ಶಾಂತಿ ಪ್ರಕ್ರಿಯೆಗೆ ಅಡ್ಡಗಾಲು ಉಗ್ರರ ದಾಳಿ ಖಂಡನೀಯ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿ ಮಾತುಕತೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಭಾರತದಲ್ಲಿ ಪಾಕ್ ಉಗ್ರರಿಂದ ಭಯೋತ್ಪಾದನಾ ದಾಳಿ ನಡೆದಿದೆ. ಭಾರತ- ಪಾಕಿಸ್ತಾನ ಬಾಂಧವ್ಯ ವೃದ್ಧಿಗೆ ಪ್ರಯತ್ನಗಳು ಆರಂಭವಾಗಿರುವ ಸಂದರ್ಭ ಇದು. ಇಂತಹ ಹೊತ್ತಿನಲ್ಲಿ ಹೊಸ ವರ್ಷದ ಆರಂಭದಲ್ಲೇ ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುಪಡೆ ನೆಲೆಯ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ಆಘಾತಕಾರಿ. ಆದರೆ ಇಂತಹ ದಾಳಿ ಹೊಸ ಸಂಗತಿಯೇನೂ ಅಲ್ಲ. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ದ್ವಿಪಕ್ಷೀಯ ಮಾತುಗಳು ನಡೆಯುವ ಮುಂಚೆ ಅಥವಾ ಮಾತುಕತೆ ನಡೆದಾದ ನಂತರ ಪಾಕಿಸ್ತಾನಿ ಮಿಲಿಟರಿ ವ್ಯವಸ್ಥೆಗೆ ನಿಕಟವಾಗಿರುವ ಅಥವಾ ಅದರ ಬೆಂಬಲ ಪಡೆದ ಶಕ್ತಿಗಳು ಉಗ್ರ ದಾಳಿಗಳನ್ನು ನಡೆಸುವುದು ಹಳೆಯ ಕಾರ್ಯತಂತ್ರ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಲಾಹೋರ್‌ಗೆ ದಿಢೀರ್ ಭೇಟಿ ನೀಡಿ ಪಾಕಿಸ್ತಾನ ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರಿದ್ದು ಸಂಚಲನ ಮೂಡಿಸಿತ್ತು. ಮೋದಿಯವರ ಈ ಹೊಸ ರಾಜತಾಂತ್ರಿಕ ನಡೆಗೆ ಜಾಗತಿಕ ವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ನಂತರ, ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿರುವುದು ಮೋದಿಯವರು ಎದುರಿಸಬೇಕಾಗಿರುವ ಹೊಸ ಸವಾಲಾಗಿದೆ. ಪಠಾಣ್‌ಕೋಟ್ ವಾಯುಪಡೆ ಕೇಂದ್ರ, ಭಾರತದ ಪ್ರಮುಖ ವಾಯುನೆಲೆಗಳಲ್ಲಿ ಒಂದು. ಈ ವಾಯು ನೆಲೆಯಲ್ಲಿರುವ ಮಿಗ್– 21 ಮತ್ತು ಎಂಐ– 25 ಯುದ್ಧ ವಿಮಾನಗಳು, ಯುದ್ಧ ಹೆಲಿಕಾಪ್ಟರ್‌ಗಳು ಹಾಗೂ ಇತರ ಯುದ್ಧ ಸಾಮಗ್ರಿಗಳು ಈ ಭಯೋತ್ಪಾದನಾ ದಾಳಿಯ ಗುರಿಯಾಗಿದ್ದವು ಎನ್ನಲಾಗಿದೆ. ಈ ಕುರಿತಂತೆ ಗುಪ್ತಚರ ವರದಿಗಳು ಭಾರತಕ್ಕೆ ಮೊದಲೇ ಲಭ್ಯವಾಗಿದ್ದವು. ಹೀಗಾಗಿ ವಾಯುಪಡೆಯ ಅಮೂಲ್ಯ ಆಸ್ತಿಗಳು ಇರುವಂತಹ ತಾಂತ್ರಿಕ ವಲಯಕ್ಕೆ ಉಗ್ರರ ಪ್ರವೇಶವನ್ನು ನಿಗ್ರಹಿಸುವಲ್ಲಿ ಭಾರತದ ಭದ್ರತಾ ಪಡೆಗಳ ಕಾರ್ಯಾಚರಣೆ ಯಶಸ್ಸು ಸಾಧಿಸಿರುವುದು ಸಮಾಧಾನಕರ. ಈ ದಾಳಿ, ಕಳೆದ ಜುಲೈನಲ್ಲಿ ಗುರುದಾಸ್‌ಪುರದಲ್ಲಿ ನಡೆದ ದಾಳಿಯನ್ನು ಹೋಲುತ್ತಿರುವುದನ್ನು ಗಮನಿಸಬೇಕು. ಮಾತುಕತೆ ಮೂಲಕ ಬಾಂಧವ್ಯ ಸುಧಾರಣೆಗೆ ಉಭಯ ದೇಶಗಳು ಪ್ರಯತ್ನಪಟ್ಟಾಗಲೆಲ್ಲಾ ಈ ಬಗೆಯ ಭಯೋತ್ಪಾದನಾ ದಾಳಿಗಳು ಮಾಮೂಲು ಎಂಬಂತೆ ನಡೆದಿವೆ. ಆದರೆ ಈ ಕಾರಣದಿಂದಾಗಿಯೇ ಮಾತುಕತೆ ಹಾದಿಯಿಂದ ಉಭಯ ದೇಶಗಳು