ವಿದ್ಯುತ್‌ ಕ್ಷಾಮ ನಿವಾರಣೆಗೆ ದೀರ್ಘಾವಧಿ ಯೋಜನೆ ಅಗತ್ಯ ಪ್ರತಿವರ್ಷ ಬೇಸಿಗೆಯಲ್ಲಿ ‘ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ’ ಮಾಡುವುದು ವಿದ್ಯುತ್‌ ಕ್ಷೇತ್ರದ ಆಡಳಿತದ ವೈಫಲ್ಯವನ್ನಷ್ಟೆ ಎತ್ತಿ ತೋರುತ್ತದೆ. ಈ ಬಾರಿಯ ಬೇಸಿಗೆ ರಾಜ್ಯದ ಜನರಿಗೆ ಮತ್ತು ಉದ್ಯಮಿಗಳಿಗೆ ಅಸಹನೀಯವಾಗುವುದು ಖಚಿತವಾಗಿದೆ. ಒಂದೆಡೆ ಬಿಸಿಲ ತಾಪ ತೀವ್ರವಾಗಿ ಏರುತ್ತಿದ್ದು, ಇನ್ನೊಂದೆಡೆ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎಂದು ರಾಜ್ಯ ಸರ್ಕಾರ ಮುನ್ಸೂಚನೆ ನೀಡಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿದ್ಯುತ್‌ ಕೊರತೆಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಆದರೆ ನಿರ್ದಿಷ್ಟ ಪರಿಹಾರದ ದಾರಿ ಗೋಚರಿಸಿಲ್ಲ. ಈಗಾಗಲೆ ಪ್ರತಿದಿನ ಸರಾಸರಿ 1,000 ಮೆಗಾವಾಟ್‌ ವಿದ್ಯುತ್‌ ಕೊರತೆ ಬೀಳುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕೊರತೆ ಪ್ರಮಾಣ 2,500 ಮೆಗಾವಾಟ್‌ ತಲುಪುವ ನಿರೀಕ್ಷೆ ಇದೆ. 1,035 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಶರಾವತಿ ವಿದ್ಯುದಾಗಾರದಲ್ಲಿ ಕಳೆದ ವಾರ ಭಾರೀ ಬೆಂಕಿ ಅವಘಡ ಸಂಭವಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಘಟಕವನ್ನು ದುರಸ್ತಿ ಮಾಡಿ ಮತ್ತೆ ವಿದ್ಯುತ್‌ ಉತ್ಪಾದನೆ ಆರಂಭಿಸಲು ಇನ್ನು 4–5 ತಿಂಗಳಾದರೂ ಬೇಕು. ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಅತ್ಯಂತ ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದು ಸ್ಪಷ್ಟ. ಪ್ರತಿವರ್ಷವೂ ವರ್ಷಾಂತ್ಯದ ವೇಳೆಗೆ ವಿದ್ಯುತ್‌ ಕೊರತೆ ಎದುರಾಗುವುದು ಮಾಮೂಲು. ಹೊಸ ವರ್ಷದ ಮೊದಲ ನಾಲ್ಕು ತಿಂಗಳು ಯಾವುದೇ ಸರ್ಕಾರಕ್ಕಾದರೂ ವಿದ್ಯುತ್‌ ನಿರ್ವಹಣೆಯಲ್ಲಿ ಅತ್ಯಂತ ಸವಾಲಿನ ಅವಧಿಯೆ. ಇದು ಗೊತ್ತಿದ್ದೂ ದೂರಗಾಮಿ ಪರಿಹಾರ ಕ್ರಮಗಳನ್ನು ಮೊದಲೇ ರೂಪಿಸುವಲ್ಲಿ ಸರ್ಕಾರ ಎಡವಿರುವುದು ಸ್ಪಷ್ಟ. ವಿದ್ಯುತ್‌ ಕೊರತೆ ಉಂಟಾದಾಗಲೆಲ್ಲ ‘ಹೊರರಾಜ್ಯಗಳಿಂದ ವಿದ್ಯುತ್‌ ಖರೀದಿಯೊಂದೇ ಪರಿಹಾರ’ ಎಂದು ತಿಳಿದುಕೊಳ್ಳುವುದು ಜಾಣತನವಲ್ಲ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಪ್ರತಿದಿನ ಅಂದಾಜು 10 ಸಾವಿರ ಮೆಗಾವಾಟ್‌ನಷ್ಟು ವಿದ್ಯುತ್‌ ಅಗತ್ಯವಿದೆ ಎನ್ನುವುದು ಗೋಡೆಯ ಮೇಲಿನ ಬರಹ. ಮಳೆಯ ಭರವಸೆ ಇಲ್ಲವಾದ್ದರಿಂದ ನಮ್ಮ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಲಿದೆ ಎನ್ನುವುದೂ ಗೊತ್ತಿರುವ ವಿಷಯವೆ. ಮೊದಲೇ ಇದನ್ನು ಊಹಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಏಕೆ ಸಾಧ್ಯವಿಲ್ಲ? ಶೇಕಡ 60ರಷ್ಟು ವಿದ್ಯುತ್‌ ಬೇಡಿಕೆ ಪೂರೈಸಲು ಜಲಮೂಲವನ್ನೇ ನಂಬಿರುವ ನಾವು, ಇತರ ಮೂಲಗಳ ಮೂಲಕ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಏಕೆ ವಿಫಲರಾಗುತ್ತಿದ್ದೇವೆ? ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಪದೇ ಪದೇ ತಾಂತ್ರಿಕ ಅಡಚಣೆಗಳು ಏಕೆ ಉಂಟಾಗುತ್ತಿವೆ? ನಿರ್ವಹಣೆಯಲ್ಲಿ ನಮ್ಮ ತಂತ್ರಜ್ಞರ ವೈಫಲ್ಯ ಇದಕ್ಕೆ ಕಾರಣವೇ ಅಥವಾ ಆಡಳಿತದ ಅದಕ್ಷತೆಯೇ? ಅಲ್ಲಿನ ಉತ್ಪಾದನಾ ಸಾಮರ್ಥ್ಯವನ್ನು ಪೂರ್ಣ ಮಟ್ಟದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ದೊಡ್ಡ ಹಿನ್ನಡೆ. ಪ್ರಸರಣ ಮತ್ತು ವಿತರಣೆ ನಷ್ಟವನ್ನು ಕಡಿಮೆ ಮಾಡಲು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಲಭ್ಯವಿರುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಉಡುಪಿಯ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲೂ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಮಾತ್ರ ಉತ್ಪಾದನೆಯಾಗುತ್ತಿರುವುದು ನಮ್ಮ ಯೋಜನೆಗಳ ಜಾರಿ ಸರಿಯಾದ ದಿಕ್ಕಿನಲ್ಲಿ ಆಗುತ್ತಿಲ್ಲ ಎನ್ನುವುದನ್ನೇ ಸೂಚಿಸುತ್ತದೆ. ಮುಂದಿನ ಎರಡು ತಿಂಗಳ ತೀವ್ರ ವಿದ್ಯುತ್‌ ಕ್ಷಾಮವನ್ನು ಎದುರಿಸಲು ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿಸಬಹುದು. ಆದರೆ ಅದು ಬೊಕ್ಕಸಕ್ಕೆ ದೊಡ್ಡ ಹೊರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಈ ಸಲ ದೇಶದ ಪಶ್ಚಿಮ ಮತ್ತು ಉತ್ತರದ ರಾಜ್ಯಗಳಲ್ಲಿ ಮಳೆಯಿಲ್ಲದೆ ಬರಗಾಲದ ಮುನ್ಸೂಚನೆ ಇರುವುದರಿಂದ ಹೊರರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡುವುದಕ್ಕೆ ನಿರ್ಬಂಧವನ್ನೂ ವಿಧಿಸಲಾಗಿದೆ. ದಕ್ಷಿಣದ ರಾಜ್ಯಗಳಿಂದ ಖರೀದಿಸಿದರೂ ಸಾಗಣೆಗೆ ಜಾಲವ್ಯವಸ್ಥೆ ಇಲ್ಲ ಎನ್ನುವುದು ಇನ್ನೊಂದು ವಿಪರ್ಯಾಸ. ಜಾಗತಿಕ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪಳೆಯುಳಿಕೆ ವಿದ್ಯುತ್‌ ಉತ್ಪಾದನೆಯನ್ನು ಕಡಿಮೆಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೂ ಸೌರ ಶಕ್ತಿ ಮತ್ತು ಪವನ ವಿದ್ಯುತ್‌ ಉತ್ಪಾದನೆಯತ್ತ ದೃಢವಾದ ಹೆಜ್ಜೆಗಳನ್ನು ಅತಿಶೀಘ್ರವಾಗಿ ಊರಬೇಕಿದೆ. ರಾಜ್ಯದಲ್ಲಿ ಸದ್ಯಕ್ಕೆ ಸೌರವಿದ್ಯುತ್‌ ಮೂಲಕ 300 ಮೆಗಾವಾಟ್‌ನಷ್ಟು ವಿದ್ಯುತ್‌ ಮಾತ್ರ ಉತ್ಪಾದನೆಯಾಗುತ್ತಿದೆ. 2,000 ಮೆಗಾವಾಟ್‌ ಉತ್ಪಾದನೆ ಗುರಿಯುಳ್ಳ ಮಹತ್ವಾಕಾಂಕ್ಷೆಯ ಪಾವಗಡ ಸೌರಶಕ್ತಿ ಯೋಜನೆ ಜಾರಿಗೆ ಅಗತ್ಯ ಕ್ರಮಗಳು ತ್ವರಿತ ಗತಿಯಲ್ಲಿ ನಡೆದಿವೆಯೇ? ಪವನ ವಿದ್ಯುತ್‌ ಮೂಲಕ 1,000 ಮೆಗಾವಾಟ್‌ನಷ್ಟು ವಿದ್ಯುತ್‌ ಉತ್ಪಾದಿಸುವ ಅವಕಾಶ ಇದ್ದರೂ ಅದನ್ನು ಪೂರ್ಣವಾಗಿ ಬಳಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಪ್ರತಿವರ್ಷಬೇಸಿಗೆಯಲ್ಲಿ ‘ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ’ ಮಾಡುವುದು ವಿದ್ಯುತ್‌ ಕ್ಷೇತ್ರದ ಆಡಳಿತ ವೈಫಲ್ಯವನ್ನಷ್ಟೆ ಎತ್ತಿ ತೋರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.