ಮಕ್ಕಳ ಲಿಂಗಾನುಪಾತ ಕುಸಿತ ತಡೆಗೆ ಕ್ರಮ ಕೈಗೊಳ್ಳಿ ರಾಷ್ಟ್ರದಲ್ಲಿ ಮಕ್ಕಳ ಲಿಂಗಾನುಪಾತ ಮತ್ತಷ್ಟು ಕುಸಿತ ಕಂಡಿರುವುದು ಆತಂಕಕಾರಿ ವಿದ್ಯಮಾನ. 2011ರ ಜನಗಣತಿಯ ಪ್ರಕಾರ 0-6 ವಯೋಮಾನದಲ್ಲಿ 1000 ಗಂಡುಮಕ್ಕಳಿಗೆ 918 ಹೆಣ್ಣುಮಕ್ಕಳಿದ್ದಾರೆ. 2001ರ ಜನಗಣತಿಯ ಪ್ರಕಾರ ಈ ಪ್ರಮಾಣ 927 ಇತ್ತು. ಈ ಇಳಿಮುಖದ ಪ್ರವೃತ್ತಿ 1961ರಿಂದಲೇ ಆರಂಭವಾಗಿದೆ. ಆಗಿನಿಂದಲೂ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತ ಕುಸಿತ ದಾಖಲಿಸುತ್ತಲೇ ಬಂದಿರುವುದು ಆತಂಕಕಾರಿ. ಹಿಂದೂಗಳಲ್ಲಿ ಮಕ್ಕಳ ಲಿಂಗಾನುಪಾತ 2001ರಲ್ಲಿ 925 ಇದ್ದದ್ದು 2011ರಲ್ಲಿ 913ಕ್ಕೆ ಕುಸಿತ ಕಂಡಿದೆ. ಮುಸ್ಲಿಂ ಮಕ್ಕಳ ಲಿಂಗಾನುಪಾತ 950ರಿಂದ 943ಕ್ಕೆ ಕುಸಿತ ಕಂಡಿದೆ. ಆದರೆ ಸಿಖ್ ಮತ್ತು ಜೈನ ಸಮುದಾಯಗಳಲ್ಲಿ ಲಿಂಗಾನುಪಾತ ಸ್ವಲ್ಪಮಟ್ಟಿಗೆ ಹೆಚ್ಚಳ ಕಂಡಿದೆ ಎಂಬುದು ಮಂಕಾದ ಈ ವಾತಾವರಣದಲ್ಲೊಂದು ಬೆಳ್ಳಿರೇಖೆ. 2001ರಲ್ಲಿ ಸಿಖ್ ಜನಾಂಗದಲ್ಲಿ 1000 ಗಂಡುಮಕ್ಕಳಿಗೆ 786ರಷ್ಟಿದ್ದ ಹೆಣ್ಣುಮಕ್ಕಳ ಪ್ರಮಾಣ 2011ರಲ್ಲಿ 828ಕ್ಕೇರಿದೆ. ಜೈನರಲ್ಲಿ ಈ ಪ್ರಮಾಣ 870ರಿಂದ 889ಕ್ಕೇರಿದೆ. ಹೀಗಿದ್ದೂ ಈ ಲಿಂಗಾನುಪಾತ ಮಟ್ಟ ಅಪಾಯಕಾರಿಯಾಗಿಯೇ ಇದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಕನಿಷ್ಠ ಇಳಿಮುಖದ ಹಾದಿಯಿಂದ ಹೊರಬಂದಿದೆ ಎಂಬುದು ಸಮಾಧಾನಕರ. ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರ ಪ್ರಗತಿ ಸಾಧಿಸುತ್ತಿದ್ದರೂ ಸಾಮಾಜಿಕ ನೆಲೆಯಲ್ಲಿ ಲಿಂಗ ತಾರತಮ್ಯ ಮುಂದುವರಿದಿದೆ ಎಂಬುದನ್ನು ಈ ಅಂಕಿಅಂಶಗಳು ಎತ್ತಿ ಹೇಳುತ್ತಿವೆ. ಗಂಡು ಮಕ್ಕಳಿಗಾಗಿ ಭಾರತೀಯ ಕುಟುಂಬಗಳು ಹಂಬಲಿಸುವುದು ಮುಂದುವರಿದಿದೆ ಎನ್ನುವುದಕ್ಕೂ ಇದು ದ್ಯೋತಕ. ಪುತ್ರ ವ್ಯಾಮೋಹಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳು ಮುಖ್ಯವಾದದ್ದು. ಪುತ್ರನಿಲ್ಲದಿದ್ದಲ್ಲಿ ಸದ್ಗತಿ ಸಿಗದು ಎಂಬ ಭಾವನೆ ಭಾರತೀಯ ಸಮಾಜದಲ್ಲಿ ಪ್ರಬಲವಾಗಿದೆ. ಜೊತೆಗೆ ವರದಕ್ಷಿಣೆಯ ಪಿಡುಗಿನಿಂದಾಗಿ ಹೆಣ್ಣುಮಕ್ಕಳು ಕುಟುಂಬಗಳಿಗೆ ಭಾರವಾಗಿ ಪರಿಣಮಿಸುತ್ತಿದ್ದಾರೆ. ಹಾಗೆಯೇ ಕುಟುಂಬದ ಗಾತ್ರ ಚಿಕ್ಕದಿರಬೇಕೆಂದು ಬಯಸುವ ಕುಟುಂಬಗಳು, ಗಂಡುಮಕ್ಕಳಿಗಾಗಿ ಹಂಬಲಿಸುತ್ತಾ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುವುದು ಸಾಮಾಜಿಕ ಪಿಡುಗಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಹೆಣ್ಣುಮಕ್ಕಳ ಸುರಕ್ಷತೆ ಬಗೆಗಿನ ಆತಂಕವನ್ನು ಹೆಚ್ಚಾಗಿಸಿವೆ. ಇಂತಹ ಬೆಳವಣಿಗೆ ಕೂಡ ಹೆಣ್ಣುಮಕ್ಕಳು ಹುಟ್ಟುವುದೇ ಬೇಡ ಎಂಬಂತಹ ಮನಸ್ಥಿತಿಗೆ ಕಾರಣವಾಗುತ್ತದೆ. ಜೊತೆಗೆ, ಆಧುನಿಕತೆ ಬೆಳೆದಂತೆ ತಂತ್ರಜ್ಞಾನದ ಆವಿಷ್ಕಾರಗಳು ಹೆಣ್ಣು ಭ್ರೂಣ ಹತ್ಯೆಯನ್ನು ಸುಲಭವಾಗಿಸುತ್ತಿರುವುದು ಮತ್ತೊಂದು ವಿಪರ್ಯಾಸ. ಪಿತೃಪ್ರಧಾನ ದೃಷ್ಟಿಕೋನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅಪವಿತ್ರ ಮೈತ್ರಿ ಭಾರತೀಯ ಸಮಾಜದ ಮೇಲೆ ಬೀರುತ್ತಿರುವ ನಕಾರಾತ್ಮಕ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ, ಜನಸಂಖ್ಯೆಯಲ್ಲಿ ಲಿಂಗಾನುಪಾತದ ಅಸಮತೋಲನ ಇದೇ ರೀತಿ ಮುಂದುವರಿಯುವುದು ಅಹಿತಕರ ಬೆಳವಣಿಗೆ. ಲಿಂಗಪತ್ತೆ ನಿಷೇಧ ಕಾಯ್ದೆ 1994 ಅನುಷ್ಠಾನಗೊಂಡು 21 ವರ್ಷಗಳು ಸಂದಿವೆ. ಹೀಗಿದ್ದೂ ಹೆಣ್ಣು ಮಕ್ಕಳ ಲಿಂಗಾನುಪಾತ ಇಳಿಮುಖವಾಗಿಯೇ ಚಲಿಸುತ್ತಿರುವುದನ್ನು ಜನಗಣತಿಗಳ ಅಂಕಿಅಂಶಗಳು ತೋರಿಸಿಕೊಡುತ್ತಲೇ ಇವೆ. ನಂತರ ಈ ಕಾಯಿದೆಯನ್ನು ಮತ್ತಷ್ಟು ವಿಸ್ತೃತಗೊಳಿಸಲಾಗಿದೆ. ಈಗ ಗರ್ಭಧಾರಣೆ ಪೂರ್ವ ಹಾಗೂ ಪ್ರಸವ ಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ಕಾನೂನು ಅಸ್ತಿತ್ವದಲ್ಲಿದೆ. ಆದರೆ ಈ ಕಾಯಿದೆ ಹೆಸರಿಗಷ್ಟೇ ಇದೆ ಎಂಬಂತಹ ಪರಿಸ್ಥಿತಿ ಕಂಡುಬರುತ್ತಿರುವುದು ಸ್ಪಷ್ಟ. ಏಕೆಂದರೆ, ಈ ಕಾನೂನಿನ ಅನ್ವಯ ಶಿಕ್ಷೆಗಳಾಗಿರುವುದಂತೂ ಅತ್ಯಂತ ಕಡಿಮೆ. ಹೀಗಾಗಿ ಕಾನೂನು ಅನುಷ್ಠಾನವನ್ನು ಬಿಗಿಗೊಳಿಸುವತ್ತ ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ನಗರಪ್ರದೇಶಗಳಲ್ಲಿ ಕಂಡುಬಂದಿರುವ ಹೆಣ್ಣುಮಕ್ಕಳ ಲಿಂಗಾನುಪಾತ ಕುಸಿತ, ವಿದ್ಯಾವಂತರಲ್ಲೂ ಹೆಣ್ಣುಮಕ್ಕಳ ವಿರುದ್ಧದ ಪೂರ್ವಗ್ರಹ ಕಡಿಮೆ ಆಗದಿರುವುದಕ್ಕೆ ಸಾಕ್ಷಿ. ಹೆಣ್ಣುಮಕ್ಕಳ ಕುರಿತಾದ ದೃಷ್ಟಿಕೋನ ಬದಲಾಗದೆ ಈ ಪರಿಸ್ಥಿತಿ ಸುಧಾರಣೆಯಾಗುವುದು ಕಷ್ಟ. ಈ ನಿಟ್ಟಿನಲ್ಲಿ ಜನಸಮುದಾಯದಲ್ಲಿ ಅರಿವು ಮೂಡಿಸಲು ಧಾರ್ಮಿಕ ಮುಖಂಡರು ಕೆಲವೆಡೆ ಕೈಜೋಡಿಸಿದ್ದಾರೆ. ಇದು ಹೆಚ್ಚು ವ್ಯಾಪಕವಾಗಬೇಕು. ಕೇಂದ್ರದ ಎನ್‌ಡಿಎ ಸರ್ಕಾರ ‘ಬೇಟಿ ಬಚಾವೊ, ಬೇಟಿ ಪಢಾವೊ ’ಎಂಬ ಅಭಿಯಾನವನ್ನೂ ಆರಂಭಿಸಿದೆ. ಈ ಕಾರ್ಯಕ್ರಮಗಳ ಉದ್ದೇಶ ಜನರ ಮನದಾಳಗಳಿಗೆ ಇಳಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.