ಗ್ರಾಮ ಪಂಚಾಯಿತಿಗಳಿಗೆ ಬಲ ಕೊನೆಗೂ ಕೂಡಿಬಂತು ಕಾಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು, ಆ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮಾಡಬೇಕು ಎಂಬ ಬೇಡಿಕೆ ದೀರ್ಘ ಕಾಲದಿಂದಲೂ ಇದೆ. ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾದ 2015ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಮಸೂದೆ ಆ ದಿಸೆಯಲ್ಲಿ ಸಕಾರಾತ್ಮಕವಾದ ಹೆಜ್ಜೆ. ಏಕೆಂದರೆ ಸ್ವಂತ ಆದಾಯ ಮೂಲಗಳನ್ನು ಸರಿಯಾಗಿ ಕ್ರೋಡೀಕರಿಸಿಕೊಳ್ಳಲು ಸಾಧ್ಯವಾಗದೆ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿದ್ದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಬಲ ತುಂಬುವ, ಅಧಿಕಾರದ ಜತೆಗೆ ಜವಾಬ್ದಾರಿಯನ್ನೂ ಕೊಟ್ಟು ಮಹತ್ವ ನೀಡುವ ಪ್ರಯತ್ನ ಮಸೂದೆಯಲ್ಲಿ ಎದ್ದು ಕಾಣುತ್ತದೆ. ಖಾಲಿ ಭೂಮಿ, ಗಾಳಿ ವಿದ್ಯುತ್‌ ಯಂತ್ರ, ಸೌರಶಕ್ತಿ ಘಟಕಗಳು, ಮನರಂಜನಾ ಕೇಂದ್ರ ಮುಂತಾದ ಬಾಬ್ತಿನಿಂದ ಶುಲ್ಕ ಸಂಗ್ರಹ ಸೇರಿದಂತೆ ಹೊಸ ಹೊಸ ಮೂಲಗಳಿಂದ ಆದಾಯ ಹೆಚ್ಚಿಸಿಕೊಳ್ಳಲು ಮಸೂದೆಯಲ್ಲಿ ಅವುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅವುಗಳನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವ ಉತ್ಸಾಹದಲ್ಲಿ ಪ್ರಸ್ತಾವಿಸಲಾದ ಕೆಲ ತೆರಿಗೆಗಳು ಅಪ್ರಬುದ್ಧ ಆಲೋಚನೆಯಿಂದ ಕೂಡಿವೆ. ಹಳ್ಳಿ ಜನ ಜೀವನೋಪಾಯಕ್ಕೆ ಸಾಕಿದ ಜಾನುವಾರುಗಳನ್ನು ತಮ್ಮದಲ್ಲದ ಸ್ಥಳದಲ್ಲಿ ಮೇಯಲು ಬಿಟ್ಟರೆ ತಿಂಗಳಿಗೆ ಒಂದೊಂದು ಜಾನುವಾರಿಗೆ 5 ರೂಪಾಯಿ ತೆರಿಗೆ ಕೊಡಬೇಕು, ಮಾರಾಟಕ್ಕಾಗಿ ದನ ತಂದರೆ ಅಥವಾ ಪಂಚಾಯಿತಿ ಜಾಗದಲ್ಲಿ ಚಕ್ಕಡಿ ನಿಲ್ಲಿಸಿದರೆ ದಿನಕ್ಕೆ 5 ರೂಪಾಯಿ ಶುಲ್ಕ ತೆರಬೇಕು ಎನ್ನುವುದು ಹಾಸ್ಯಾಸ್ಪದ. ಏಕೆಂದರೆ ಯಾರ ಮನೆಯಲ್ಲಿ ಎಷ್ಟು ದನಕರುಗಳಿವೆ, ಅವನ್ನು ಎಲ್ಲಿ ಮೇಯಿಸುತ್ತಾರೆ ಎಂದು ಲೆಕ್ಕ ಹಾಕಲು, ಯಾರು ಎಲ್ಲಿ ಎಷ್ಟು ಹೊತ್ತು ಚಕ್ಕಡಿ ನಿಲುಗಡೆ ಮಾಡಿದ್ದಾರೆ ಎಂದು ಲೆಕ್ಕ ಇಡಲು ಪಂಚಾಯಿತಿಗಳು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ವಸೂಲಾಗುವ ಶುಲ್ಕಕ್ಕಿಂತ ಅವರ ಸಂಬಳ, ಸಾರಿಗೆ, ಭತ್ಯೆಗೆ ಆಗುವ ಖರ್ಚು ಜಾಸ್ತಿಯಾದರೆ ನಷ್ಟ ಯಾರಿಗೆ? ಅದನ್ನು ಪಂಚಾಯಿತಿಗಳೇ ಭರಿಸಬೇಕಾಗುತ್ತದೆ. ಆದರೂ ಇಂಥ ಕೆಲ ಲೋಪಗಳನ್ನು ಬಿಟ್ಟರೆ ಮಸೂದೆ ಒಟ್ಟಾರೆಯಾಗಿ ಉತ್ತಮ ಅಂಶಗಳನ್ನು ಒಳಗೊಂಡಿದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಹೊಣೆಗಾರಿಕೆ ನಿಗದಿಯಾಗಿದೆ. ಪ್ರಾಥಮಿಕ ಶಾಲೆಗಳ ಮೇಲುಸ್ತುವಾರಿ ಗ್ರಾಮ ಪಂಚಾಯಿತಿಗೆ ದಕ್ಕಲಿದೆ. 80ರ ದಶಕದಲ್ಲಿದ್ದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮತ್ತೆ ರಾಜ್ಯ ಸಚಿವರ ಸ್ಥಾನಮಾನ ದೊರೆಯಲಿದೆ. ಇದರಿಂದಾಗಿ ಅವರು ತಮ್ಮ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಶಾಹಿ ಮೇಲೆ ಪರಿಣಾಮಕಾರಿಯಾಗಿ ನಿಗಾ ಇಡಲು ಸಾಧ್ಯವಾಗಲಿದೆ. ಜನರಿಗೆ ಹೆಚ್ಚು ಹತ್ತಿರವಾಗಿರುವ ಗ್ರಾಮ ಪಂಚಾಯಿತಿಗಳಿಗೆ ದೇಸಿ ಬೀಜಗಳ ಸಂರಕ್ಷಣೆ, ಕೋಮು ಸೌಹಾರ್ದ ರಕ್ಷಣೆಯಂಥ ಪ್ರಮುಖ ವಿಷಯಗಳ ಹೊಣೆ ವಹಿಸುವುದು ಸ್ವಾಗತಾರ್ಹ. ಹಾಗೆ, ನೋಡಿದರೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಮತ್ತು ಅಬ್ದುಲ್ ನಜೀರ್‌ ಸಾಬ್ ಅವರು ಪಂಚಾಯತ್‌ ರಾಜ್ ಮಂತ್ರಿಯಾಗಿದ್ದ ಕಾಲದಲ್ಲಿ ಪಂಚಾಯತ್ ವ್ಯವಸ್ಥೆಗೆ ಬಹಳ ಬಲ ತುಂಬಿದ್ದರು. ಪಂಚಾಯಿತಿಗಳು ಗ್ರಾಮಾಭಿವೃದ್ಧಿಯ ಕೇಂದ್ರಬಿಂದು ಆಗಬೇಕು ಎಂದು ಕನಸು ಕಂಡಿದ್ದರು. ತಮ್ಮ ಮಹತ್ವ ಕಡಿಮೆಯಾಗುತ್ತದೆ ಎಂಬ ಭಯದಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅಧಿಕಾರ ಕೊಡಲು ಆಗಲೂ ಶಾಸಕರ ವಿರೋಧ ಇತ್ತು. ಆದರೆ ಅದನ್ನೆಲ್ಲ ಮೆಟ್ಟಿ ನಿಲ್ಲುವ ಧೈರ್ಯ, ಬದ್ಧತೆ ಹೆಗಡೆ ಮತ್ತು ನಜೀರ್ ಸಾಬ್ ಅವರಲ್ಲಿತ್ತು. ಹೀಗಾಗಿಯೇ ಅವರ ಕಾಲದಲ್ಲಿ ಹಳ್ಳಿಯಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಪಂಚಾಯತ್ ಸಂಸ್ಥೆಗಳಿಗೆ ಬಹಳಷ್ಟು ಅಧಿಕಾರ ದೊರೆಯಿತು. ಆದರೆ ನಂತರ ಬಂದ ಸರ್ಕಾರಗಳು ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರವನ್ನು ಒಂದೊಂದಾಗಿ ಕಿತ್ತುಕೊಂಡು ನಾಮಕಾವಸ್ಥೆ ಮಟ್ಟಕ್ಕೆ ತಂದು ನಿಲ್ಲಿಸಿದವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಪಂಚಾಯತ್‌ ರಾಜ್ ವ್ಯವಸ್ಥೆ ಸುಧಾರಣೆಗೆ ಶಾಸಕ ರಮೇಶ್‌ಕುಮಾರ್ ಸಮಿತಿ ರಚಿಸಿತಾದರೂ, ಅದರ ಶಿಫಾರಸುಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಹಿಂದೇಟು ಹಾಕಿತ್ತು. ಕಳೆದ ಅಧಿವೇಶನದಲ್ಲಿ ಸಮಿತಿಯ ಶಿಫಾರಸುಗಳ ಕೈ ಕಾಲು, ಬಾಲ ಕತ್ತರಿಸಿ ಮಂಡಿಸಿದ್ದ ಮಸೂದೆಯೇ ಇದಕ್ಕೊಂದು ಸಾಕ್ಷಿ. ಆದರೆ ಈಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದಾಗ, ಸರ್ಕಾರದ ಕಿವಿ ಹಿಂಡಿದ ಪರಿಣಾಮವಾಗಿ ಪರಿಷ್ಕೃತ ರೂಪದಲ್ಲಿ ಈ ಮಸೂದೆ ಮಂಡನೆಯಾಗಿದೆ. ಮೂಲ ಶಿಫಾರಸುಗಳಲ್ಲಿನ ಬಹುತೇಕ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿನ ಆಶಯ, ಉದ್ದೇಶಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆ ಗ್ರಾಮೀಣ ಚಿತ್ರಣವೇ ಬದಲಾಗಲಿದೆ. ಆದರೆ ಅದಕ್ಕೆ ಸರ್ಕಾರ, ಶಾಸಕರು ಸಹಕಾರ ಕೊಡಬೇಕು. ಏಕೆಂದರೆ ಸ್ಥಳೀಯ ಸರ್ಕಾರ ಎಂದೇ ಗುರುತಿಸಲಾಗುವ ಪಂಚಾಯಿತಿಗಳು ಗಟ್ಟಿಯಾಗಬೇಕಾದರೆ, ಜನತಂತ್ರ ತಳಮಟ್ಟದಲ್ಲಿ ಬೇರೂರಬೇಕಾದರೆ ವಿಕೇಂದ್ರೀಕರಣ ಅಗತ್ಯ. ಅದನ್ನು ಈ ಮಸೂದೆ ಮೂಲಕ ಸಾಕಾರಗೊಳಿಸಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.