ. ಜೊತೆಗೆ ಈಗ ಸ್ಥಳೀಯ ಆಡಳಿತ ಘಟಕಗಳಾದ ಈ ಮುನಿಸಿಪಲ್ ಮಂಡಳಿಗಳಲ್ಲಿ ಕುಳಿತುಕೊಳ್ಳುವಂತಹ ಚುನಾಯಿತ ಮಹಿಳೆಯರ ಸಂಖ್ಯೆ ಅತಿ ಕಡಿಮೆಯೇ ಇದೆ. ಹೀಗಾಗಿ ಈ ಮಹಿಳೆಯರು ಸಾಕಷ್ಟು ಬದಲಾವಣೆಗಳನ್ನು ತರಬಲ್ಲರು ಎಂಬುದೂ ಅಸಾಧ್ಯ. ಪ್ರತಿರೋಧಗಳನ್ನು ಈ ಮಹಿಳೆಯರು ಎದುರಿಸಬೇಕಾಗುತ್ತದೆ ಎಂಬುದಕ್ಕೂ ಮುನ್ಸೂಚನೆಗಳಿವೆ. ಹೀಗಿದ್ದೂ ಇದು ಆರಂಭ. ಬರಲಿರುವ ವರ್ಷಗಳಲ್ಲಿ ಸರ್ಕಾರದ ಎಲ್ಲಾ ಹಂತಗಳಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯನ್ನಾದರೂ ಇಟ್ಟುಕೊಳ್ಳಬಹುದು. ಏಕೆಂದರೆ ಉದ್ಯೋಗ ಕ್ಷೇತ್ರದಲ್ಲಿ ಇದೇ ಬಗೆಯ ಬೆಳವಣಿಗೆಯಾದದ್ದನ್ನು ಗಮನಿಸಬಹುದು. ಅಧಿಕೃತ ಅಂಕಿಅಂಶಗಳ ಪ್ರಕಾರ, 2004ರಲ್ಲಿ ಸೌದಿ ಉದ್ಯೋಗ ವಲಯದಲ್ಲಿ 23 ಸಾವಿರ ಇದ್ದ ಮಹಿಳೆಯರ ಸಂಖ್ಯೆ 2015ರಲ್ಲಿ 4 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ರೀತಿ ಮುಂದೆ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲೂ ಅಧಿಕಾರ ಹಿಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಆಶಾಭಾವ ಇರಿಸಿಕೊಳ್ಳಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.