ಎಂಡೊ ಸಂತ್ರಸ್ತರ ಬವಣೆ ನಿವಾರಿಸಲು ಮುಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೊಸಲ್ಫಾನ್‌ ವಿಷಕಾರಿ ದ್ರಾವಣದಿಂದ ತೀವ್ರ ಅನಾರೋಗ್ಯ ಅನುಭವಿಸುತ್ತಿರುವ ಸಂತ್ರಸ್ತರ ಗೋಳು ಇದೀಗ ರಾಜಧಾನಿಯಲ್ಲಿ ಪ್ರತಿಧ್ವನಿಸಿದೆ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಸರ್ಕಾರಿ ಸ್ವಾಮ್ಯದ ನಿಗಮವು ಗೇರುತೋಟಗಳ ಮೇಲೆ ಹೆಲಿಕಾಪ್ಟರ್‌ ಮೂಲಕ ಸಿಂಪಡಿಸಿದ ಎಂಡೊಸಲ್ಫಾನ್‌ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನರ ಬದುಕನ್ನೇ ಕಿತ್ತುಕೊಂಡಿರುವುದು ನಿಜಕ್ಕೂ ಮನಕಲಕುವ ದುರಂತ. ಗೇರುತೋಟಗಳ ಸುತ್ತಲಿನ ಹಳ್ಳಿಗಳಲ್ಲಿ ಏಕಾಏಕಿ ಅಂಗವಿಕಲ ಮಕ್ಕಳು, ಜಾನುವಾರುಗಳು ಜನಿಸತೊಡಗಿದ್ದು, ಕ್ಯಾನ್ಸರ್‌ಸಹಿತ ಮಾರಕ ರೋಗಗಳ ಸಂಖ್ಯೆ ಏರಿಕೆಯಾಗಿದ್ದು, ನರಗಳಿಗೆ ಸಂಬಂಧಿಸಿದ ರೋಗಿಗಳ ಹೆಚ್ಚಳವಾದದ್ದು- ಎಲ್ಲವೂ ಎಂಡೊಸಲ್ಫಾನ್‌ ಎಂಬ ವಿಷಕಾರಿ ಕೀಟನಾಶಕದ ಅನಾಹುತದ ಕಡೆಗೇ ಬೆರಳು ತೋರಿಸಿತ್ತು. ಆದರೆ ಅಧಿಕಾರಿಗಳು ಇದನ್ನು ಎಂಡೊಸಲ್ಫಾನ್‌ ಅನಾಹುತ ಎಂದು ಒಪ್ಪಲು ತಯಾರಿರಲಿಲ್ಲ. ಕೊನೆಗೆ ಕೇರಳ ಮತ್ತು ಕರ್ನಾಟಕದ ಸಂತ್ರಸ್ತರು ಆಯಾ ರಾಜ್ಯದ ಹೈಕೋರ್ಟ್‌ ಮೊರೆ ಹೋಗಿ ಎಂಡೊಸಲ್ಫಾನ್‌ ಸಿಂಪರಣೆಯನ್ನು ನಿಲ್ಲಿಸಬೇಕಾಯಿತು. ಎಂಡೊ ಸಂತ್ರಸ್ತರಿಗೆ ಮಾಸಿಕ ಪರಿಹಾರಧನ, ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಪುನರ್ವಸತಿ ಒದಗಿಸಲೂ ಹೈಕೋರ್ಟ್‌ ಆದೇಶ ನೀಡಿತು. ಕರ್ನಾಟಕ ಸರ್ಕಾರ ಪ್ರಸಕ್ತ 2,693 ಎಂಡೊಸಲ್ಪಾನ್‌ ಸಂತ್ರಸ್ತರಿಗೆ ಅಂಗವೈಕಲ್ಯ ಪ್ರಮಾಣಕ್ಕೆ ತಕ್ಕಂತೆ 1,500 ರಿಂದ 3,000 ರೂಪಾಯಿವರೆಗೆ ಮಾಸಿಕ ಪರಿಹಾರ ನೀಡುತ್ತಿದೆ. ಆದರೆ ಕಳೆದ 4-5 ತಿಂಗಳಿಂದ ಈ ಪರಿಹಾರವೂ ಸಂತ್ರಸ್ತರ ಕೈಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದು ವಿಷಾದದ ಸಂಗತಿ. ಈ ದೂರನ್ನೂ ಸರ್ಕಾರದ ಕಿವಿಗೆ ಮುಟ್ಟಿಸಲು ಸಂತ್ರಸ್ತರು ತಮ್ಮ ಅಂಗವಿಕಲ ಮಕ್ಕಳನ್ನು ಎತ್ತಿಕೊಂಡು ಬೆಂಗಳೂರಿಗೆ ಬಂದು ಧರಣಿ ನಡೆಸಬೇಕೆ? ಕರಾವಳಿಯ ಎರಡು ಜಿಲ್ಲೆಗಳಲ್ಲಿ ಇರುವ ಸುಮಾರು 20ರಷ್ಟು ಶಾಸಕರಿಗೆ ಈ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಕುಳಿತು ಬಗೆಹರಿಸಲು ಸಾಧ್ಯವಿಲ್ಲವೆ? ವಿಧಾನಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರೆ, ಆರೋಗ್ಯ ಸಚಿವರು ಸಂವೇದನಾಶೂನ್ಯರಂತೆ ಉತ್ತರ ನೀಡಿದ್ದಾರೆ. ‘ಈವರೆಗೆ ಆರೋಗ್ಯ ಇಲಾಖೆ ನೋಡಿಕೊಳ್ಳುತ್ತಿದ್ದ ಈ ಪರಿಹಾರದ ಕೆಲಸವನ್ನು ಮೂರು ತಿಂಗಳ ಹಿಂದೆ ಕಂದಾಯ ಇಲಾಖೆಗೆ ವಹಿಸಲಾಗಿದೆ. ಹಾಗಾಗಿ ತಾಂತ್ರಿಕ ಕಾರಣದಿಂದ 199 ಸಂತ್ರಸ್ತರಿಗೆ ಮಾತ್ರ ಪರಿಹಾರ ತಲುಪಿಲ್ಲ’ ಎನ್ನುವ ಉತ್ತರ ಸಚಿವರದ್ದು. ಸರ್ಕಾರದ ಕೆಲಸ ವಿಳಂಬವಿಲ್ಲದೆ ನಡೆಯಲು ‘ಸಕಾಲ’ದಂತಹ ಯೋಜನೆಗಳಿದ್ದರೂ, ಪರಿಹಾರ ಹಣ ಒದಗಿಸುವಲ್ಲಿ ವಿಳಂಬ ಏಕಾಗಿದೆ?ಎಂಡೊಸಲ್ಫಾನ್‌ ಸಂತ್ರಸ್ತರಿಗೆ 2 ಕಡೆ ಪಾಲನಾ ಕೇಂದ್ರಗಳನ್ನು ರಾಜ್ಯ ಸರ್ಕಾರವೇ ಸ್ಥಾಪಿಸಿದೆ. ಆದರೆ ಈ ಕೇಂದ್ರಗಳಿಗೆ ತಲಾ ಒಂದು ಕೋಟಿ ರೂಪಾಯಿ ಒದಗಿಸಿ ಬಲಗೊಳಿಸುವುದಾಗಿ ಸಚಿವರು ಹಿಂದೆ ನೀಡಿದ್ದ ಭರವಸೆಯನ್ನು ಮರೆತೇಬಿಟ್ಟಿದ್ದಾರೆ. ಎಂಡೊಸಲ್ಫಾನ್‌ ವಿಷದಿಂದಾಗಿ ಪರಿಸರದ ನೆಲ, ಜಲ ಮಲಿನಗೊಂಡಿದ್ದು ಈಗಲೂ ಈ ಭಾಗದಲ್ಲಿ ಅಂಗವೈಕಲ್ಯದ ಮಕ್ಕಳು ಜನಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಈ ವಿಷಕಾರಿ ದ್ರಾವಣದಿಂದಾಗಿ ಪರಿಸರದ ಮೀನು, ಜೇನು, ಕಪ್ಪೆ, ಹಕ್ಕಿ, ಕೋಳಿಗಳು ಸಾವನ್ನಪ್ಪಿದ್ದು ಪರಿಸರದ ಅಸಮತೋಲನಕ್ಕೂ ಕಾರಣವಾಗಿದೆ. ಕೇರಳದಲ್ಲಿ ಎಂಡೊಸಲ್ಫಾನ್‌ ಸಂತ್ರಸ್ತರಿಗೆ ನೀಡಿರುವ ಪರಿಹಾರ ಮಾದರಿಯದಾಗಿದ್ದು, ಅದನ್ನು ಅನುಸರಿಸಬೇಕೆಂಬ ಬೇಡಿಕೆಯನ್ನು ರಾಜ್ಯದ ಸಂತ್ರಸ್ತರು ಮುಂದಿಟ್ಟಿದ್ದಾರೆ. ಎಂಡೊಸಲ್ಫಾನ್‌ ಸಮಸ್ಯೆ ಕೇವಲ ಆ ಭಾಗದ ಕೆಲವೇ ಹಳ್ಳಿಗಳ ಸಮಸ್ಯೆ ಎನ್ನುವಂತೆ ಕನ್ನಡಿಗರು ನಿರ್ಲಿಪ್ತರಾಗಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಕೃಷಿ ಸಚಿವಾಲಯವಂತೂ ‘ಈ ಭಾಗದ ದೈಹಿಕ, ಮಾನಸಿಕ ವಿಕಲ್ಪಗಳು ಮತ್ತು ಎಂಡೊಸಲ್ಫಾನ್‌ ಬಳಕೆಯ ಮಧ್ಯೆ ಸಂಬಂಧವಿದೆಯೆ’ ಎನ್ನುವುದನ್ನು ಪತ್ತೆ ಹಚ್ಚಲು ಇತ್ತೀಚೆಗೆ ಇನ್ನೊಂದು ಸತ್ಯಶೋಧಕ ಸಮಿತಿಯನ್ನು ರಚಿಸಿದೆ! ಈಗಾಗಲೆ ಜಗತ್ತಿನಾದ್ಯಂತ ಸುಮಾರು 63 ದೇಶಗಳು ಎಂಡೊಸಲ್ಫಾನ್‌ ಬಳಕೆಯನ್ನು ನಿಷೇಧಿಸಿವೆ. ನಾವು ಸಮಿತಿಗಳ ಮೇಲೆ ಸಮಿತಿಗಳನ್ನು ರಚಿಸುತ್ತಿದ್ದೇವೆ. ಇಡೀ ಪ್ರಕರಣದಲ್ಲಿ ಸರ್ಕಾರ ತನ್ನ ನೈತಿಕ ತಪ್ಪೊಪ್ಪಿಗೆಯಿಂದ ಜಾರಿಕೊಳ್ಳುವಂತಿಲ್ಲ. ಎಂಡೊ ಪೀಡಿತರನ್ನು ಹೆಚ್ಚು ಮಾನವೀಯವಾಗಿ ನಡೆಸಿಕೊಂಡು ಅವರ ಚಿಕಿತ್ಸೆಯತ್ತ ಹೆಚ್ಚು ಮುತುವರ್ಜಿ ವಹಿಸಬೇಕು. ಭರವಸೆ ನೀಡಿದಂತೆ ಕೇರಳ ಮಾದರಿಯ ಪುನರ್ವಸತಿ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.