ಹಿಂದೆ ಸರಿಯುವಂತಾಗಬಾರದು. ಏಕೆಂದರೆ, ಈ ತಿಂಗಳ ಮಧ್ಯಭಾಗದಲ್ಲಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಬೇಕಿದೆ. ಈ ಮಾತುಕತೆ ಯೋಜಿಸಿದಂತೆ ಮುಂದುವರೆಯುವುದು ಉಚಿತ. ಈ ಸಂದರ್ಭದಲ್ಲೇ ಪಠಾಣ್‌ಕೋಟ್ ದಾಳಿಯ ವಿಚಾರ ಎತ್ತಲೂ ಭಾರತಕ್ಕೆ ಅವಕಾಶವಿದ್ದೇ ಇರುತ್ತದೆ. ‘ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಾಗಿ ಸಾಗುವುದಿಲ್ಲ’ ಎಂಬಂತಹ ತನ್ನ ಹಿಂದಿನ ನಿಲುವಿನಿಂದ ಬಿಜೆಪಿ ಹಿಂದೆ ಸರಿಯಬೇಕು. ಇಂತಹ ದಾಳಿಗಳಿಂದ ಭಾರತ– ಪಾಕಿಸ್ತಾನ ಮಧ್ಯದ ಮಾತುಕತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬಂತಹ ಸಂದೇಶ ರವಾನೆಯಾಗುವುದು ಒಳ್ಳೆಯದು. ಮಾತುಕತೆ ಹಾದಿಯ ಹಳಿ ತಪ್ಪಿಸುವ ಭಯೋತ್ಪಾದನಾ ಗುಂಪುಗಳ ಪ್ರಚೋದನೆಗಳಿಗೆ ಬಲಿಯಾಗುವುದು ಸಲ್ಲದು. ಭಾರತದ ನೆಲದ ಮೇಲೆ ಭಯೋತ್ಪಾದನಾ ದಾಳಿಗಳನ್ನು ನಡೆಸುವ ಭಯೋತ್ಪಾದನಾ ಗುಂಪುಗಳಿಗೆ ಪಾಕಿಸ್ತಾನ ಮಿಲಿಟರಿ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲ ಇರುವುದು ಗೊತ್ತಿರುವ ಸಂಗತಿ. ಅಂತಿಮ ನಿರ್ಧಾರ ಮಾಡುವವರು ತಾವೇ ಹೊರತು ಪ್ರಧಾನಿಯಲ್ಲ ಎಂಬಂತಹ ಸಂದೇಶವನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪಾಕ್ ಮಿಲಿಟರಿ ಹೇಳಲು ಬಯಸಿರುವುದು ಈ ದಾಳಿಯಲ್ಲಿ ಮತ್ತೆ ಸ್ಪಷ್ಟ. ಈ ಮಧ್ಯೆ ಗೋಪ್ಯ ದಾಖಲೆಗಳನ್ನು ಪಾಕಿಸ್ತಾನದ ಐಎಸ್ಐ ಬೆಂಬಲಿತ ಏಜೆಂಟರಿಗೆ ನೀಡಿದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯೊಬ್ಬನನ್ನು ಪಂಜಾಬ್‌ನಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿರುವುದೂ ಕಾಕತಾಳೀಯ. ಭಾರತದ ಜೊತೆ ಉದ್ವಿಗ್ನತೆ ಹೆಚ್ಚಿಸುವುದರ ಮೂಲಕ ತನ್ನ ಪ್ರಭಾವ ಅಥವಾ ಪ್ರಾಮುಖ್ಯ ಪ್ರತಿಪಾದಿಸುವಂತಹ ಪಾಕಿಸ್ತಾನ ಮಿಲಿಟರಿಯ ಕಾರ್ಯತಂತ್ರ ಇದು. ಶಾಂತಿ ಪ್ರಕ್ರಿಯೆಗೆ ಅಡ್ಡಗಾಲಾಗಲು ಪ್ರಯತ್ನಿಸುವ ಹತಾಶ ಅಥವಾ ಹೇಡಿತನದ ಕೃತ್ಯಗಳಿವು. ಬಾಂಧವ್ಯ ಸುಧಾರಣೆ ಎಂದರೆ ಕಾಶ್ಮೀರದ ಸಮಸ್ಯೆಯನ್ನು ಹಿನ್ನೆಲೆಗೆ ಸರಿಸಿದಂತಾಗುತ್ತದೆ ಎಂಬುದು ಸೇನೆಯ ಸಮಸ್ಯೆ. ಕಾಶ್ಮೀರದ ಸಮಸ್ಯೆಯನ್ನು ರಾಷ್ಟ್ರ ವಿಭಜನೆಯ ಅಪೂರ್ಣ ಕಾರ್ಯಸೂಚಿಯಾಗಿಯೇ ಪರಿಗಣಿಸುವ ಸೇನೆಗೆ ಇದನ್ನು ಬದಿಗೆ ಸರಿಸುವುದು ಬೇಕಿಲ್ಲ. ಈ ವಿಚಾರವನ್ನು ಪಠಾಣ್‌ಕೋಟ್ ದಾಳಿ ಮತ್ತೆ ಸ್ಪಷ್ಟಪಡಿಸಿದೆ. ಇಂತಹ ಹಿನ್ನಡೆಗಳ ಮಧ್ಯೆಯೂ ಉಭಯ ದೇಶಗಳ ನಡುವೆ ಪರಸ್ಪರ ವಿಶ್ವಾಸವರ್ಧನೆಯ ಪ್ರಯತ್ನಗಳು ನಿಲ್ಲಬಾರದು. ಹಾಗೆಯೇ ಭಯೋತ್ಪಾದನೆ ಮಟ್ಟ ಹಾಕುವ ಕೆಲಸವೂ ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.