ಸ್ವಚ್ಛ ಭಾರತ ಸೆಸ್ ಹೆಸರಲ್ಲಿ ಹೇರಿಕೆ ಸರಿಯಲ್ಲ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಹೊಸದರಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ಕೊಟ್ಟಿದ್ದರು. ನಮ್ಮ ಸುತ್ತಲಿನ ಪರಿಸರ ಸ್ವಚ್ಛ, ಸುಂದರವಾಗಿರಬೇಕು, ಅಲ್ಲಲ್ಲಿ ಬಿದ್ದ ಕಸವನ್ನು ಖಾಲಿ ಮಾಡಬೇಕು ಎಂಬ ಅವರ ಕರೆಗೆ ಇಡೀ ದೇಶವೇ ಸ್ಪಂದಿಸಿತ್ತು. ಕಸದಿಂದ ರೋಸಿದ ಜನರಿಗೆ ಅವರ ಕನಸು, ಸ್ವಚ್ಛ ಭಾರತ ಅಭಿಯಾನ ಅಪ್ಯಾಯಮಾನ ಎನಿಸಿತ್ತು. ಕಣ್ಣಿಗೆ ರಾಚುವ ಕಸ, ಮೂಗಿಗೆ ಅಡರುವ ದುರ್ವಾಸನೆ ಇನ್ನಾದರೂ ಕಮ್ಮಿಯಾದೀತು ಎಂಬ ಭರವಸೆ ಮೂಡಿಸಿತ್ತು. ಆದರೆ ಆಗ ಯಾರಿಗೂ ಇದು, ಮುಂದೊಂದು ದಿನ ತೆರಿಗೆ ರೂಪದಲ್ಲಿ ತಮ್ಮ ಮೇಲೆ ಮತ್ತಷ್ಟು ಹೊರೆ ಹೇರುತ್ತದೆ ಎಂಬ ಅನುಮಾನವೇ ಬಂದಿರಲಿಲ್ಲ. ಫೆಬ್ರುವರಿಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ ನೋಡಿದ ನಂತರ, ಸ್ವಚ್ಛ ಭಾರತ ಹೆಸರಿನಲ್ಲಿ ಹೆಚ್ಚು ತೆರಿಗೆ ತೆರಲು ತಯಾರಾಗಬೇಕು ಎಂಬುದು ಗೊತ್ತಾಯಿತು. ಈಗ ಕಳೆದ ಭಾನುವಾರದಿಂದಲೇ ಸ್ವಚ್ಛ ಭಾರತ ಸೆಸ್ ಜಾರಿಗೆ ಬಂದಿದೆ. ಇದು ನೇರ ತೆರಿಗೆ ಅಲ್ಲ, ಬರೀ ಉಪಕರ, 100 ರೂಪಾಯಿಗೆ ಕೇವಲ 50 ಪೈಸೆ ಎಂದುಕೊಂಡು ಅಷ್ಟಕ್ಕೇ ಸಮಾಧಾನಪಟ್ಟುಕೊಳ್ಳುವಂತೆಯೂ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಆದಾಯ ಮೂಲವಾಗಿರುವ ಸೇವಾ ತೆರಿಗೆ ಮೇಲೆ ಬಳಕೆದಾರರು ಶೇ 0.5ರ ದರದಲ್ಲಿ ಈ ಸೆಸ್ ತೆರಬೇಕಾಗುತ್ತದೆ. ಇದರ ಮೊದಲ ಪರಿಣಾಮ ಎಂದರೆ ಪ್ಯಾನ್ ಕಾರ್ಡ್‌ ಪಡೆಯುವ ಶುಲ್ಕದಲ್ಲಿ 1 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ ಹೋಟೆಲ್‌ಗಳ ಬಿಲ್ ಕೂಡ ದುಬಾರಿಯಾಗಿದೆ. ರೈಲು, ವಿಮಾನ ಪ್ರಯಾಣ ಸೇರಿದಂತೆ ಎಲ್ಲ ರೀತಿಯ ಸೇವೆಗಳಿಗೆ ಹೆಚ್ಚುವರಿ ಹಣ ತೆರುವಂತಾಗಿದೆ. ಸ್ವಚ್ಛ ಭಾರತ ಸೆಸ್‌ನಿಂದ ಈ ಹಣಕಾಸು ವರ್ಷದ ಇನ್ನುಳಿದ ಅವಧಿಯಲ್ಲಿ ಕೇಂದ್ರದ ಬೊಕ್ಕಸಕ್ಕೆ ₹ 3,800 ಕೋಟಿ ಸೇರಲಿದೆ. ಪೂರ್ಣ ಹಣಕಾಸು ವರ್ಷದಲ್ಲಿ ₹ 10 ಸಾವಿರ ಕೋಟಿ ಆದಾಯದ ಅಂದಾಜು ಮಾಡಲಾಗಿದೆ. ನಾನಾ ನಮೂನೆಯ ತೆರಿಗೆಗಳು, ಉಪ ಕರಗಳಿಂದ ತತ್ತರಿಸಿದ ನಾಗರಿಕರ ಮೇಲೆ ಇದೊಂದು ಹೊರೆ. ಈ ಸೆಸ್‌ನಿಂದ ದೇಶದ ಹಾದಿ ಬೀದಿಗಳೆಲ್ಲ ಸ್ವಚ್ಛವಾಗುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಸಹಾಯಕ ನಾಗರಿಕರ ಜೇಬು ಮಾತ್ರ ಇನ್ನಷ್ಟು ತೆರಿಗೆ ಕಟ್ಟುವುದರಿಂದ ಸ್ವಚ್ಛವಾಗುವುದು ನಿಶ್ಚಿತ. ಮೋದಿಯವರ ಸ್ವಚ್ಛ ಭಾರತ ಆಂದೋಲನದ ನಂತರ ಸ್ವಚ್ಛತೆ ಬಗ್ಗೆ, ಆರೋಗ್ಯ ರಕ್ಷಣೆಯೂ ಸೇರಿದಂತೆ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಸ್ವಲ್ಪಮಟ್ಟಿಗೆ ಜಾಗೃತಿ ಮೂಡಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಯಾವ ಪ್ರಮಾಣದಲ್ಲಿ ಹಾದಿ ಬೀದಿಗಳು, ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿ, ಮಿರಮಿರ ಹೊಳೆಯಬೇಕಾಗಿತ್ತೊ ಆ ಥರ ಏನೂ ಕಾಣುತ್ತಿಲ್ಲ. ಸ್ವಚ್ಛತೆಯನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡವರು ಕಡಿಮೆ. ಕೈಯಲ್ಲಿ ಪೊರಕೆ ಹಿಡಿದು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಗುಡಿಸಿದಂತೆ ಮಾಡಿ ಕ್ಯಾಮೆರಾಗಳಿಗೆ ಪೋಸು ಕೊಟ್ಟು ಹೋದವರೇ ಹೆಚ್ಚು. ಎಲ್ಲವನ್ನೂ ಸರ್ಕಾರವೇ ಮಾಡಲಿ ಎನ್ನುವ ನಮ್ಮ ಮನೋಭಾವ ಕೂಡ ಇದಕ್ಕೆ ಕಾರಣವಾಗಿರಬಹುದು. ಅದಕ್ಕಿಂತ ಹೆಚ್ಚಾಗಿ ಕಸ ತೆಗೆಸಿ ಚೊಕ್ಕಟವಾಗಿ ಇಡುವುದು ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗಳ, ಪಟ್ಟಣ ಮತ್ತು ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳು, ಪಾಲಿಕೆಗಳ ಅತ್ಯಂತ ಪ್ರಮುಖ ಕರ್ತವ್ಯ. ಹೀಗಿರುವಾಗ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಯಾಕೆ ಕೈ ಹಾಕಬೇಕು? ಸ್ವಚ್ಛತೆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲು ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ತಾಂತ್ರಿಕ, ಆರ್ಥಿಕ ನೆರವು ನೀಡಿ ಅವನ್ನು ಬಲಪಡಿಸುವ ಕೆಲಸವನ್ನು ಏಕೆ ಮಾಡಬಾರದು? ತಿಂಗಳ ಮಧ್ಯದಲ್ಲಿ ಸೆಸ್ ಜಾರಿಗೆ ತಂದಿರುವುದರಿಂದ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಕಷ್ಟ ಎಂದು ಉದ್ಯಮ ವಲಯ ಅಪಸ್ವರ ಎತ್ತಿದೆ. ಸೆಸ್ ಜಾರಿಗೆ ತರುವ ಮುನ್ನ ಸಾಕಷ್ಟು ಸಮಯಾವಕಾಶ ಕೊಟ್ಟಿಲ್ಲ, ಅಲ್ಲದೆ ಇದು ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವ ಆಶಯಕ್ಕೆ ವ್ಯತಿರಿಕ್ತವಾಗಿದೆ ಎಂಬುದು ಭಾರತೀಯ ಕೈಗಾರಿಕೆಗಳ ಮಹಾಸಂಘ ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿವೆ. ಹೊಸ ಸೆಸ್‌ನ ಬಳಕೆ ಹೇಗೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಯಾರಿಗೂ ಇಲ್ಲ. ಇದುವರೆಗಿನ ಸಾಧನೆಗಳ ಲೆಕ್ಕಾಚಾರವನ್ನೂ ಕೊಟ್ಟಿಲ್ಲ. ಆದ್ದರಿಂದ ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹೊಸ ಹೊಸ ಕಾರ್ಯಕ್ರಮ ಘೋಷಿಸಿ, ಅದರ ಜಾರಿಗೆ ನಾಗರಿಕರ ಬೆನ್ನ ಮೇಲೆ ತೆರಿಗೆಯ ಹೊರೆ ಹೇರುವುದು ಸರಿಯಾದ ಆಡಳಿತ ವಿಧಾನವಲ್ಲ. ‘ನಮ್ಮಿಂದ ಸರ್ಕಾರ ಸ್ವಚ್ಛತಾ ಸೆಸ್ ವಸೂಲು ಮಾಡುತ್ತಿದೆ, ಆದ್ದರಿಂದ ಸ್ವಚ್ಛತೆ ಕೆಲಸವನ್ನೂ ಅದೇ ಮಾಡಲಿ, ನಾವ್ಯಾಕೆ ಮಾಡಬೇಕು’ ಎಂಬ ಸಿಟ್ಟು ಜನರಲ್ಲಿ ಬಂದರೆ ಇಡೀ ಯೋಜನೆಯ ಉದ್ದೇಶವೇ ತಲೆಕೆಳಗಾಗುತ್ತದೆ. ಇದನ್ನೆಲ್ಲ ಸರ್ಕಾರ ಗಮನಕ್ಕೆ ತೆಗೆದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.