ನ್ಯಾಯದಾನ ವಿಳಂಬ ತಡೆಗೆ ಬೇಕು ಪ್ರಾಮಾಣಿಕ ಪ್ರಯತ್ನ ದೇಶದಲ್ಲಿ ಕೆಳಹಂತದ ಕೋರ್ಟ್‌ಗಳಿಂದ ಸುಪ್ರೀಂಕೋರ್ಟ್‌ವರೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಮೂರು ಕೋಟಿಗಳಷ್ಟಿರುವ ಅಂದಾಜಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನ ವಿಳಂಬ ಸಮಸ್ಯೆಯು ಗಂಭೀರ ಸ್ವರೂಪ ತಳೆದಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಿರೀಕ್ಷಿತ ಫಲವನ್ನೇ ನೀಡುತ್ತಿಲ್ಲ. ಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ತಮ್ಮ ಮೊದಲ ಆದ್ಯತೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ (ಸಿಜೆಐ) ಅಧಿಕಾರ ಸ್ವೀಕರಿಸುವ ಪ್ರತಿಯೊಬ್ಬರೂ ಹೇಳಿಕೊಳ್ಳುತ್ತಾರೆ. ಈ ಭರವಸೆಗೆ ಅನುಗುಣವಾಗಿ ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಅಗತ್ಯ ಇರುವ ಸಹಕಾರ ನೀಡುವುದಾಗಿ ಅಧಿಕಾರಕ್ಕೆ ಬರುವ ಪ್ರತಿಯೊಬ್ಬ ಕಾನೂನು ಸಚಿವರೂ ವಾಗ್ದಾನ ನೀಡುತ್ತಾರೆ. ದಿನಗಳು ಕಳೆದಂತೆ ಈ ಎಲ್ಲ ಭರವಸೆಯ ಮಾತುಗಳು ಸಮರ್ಪಕವಾಗಿ ಕಾರ್ಯಗತಗೊಳ್ಳದೇ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಟಿ.ಎಸ್‌. ಠಾಕೂರ್‌ ಅವರು ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ‘2016ನೇ ವರ್ಷವನ್ನು ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ವರ್ಷ’ವನ್ನಾಗಿ ಆಚರಿಸುವುದಾಗಿ ಹೇಳಿದ್ದಾರೆ. ಈ ಹಿಂದಿನ ಕಾರ್ಯಕ್ರಮಗಳಿಗಿಂತ ಇದು ಭಿನ್ನವಾಗಿ ನಿರೀಕ್ಷಿತ ಫಲಿತಾಂಶ ನೀಡುವುದೇ ಎನ್ನುವುದನ್ನು ಕಾದು ನೋಡಬೇಕು. ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಂಡು ಇಂತಹ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕೆಂದು ನ್ಯಾಯಮೂರ್ತಿ ಠಾಕೂರ್‌ ಅವರು, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ದೇಶದ ಇತರ ಕೋರ್ಟ್‌ಗಳಿಗೆ ಹೋಲಿಸಿದರೆ ತ್ವರಿತವಾಗಿ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡುವ ದೆಹಲಿ ಹೈಕೋರ್ಟ್‌, ತನ್ನಲ್ಲಿ ಇರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇದೇ ವೇಗದಲ್ಲಿ ಹೋದರೆ 466 ವರ್ಷಗಳೆ ಬೇಕಾಗಬಹುದು ಎಂದು ನಿವೃತ್ತ ನ್ಯಾಯಮೂರ್ತಿಗಳೊಬ್ಬರು ಅಂದಾಜಿಸಿರುವುದು ಈ ಸಮಸ್ಯೆಯ ತೀವ್ರತೆಗೆ ಕನ್ನಡಿ ಹಿಡಿಯುತ್ತದೆ. ಕೋರ್ಟ್‌ಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಬಾಕಿ ಇರಲು ಇರುವ ಕಾರಣಗಳು ಎಲ್ಲರಿಗೂ ಗೊತ್ತಿರುವಂತಹವೇ ಆಗಿವೆ. ಎಲ್ಲ ಹಂತಗಳಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇದೆ. ಸಂಖ್ಯೆ ಹೆಚ್ಚಿಸುವ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಬಹುತೇಕ ಕೋರ್ಟ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಕೆಳ ಹಂತದ ನ್ಯಾಯಾಲಯಗಳಿಗೆ ಇದುವರೆಗೂ ಸ್ವಂತ ಕಟ್ಟಡವೂ ಇಲ್ಲದ ಅನೇಕ ನಿದರ್ಶನಗಳಿವೆ. ನಮ್ಮ ನ್ಯಾಯಾಂಗ ಪ್ರಕ್ರಿಯೆ ತುಂಬ ಸಂಕೀರ್ಣವಾಗಿದ್ದು, ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತಿದೆ. ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲು ವಕೀಲರು ಮತ್ತು ಕಕ್ಷಿದಾರರು ಹವಣಿಸುವುದೂ ಕಂಡು ಬರುತ್ತದೆ. ವಿಚಾರಣಾ ಪ್ರಕ್ರಿಯೆ ಆಧುನೀಕರಣಗೊಳ್ಳದಿರುವುದು ಮತ್ತು ತಂತ್ರಜ್ಞಾನ ಬಳಕೆಯು ಎಲ್ಲ ಕೋರ್ಟ್‌ಗಳಿಗೂ ತಲುಪದಿರುವುದೂ ನ್ಯಾಯದಾನ ವಿಳಂಬಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಕೌಟುಂಬಿಕ, ಗ್ರಾಹಕರ ನ್ಯಾಯಾಲಯಗಳೂ ಸೇರಿದಂತೆ ಲೋಕ್ ಅದಾಲತ್‌ನಂತಹ ಪರ್ಯಾಯ ವೇದಿಕೆಗಳು, ಕೋರ್ಟ್‌ಗಳ ಮೇಲಿನ ಒತ್ತಡ ನಿವಾರಣೆಗೆ ನೆರವಾಗುತ್ತಿದ್ದರೂ, ಇತರ ಹಲವಾರು ಕ್ಷೇತ್ರಗಳಲ್ಲಿ ಇಂತಹ ವ್ಯವಸ್ಥೆಯೇ ಇಲ್ಲದಿರುವುದರಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಈ ಎಲ್ಲ ದೋಷಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವವರೆಗೆ ವಿಳಂಬ ನ್ಯಾಯದಾನ ತಗ್ಗಿಸುವ ಪ್ರಯತ್ನಗಳು ಯಶಸ್ವಿಯಾಗಲಾರವು. ಸಮಾಜದ ದುರ್ಬಲ ವರ್ಗ ಮತ್ತು ಅಂಗವಿಕಲರಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಸಿಜೆಐ ಒತ್ತಾಯಿಸಿರುವುದು ಸಮರ್ಥನೀಯವಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ, ಮಹಿಳೆ, ಮಕ್ಕಳು ಹಾಗೂ ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಠಾಕೂರ್‌ ಅವರು ನೀಡಿರುವ ಸಲಹೆ ಆದ್ಯತೆ ಮೇರೆಗೆ ಕಾರ್ಯಗತಗೊಳ್ಳಬೇಕಾಗಿದೆ. ಇ–ಕೋರ್ಟ್‌, ಇ–ಫೈಲಿಂಗ್‌, ವಿಡಿಯೊ ಕಾನ್ಫರೆನ್ಸ್‌ ಮತ್ತು ತಂತ್ರಜ್ಞರ ನೇಮಕದಂತಹ ಅನೇಕ ಹೊಸ ಆಲೋಚನೆಗಳನ್ನೂ ಅವರು ಮುಂದಿಟ್ಟಿದ್ದಾರೆ. ಈ ಎಲ್ಲ ಸಲಹೆಗಳು ತಕ್ಷಣಕ್ಕೆ ಕಾರ್ಯಗತಗೊಳ್ಳುತ್ತವೆ ಎಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಅದೇ ಒಂದು ದೊಡ್ಡ ಸಾಧನೆಯಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.