ಆನೆಕಾಲು ರೋಗ ನಿಯಂತ್ರಣ ಜನರಲ್ಲಿ ಜಾಗೃತಿ ಮೂಡಲಿ ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿ ಆನೆಕಾಲು ರೋಗ ಉಲ್ಬಣಿಸಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದು ಆತಂಕಕಾರಿ. ಈಗಾಗಲೇ ಜಿಲ್ಲೆಯಲ್ಲಿ 612 ಮಂದಿ ಆನೆಕಾಲು ರೋಗ ಬಾಧಿತರಿದ್ದು ಅವರಿಗೆ ಔಷಧೋಪಚಾರ ನೀಡಲಾಗುತ್ತಿದೆ. ಇವರ ಜೊತೆಗೆ, ಈಗ ಮತ್ತೆ ಹೊಸದಾಗಿ 272 ಮಂದಿಯಲ್ಲಿ ಈ ರೋಗ ಇರುವುದು ದೃಢಪಟ್ಟಿದೆ ಎಂಬುದು ಆತಂಕವನ್ನು ಹೆಚ್ಚಿಸುವಂತಹದ್ದು. ಅದರಲ್ಲೂ ಬಾಗಲಕೋಟೆ ತಾಲ್ಲೂಕಿನ ಶಿರೂರ ಹಾಗೂ ಬೀಳಗಿ ತಾಲ್ಲೂಕಿನ ಗಿರಿಸಾಗರಗಳಲ್ಲಿ ಈ ಕಾಯಿಲೆ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡ, ಹುನಗುಂದ ತಾಲ್ಲೂಕಿನ ನಾಗೂರ ಹಾಗೂ ಕಮತಗಿಯಲ್ಲಿ ಆನೆಕಾಲು ರೋಗಿಗಳಿರುವುದು ಪತ್ತೆಯಾಗಿದೆ. ವಿಶೇಷ ಎಂದರೆ ಇವರಲ್ಲಿ ಬಹುತೇಕರು ನೇಕಾರರು. ಇವರ ವಾಸಸ್ಥಳಗಳ ಸುತ್ತಮುತ್ತಲ ಪರಿಸರ ಸೊಳ್ಳೆಗಳ ಆವಾಸಸ್ಥಾನವಾಗಿರುವುದಿಂದ ಅವರಲ್ಲಿ ಈ ರೋಗಬಾಧೆ ಹೆಚ್ಚಾಗಲು ಕಾರಣ ಎಂಬುದು ವೈದ್ಯರ ವಿವರಣೆ. ಅಲ್ಲದೆ, ಹುನಗುಂದ ತಾಲ್ಲೂಕಿನ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವೇ ದಿನಗಳ ಅಂತರದಲ್ಲಿ 356ಕ್ಕೂ ಅಧಿಕ ಜನರಲ್ಲಿ ಮಲೇರಿಯಾ ಕಾಣಿಸಿಕೊಂಡಿದೆ ಎಂಬುದೂ ಗಂಭೀರವಾದ ವಿಚಾರ. ಈ ಗ್ರಾಮಗಳ ವ್ಯಾಪ್ತಿಯಲ್ಲಿರುವ 179 ಗ್ರಾನೈಟ್ ಕ್ವಾರಿಗಳಲ್ಲಿ ನೀರು ನೆಲೆ ನಿಂತಿದ್ದು ಅವು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ಕಾಯಿಲೆ ಹೆಚ್ಚಳಕ್ಕೆ ಇದೂ ಕಾರಣ ಎಂಬುದು ಗ್ರಾಮಸ್ಥರ ದೂರು. ಜನಸಾಮಾನ್ಯರ ಬದುಕಿನ ಲಯ ತಪ್ಪಿಸುವ ಗಣಿಗಾರಿಕೆಯ ಕರಾಳ ಮುಖಗಳಿವು. ಸೊಳ್ಳೆಗಳಿಂದಾಗಿ ಹರಡುವ ಎಲ್ಲಾ ಬಗೆಯ ಕಾಯಿಲೆಗಳ ನಿಯಂತ್ರಣಕ್ಕೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕಾದುದು ಜಿಲ್ಲಾಡಳಿತದ ಕರ್ತವ್ಯ. ರಾಜ್ಯದಲ್ಲಿ ಒಟ್ಟು ಒಂಬತ್ತು ಜಿಲ್ಲೆಗಳು ಆನೆಕಾಲು ರೋಗ ಪೀಡಿತವಾಗಿವೆ ಎಂಬುದು ಸರಳವಾದ ಸಂಗತಿಯೇನಲ್ಲ. ಕ್ಯುಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದಾಗಿ ಆನೆಕಾಲು ರೋಗ ಬರುತ್ತದೆ. ತಗ್ಗು ಪ್ರದೇಶಗಳಲ್ಲಿ ನಿಲ್ಲುವ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣ. ಆನೆಕಾಲು ರೋಗ ಒಮ್ಮೆ ಬಂದರೆ ಅದನ್ನು ಗುಣಪಡಿಸುವುದು