ಜೀವ ರಕ್ಷಣೆಗೆ ಹೆಲ್ಮೆಟ್‌ ಅಗತ್ಯ ಹದಗೆಟ್ಟ ರಸ್ತೆಗೆ ಯಾರು ಹೊಣೆ? ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಕು, ದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆಗೆ ಬೇರೇನೂ ಬೇಕಾಗಿಲ್ಲ ಎಂದು ಆಳುವ ಮಂದಿ ಭಾವಿಸಬಾರದು. ಅತಿ ವೇಗವಾಗಿ ಬೆಳೆಯುತ್ತಿರುವ ನಮ್ಮ ನಗರ–ಪಟ್ಟಣಗಳ ರಸ್ತೆಗಳ ಸ್ಥಿತಿ ಎಳ್ಳಷ್ಟೂ ಸುಧಾರಣೆ ಆಗಿಲ್ಲ. ಆದರೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಮಾತ್ರ ಹಲವು ಪಟ್ಟು ಹೆಚ್ಚುತ್ತಲೇ ಇದೆ. ಇದರ ಅಡ್ಡಪರಿಣಾಮ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ತಟ್ಟುತ್ತಿದೆ. ಸಂಚಾರ ದಟ್ಟಣೆಯಿಂದ ಮಹಾನಗರಗಳ ಬದುಕಂತೂ ಅಸಹನೀಯ ಹಂತ ತಲುಪುತ್ತಿದೆ. ರಾಜಧಾನಿ ಬೆಂಗಳೂರನ್ನು ದ್ವಿಚಕ್ರ ವಾಹನಗಳ ನಗರ ಎಂದು ಕರೆಯಲು ಅಡ್ಡಿಯಿಲ್ಲ. ನಗರದ ರಸ್ತೆಗಳ ಮೇಲೆ ಓಡಾಡುವ ವಾಹನಗಳಲ್ಲಿ ಬೈಕ್‌, ಸ್ಕೂಟರ್‌ ಮುಂತಾದ ದ್ವಿಚಕ್ರ ವಾಹನಗಳ ಪ್ರಮಾಣ ಸುಮಾರು ಶೇಕಡ 70ರಷ್ಟು. ದ್ವಿಚಕ್ರ ವಾಹನಗಳು ಆ ಮಟ್ಟಿಗೆ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಆದರೆ ನಗರದಲ್ಲಿ ದ್ವಿಚಕ್ರ ವಾಹನ ಓಡಿಸುವುದೆಂದರೆ ಸರ್ಕಸ್‌ ಮಾಡಿದಷ್ಟೇ ಕಷ್ಟಕರ. ಆಯ ತಪ್ಪಿದರೆ ಮೂಳೆ ಮುರಿತ. ಮತ್ತೂ ಎಡವಟ್ಟಾದರೆ ಪ್ರಾಣಕ್ಕೇ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬದಿ ಸವಾರ ಎಂಬ ಭೇದ ಇರಲಾರದು, ಅಲ್ಲವೇ? ನಿಮ್ಹಾನ್ಸ್ ಅಧ್ಯಯನದ ಪ್ರಕಾರ, ದ್ವಿಚಕ್ರ ವಾಹನ ಅಪಘಾತಗಳಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರು. ಚಾಲನೆ ಮಾಡುವವರಷ್ಟೆ ಹೆಲ್ಮೆಟ್‌ ಧರಿಸಿದರೆ ಸಾಲದು, ಹಿಂಬದಿ ಸವಾರರ ಜೀವ ರಕ್ಷಣೆಗೂ ಹೆಲ್ಮೆಟ್‌ ಅಗತ್ಯ ಎಂಬುದನ್ನು ಈ ಅಂಕಿಅಂಶ ಹೇಳುತ್ತದೆ. ಹೆಲ್ಮೆಟ್‌ ಧರಿಸುವುದು ಮೂಲಭೂತವಾದ ಒಂದು ಸುರಕ್ಷಾ ಕ್ರಮ ಎನ್ನುವುದು ನಿಜ. ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವ್ರತೆಯನ್ನು ಹೆಲ್ಮೆಟ್‌ ತಗ್ಗಿಸಬಲ್ಲುದು. ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಈ ಸಮರ್ಥನೆಯಂತೂ ಇದ್ದೇ ಇದೆ. ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷಾ ಸಮಿತಿಯೂ ಹೆಲ್ಮೆಟ್‌ ಕಡ್ಡಾಯಗೊಳಿಸಬೇಕು ಎಂದು ತಾಕೀತು ಮಾಡಿದೆ. ಅದರ ಅನ್ವಯ ಈಗ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಕ್ರಮ ಜಾರಿಗೆ ಬಂದಿದೆ. ಆದರೆ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಕು, ದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆಗೆ ಬೇರೇನೂ ಬೇಕಾಗಿಲ್ಲ ಎಂದು ಆಳುವ ಮಂದಿ ಭಾವಿಸಲಾಗದು. ಬೆಂಗಳೂರು ನಗರವಂತೂ ದ್ವಿಚಕ್ರ ವಾಹನ ಅಪಘಾತಗಳಿಗೆ ಕುಖ್ಯಾತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಗುಂಡಿಗಳು ಇಂತಹ ಅಪಘಾತಗಳಿಗೆ ಮುಖ್ಯ ಕಾರಣವಾಗುತ್ತಿವೆ. ರಸ್ತೆಗುಂಡಿಗಳನ್ನು ಮುಚ್ಚಲು ಅಪಾರ ಹಣ ವೆಚ್ಚವಾಗುತ್ತಿದ್ದರೂ ಪದೇ ಪದೇ ಇಂತಹ ಗುಂಡಿಗಳು ಉದ್ಭವವಾಗಲು ಏನು ಕಾರಣ? ಮೂಲ ಕೆಲಸದಲ್ಲೇ ಸಮಸ್ಯೆ ಇರುವುದು ಎದ್ದು ಕಾಣಿಸುತ್ತದೆ. ಮಾನದಂಡಗಳನ್ನು ಸರಿಯಾಗಿ ಅನುಸರಿಸುವುದಿಲ್ಲವೇ? ತಂತ್ರಜ್ಞಾನದ ಬಳಕೆ ಅಸಮರ್ಪಕವಾಗಿರುತ್ತದೆಯೇ? ಅಥವಾ ಕಾಮಗಾರಿ ಅನುಷ್ಠಾನದಲ್ಲಿ ಪ್ರಾಮಾಣಿಕತೆ ಇರುವುದಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳು ಏಳುತ್ತವೆ. ಈ ಅಂಶಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ರಸ್ತೆ ನಿರ್ವಹಣೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ. ನಗರ–ಪಟ್ಟಣಗಳ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸದೇ ಇರುವುದು, ಪಾದಚಾರಿ ಮಾರ್ಗ ಹಾಗೂ ರಸ್ತೆ ನಡುವೆ ವ್ಯತ್ಯಾಸವೇ ಇಲ್ಲದಿರುವುದು, ದುರಸ್ತಿ ಎಂಬುದು ದಂಧೆ ಆಗಿರುವುದು... ಅಪಘಾತಗಳು ಹೆಚ್ಚಲು ಇವೂ ಕಾರಣವಲ್ಲವೇ? ಅಂದರೆ ಅಪಘಾತ ಹೆಚ್ಚುವಲ್ಲಿ ಆಡಳಿತ ವೈಫಲ್ಯವೂ ದೊಡ್ಡ ಪ್ರಮಾಣದಲ್ಲೇ ಇದೆಯಲ್ಲವೇ? ನಮ್ಮ ಜನಪ್ರತಿನಿಧಿಗಳು ಈ ದೋಷಗಳ ನಿವಾರಣೆಗೆ ಮುಂದಡಿ ಇಡುವುದು ಯಾವಾಗ? ಹೆಲ್ಮೆಟ್‌ ಕಡ್ಡಾಯ ಎಂದಾಕ್ಷಣ ಅದರ ಹಿಂದೆ ತಯಾರಿಕಾ ಕಂಪೆನಿಗಳ ಲಾಬಿ ಕೆಲಸ ಮಾಡಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಸರ್ಕಾರದ ನೀತಿ–ನಿಲುವುಗಳಲ್ಲಿ ಪಾರದರ್ಶಕತೆ ಇಲ್ಲದಿರುವುದೇ ಇದಕ್ಕೆ ಕಾರಣ. ನಿಯಮ ಅನುಷ್ಠಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಅಗತ್ಯ. ಸಾರ್ವಜನಿಕರಿಗೆ ಹೆಲ್ಮೆಟ್‌ ಧರಿಸುವುದರ ಅಗತ್ಯವನ್ನು ಮನವರಿಕೆ ಮಾಡಿಕೊಡಬೇಕು. ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಎಂಬಂತೆ ಹೆಲ್ಮೆಟ್‌ ಧರಿಸುವುದರಿಂದ ಪ್ರಯೋಜನ ಇಲ್ಲ. ಗುಣಮಟ್ಟದ ಹೆಲ್ಮೆಟ್‌ ಹೊಂದುವುದು ಅಗತ್ಯ. ಅತಿವೇಗದ ಚಾಲನೆ, ಮದ್ಯ ಸೇವಿಸಿ ವಾಹನ ಓಡಿಸುವುದು ಅಪಘಾತಗಳಿಗೆ ಪ್ರಮುಖ ಕಾರಣ. ಇದರ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ಅಗತ್ಯ. ಸಂಚಾರ ನಿಯಮಗಳ ಬಗ್ಗೆ ಎಳವೆಯಿಂದಲೇ ಅರಿವು ಮೂಡಿಸುವ ಕೆಲಸ ಪೋಷಕರಿಂದ ಆಗಬೇಕು. ಜೀವ ಅಮೂಲ್ಯವಾದುದು. ಅದರ ರಕ್ಷಣೆಗೆ ಕೈಜೋಡಿಸಬೇಕಾದುದು ಎಲ್ಲರ ಹೊಣೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.