ದತ್ತು ನಿಯಮ ಸರಳ ಸ್ವೀಕಾರಾರ್ಹ ಹೆಜ್ಜೆ ಮಕ್ಕಳನ್ನು ದತ್ತು ಪಡೆಯುವ ನಿಯಮಗಳನ್ನು ಕೇಂದ್ರ ಸರ್ಕಾರ ಸರಳೀಕರಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ದತ್ತು ಪಡೆಯುವ ಅರ್ಹತೆ ಇರುವ ಪ್ರಕರಣಗಳನ್ನು ಅಧ್ಯಯನ ಮಾಡಿ ಒಪ್ಪಿಗೆ ನೀಡುವುದಕ್ಕಾಗಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಕಾರಾ) ಮುಖ್ಯಸ್ಥರು ಮತ್ತು ಎಐಐಎಂಎಸ್ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯೊಂದು ರಚನೆಯಾಗಿದೆ. ದತ್ತು ಸ್ವೀಕಾರ ಎಂಬುದು ಭಾರತದಲ್ಲಿ ಅತ್ಯಂತ ಸಂಕೀರ್ಣ ಪ್ರಕ್ರಿಯೆ. ಅಂಗೀಕೃತ ಏಜೆನ್ಸಿಗಳಲ್ಲಿ ನೋಂದಾಯಿಸಿಕೊಂಡ ಸಾವಿರಾರು ಪೋಷಕರು ಇನ್ನೂ ಕಾಯುತ್ತಲೇ ಇದ್ದಾರೆ. ಹರಿಯಾಣ ಮತ್ತು ದೆಹಲಿಗಳಲ್ಲಿ ದತ್ತು ಸ್ವೀಕಾರಕ್ಕಾಗಿ ಕಾಯುತ್ತಿರುವ ಮಕ್ಕಳು ಮತ್ತು ಪೋಷಕರ ನಡುವಣ ಅನುಪಾತ ಕ್ರಮವಾಗಿ 1:80 ಮತ್ತು 1:60ರಷ್ಟಿದೆ. ಉಳಿದ ರಾಜ್ಯಗಳಲ್ಲಿ ಈ ಅಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂಬುದು ಕೇವಲ ಒಂದು ಸಾಪೇಕ್ಷ ಲೆಕ್ಕಾಚಾರ ಮಾತ್ರ. ಭಾರತದಲ್ಲಿ ದತ್ತಕಕ್ಕೆ ಅರ್ಹವಾಗಿರುವ 50 ಸಾವಿರ ಅನಾಥ ಮಕ್ಕಳಿದ್ದರೂ ದತ್ತು ಸ್ವೀಕಾರದ ಪ್ರಮಾಣ ಮಾತ್ರ ನಾಲ್ಕು ಸಾವಿರದ ಆಸುಪಾಸಿನಲ್ಲಿದೆ. 2010ರಲ್ಲಿ 5,693 ದಂಪತಿ ದತ್ತು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು 2012ರಲ್ಲಿ 4,694ಕ್ಕೆ ಇಳಿಯಿತು. 2014ರಲ್ಲಿ 3,988ಕ್ಕೆ ಸೀಮಿತಗೊಂಡಿತು. ಮಕ್ಕಳನ್ನು ದತ್ತು ಪಡೆಯುವುದಕ್ಕೆ ಕಾಯುತ್ತಿರುವ ಪೋಷಕರ ಸಂಖ್ಯೆ ದೊಡ್ಡದಿದೆ. ದತ್ತಕಕ್ಕೆ ಅರ್ಹವಾಗಿರುವ ಮಕ್ಕಳೂ ಇದ್ದಾರೆ. ಹಾಗಿದ್ದರೂ ದತ್ತು ಸ್ವೀಕಾರದ ಪ್ರಮಾಣವೇಕೆ ಕಡಿಮೆ ಇದೆ ಎಂಬ ಪ್ರಶ್ನೆಗೆ ಕಳೆದ ಫೆಬ್ರುವರಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿಯವರೇ ಉತ್ತರ ನೀಡಿದ್ದರು. ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಕ್ಕಳ ಕಲ್ಯಾಣ ಸಮಿತಿ ಮತ್ತು ದತ್ತು ಕೇಂದ್ರಗಳು ಅನುಸರಿಸುವ ಕೆಂಪು ಪಟ್ಟಿ ಧೋರಣೆಯಿಂದ ದತ್ತಕಕ್ಕೆ ಅರ್ಹವಾಗಿರುವ ಮಕ್ಕಳು ಮತ್ತು ದತ್ತು ಸ್ವೀಕರಿಸಲು ಸಿದ್ಧರಿರುವ ಪೋಷಕರಿಬ್ಬರೂ ಕಷ್ಟ ಅನುಭವಿಸುತ್ತಿದ್ದಾರೆ. ದತ್ತು ಸ್ವೀಕಾರಕ್ಕೆ ಸಿದ್ಧವಾಗಿರುವ ಪೋಷಕರ ಮನೆಗೆ ಭೇಟಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಹಲವು ತಿಂಗಳುಗಳ ಕಾಲ ಕಾಯಬೇಕಾದ ಸ್ಥಿತಿ ಇದೆ. ‘ಕಾರಾ’ ಇಂಥ ವಿಚಾರಗಳಲ್ಲಿ ಸೋಮಾರಿ ನಿಲುವು ತಳೆಯುವ ವಿಚಾರವನ್ನೂ ಮೇನಕಾ ಗಾಂಧಿ ಹೇಳಿದ್ದರು. ಹೊಸ ನಿಯಮಗಳು ಈ ಎಲ್ಲಾ ಸಮಸ್ಯೆಗಳನ್ನು ಒಮ್ಮೆಗೆ ಪರಿಹರಿಸಿಬಿಡುತ್ತವೆ ಎನ್ನುವಂತಿಲ್ಲ. ದತ್ತು ನಿಯಮಗಳ ಸರಳೀಕರಣದ ಹಾದಿಯಲ್ಲಿ ಸರ್ಕಾರ ಇಟ್ಟಿರುವ ಹೆಜ್ಜೆ ಖಂಡಿತವಾಗಿಯೂ ಕೆಲವು ಉತ್ತಮ ಪರಿಣಾಮಗಳನ್ನು ಬೀರಲಿದೆ. ‘ಕಾರಾ’ದಿಂದ ತೊಡಗಿ ಅಧಿಕೃತ ದತ್ತು ಏಜೆನ್ಸಿಗಳ ತನಕ ಹರಡಿರುವ ಕೆಂಪು ಪಟ್ಟಿ ಧೋರಣೆಯನ್ನು ಇದು ಕಡಿಮೆ ಮಾಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ದತ್ತು ಏಜೆನ್ಸಿಗಳು, ಮಕ್ಕಳನ್ನು ವಿದೇಶಿ ದಂಪತಿಗಳಿಗೆ ನೀಡುವುದಕ್ಕೆ ಪರೋಕ್ಷವಾಗಿ ಹೆಚ್ಚು ಉತ್ಸಾಹ ತೋರುವ ಕ್ರಮಕ್ಕೂ ಇದರಿಂದ ಸ್ವಲ್ಪ ಮಟ್ಟಿಗಿನ ಕಡಿವಾಣ ಬೀಳಬಹುದು. ಕೇಂದ್ರ ಮಹಿಳಾ ಮತ್ತು ಕಲ್ಯಾಣ ಸಚಿವಾಲಯವು ವಾರ್ಷಿಕ ದತ್ತು ಪಡೆಯುವ ಪ್ರಮಾಣವನ್ನು ಈಗಿರುವುದಕ್ಕಿಂತ ಮೂರು ಪಟ್ಟು ಏರಿಸುವ ಉದ್ದೇಶ ಹೊಂದಿದೆ. ಮೇನಕಾ ಗಾಂಧಿಯವರು ಹೇಳುವಂತೆ ವಾರ್ಷಿಕ ಕನಿಷ್ಠ 15,000 ಮಕ್ಕಳ ದತ್ತು ಸ್ವೀಕಾರಕ್ಕೆ ಅನುಕೂಲ ಕಲ್ಪಿಸುವುದು ಸರ್ಕಾರದ ಗುರಿ. ಆಧುನಿಕ ಬದುಕಿನ ಸಮಸ್ಯೆಗಳು ನಿಧಾನವಾಗಿ ಭಾರತೀಯ ಸಮಾಜದೊಳಗೂ ವ್ಯಾಪಕವಾಗುತ್ತಿವೆ. ಫಲವತ್ತತೆ ಕಡಿಮೆಯಾಗುತ್ತಿರುವುದು ಕೇವಲ ಅಭಿವೃದ್ಧಿ ಹೊಂದಿದ ದೇಶಗಳ ಸಮಸ್ಯೆ ಮಾತ್ರವಲ್ಲ, ಭಾರತದೊಳಗೂ ಇದು ಕಾಣಿಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲ ಮಕ್ಕಳಿರುವ ದಂಪತಿಯೂ ಇನ್ನೊಂದು ಮಗುವನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ. ಈ ಎಲ್ಲವುಗಳ ಹಿನ್ನೆಲೆ ಇಟ್ಟುಕೊಂಡೇ ದತ್ತಕಕ್ಕೆ ಸಂಬಂಧಿಸಿದ ನಿಯಮಗಳ ಸರಳೀಕರಣದ ಪ್ರಯತ್ನವನ್ನು ನೋಡುವ ಅಗತ್ಯವಿದೆ. ಕಳೆದ ಜುಲೈನಲ್ಲಿ ಹೊರಬಿದ್ದ ಅಧಿಸೂಚನೆಯಲ್ಲಿ ದತ್ತು ಸ್ವೀಕಾರಕ್ಕೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ಮುಗಿಸುವುದಕ್ಕೆ ಸಾಧ್ಯವಾಗುವಂಥ ವ್ಯವಸ್ಥೆ ರೂಪಿಸುವ ಭರವಸೆ ಇತ್ತು. ಇದು ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ದತ್ತು ಸ್ವೀಕರಿಸುವವರ ಸಾಮರ್ಥ್ಯ ಮತ್ತು ಅರ್ಹತೆಗಳನ್ನು ಪರಿಶೀಲಿಸುವುದಕ್ಕೆ ಕಠಿಣ ನಿಯಮಗಳಿರಬೇಕು ಎಂಬುದು ಸರಿ. ಆದರೆ ಆ ನಿಯಮಗಳು, ದತ್ತು ಸ್ವೀಕಾರದಿಂದ ಅರ್ಹರನ್ನು ದೂರವಿಡುವಂತೆ ಇರಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.