ಹೆಚ್ಚು ಸಂಬಳ ಪಡೆದರೆ ಸಾಲದು ದಕ್ಷತೆ ಸುಧಾರಿಸಬೇಕು ನ್ಯಾಯಮೂರ್ತಿ ಎ.ಕೆ. ಮಾಥುರ್ ಅಧ್ಯಕ್ಷತೆಯ ಏಳನೇ ವೇತನ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬರುವ ಜನವರಿ 1ರಿಂದ ಕೇಂದ್ರದ 47 ಲಕ್ಷ ನೌಕರರ ವೇತನ ಮತ್ತು 52 ಲಕ್ಷ ನಿವೃತ್ತ ನೌಕರರ ಪಿಂಚಣಿಯಲ್ಲಿ ಸರಾಸರಿ ಶೇ 23.55ರಷ್ಟು ಏರಿಕೆಯಾಗಲಿದೆ. ಈ ಹಿಂದೆಲ್ಲ ವೇತನ ಆಯೋಗದ ಶಿಫಾರಸನ್ನು ಸರ್ಕಾರ ಬಹುತೇಕ ಇಡಿಯಾಗಿ ಜಾರಿಗೊಳಿಸಿದೆ. ಹೀಗಾಗಿ ಈ ಸಲವೂ ಜಾರಿಗೆ ಬರುವುದರಲ್ಲಿ ಅನುಮಾನವೇ ಬೇಡ. ಇದರಿಂದ ಸಾಮಾನ್ಯ ಬೊಕ್ಕಸದ ಮೇಲೆ ₹ 73,650 ಕೋಟಿ, ರೈಲ್ವೆ ಬಜೆಟ್ ಮೇಲೆ ₹ 28,450 ಕೋಟಿ, ಅಂದರೆ ಒಟ್ಟಾರೆ ವರ್ಷಕ್ಕೆ ₹ 1.02 ಲಕ್ಷ ಕೋಟಿ ಹೊರೆ ಬೀಳಲಿದೆ. ಈಗಲೇ ವರ್ಷಕ್ಕೆ ಸಂಬಳ, ಪಿಂಚಣಿಗೆ ₹ 4.33 ಲಕ್ಷ ಕೋಟಿ ಖರ್ಚಾಗುತ್ತಿದೆ. ಅದು ಇನ್ನು ₹ 5.35 ಲಕ್ಷ ಕೋಟಿಗೆ ಹೆಚ್ಚಲಿದೆ. ಇತ್ತೀಚೆಗೆ ನಿವೃತ್ತ ಯೋಧರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ನಾಗರಿಕ ಸೇವಾ ನೌಕರರಿಗೂ ಅದೇ ಮಾದರಿಯ ಪಿಂಚಣಿ ವಿಸ್ತರಿಸಲು ಆಯೋಗ ಸಲಹೆ ಮಾಡಿದೆ. ಆ ಹೊರೆಯೂ ಸೇರಿದರೆ ನೌಕರಶಾಹಿ ಮೇಲೆ ಮಾಡುವ ಖರ್ಚು ಮತ್ತಷ್ಟು ಹೆಚ್ಚುತ್ತದೆ. ವಿತ್ತೀಯ ಕೊರತೆ, ಅಂದರೆ ಎಲ್ಲ ಮೂಲಗಳಿಂದ ಬೊಕ್ಕಸಕ್ಕೆ ಬರುವ ಆದಾಯ ಮತ್ತು ವೆಚ್ಚದ ಅಂತರವನ್ನು ಈ ಸಲ ಶೇ 3.9ಕ್ಕೆ ಮಿತಿಗೊಳಿಸಲು ಹಣಕಾಸು ಸಚಿವರು ಗುರಿ ಹಾಕಿಕೊಂಡಿದ್ದರು. ಆದಾಯಕ್ಕಿಂತ ಖರ್ಚು ₹ 5.5 ಲಕ್ಷ ಕೋಟಿ ಹೆಚ್ಚಿರಲಿದೆ ಎಂದು ಅಂದಾಜು ಮಾಡಿದ್ದರು. ಆದರೆ ವೇತನ ಏರಿಕೆಯಿಂದ ವಿತ್ತೀಯ ಕೊರತೆ ಇನ್ನೂ 0.65ರಷ್ಟು ಹೆಚ್ಚಲಿದೆ. ಇದನ್ನು ಸರಿದೂಗಿಸಿಕೊಳ್ಳಲು ಸರ್ಕಾರ ಸಾಲ ಎತ್ತಬೇಕು ಅಥವಾ ತೆರಿಗೆ ಹೆಚ್ಚಿಸಬೇಕು. ಇದೇನೇ ಆದರೂ ಈ ಹೊರೆಯನ್ನು ತೆರಿಗೆದಾರರೇ ಹೊರಬೇಕು. ವಿತ್ತೀಯ ಕೊರತೆ ಹಿಗ್ಗುವುದು ಆರೋಗ್ಯಕರ ಲಕ್ಷಣ ಅಲ್ಲ ಎಂದು ಕೆಲ ಆರ್ಥಿಕ ವಿಶ್ಲೇಷಣಾ ಸಂಸ್ಥೆಗಳು ಈಗಾಗಲೆ ಎಚ್ಚರಿಕೆ ನೀಡಿವೆ. ಅಲ್ಲದೆ ಈ ವರ್ತುಲ ಇಷ್ಟಕ್ಕೇ ನಿಲ್ಲುವುದಿಲ್ಲ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೌಕರರು ಕೂಡ ವೇತನ, ಪಿಂಚಣಿ ಹೆಚ್ಚಳಕ್ಕೆ ಪಟ್ಟು ಹಿಡಿಯುವುದರಿಂದ ಹಾಗೂ ಅವರ ಬೇಡಿಕೆಗೂ ಸರ್ಕಾರಗಳು ಮಣಿಯುವುದರಿಂದ ಆರ್ಥಿಕತೆ ಮೇಲೆ ಒತ್ತಡ ಹೆಚ್ಚುವುದು ನಿಶ್ಚಿತ. ವಿವಿಧ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಸರ್ಕಾರ ನಿರ್ವಹಿಸಲೇಬೇಕಾದ ಹೊಣೆಗಾರಿಕೆಗಳಿಗೆ ಹಣ ಕಡಿಮೆಯಾಗುತ್ತದೆ. ಕಾಲಕಾಲಕ್ಕೆ ಸಂಬಳ, ನಿವೃತ್ತಿ ವೇತನ ಹೆಚ್ಚಿಸಬೇಕು ಎನ್ನುವುದೇನೋ ನಿಜ. ಅದಕ್ಕಾಗಿ ಖರ್ಚಾಗುವ ಹಣ ಜನ ಸಾಮಾನ್ಯರ ಮೇಲೆ ಹೇರಿದ ತೆರಿಗೆಗಳಿಂದ ಸಂಗ್ರಹವಾಗಿದ್ದು. ಹಾಗಾಗಿ ತಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪ್ರಜೆಗಳಿಗೆ ಶೀಘ್ರ, ಕಿರುಕುಳ ರಹಿತ, ದಕ್ಷ ಸೇವೆ ನೀಡುವುದು ನೌಕರರ ಹೊಣೆ. ಆದರೆ ಸರ್ಕಾರಿ ಕಚೇರಿಗಳು, ಅಲ್ಲಿನ ಕಾರ್ಯವೈಖರಿ ನೋಡಿದರೆ ರೋಸಿ ಹೋಗುತ್ತದೆ. ಕೊಕ್ಕೆ ಹಾಕುವುದೇ ದೊಡ್ಡ ಕೆಲಸ, ಅರ್ಜಿ ಹಿಡಿದು ಕಚೇರಿಗಳಿಗೆ ಬರುವ ಜನಸಾಮಾನ್ಯರನ್ನು ಅಲೆಸುವುದೇ ದಕ್ಷತೆ ಎಂದು ತಿಳಿದುಕೊಂಡ ನೌಕರರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಈ ರೀತಿಯ ವಿಕೃತ ಸಂತೋಷದ ಮನೋಭಾವ ಬದಲಿಸಿಕೊಳ್ಳಬೇಕು. ಸಂಬಳ ಏರಿಕೆ ಜತೆಗೆ ದಕ್ಷತೆ, ಸಮಯ ಪಾಲನೆ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ವೇತನ ಹೆಚ್ಚಳ ಕೇಳುವ, ಹಕ್ಕಿನಿಂದ ಪಡೆದುಕೊಳ್ಳುವ ನೈತಿಕ ಶಕ್ತಿ ಬರುತ್ತದೆ. ಇದೆಲ್ಲದರ ಮಧ್ಯೆ ಒಂದಿಷ್ಟು ಆಶಾದಾಯಕ ಚಿತ್ರಣವೂ ಇರುವುದನ್ನು ಮರೆಯುವಂತಿಲ್ಲ. ವೇತನ ಹೆಚ್ಚಳ ಎನ್ನುವುದು ಅದ್ಧೂರಿ ಮದುವೆ ಥರ. ವೇತನ ಹೆಚ್ಚಿಸಿದಾಗ ನೇರ ಮತ್ತು ಪರೋಕ್ಷ ತೆರಿಗೆಗಳ ರೂಪದಲ್ಲಿ ಬೊಕ್ಕಸಕ್ಕೆ ಒಂದಿಷ್ಟು ಹಣ ಮರಳಿ ಬರುತ್ತದೆ. ಗ್ರಾಹಕ ಉತ್ಪನ್ನಗಳು, ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ. ನಿರ್ಮಾಣ, ಪ್ರವಾಸ ಹೀಗೆ ನಾನಾ ವಲಯಗಳಲ್ಲಿ ವ್ಯಕ್ತಿಗತ ವೆಚ್ಚ ವೃದ್ಧಿಸುತ್ತದೆ. ಇದರಿಂದ ಸೇವಾ ಕ್ಷೇತ್ರ ಚುರುಕುಗೊಳ್ಳುತ್ತದೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿರುವಂಥವು. ಹಾಗಂತ ನೌಕರರ ಸಂಬಳ ಹೆಚ್ಚಿಸಿ ಸುಮ್ಮನಿರುವುದು ಸರಿಯಲ್ಲ. ದಕ್ಷತೆಗೆ ಅದನ್ನು ತಳಕು ಹಾಕುವ ದಿಟ್ಟತನವನ್ನು ಸರ್ಕಾರ ತೋರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.