ಐಎಸ್ ವಿರುದ್ಧದ ಹೋರಾಟಕ್ಕೆ ಸಮನ್ವಯದ ನಡೆ ಆರ್ಥಿಕ ಕಾಳಜಿಯ ವಿಚಾರಗಳು ಸಾಮಾನ್ಯವಾಗಿ ಜಿ 20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಾಧಾನ್ಯ ಪಡೆಯುತ್ತವೆ. ಆದರೆ ಮೊನ್ನೆ ಟರ್ಕಿಯ ಅಂಟಾಲ್ಯದಲ್ಲಿ ನಡೆದ ಜಿ 20 ರಾಷ್ಟ್ರಗಳ ಶೃಂಗಸಭೆಯಲ್ಲಿ, ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನೆ ವಿಚಾರವೇ ಕೇಂದ್ರಬಿಂದುವಾಯಿತು. 129 ಜನರನ್ನು ಬಲಿ ಪಡೆದಂತಹ ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ವಿಚಾರದ ಚರ್ಚೆ ಈ ಶೃಂಗಸಭೆಯಲ್ಲಿ ಪ್ರಾಧಾನ್ಯ ಪಡೆಯಿತು. ಐಎಸ್ ವಿರುದ್ಧದ ಹೋರಾಟ ಕುರಿತಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಸಭೆಯಲ್ಲಿ ಚರ್ಚೆ ನಡೆಸಿದ್ದು ಮುಖ್ಯವಾದದ್ದು. ಅದರಲ್ಲೂ ಇಂತಹದ್ದೊಂದು ಹೋರಾಟದಲ್ಲಿ ಪ್ರದರ್ಶಿಸಬೇಕಾದ ಏಕತೆಗೆ ಒತ್ತು ನೀಡಿದ್ದು ಸರಿಯಾದ ನಡೆ. ಈಗಾಗಲೇ ಐಎಸ್ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ಫ್ರಾನ್ಸ್ ಸರ್ಕಾರ ತೀವ್ರಗೊಳಿಸಿದೆ. ರಷ್ಯಾ ಸಹ ಫ್ರಾನ್ಸ್ ಜೊತೆ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂಬುದು ವಿಶೇಷ. ಭಯೋತ್ಪಾದನೆಯನ್ನು ಒಟ್ಟಾಗಿ ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ರಷ್ಯನ್ ನಾಯಕರು ಜಿ 20 ಶೃಂಗಸಭೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ್ದು, ಪರಸ್ಪರ ಸಹಕಾರ ಬಲವರ್ಧನೆಯ ಮಾತುಕತೆಗಳು ಮುಂದಿನ ದಿನಗಳಲ್ಲಿ ಮುಂದುವರಿಯಲಿವೆ. ಸಿರಿಯಾದಲ್ಲಿ ಈ ಮುಂಚೆ ರಷ್ಯಾ ಕೈಗೊಂಡಿದ್ದ ವೈಮಾನಿಕ ದಾಳಿಗಳ ಬಗ್ಗೆ ರಷ್ಯಾ ಮತ್ತು ಅಮೆರಿಕ ಮಧ್ಯೆ ತಿಕ್ಕಾಟ ಇತ್ತು. ಶೃಂಗಸಭೆಗೆ ಕೆಲವು ದಿನಗಳಿಗೆ ಮುಂಚೆಯೂ ರಷ್ಯಾ ಮತ್ತು ಅಮೆರಿಕ ಪರಸ್ಪರ ವಿಭಿನ್ನ ನಿಲುವುಗಳನ್ನು ಹೊಂದಿದ್ದವು. ಸಿರಿಯಾ ಅಧ್ಯಕ್ಷ ಬಷರ್ ಅಲ್ – ಅಸ್ಸಾದ್‌ಗೆ ಬೆಂಬಲ ಅಥವಾ ವಿರೋಧದ ಕುರಿತಾದ ವಿಭಿನ್ನ ನಿಲುವುಗಳು ಈ ತಿಕ್ಕಾಟಕ್ಕೆ ಮೂಲ ಕಾರಣ. ಅಸ್ಸಾದ್‌ರನ್ನು ವಿರೋಧಿಸುವ ಅನೇಕ ಗುಂಪುಗಳಿಗೆ ಪಶ್ಚಿಮ ರಾಷ್ಟ್ರಗಳ ಬೆಂಬಲ ಇದೆ. ಈವರೆಗೆ ಇಂತಹ ಗುಂಪುಗಳನ್ನು ರಷ್ಯನ್ ವೈಮಾನಿಕ ದಾಳಿಗಳು ಗುರಿಯಾಗಿರಿಸಿಕೊಂಡಿದ್ದವು. ಆದರೆ ಈಗ ಐಎಸ್ ವಿರುದ್ಧ ಹೋರಾಡಲು ಜಿ 20 ನಾಯಕರು ಒಟ್ಟಾಗಿದ್ದಾರೆ ಎಂಬುದು ಸಕಾರಾತ್ಮಕ ಅಂಶ. ಐಎಸ್ ವಿರುದ್ಧದ ಹೋರಾಟಕ್ಕೆ ಹೆಚ್ಚು ಪ್ರಬಲ ಹಾಗೂ ಸಮನ್ವಯದ ಮಾರ್ಗಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತೂ ಜಿ 20 ಶೃಂಗಸಭೆಯಲ್ಲಿ ಚರ್ಚೆಗಳಾಗಿವೆ. ಐಎಸ್ ದುರ್ಬಲಗೊಳಿಸುವಲ್ಲಿ ರಷ್ಯಾದ ಪಾತ್ರವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ಲಾಘಿಸಿರುವುದು ಹೊಸ ಬೆಳವಣಿಗೆ. ರಷ್ಯಾವನ್ನು ಟೀಕಿಸುತ್ತಲೇ ಇದ್ದ ಅಮೆರಿಕದ ಧೋರಣೆ ಬದಲಾಗಿರುವುದರ ಸೂಚಕ ಇದು. ಪುಟಿನ್ ಜೊತೆ ಕೆಲಸ ಮಾಡುವ ಅಮೆರಿಕದ ಇಚ್ಛೆಗೆ ಇದು ಸಂಕೇತ ಎಂದು ಭಾವಿಸಲು ಅವಕಾಶವಿದೆ. ಇರಾಕ್ ಹಾಗೂ ಸಿರಿಯಾಗಳಲ್ಲಿ ವಿಶೇಷ ಕಾರ್ಯಾಚರಣೆ ಪಡೆಗಳ ಬಳಕೆ ತೀವ್ರಗೊಳಿಸುವುದಾಗಿಯೂ ಒಬಾಮ ಹೇಳಿದ್ದಾರೆ. ಸಿರಿಯಾದ ಅಂತರ್ಯುದ್ಧ, ಐಎಸ್ ಉಗ್ರವಾದದ ಬೆಳವಣಿಗೆ ಹಾಗೂ ಇದರಿಂದಾಗಿ ನಿರಾಶ್ರಿತರಾದವರ ಸಾಮೂಹಿಕ ವಲಸೆ– ಈ ಎಲ್ಲಾ ವಿಚಾರಗಳ ಬಗ್ಗೆ ಸಮನ್ವಯದ ಚರ್ಚೆಗಳಿಗೆ ಜಿ 20 ರಾಷ್ಟ್ರಗಳ ನಾಯಕರು ಮುಂದಾಗಿದ್ದಾರೆ. ಈ ಎಲ್ಲಾ ವಿಚಾರಗಳು, ವಾಸ್ತವದಲ್ಲಿ ಮುಂದೆ ಹೇಗೆ ಸಾಕಾರವಾಗುತ್ತವೆ ಎಂಬುದು ಮುಖ್ಯ. ಐಎಸ್ ವಿರುದ್ಧದ ಹೋರಾಟಕ್ಕೆ ವೈಮಾನಿಕ ದಾಳಿಗಳಷ್ಟೇ ಸಾಕಾಗುವುದಿಲ್ಲ. ಇರಾಕ್ ಹಾಗೂ ಸಿರಿಯಾಗಳಿಗೆ ಶಸ್ತ್ರಾಸ್ತ್ರ ಸರಬರಾಜು ನಿಲ್ಲಿಸಲು ಸಮಗ್ರ ಪ್ರಯತ್ನಗಳು ಆಗಬೇಕು. ಸಿರಿಯಾದ ಪ್ರತಿಪಕ್ಷಗಳಿಗೆ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು, ಸೌದಿ ಅರೇಬಿಯಾ, ಟರ್ಕಿ ಹಾಗೂ ಕತಾರ್‌ಗಳು ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನು ಮೊದಲು ನಿಲ್ಲಿಸಬೇಕು. ಏಕೆಂದರೆ, ಈ ಶಸ್ತ್ರಾಸ್ತ್ರಗಳು ಐಎಸ್ ಉಗ್ರರನ್ನು ತಲುಪುತ್ತಿವೆ. ಮುಖ್ಯವಾಗಿ, ಸಂಘರ್ಷವನ್ನು ಅಂತ್ಯಗೊಳಿಸಲು ರಾಜಕೀಯ ನೆಲೆಯಲ್ಲಿ ಏಕತೆ ಅಗತ್ಯ. ಐಎಸ್ ವಿರುದ್ಧದ ಸೆಣಸಾಟ ಮಾತ್ರವಲ್ಲ ಇತರ ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟಕ್ಕೂ ಜಿ 20 ರಾಷ್ಟ್ರಗಳ ಮಧ್ಯದ ಸಹಭಾಗಿತ್ವ ವಿಶ್ವಸಂಸ್ಥೆಯಲ್ಲಿ ಹೆಚ್ಚಿನ ಸಹಕಾರಕ್ಕೆ ದಾರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.