ಕೊಟ್ಟ ಅನುದಾನ ಬಳಸದೇ ಇರುವುದು ಮಹಾ ದ್ರೋಹ ನಗರ ಸ್ಥಳೀಯ ಸಂಸ್ಥೆಗಳು ಎಂದು ಕರೆಸಿಕೊಳ್ಳುವ ನಗರಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಹಾಗೂ ಪಟ್ಟಣ ಪಂಚಾಯಿತಿಗಳ ನಾಲ್ಕು ಪ್ರಮುಖ ಕರ್ತವ್ಯಗಳೆಂದರೆ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ. ಆದರೆ ರಾಜ್ಯದ ಪಟ್ಟಣ, ನಗರಗಳಲ್ಲಿ ಈ ಸೌಕರ್ಯ ಸಮರ್ಪಕವಾಗಿಲ್ಲ. ಪೌರ ಸಂಸ್ಥೆಗಳ ವೈಫಲಕ್ಕೆ ನಾಗರಿಕರು ಬೆಲೆ ತೆರುವ ಸ್ಥಿತಿಯಿದೆ. ಯಾಕೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಪ್ರಶ್ನಿಸಿದರೆ ‘ಹಣದ ಕೊರತೆ’ ಎಂಬ ಉತ್ತರ ಸಿದ್ಧವಾಗಿರುತ್ತದೆ. ತೆರಿಗೆ ಆದಾಯ ಸಾಕಾಗುತ್ತಿಲ್ಲ, ಸರ್ಕಾರದ ಅನುದಾನ ಬರುತ್ತಿಲ್ಲ ಎಂಬ ಸಬೂಬುಗಳನ್ನು ಕೇಳಿ ಕೇಳಿ ನಾಗರಿಕರು ಹೈರಾಣಾಗಿದ್ದಾರೆ. ಆದರೆ ಹಣದ ಕೊರತೆಯ ನೆಪ ಎಷ್ಟರಮಟ್ಟಿಗೆ ಸತ್ಯ? 2010ರಿಂದ ಈಚೆಗೆ ಬಿಡುಗಡೆಯಾದ ಹಣದಲ್ಲಿಯೇ ಸುಮಾರು ₹ 2 ಸಾವಿರ ಕೋಟಿಯಷ್ಟು ಭಾರಿ ಮೊತ್ತವನ್ನು ರಾಜ್ಯದ 218 ಸ್ಥಳೀಯ ಸಂಸ್ಥೆಗಳು ಬಳಸಿಕೊಂಡೇ ಇಲ್ಲ ಎಂಬುದು ಆಘಾತಕಾರಿ. ಇನ್ನು ಕೆಲವು ಸ್ಥಳೀಯ ಸಂಸ್ಥೆಗಳು ಒಟ್ಟು ₹ 2,011 ಕೋಟಿಯನ್ನು ನಿಗದಿತ ಉದ್ದೇಶಕ್ಕೆ ಬಳಸುವ ಬದಲು ಬ್ಯಾಂಕ್ ಖಾತೆಗಳಲ್ಲಿ ಇಟ್ಟಿವೆ. ಕೊಟ್ಟ ಹಣವನ್ನು ಬಳಸದೆ, ಬ್ಯಾಂಕ್‌ಗಳಲ್ಲಿ ಇಟ್ಟು ನೆಪ ಹೇಳುವುದು ನಾಗರಿಕರಿಗೆ ಮಾಡುತ್ತಿರುವ ದ್ರೋಹ. 2011-15ರ ಅವಧಿಯಲ್ಲಿ ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿ, 14ನೇ ಹಣಕಾಸು ಆಯೋಗದ ಅನುದಾನದಡಿ ವಿವಿಧ ಯೋಜನೆಗಳಿಗಾಗಿ ₹ 7,826 ಕೋಟಿ ಈ ಸಂಸ್ಥೆಗಳಿಗೆ ಹಂಚಿಕೆಯಾಗಿದೆ. ಇದರಲ್ಲಿ ಬಿಡುಗಡೆಯಾಗಿದ್ದು ₹ 6,232 ಕೋಟಿ. ಆದರೆ ಖರ್ಚಾಗಿದ್ದು ₹ 4,221 ಕೋಟಿ ಮಾತ್ರ. ಕೊಟ್ಟ ಹಣ ಖರ್ಚು ಮಾಡದೇ ಇರುವುದು ನಾಚಿಕೆಗೇಡು. ಅದರಲ್ಲೂ 2013ರ ದಸರಾ ಹೊತ್ತಿನಲ್ಲಿ ಕೊಟ್ಟ ಹಣದಲ್ಲಿ ₹ 7.61 ಕೋಟಿಯನ್ನು ಮೈಸೂರು ಮಹಾನಗರ ಪಾಲಿಕೆ ಇನ್ನೂ ಬಳಸಿಕೊಂಡಿಲ್ಲ. ಒಟ್ಟು ₹ 173 ಕೋಟಿ ಅಲ್ಲಿ ಬಳಕೆಯಾಗದೆ ಬಿದ್ದಿದೆ. ಮುಖ್ಯಮಂತ್ರಿಗಳ ತವರೂರಾಗಿದ್ದು ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಗರದ್ದೇ ಈ ಸ್ಥಿತಿ. ಸಕಾಲದಲ್ಲಿ ಹಣ ಖರ್ಚಾಗದೇ ಇರಲು ಅಧಿಕಾರಿಗಳ ಬಳಿ ಸಬೂಬುಗಳೂ ಇವೆ. ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ಹಂತದ ಸಿಬ್ಬಂದಿ ಕೊರತೆ, ಮಾರ್ಗಸೂಚಿ ಪ್ರಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯುವಲ್ಲಿ ವಿಳಂಬ, ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳುವುದು, ಟೆಂಡರ್- ಮರು ಟೆಂಡರ್ ಮತ್ತಿತರ ತಾಂತ್ರಿಕ ವಿಳಂಬಗಳನ್ನು ಅವರು ಮುಂದಿಡುತ್ತಾರೆ. ಅಂದರೆ ಇದರಲ್ಲಿ ಅಧಿಕಾರಿಗಳ ಜತೆ ಚುನಾಯಿತ ಪ್ರತಿನಿಧಿಗಳ ಲೋಪವೂ ಎದ್ದು ಕಾಣುತ್ತದೆ. ಹಾಗೆಯೇ, ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳಿಗೆ ಬಜೆಟ್‌ನಲ್ಲಿ ಮಂಜೂರಾದ ಹಣದ ಶೇ 30ರಷ್ಟೂ ಖರ್ಚಾಗಿಲ್ಲ. ಈ ಸಾಲಿನಲ್ಲಿ ಈ ಎರಡೂ ಉಪ ಯೋಜನೆಗಳಿಗೆ ₹ 16,330 ಕೋಟಿ ನಿಗದಿಯಾಗಿದೆ. ಅದರಲ್ಲಿ ನವೆಂಬರ್‌ ಅಂತ್ಯದ ಹೊತ್ತಿಗೆ ಅರ್ಧದಷ್ಟು ಹಣವೂ ಬಿಡುಗಡೆಯಾಗಿಲ್ಲ. ಏಳಕ್ಕೂ ಹೆಚ್ಚು ಇಲಾಖೆಗಳು ಬಿಡುಗಡೆಯಾದ ಮೊತ್ತದಲ್ಲಿ ಅರ್ಧದಷ್ಟನ್ನೂ ಖರ್ಚು ಮಾಡಿಲ್ಲ. ಇವೆಲ್ಲ ಸೇರಿ ಬಳಕೆ ಮಾಡಿದ್ದು ₹ 4,865 ಕೋಟಿ ಮಾತ್ರ. ಇದು ದಲಿತರು, ಆದಿವಾಸಿಗಳ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ. ಕಾಯಿದೆಯ ಪ್ರಕಾರ, ಸಂಬಂಧಪಟ್ಟ ಅಧಿಕಾರಿಯನ್ನು ಶಿಕ್ಷಿಸಲು ಅವಕಾಶವಿದ್ದರೂ ಪರಿಸ್ಥಿತಿ ಸುಧಾರಿಸದಿರುವುದು ಖಂಡನೀಯ. ಇನ್ನು, ಪೌರ ಸಂಸ್ಥೆಗಳ ಆದಾಯದ ಮೂಲ ಸೀಮಿತವಾಗಿದೆ ಎಂಬುದೇನೋ ನಿಜ. ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ವಿವಿಧ ಪರವಾನಗಿಗಳ ಶುಲ್ಕ, ಕಟ್ಟಡಗಳನ್ನು ಕಟ್ಟಿಸಿದ್ದರೆ ಒಂದಿಷ್ಟು ಬಾಡಿಗೆ ಬಿಟ್ಟು ಬೇರೆ ಆದಾಯವೂ ಇಲ್ಲ, ಅದನ್ನು ಹುಡುಕುವ ಪ್ರಯತ್ನಗಳೂ ನಡೆದಿಲ್ಲ. 80ರ ದಶಕದವರೆಗೂ ಆಕ್ಟ್ರಾಯ್ ಸುಂಕದಿಂದ ಅವು ಸಾಕಷ್ಟು ಆದಾಯ ಗಳಿಸುತ್ತಿದ್ದವು. ಅದು ರದ್ದಾದ ಬಳಿಕ ಸರ್ಕಾರವೇ ಪ್ರವೇಶ ತೆರಿಗೆ ಮೂಲಕ ಸಂಗ್ರಹವಾಗುವ ಮೊತ್ತವನ್ನು ಪೌರ ಸಂಸ್ಥೆಗಳಿಗೆ ಹಂಚುತ್ತಿತ್ತು. ನಂತರ ಈ ಸಂಸ್ಥೆಗಳ ಬಲವರ್ಧನೆಗೆ ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಿದ ಬಳಿಕ ಕೇಂದ್ರದಿಂದಲೂ ಹಣ ಹರಿಯಲಾರಂಭಿಸಿದೆ. ರಾಜ್ಯ ಮಟ್ಟದಲ್ಲಿ ಹಣಕಾಸು ಆಯೋಗ ರಚಿಸಿ ರಾಜ್ಯದ ಬೊಕ್ಕಸದಿಂದ ಅವಕ್ಕೂ ಶಾಸನಬದ್ಧವಾಗಿ ಅನುದಾನ ನೀಡುವ ವ್ಯವಸ್ಥೆ ಬಂತು. ಈಗಂತೂ ನಗರೋತ್ಥಾನ, ಜೆ ನರ್ಮ್‌, ವಾಂಬೆ, ಆಶ್ರಯ ಹೀಗೆ ವಿವಿಧ ಯೋಜನೆಗಳ ಹೆಸರಿನಲ್ಲಿ ಯಥೇಚ್ಛ ಅನುದಾನ ಬರುತ್ತಿದೆ. ಬಂದದ್ದನ್ನು ಸರಿಯಾಗಿ ಬಳಸದೇ ಇದ್ದರೂ ‘ಹಣದ ಕೊರತೆ’ ಎಂಬ ರಾಗ ಹಾಡುವುದೇನೂ ಕಮ್ಮಿಯಾಗಿಲ್ಲ. 5 ವರ್ಷಕ್ಕೊಮ್ಮೆ ಮತ ಕೇಳಲು ಮತದಾರರ ಮುಂದೆ ಹೋಗುವ ಜನಪ್ರತಿನಿಧಿಗಳು ಹೆಚ್ಚು ಮುತುವರ್ಜಿ ವಹಿಸಿದ್ದರೆ ಬಂದ ಹಣ ಹೀಗೆ ಬಳಕೆಯಾಗದೆ ಉಳಿಯುತ್ತಿರಲಿಲ್ಲ. ಅನುದಾನವನ್ನೂ ಬಳಸದೆ, ಪ್ರಜೆಗಳಿಗೆ ಸಿಗಬೇಕಾದ ಸೌಲಭ್ಯಗಳನ್ನೂ ಕೊಡದೇ ಇರುವುದು ಅಪರಾಧಕ್ಕೆ ಸಮ. ಇಲ್ಲಿ ಸಂಬಂಧಪಟ್ಟ ಇಲಾಖೆಗಳ ಉದಾಸೀನ, ವೈಫಲ್ಯ ಎದ್ದು ಕಾಣುತ್ತದೆ. ಅನುದಾನ ಯಾಕೆ ಬಳಕೆಯಾಗಲಿಲ್ಲ, ಏನು ಸಮಸ್ಯೆಯಿದೆ ಎಂದು ಅವು ಮೇಲ್ವಿಚಾರಣೆ ಮಾಡಬೇಕಿತ್ತು. ಇಲಾಖೆಗಳ ಸಚಿವರೂ ನಿಗಾ ವಹಿಸಬೇಕಿತ್ತು. ಇದು ಆಡಳಿತ ವ್ಯವಸ್ಥೆಯ ಮಹಾನ್ ಲೋಪ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರೇನೊ ಈಗ 15 ದಿನಗಳಿಗೊಮ್ಮೆ ವಿಡಿಯೊ ಸಂವಾದ ನಡೆಸಿ ಅನುದಾನ ಬಳಕೆಯ ಪ್ರಗತಿ ಪರಿಶೀಲಿಸಲು ಸೂಚಿಸಿದ್ದಾರೆ. ಇದು ಒಳ್ಳೆಯ ಹೆಜ್ಜೆ. ಇಷ್ಟೇ ಸಾಲದು. ವೈಫಲ್ಯಕ್ಕೆ ಕಾರಣರಾದವರ ಮೇಲೆ ಕಟ್ಟುನಿಟ್ಟು ಕ್ರಮ ಜರುಗಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.