ಮೀಸಲಾತಿಗಾಗಿ ಚಳವಳಿ ಅಧ್ಯಯನ ಅಗತ್ಯ ಸಂಘಟನೆ ಮತ್ತು ರಾಜಕೀಯ ಶಕ್ತಿ ಇರುವ ಸಮುದಾಯಗಳು ಮೀಸಲಾತಿಗಾಗಿ ಒತ್ತಡ ಹೇರುತ್ತ ನಡೆದರೆ ಅರ್ಹ ವರ್ಗಗಳು ಮೀಸಲು ಸೌಲಭ್ಯದಿಂದ ವಂಚಿತವಾಗುತ್ತವೆ. ಮೀಸಲಾತಿ ಚಳವಳಿ ಈ ಸಲ ರಾಜಧಾನಿ ದೆಹಲಿಗೆ ಹೊಂದಿಕೊಂಡ ಹರಿಯಾಣದಲ್ಲಿ ಜೋರಾಗಿಯೇ ನಡೆಯುತ್ತಿದೆ. ಹಿಂಸಾಚಾರ, ಪ್ರತಿಭಟನೆಯ ಕಾವು ಇಡೀ ರಾಜ್ಯವನ್ನು ಆವರಿಸಿಕೊಂಡಿದೆ. ತಮ್ಮನ್ನು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಜಾಟ್ ಸಮುದಾಯ ಬೀದಿಗಿಳಿದಿದೆ. ಜಾಟರು ಪಾರಂಪರಿಕವಾಗಿ ಕೃಷಿಯನ್ನು ಅವಲಂಬಿಸಿದ ಭೂ ಮಾಲೀಕ ಸಮುದಾಯ. ಇವರು ಹರಿಯಾಣ ಮಾತ್ರವಲ್ಲದೆ ಉತ್ತರದ ಅನೇಕ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಯಾವುದೇ ಮಾನದಂಡದಿಂದ ನೋಡಿದರೂ ಸಾಮಾಜಿಕ ಮತ್ತು ರಾಜಕೀಯವಾಗಿ ಬಲವಾಗಿದ್ದಾರೆ. ಹೀಗಾಗಿ ಅವರ ಚಳವಳಿಗೆ ಶಕ್ತಿ, ಸಾಧನ ಎರಡೂ ಇವೆ. ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅವರದು ಇತರ ಹಿಂದುಳಿದ ವರ್ಗ. ಹರಿಯಾಣದಲ್ಲೂ ಅವರು ವಿಶೇಷ ಒಬಿಸಿ ಪಟ್ಟಿಯಲ್ಲಿದ್ದರು. ಆದರೆ ಕಳೆದ ವರ್ಷ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪಿನಿಂದಾಗಿ ಅವರ ಮೀಸಲಾತಿ ಸೌಲಭ್ಯ ರದ್ದಾಯಿತು. ಅಲ್ಲಿಂದಲೇ ಅವರು ಹೋರಾಟ ಪ್ರಾರಂಭಿಸಿದ್ದರೂ ಇಷ್ಟೊಂದು ತೀವ್ರ ಸ್ವರೂಪಕ್ಕೆ ಇಳಿದಿರಲಿಲ್ಲ. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಚಳವಳಿ ಉಲ್ಬಣಿಸಿ ನೂರಾರು ಕೋಟಿ ಹಾನಿಯಾಗಿ, ಅನೇಕರು ಜೀವ ಕಳೆದುಕೊಂಡ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅವರ ಬೇಡಿಕೆ ಒಪ್ಪಿರುವುದಾಗಿ ಹೇಳಿದೆ. ಆದರೂ ‘ಬರೀ ಹೇಳಿಕೆ ಸಾಲದು, ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದು ಚಳವಳಿಗಾರರು ಪಟ್ಟು ಹಿಡಿದಿದ್ದಾರೆ. ಹಿಂದೆ 10 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಲಾಭದ ಮೇಲೆ ಕಣ್ಣಿಟ್ಟು ಜಾಟರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ 2014ರ ಮಾರ್ಚ್ 4ರಂದು ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿದರೆ ತನಗೆ ಕಷ್ಟ ಎಂದು ಬಿಜೆಪಿಯೂ ಬೆಂಬಲಿಸಿತ್ತು. ಆದರೆ ಇದು ಚುನಾವಣಾ ಉದ್ದೇಶದ ನಿರ್ಧಾರ ಎಂದು ಹೇಳಿ ಸುಪ್ರೀಂ ಕೋರ್ಟ್ ಕೇಂದ್ರದ ಆದೇಶ ರದ್ದುಪಡಿಸಿತು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯದಲ್ಲಿಯೂ ಜಾಟರು ಮೀಸಲಾತಿಗೆ ಅರ್ಹವಾದ ಸಮುದಾಯ ಅಲ್ಲ. ಮೀಸಲಾತಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕೇ ಹೊರತು ಜಾತಿಯೊಂದನ್ನೇ ಅಲ್ಲ ಎಂದು ಸುಪ್ರೀಂ ಕೋರ್ಟ್ ಅನೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದೂ ಪ್ರಬಲ ಸಮುದಾಯವೊಂದನ್ನು ಎದುರು ಹಾಕಿಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಕಷ್ಟವಾಗಿ ಚುನಾವಣೆಗಳ ಸಂದರ್ಭಗಳಲ್ಲಿ ನೀಡುವ ಭರವಸೆಗಳು ನಂತರ ಬಿಕ್ಕಟ್ಟಾಗಿ ಬೆಳೆಯುವುದಕ್ಕೆ ಇದು ದ್ಯೋತಕ. ಕೆಲ ತಿಂಗಳ ಹಿಂದೆ ಗುಜರಾತ್‌ನಲ್ಲಿ ಪಟೇಲ್ ಸಮುದಾಯ ಕೂಡ ಇಂಥದೇ ಬೇಡಿಕೆ ಇಟ್ಟುಕೊಂಡು ಆರಂಭಿಸಿದ ಚಳವಳಿಯೂ ಹಿಂಸಾತ್ಮಕ ಸ್ವರೂಪ ಪಡೆದಿತ್ತು. ನಂತರ ಆಂಧ್ರದಲ್ಲಿ ಕಾಪು ಸಮುದಾಯದ ಮುಖಂಡರು ಚಳವಳಿ ನಡೆಸಿದ್ದಾರೆ. ಹಾಗೆಯೇ ರಾಜಸ್ತಾನದಲ್ಲಿ ಗುಜ್ಜರ್ ಹಾಗೂ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಗಳು ಮೀಸಲಿಗಾಗಿ ಆಗ್ರಹಿಸಿವೆ. ಇವೆಲ್ಲ ಮೀಸಲಾತಿ ಬಗ್ಗೆ ಇರುವ ಆಕರ್ಷಣೆ, ದೊರೆಯುವ ಸೌಲಭ್ಯದ ಕುರಿತ ಮೋಹಕ್ಕೆ ಉದಾಹರಣೆಗಳು. ಕೆಲವು ಸಮುದಾಯಗಳಿಗೆ ಮೀಸಲಾತಿ ಅಗತ್ಯ, ಅನಿವಾರ್ಯ. ಆದರೆ ಸಂಘಟನೆ ಮತ್ತು ರಾಜಕೀಯ ಶಕ್ತಿ ಇರುವ ಸಮುದಾಯಗಳು ಒತ್ತಡ ಹೇರುತ್ತ ನಡೆದರೆ ಅರ್ಹ ವರ್ಗಗಳು ಮೀಸಲು ಸೌಲಭ್ಯದಿಂದ ವಂಚಿತವಾಗುತ್ತವೆ. ಅಗತ್ಯ ಮತ್ತು ಒತ್ತಡದ ಮಧ್ಯೆ ಸಮತೋಲನ ಕಾಯ್ದುಕೊಳ್ಳುವುದು ಬಹಳ ಕಷ್ಟದ ಕೆಲಸ. ಎಲ್ಲವನ್ನೂ ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದಂತೂ ಅತ್ಯಂತ ಅಪಾಯಕಾರಿ. ಅದೊಂದು ರೀತಿ ಹುಲಿ ಮೇಲಿನ ಸವಾರಿಯಂತೆ. ಹರಿಯಾಣದಲ್ಲಿ ಈಗ ನಡೆಯುತ್ತಿರುವುದು ಅದೇ ಕಥೆ. ವಾಸ್ತವವಾಗಿ ಈಗ ಸರ್ಕಾರಿ ವಲಯದಲ್ಲಿ ನೇಮಕಾತಿ ತುಂಬ ಕಡಿಮೆಯಾಗಿದೆ. ಹೀಗಿದ್ದೂ ಇಂತಹ ಬೇಡಿಕೆಗಳು ಅನೇಕ ರಾಜ್ಯಗಳಲ್ಲಿ ಒಂದೇ ಬಗೆಯಲ್ಲಿ ಏಕೆ ಹುಟ್ಟಿಕೊಳ್ಳುತ್ತಿವೆ ಎಂಬ ಬಗ್ಗೆ ಆಧ್ಯಯನ ಅಗತ್ಯ. ಸದ್ಯಕ್ಕಂತೂ ಹರಿಯಾಣದಲ್ಲಿ ಹೊತ್ತಿಕೊಂಡ ಹಿಂಸಾಚಾರದ ಬೆಂಕಿಯನ್ನು ಆರಿಸುವ ಕೆಲಸ ನಡೆಯಬೇಕು. ಬೇರೆ ಕಡೆ ಹರಡದಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಸಾಮಾಜಿಕ ಅಶಾಂತಿ, ಆರ್ಥಿಕ ಬಿಕ್ಕಟ್ಟು ಎದುರಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.