ಸಾಧ್ಯವಿಲ್ಲ. ಆದರೆ ರೋಗ ಬರುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ, ಈ ಕಾಯಿಲೆ ಕಾಯಂ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. ಈ ಅಂಗವೈಕಲ್ಯದ ಭೀಕರತೆಯಿಂದಾಗಿ ಸಾಮಾಜಿಕವಾಗಿ ಅಸ್ಪೃಶ್ಯ ಭಾವನೆಯನ್ನು ಅನುಭವಿಸುವ ಸ್ಥಿತಿ ರೋಗಿಗಳದ್ದಾಗುತ್ತದೆ. ಸಕಾಲಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಆನೆಕಾಲು ರೋಗ ಹರಡುವಿಕೆ ವ್ಯಾಪಕವಾಗುತ್ತದೆ ಎಂಬುದನ್ನು ಲಘುವಾಗಿ ಪರಿಗಣಿಸಲಾಗದು. ಹೀಗಾಗಿ ಆನೆಕಾಲು ರೋಗವನ್ನು ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸುವುದು ಮುಖ್ಯ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ಬಗ್ಗೆ ನಿಗಾವಹಿಸಿ ಆದ್ಯತೆಯ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದುದು ಅತ್ಯಗತ್ಯ. ಈ ವಿಚಾರದಲ್ಲಿ ಯಾವುದೇ ಲೋಪ ಇರಬಾರದು. ಈ ಸಂಬಂಧ ಜನರಲ್ಲಿ ಹುಸಿ ಭೀತಿ ಸೃಷ್ಟಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ನಕಲಿ ವೈದ್ಯರು ಜನರ ಭೀತಿಯ ಲಾಭ ಪಡೆಯುವುದಕ್ಕೂ ಅವಕಾಶ ಮಾಡಿಕೊಡಬಾರದು. ಇದಕ್ಕೆ ಮುಖ್ಯವಾಗಿ ಬೇಕಾದುದು ಜಾಗೃತಿ. ರಕ್ತದಲ್ಲಿ ಆನೆಕಾಲು ರೋಗದ ರೋಗಾಣು ಪತ್ತೆಯಾದಲ್ಲಿ ಅದನ್ನು ಮಾತ್ರೆಯ ಮೂಲಕ ನಿಯಂತ್ರಿಸಬಹುದು. ಆದರೆ ಕಾಲು ದಪ್ಪಗಾದ ನಂತರ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸೋಂಕು ಇರುವ ಪ್ರತಿಯೊಬ್ಬರೂ ಮಾತ್ರೆ ತೆಗೆದುಕೊಳ್ಳಲು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಕೊಟ್ಟ ಮಾತ್ರೆಗಳನ್ನೂ ಅಡ್ಡಪರಿಣಾಮಗಳಿಗೆ ಹೆದರಿ ಅನೇಕ ಮಂದಿ ಸರಿಯಾಗಿ ತೆಗೆದುಕೊಳ್ಳುವುದಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಜನರಿಗೆ ಇರಬಹುದಾದ ಯಾವುದೇ ಸಂಶಯ ಹಾಗೂ ಭೀತಿಗಳನ್ನು ನಿವಾರಿಸಲು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದಕ್ಕಾಗಿ ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಬೇಕು. ಔಷಧಿಗಳ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಈ ಕಾಯಿಲೆಗೆ ಮೂಲ ಕಾರಣವಾದ ಸೊಳ್ಳೆಗಳ ನಿಯಂತ್ರಣಕ್ಕೂ ಸ್ಥಳೀಯ ಸಂಸ್ಥೆಗಳು ಕ್ರಮಗಳನ್ನು ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.